ಬೆಂಗಳೂರು: ಭಾರತೀಯ ಸೇನೆಯ ಇಬ್ಬರು ಅಧಿಕಾರಿಗಳು ಬೆಂಗಳೂರು ಏರ್ಪೋರ್ಟ್ನಲ್ಲಿ ಭದ್ರತಾ ಸಿಬ್ಬಂದಿ ಮತ್ತು ಸೇವಾ ಸಿಬ್ಬಂದಿಯೊಂದಿಗೆ ಜಗಳ ತೆಗೆದು, ಉದ್ವಿಗ್ನತೆ ಸೃಷ್ಟಿಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಶುಕ್ರವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೇನಾಧಿಕಾರಿಗಳಾದ ಠಾಕೂರ್ ಬರುವಾರ್ ಮತ್ತು ಪಿಯೂಷ್ ರಜಪೂತ್ ಹೀಗೆ ಗಲಾಟೆ ಸೃಷ್ಟಿಸಿದ್ದರು.
ತಮ್ಮ ಕಾರನ್ನು ವಿಐಪಿ ಲೇನ್ ನಲ್ಲಿ ಬಿಡುವಂತೆ ಭದ್ರತಾ ಸಿಬ್ಬಂದಿಗೆ ಒತ್ತಾಯಿ ಸಿದ್ದಾರೆ. ಒಪ್ಪದಿದ್ದಾಗ ಕ್ಯಾತೆ ತೆಗೆದು, ಹೊಡೆದಿದ್ದಾರೆ. ಇವರಿಬ್ಬರನ್ನೂ ಬಂಧಿಸಲಾಗಿತ್ತು. ನಂತರ ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.
ಜಮ್ಮು-ಕಾಶ್ಮೀರದ ನೋಂದಣಿ ಸಂಖ್ಯೆ ಇರುವ ಕಾರಿನಲ್ಲಿ, ಸಿವಿಲ್ ಉಡುಗೆಯಲ್ಲಿ (ಸಮವಸ್ತ್ರವಲ್ಲದ ಸಾದಾ ಉಡುಪು) ಬಂದಿದ್ದ ಇವರು ತಮ್ಮ ವಾಹನವನ್ನು ಒಮ್ಮೆಲೇ ವಿಐಪಿ ಲೇನ್ಗೆ ಬಂದಿದ್ದಾರೆ. ಆಗ ಅಲ್ಲಿದ್ದ ಖಾಸಗಿ ಸೆಕ್ಯೂರಿಟಿ ಗಾರ್ಡ್ ಸೇನಾಧಿಕಾರಿ ಗಳನ್ನು ತಡೆದಿದ್ದಾನೆ. ‘ನಮ್ಮನ್ನು ಯಾರು ಅಂದುಕೊಂಡೆ, ನಾವಿಬ್ಬರೂ ಸೇನಾಧಿಕಾರಿ ಗಳು. ನಮ್ಮನ್ನೂ ಈ ವಿಐಪಿ ಮಾರ್ಗದಲ್ಲಿಯೇ ಬಿಡಬೇಕು’ ಎಂದು ರೇಗಿದ್ದಾರೆ.
ಹಾಗಿದ್ದಾಗ್ಯೂ ಸೆಕ್ಯೂರಿಟಿ ಗಾರ್ಡ್ ತನ್ನ ಪಟ್ಟು ಬಿಡಲಿಲ್ಲ. ಕೋಪಗೊಂಡ ಕ್ಯಾಪ್ಟನ್ ಬರುವಾರ್ ಮೊದಲು ಸೆಕ್ಯೂರಿಟಿ ಗಾರ್ಡ್ಗೆ ಥಳಿಸಿದ್ದಾರೆ. ಏರ್ಪೋರ್ಟ್ನಲ್ಲಿ ಇದ್ದ ಇನ್ನಿತರ ಸೆಕ್ಯೂರಿಟಿ ಸಿಬ್ಬಂದಿ ಈ ದೃಶ್ಯ ನೋಡಿ ಅಲ್ಲಿಗೆ ಓಡಿ ಬಂದಿದ್ದಾರೆ. ಆಗ ಸೇನಾಧಿಕಾರಿಗಳು ಅವರಿಗೂ ಹೊಡೆದಿದ್ದಾರೆ.