Tuesday, 27th February 2024

ನಾಳೆಯಿಂದ ಮುಖ್ಯಮಂತ್ರಿ ಬೊಮ್ಮಾಯಿ ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೋನಾ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರಾವಳಿ ಪ್ರವಾಸ ಕೈಗೊಂಡಿದ್ದಾರೆ.

ಆ.12ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿರುವ ಬಸವರಾಜ ಬೊಮ್ಮಾಯಿ ದಕ್ಷಿಣ ಕನ್ನಡ ಜಿಲ್ಲಾಡಳಿತ ದೊಂದಿಗೆ ಕೊವಿಡ್ ಪರಿಶೀಲನಾ ಸಭೆ ನಡೆಸಲಿದ್ದಾರೆ. ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡರುವ ಜಿಲ್ಲೆಯಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಬಳಿಕ ಉರ್ವಾ ದಲ್ಲಿರುವ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ದಕ್ಷಿಣ ಕನ್ನಡ ಕೋವಿಡ್ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ‌.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ. ವಿ. ನೇತೃತ್ವದಲ್ಲಿ ಸಭೆ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೋನಾ ಆತಂಕದ ಬಗ್ಗೆ ಜಿಲ್ಲಾಧಿಕಾರಿ ಗಳ ಜೊತೆ ಮಾಹಿತಿ ಪಡೆಯಲಿದ್ದಾರೆ. ಬಳಿಕ ನೇರವಾಗಿ ಉಡುಪಿಗೆ ತೆರಳಿ ಉಡುಪಿ ಜಿಲ್ಲಾ ಪಂಚಾಯತ್‌ನಲ್ಲಿ ಉಡುಪಿ ಜಿಲ್ಲಾ ಕೋವಿಡ್ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿ ದ್ದಾರೆ. ಈ ಸಭೆಯಲ್ಲಿ ಉಡುಪಿ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಉಡುಪಿಯಿಂದ ಮತ್ತೆ ಮಂಗಳೂರಿಗೆ ಬರಲಿರುವ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲೇ ವಾಸ್ತವ್ಯ ಹೂಡ ಲಿದ್ದಾರೆ. ಆ.13ರ ಶುಕ್ರವಾರವೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪರಿಶೀಲನೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ. ಬಳಿಕ ಕೇರಳದ ಗಡಿಭಾಗದ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಲಿದ್ದಾರೆ.

ಕೇರಳದಲ್ಲಿ ಅತೀ ಹೆಚ್ಚು ಕರೋನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಗಡಿಭಾಗದಲ್ಲಿ ಭದ್ರತೆಯ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಪರಿಶೀಲನೆ ಮಾಡಲಿದ್ದಾರೆ. ಮುಖ್ಯಮಂತ್ರಿ ಜೊತೆಗೆ ಆರೋಗ್ಯ ಸಚಿವರ ಡಾ.ಕೆ.ಸುಧಾಕರ್ ಕೂಡಾ ಎರಡೂ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರದ ಸೂಚನೆಯಂತೆ ವಾರಾಂತ್ಯದ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂವನ್ನು ಜಿಲ್ಲೆಯಾದ್ಯಾಂತ ಕಠಿಣವಾಗಿ ಹೇರಲಾಗಿದೆ.  ದೇವಾಲಯ ಗಳಲ್ಲಿ ವಿಶೇಷ ಸೇವೆಗಳನ್ನು ಜಿಲ್ಲಾಡಳಿತ ರದ್ದು ಮಾಡಿದೆ. ಭಕ್ತರಿಗೆ ಕೇವಲ ದೇವರ ದರ್ಶನಕ್ಕೆ ಮಾತ್ರ ವ್ಯವಸ್ಥೆ ಮಾಡಲಾಗಿದೆ.

ಅತೀ ಹೆಚ್ಚು ಭಕ್ತರು ಸೇರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ, ಧರ್ಮಸ್ಥಳ ಮಂಜುನಾಥೇಶ್ವರ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಗಳನ್ನು ಶನಿವಾರ ಮತ್ತು ಭಾನುವಾರ ಬಂದ್ ಮಾಡಲು ಜಿಲ್ಲಾಡಳಿತ ಸೂಚಿಸಿದೆ.

 

Leave a Reply

Your email address will not be published. Required fields are marked *

error: Content is protected !!