Saturday, 15th June 2024

ಸ್ವತಂತ್ರ್ಯಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದವರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ

ಚಿಕ್ಕನಾಯಕನಹಳ್ಳಿ : ದೇಶದ ಸ್ವತಂತ್ರ್ಯಕ್ಕೋಸ್ಕರ ಸಾವಿರಾರು ಜನರು ಪ್ರಾಣ ತ್ಯಾಗ ಮಾಡಿದ್ದಾರೆ ಅವರನ್ನು ನೆನಪಿಸಿ ಕೊಳ್ಳುವುದು ನಮ್ಮ ಕರ್ತವ್ಯ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 77ನೇ ಸ್ವತಂತ್ರ್ಯ ದಿನಾಚಾರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ, 1857 ರಲ್ಲಿ ಸ್ವತಂತ್ರ್ಯಕ್ಕೋಸ್ಕರ ಹೋರಾಟ ಮಾಡಿದ ಪರಿಣಾಮ 1947 ರಲ್ಲಿ ನಮಗೆ ಸ್ವತಂತ್ರ್ಯ ಲಭಿಸಿತು, ನಮ್ಮ ಮನೆಗೆ ಕೀರ್ತಿ ತಂದರೆ ಅದು ದೇಶಕ್ಕೆ ತಂದು ಕೊಡುಗೆ ಅವರ ತ್ಯಾಗ, ಬಲಿದಾನದ ಫಲವಾಗಿ ಇಂದು ನಾವು ಬದುಕುತ್ತಿದ್ದೇವೆ, ದೇಶದ ಭದ್ರತೆಗೆ ನಮ್ಮ ಸೈನಿಕರು ಹಗಲಿರುಳು ದೇಶವನ್ನು ಕಾಯುತ್ತಿರುವುದರಿಂದ ನೆಮ್ಮದಿಯಿಂದ ಇದ್ದೇವೆ ಎಂದರು.
ತಹಶೀಲ್ದಾರ್ ನಾಗಮಣಿ ಮಾತನಾಡಿ, ಇಂದು ಸಾಮಾಜಿಕ ನ್ಯಾಯ, ಸಮಾನತೆ ನಮ್ಮ ಮೂಲ ಮಂತ್ರವಾಗಬೇಕು, ದೇಶದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು ಇವುಗಳನ್ನು ಹೋಗಲಾಡಿಸಲು ಎಲ್ಲರೂ ಕಂಕಣ ಬದ್ದರಾದರೆ ಮಾತ್ರ ಸಾಧ್ಯ ಎಂದ ಅವರು, ಹಲವು ವೈವಿದ್ಯಗಳಿಂದ ಕೂಡಿರುವ ದೇಶದ ಬಗ್ಗೆ ನಮಗೆಲ್ಲರಿಗೂ ದೇಶದ ಬಗ್ಗೆ ಆತ್ಮಾಭಿಮಾನ ವಿರಬೇಕು ಎಂದರಲ್ಲದೆ, ಕೃಷಿ, ಕೈಗಾರಿಕೆ, ಶಿಕ್ಷಣ ಹಾಗೂ ಬಾಹ್ಯಾಕಾಶದಲ್ಲಿ ದಿಟ್ಟ ಹೆಜ್ಜೆ ಇಟ್ಟು ಅಭಿವೃದ್ದಿ ಹೊಂದುತ್ತಿದ್ದು ವಿಶ್ವಗುರು ಸ್ಥಾನಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತಕುಮಾರ್, ಪುರಸಭಾ ಮುಖ್ಯಾಧಿಕಾರಿ ಶ್ರೀನಿ ವಾಸ್, ಸರ್ಕಲ್ ಇನ್ಸ್ ಪೆಕ್ಟರ್ ನಧಾಫ್, ಸಬ್ ಇನ್ಸ್ ಪೆಕ್ಟರ್ ಯತೀಶ್, ಮಾಜಿ ಶಾಸಕ ಬಿ.ಲಕ್ಕಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮನ ಮೋಹನ್ ಸೇರಿದಂತೆ ಹಲವರು ಹಾಜರಿದ್ದರು.
ಈ ಸಂದರ್ಭ ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ ನಡೆಯಿತು. ನಂತರ ಪಟ್ಟಣದ ನಾಲ್ಕು ರಾಜಬೀದಿಗಳಲ್ಲಿ ಶಾಲಾ ಮಕ್ಕಳಿಂದ ಮೆರವಣಿಗೆ ಹಾಗೂ ಅಲಂಕೃತ ಮಂಟಪದಲ್ಲಿ ಭಾರತ ಮಾತೆಯ ಭಾವಚಿತ್ರದ ಮೆರವಣಿಗೆ ನಡೆಯಿತು.

Leave a Reply

Your email address will not be published. Required fields are marked *

error: Content is protected !!