Friday, 12th April 2024

ಮದಲೂರು ಕೆರೆ ಕಡೆಗೆ ಹರಿದ ಹೇಮೆ : ನುಡಿದಂತೆ ನಡೆದ ಬಿ.ಎಸ್. ಯಡಿಯೂರಪ್ಪ 

ಸಿರಾ ತಾಲ್ಲೂಕಿನ ಜನತೆಯ ಬಹುದಿನಗಳ ಕನಸು ನನಸು

ಕಳ್ಳಂಬೆಳ್ಳದಿಂದ ಮದಲೂರು ಕೆರೆಗೆ ಕಾಲುವೆ ನಿರ್ಮಾಣವಾಗಿ ವರ್ಷಗಳೂ ಉರುಳಿದರೂ ಸಹ ನೀರು ಹಂಚಿಕೆ ಬಗ್ಗೆ ಅಧಿಕೃತ ಅನುಮೋದನೆ ಸಿಗದೆ ಇನ್ನೂ ಬರಿದಾಗಿತ್ತು.

ಉಪ ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ನೀಡಿದ ಬರವಸೆ ಪ್ರಕಾರ ಹೆಚ್ಚುವರಿ ನೀರನ್ನು ತಾತ್ಕಾಲಿಕವಾಗಿ ಮದಲೂರು ಕೆರೆಗೆ ಹರಿಸಲು ಅನುಮೋದನೆ ದೊರೆತಿರುವುದರಿಂದ ನ30 ಬೆಳಿಗ್ಗೆ 9:30 ರ ಸುಮಾರಿಗೆ ಸಂಸದ ಎನಾರಾಯಣಸ್ವಾಮಿ ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ಕರ್ನಾಟಕ ನಾರು ನಿಗಮದ ಅಧ್ಯಕ್ಷ ಮಂಜುನಾಥ್ ಬಿ.ಕೆ. ಹಾಗೂ ಇತರ ಮುಖಂಡರ ಸಮ್ಮುಖದಲ್ಲಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು ಈ ಕಾರ್ಯಕ್ಕೆ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಂಜಾವ ಧೂತ ಸ್ವಾಮೀಜಿಗಳು ಸಾಕ್ಷಿಯಾದರು.

ಮದಲೂರು ಕೆರೆಗೆ ಹೊಂದಿಕೊಂಡಂತೆ 11 ಕೆರೆಗಳಿಗೆ ಕುಡಿಯುವ ನೀರನ್ನು ನೀಡಬೇಕೆಂಬುದು ಬಹಳ ವರ್ಷಗಳಿಂದ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಾ ಬಂದಿದ್ದೆವು ಆದರೂ ನೀರು ಹರಿಸುವ ಪ್ರಯತ್ನ ಆಗಿರಲಿಲ್ಲ ಈ ನೋವು ಸಿರಾ ತಾಲ್ಲೂಕಿನ ಜನತೆಗೆ ಇತ್ತು, ಆದರೆ ಇಂದು ಕ್ರಿಯಾಶೀಲ ಸಂಸದರಾದ ಎ ನಾರಾಯಣಸ್ವಾಮಿ, ಶಾಸಕದ್ವಯರಾದ ಡಾ.ರಾಜೇಶ್‌ಗೌಡ ಮತ್ತು ಚಿದಾನಂದ್ ಎಂ ಗೌಡ ಹಾಗೂ ಮುಖಂಡರುಗಳ ಪ್ರಯತ್ನದ ಫಲವಾಗಿ ಮದಲೂರಿಗೆ ನೀರು ಹರಿಯುತ್ತಿದೆ.

ತಾತ್ಕಾಲಿಕವಾಗಿ ನೀರನ್ನು ಹರಿಸುವ ಪ್ರಯತ್ನ ಮಾಡಿದ್ದೀರಿ. ಇನ್ನೂ 4 ವರ್ಷ ಅಂದರೆ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯ ರೂಪಕ್ಕೆ ಬರುವವರೆವಿಗೂ ಮುಂದುವರೆಸಬೇಕೆಂದು ಸಿರಾ ತಾಲ್ಲೂಕಿನ ಜನತೆಯ ಒತ್ತಾಯ. ಅದನ್ನೂ ಸಹ ನಮ್ಮ ಮುಖಂಡರುಗಳು ಈಡೇರಿಸುತ್ತಾರೆಂಬ ನಂಬಿಕೆ ಇದೆ ಎಂದು ನಂಜಾವಧೂತ ಸ್ವಾಮೀಜಿ ತಿಳಿಸಿದರು.

ಮುಂದುವರೆದು ಮಾತನಾಡಿ, ಅವರು ಪಟ್ರಾವತ್ತಳ್ಳಿ ಗೇಟ್ ಬಳಿ ನಾಲೆ ಕಿರಿದಾಗಿರುವುದರಿಂದ ಪ್ರತೀ ಭಾರಿ ನೀರು ಬಿಡುವಾಗ ಸಮಸ್ಯೆ ಉಂಟಾಗುತ್ತದೆ ಈ ತಾಂತ್ರಿಕ ದೋಷವನ್ನು ಸರಿಪಡಿಸಿ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡಬೇಕಾಗಿದೆ. ನಾಲೆಗೆ ಹೊಂದಿಕೊಂಡಿರುವ ಕೆರೆಗಳ ಪಟ್ಟಿ ಮಾಡಿ ಅಲ್ಲಿಗೆ ಕುಡಿಯುವ ನೀರು ಹರಿಸುವ ಪ್ರಯತ್ನವಾಗಬೇಕೆಂದು ತಿಳಿಸಿದರು.

ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಸಿರಾ ಕ್ಷೇತ್ರದಲ್ಲಿ ಸಂಚರಿಸಿದ ರಾಜ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಸ್ಥಳೀಯ ಮುಖಂಡರುಗಳು ನನ್ನೊಂದಿಗೆ ಮಾತನಾಡುತ್ತಾ ಇಲ್ಲಿ ಇದುವರೆವಿಗೂ ಚುನಾಯಿತರಾಗಿರುವ ಶಾಸಕರುಗಳು ಮದಲೂರು ಕೆರೆಗೆ ನೀರನ್ನು ಹರಿಸದೆ ನೀರಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ನಾವು ಈ ವಿಷಯವನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಾಗ ಅವರು ನೀರನ್ನು ಹರಿಸುವ ಭರವಸೆ ನೀಡಿದ್ದರು. ನುಡಿದಂತೆ ನಡೆದ ನಮ್ಮ ಮುಖ್ಯ ಮಂತ್ರಿಗಳು ಈ ದಿನ ಸಿರಾ ಜನತೆಯ ಬಹುದಿನಗಳ ಕನಸನ್ನು ನನಸು ಮಾಡಿದ್ದಾರೆ ಎಂದು ತಿಳಿಸಿದರು.

ಶಾಸಕರಾದ ಡಾ. ರಾಜೇಶ್ ಗೌಡ ಮಾತನಾಡಿ, ನಂಜಾಧೂತ ಸ್ವಾಮೀಜಿಯವರು ತಮ್ಮ ಜನ್ಮ ದಿನವನ್ನು ನೀರಿನ ಹಕ್ಕೋತ್ತಾಯ ದಿನವನ್ನಾಗಿ ಆಚರಿಸುತ್ತಾ ಬಂದಿರುತ್ತಾರೆ ಈ ದಿನ ಅವರ ಆಸೆ ಫಲಿಸಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಬಿ.ಜೆ.ಪಿ. ಅಧ್ಯಕ್ಷ ವಿಜಯರಾಜ್, ಗ್ರಾಮಾಂತ್ರ ಅಧ್ಯಕ್ಷ ರಂಗಸ್ವಾಮಿ, ತಹಶೀಲ್ದಾರ್ ಮಮತ, ಗ್ರಾಮಾಂತರ ಮಾಜಿ ಅಧ್ಯಕ್ಷ ಮಾಲಿ ಮರಿಯಪ್ಪ, ರಾಘವೇಂದ್ರ, ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!