ಚಿಕ್ಕನಾಯಕನಹಳ್ಳಿ: ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸೋಮವಾರದಂದು ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ “ವಿಶ್ವ ಪೋಷಣ್ ಮಾಸಾ ಚರಣೆ” ಯ ಅಂಗವಾಗಿ ಕಾನೂನು ಅರಿವು ಮತ್ತು ಗರ್ಭಿಣಿಯರಿಗೆ ಲಭ್ಯ ಸೌಲಭ್ಯಗಳ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸತೀಶ್ ಎಸ್ ಟಿ, ಗರ್ಭಿಣಿ-ಬಾಣಂತಿ ಯರ ಆರೋಗ್ಯ ಮಟ್ಟವನ್ನು ಹೆಚ್ಚಿಸುವ ಕೆಲಸ ಹೆಚ್ಚೆಚ್ಚು ಆಗಬೇಕು. ಆಗ ಮಾತ್ರ ದೇಶಕ್ಕೆ ಸ್ವಸ್ಥ ಮತ್ತು ಸಮರ್ಥ ವಾದ ಮಕ್ಕಳು ಲಭಿಸಲಿದ್ದಾರೆ. ಮುಂದೆ ಈ ಮಕ್ಕಳೇ ನಾಳೆ ದೇಶದ ಪ್ರಜೆಗಳಾಗುತ್ತಾರೆ. ಹಾಗಾಗಿ, ಗರ್ಭಾವಸ್ಥೆ ಯಿಂದಲೇ ಈ ಮಕ್ಕಳ ಪೌಷ್ಟಿಕಾಂಶ ಬೆಳವಣಿಗೆಗೆ ಬುನಾದಿ ಹಾಕಬೇಕು ಎಂದರು.
ಮಹಿಳೆಯರು ಮತ್ತು ಮಕ್ಕಳ ಪೌಷ್ಟಿಕ ಆಹಾರ ಹಾಗೂ ಸಮಗ್ರ ವಿಕಾಸಕ್ಕೆ ಕುಟುಂಬ ಮತ್ತು ಸಮಾಜ ಬದ್ಧವಾಗ ಬೇಕು. ಸರ್ಕಾರ ಕೊಡಮಾಡುತ್ತಿರುವ ಎಲ್ಲ ಯೋಜನೆಗಳ ಲಾಭ ಪಡೆದು ಸಮರ್ಥ ಮತ್ತು ಸದೃಢವಾದ ಮಕ್ಕಳು ದೇಶ ಕಟ್ಟುವಂತಾಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎ ಶ್ರೀನಾಥ್’ರವರು ತಿಳಿಸಿದರು.
ಗರ್ಭಾವಸ್ಥೆಯಿಂದ ಮಗುವಿನ ಜನನದವರೆಗೆ, ಆನಂತರ ಮಗು ಬೆಳೆದು ಶಾಲೆ ಸೇರುವವರೆಗೆ, ಸರಿ ಸುಮಾರು ಐದಾರು ವರ್ಷಗಳವರೆಗೆ ನಿರಂತರವಾಗಿ ಮಗುವಿನ ಮನೋದೈಹಿಕ ವಿಕಾಸದಲ್ಲಿ ಎಲ್ಲ ರೀತಿಯ ನಿಗಾ ವಹಿಸುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು, ಅಧೀನ ಸಿವಿಲ್ ನ್ಯಾಯಾಧೀಶೆಯಾದ ಶ್ರೀಮತಿ ಅಪರ್ಣಾ ರವರು ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ ಹೊನ್ನಪ್ಪ, 2018-19 ರ ಸಾಲಿನಲ್ಲಿ ಸರ್ಕಾರ ಜಾರಿಗೊಳಿಸಿದ ವಿಶ್ವ ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಗರ್ಭಿಣಿ ಹಾಗೂ ಬಾಣಂತಿಯರ ಪೌಷ್ಟಿಕಾಂಶಯುಕ್ತ ಸಮತೋಲನ ಆಹಾರ ಮತ್ತು ಔಷಧೀಯ ಉಪಚಾರದ ಬಗ್ಗೆ ಅರಿವು ಮೂಡಿಸುವುದರ ಮೂಲಕ ಸ್ವಸ್ಥ-ಸದೃಢ ಮಕ್ಕಳ ವಿಕಾಸವನ್ನು ಅಭಿವೃದ್ಧಿ ಪಡಿಸು ವುದು ಈ ಪೋಷಣ್ ಮಾಸಾಚರಣೆ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಪೋಷಣ್ ಮಾಸಾಚರಣೆ ಅಂಗವಾಗಿ, ಸಾವಿರ ದಿನಗಳು ಕಾರ್ಯಕ್ರಮವನ್ನು ಕ್ರಿಯಾಶೀಲಗೊಳಿಸಲಾಗಿದೆ. ಅಂದರೆ, ಮಹಿಳೆಯೊಬ್ಬರು ಗರ್ಭ ಧರಿಸಿ, ಆ ಮಗುವಿನ ಜನನ ಆಗುವವರೆಗಿನ ಸಾವಿರ ದಿನಗಳ ತನಕವೂ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಅಂಗನವಾಡಿ ವ್ಯಾಪ್ತಿಯಲ್ಲಿ ನಿರಂತರವಾಗಿ ಕ್ರಿಯಾಶೀಲವಾಗಿರುತ್ತದೆ.
ಅದೇರೀತಿ, ಸಮುದಾಯ ಆಧಾರಿತ ಚಟುವಟಿಕೆಗಳ ಮೂಲಕ ಹಳ್ಳಿಗಳಲ್ಲಿ, ಮನೆಗಳಲ್ಲಿ ಹೆರಿಗೆ ಮಾಡಿಸುವುದನ್ನು ತಡೆಗಟ್ಟುವುದು ಮತ್ತು ಪ್ರತಿಯೊಬ್ಬ ಗರ್ಭಿಣಿಯೂ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವಂತೆ ಅಂಗನವಾಡಿ ವ್ಯಾಪ್ತಿಯಲ್ಲಿ ಅರಿವು ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ರೂಪಿಸುವುದನ್ನು ಇಲಾಖೆ ಮಾಡುತ್ತಿದೆ. ಈಯೆಲ್ಲ ಕಾರ್ಯ ಕ್ರಮಗಳನ್ನು ಆರೋಗ್ಯ ಇಲಾಖೆಯ ಜೊತೆಗೆ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ವತಿಯಿಂದ ಸಮರ್ಥ ವಾಗಿ ತಾಲ್ಲೂಕಿನಾದ್ಯಂತ ಜಾರಿಗೊಳಿಸಲಾಗುತ್ತಿದೆ ಎಂದು ಜಿ ಹೊನ್ನಪ್ಪ ತಿಳಿಸಿದರು.
ಮುಖ್ಯ ಅತಿಥಿಗಳಾಗಿ, ವಕೀಲರ ಸಂಘದ ಸದಾಶಿವಯ್ಯ, ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಕಾಂತಿ ಮಠ, ಸಹಾಯಕ ಸರ್ಕಾರಿ ಅಭಿಯೋಜಕ ರಂಗನಾಥಪ್ಪ, ವಕೀಲರ ಸಂಘದ ಉಪಾಧ್ಯಕ್ಷೆ ಶ್ರೀಮತಿ ರತ್ನರಂಜಿನಿ ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೆಂಕಟರಾಮಯ್ಯ ಸೇರಿದಂತೆ ನೂರಾರು ಮಂದಿ ಅಂಗನವಾಡಿ ಕಾರ್ಯ ಕರ್ತೆಯರು ಮತ್ತು ಹಲವಾರು ಗರ್ಭಿಣಿ ಮಹಿಳೆಯರು ಉಪಸ್ಥಿತರಿದ್ದರು.
ಇದನ್ನೂ ಓದಿ: Tumkur News: ವ್ಯಾಯಾಮದಿಂದ ಉತ್ತಮ ಆರೋಗ್ಯ-ಸಿದ್ಧಲಿಂಗ ಸ್ವಾಮೀಜಿ