Saturday, 27th July 2024

ಜುಲೈ 5-19ರವರೆಗೆ ಗದಗದಲ್ಲಿ ಪರಿಷ್ಕೃತ ಮಾರ್ಗಸೂಚಿ ಜಾರಿ

ಗದಗ: ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿ, ವಿಧಿಸಿದ್ದ ಕಠಿಣ ನಿಯಮಗಳನ್ನು ಸಡಿಲಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಪರಿಷ್ಕೃತ ಮಾರ್ಗಸೂಚಿ ಗಳು ಜುಲೈ 5ರಿಂದ 19ರವರೆಗೆ ಜಾರಿಯಲ್ಲಿ ಇರಲಿವೆ.

ಮಾರ್ಗಸೂಚಿಯಲ್ಲಿ ಯಾವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಯಾವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂಬ ನಿಯಮಗಳನ್ನು ಜಿಲ್ಲೆಯಲ್ಲಿ ಯಥಾವತ್ತಾಗಿ ಜಾರಿಗೊಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.

ಜುಲೈ 5ರಿಂದ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ವಾರಾಂತ್ಯ ಕರ್ಫ್ಯೂ ಇರುವುದಿಲ್ಲ. ಆದರೆ, ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಸೋಮವಾರದಿಂದ ಸರ್ಕಾರಿ ನೌಕರರು, ಕೈಗಾರಿಕೆಗಳು, ಖಾಸಗಿ ಸಂಸ್ಥೆಗಳು ಶೇ 100 ಸಿಬ್ಬಂದಿ ಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಮಾಲ್‌ಗಳನ್ನು ತೆರೆಯಬಹುದು. ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ 100 ಮಂದಿ ಭಾಗವಹಿಸಲು ಅವಕಾಶ ಇರಲಿದೆ.

ಈಜುಕೊಳ ಮತ್ತು ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ನಡೆಸಲು ಅವಕಾಶ ನೀಡಲಾಗಿದೆ. ಆದರೆ, ಜನರು ಕುಳಿತು ವೀಕ್ಷಿಸಲು ಅವಕಾಶ ಇರುವುದಿಲ್ಲ. ಸಾಮಾಜಿಕ, ಧಾರ್ಮಿಕ, ಮತ್ತು ರಾಜಕೀಯ ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ. ಚಿತ್ರಮಂದಿರಗಳನ್ನು ತೆರೆಯುವಂತಿಲ್ಲ. ಸರ್ಕಾರ ಪ್ರತ್ಯೇಕ ಆದೇಶ ಹೊರಡಿಸುವವರೆಗೆ ಶಾಲಾ, ಕಾಲೇಜುಗಳನ್ನು ತೆರೆಯಲು ಅವಕಾಶ ಇರುವುದಿಲ್ಲ.

ರಾತ್ರಿ ಕರ್ಪ್ಯೂ ಸಂದರ್ಭದಲ್ಲಿ ಅನುಮತಿಸಲಾದ ಚಟುವಟಿಕೆಗಳನ್ನು ಹೊರತುಪಡಿಸಿ ವಾಹನಗಳ ಅನಗತ್ಯ ಸಂಚಾರವನ್ನು ನಿರ್ಬಂಧಿಸಲಾಗಿದೆ.

‘ಟೆಲಿಕಾಂ, ಇಂಟರ್ನೆಟ್ ಸಂಸ್ಥೆಗಳ ನೌಕರರು ಮತ್ತು ವಾಹನಗಳ ಸಂಚಾರಕ್ಕೆ ನಿರ್ಬಂಧವಿಲ್ಲ. ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಬೇಕು. ವೈದ್ಯಕೀಯ ತುರ್ತು ಸೇವೆಗಳು, ಫಾರ್ಮಸಿಗಳ ಕಾರ್ಯಾಚರಣೆ ಹಾಗೂ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರುವುದಿಲ್ಲ. ಸರಕುಗಳ ಹೋಂ ಡೆಲಿವರಿ, ಇ-ಕಾಮರ್ಸ್ ಚಟುವಟಿಕೆಗಳಿಗೆ ಸರ್ಕಾರದ ಮಾರ್ಗಸೂಚಿ ಅನ್ವಯ ಅವಕಾಶ ಇರುತ್ತದೆ. ರೈಲು, ವಿಮಾನ ಸೇವೆಗೆ ಎಂದಿನಂತೆ ಅವಕಾಶವಿದ್ದು ಟಿಕೆಟ್ ಅನ್ನು ಪಾಸ್ ರೀತಿಯಲ್ಲಿ ಬಳಸಬಹುದು’ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!