Saturday, 27th July 2024

ಅದ್ದೂರಿತನ ಶಕ್ತಿಗನುಸಾರ ಇರಬೇಕೇ ವಿನಃ ಪ್ರತಿಷ್ಠೆಯಾಗಬಾರದು: ಎಸ್.ಟಿ.ಸೋಮಶೇಖರ್

ಚಾಮುಂಡಿ ಬೆಟ್ಟದಲ್ಲಿನ ಸರಳ-ಸಾಮೂಹಿಕ ವಿವಾಹ ಸಮಾರಂಭಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಆಶಯ ನುಡಿಗಳು

ಮೈಸೂರು: ಇದು ಕೊರೋನಾ ಕಾಲ ಎಂದರೆ ತಪ್ಪಲ್ಲ.. ಜೊತೆಗೆ ಇದು ನಮಗೆ ಹಲವಾರು ಪಾಠಗಳನ್ನು ಹೇಳಿಕೊಟ್ಟಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು, ಕನಿಷ್ಠ ಮಂದಿ ಒಂದೆಡೆ ಸೇರುವುದು ಹೀಗೆ ಹತ್ತು ಹಲವು ಕಡಿವಾಣಗಳನ್ನು ನಮಗೆ ನಾವೇ ಹಾಕಿಕೊಳ್ಳುವಂತೆ ಮಾಡಿದೆ. ಇದು ಒಂದರ್ಥದಲ್ಲಿ ನಾವು ಧನಾತ್ಮಕವಾಗಿ ತೆಗೆದು ಕೊಳ್ಳುವ ಅಂಶವೂ ಆಗಿದೆ.

ಇಂದು ನಮ್ಮ ಚಿಂತನೆಗಳು ಬದಲಾಗಬೇಕಿದೆ. ಸರಳ ಜೀವನ ನಮ್ಮದಾಗಬೇಕಿದೆ. ಬಹುಮುಖ್ಯವಾಗಿ ನಾವು ಮಾಡುವ ಸಮಾ ರಂಭಗಳು ಸೀಮತ ವ್ಯಾಪ್ತಿಗೆ ಬರಬೇಕಿದೆ. ಮದುವೆ-ಮುಂಜಿ ಸೇರಿದಂತೆ ಅನೇಕ ಸಂಭ್ರಮದ ಕಾರ್ಯಕ್ರಮಗಳು ಮನುಷ್ಯನ ಸಂತೋಷದ ದಿನಗಳ ಭಾಗ ಎಂಬುದರಲ್ಲಿ ಎರಡು ಮಾತಿಲ್ಲ. ಜೀವನದಲ್ಲಿ ಕೆಲವೇ ಕೆಲವು ಬಾರಿ ಬರುವ ಈ ಕ್ಷಣಗಳನ್ನು ಒಂದು ಕನಸಿನ ಮಾದರಿಯಲ್ಲಿ ಮಾಡುಬೇಕೆಂಬ ಹಂಬಲ ಇರುವುದೂ ತಪ್ಪಲ್ಲ. ಆದರೆ, ನಾವೀಗ ಪರಿಸ್ಥಿತಿಯನ್ನು ಅರಿತು ಹೆಜ್ಜೆ ಹಾಕಬೇಕಿದೆ. ಹೆಚ್ಚಿನ ಜನರು ಒಂದೆಡೆ ಸೇರಿದರೆ ಪರಿಣಾಮ ಏನಾದೀತು..? ಇಂತಹ ಸಮಾರಂಭಗಳಿಗೆ ಮನೆಯ ಹಿರಿಯ ರಿಂದ ಹಿಡಿದು ಚಿಕ್ಕ ಮಕ್ಕಳೂ ಬರುವುದು ಅನಿವಾರ್ಯ. ಹೀಗಾಗಿ ಒಂದು ವೇಳೆ ಕೊರೋನಾ ಮಹಾಮಾರಿ ಬಂದರೆ..? ಮುಂದೇನು ಎಂಬ ಅರಿವು, ಎಚ್ಚರಿಕೆ ಇರಬೇಕಾಗುತ್ತದೆ.

ಇದರ ಜೊತೆಗೆ ಅದ್ದೂರಿ ವಿವಾಹಗಳು ಬೇಕೆ ಎಂಬ ಪ್ರಶ್ನೆ. ಅದ್ದೂರಿತನ ಎಂಬುದು ಶಕ್ತಿಗನುಸಾರ ಇರಬೇಕೇ ವಿನಃ ಪ್ರತಿಷ್ಠೆ ಯಾಗಬಾರದು. ಅವರು ಮಾಡಿದರು, ಇವರು ಮಾಡಿದರು ಎಂದು ನಾವು ಮಾಡುವುದು ತರವಲ್ಲ. ಅದಕ್ಕಾಗಿ ಸಾಲ ಮಾಡಿ, ಭರ್ಜರಿಯಾಗಿ ವಿವಾಹ ಕಾರ್ಯಗಳನ್ನು ಮುಗಿಸಿ ಜೀವಮಾನವಿಡೀ ಸಾಲದ ಸುಳಿಯಲ್ಲಿ ಸಿಲುಕಿ, ಬಳಿಕ ನಿಮ್ಮ ಮಕ್ಕಳನ್ನೂ ಆ ಸುಳಿಗೆ ನೂಕುವುದು ಸರಿಯಲ್ಲ. ಇಂಥದ್ದಕ್ಕೆಲ್ಲ, ಸರಳ ಸಾಮೂಹಿಕ ವಿವಾಹಗಳು ಉತ್ತಮ ಪರಿಹಾರ. ಈ ನಿಟ್ಟಿನಲ್ಲಿ ನಮ್ಮ ಚಿಂತನೆಗಳು ಸಾಗಲಿ.

***

ಸಾಮೂಹಿಕ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು. ಆ ಮೂಲಕ ಬಡವರ ಬದುಕಿಗೆ ಹೊರೆಯಾಗುವ ಇಂಥ ಕಾರ್ಯಕ್ರಮಗಳು ವರವಾಗಿ ಪರಿಣಮಿಸಬೇಕು. ಈ ಕೆಲಸವನ್ನು ನಮ್ಮ ಧಾರ್ಮಿಕ ದತ್ತಿ ಇಲಾಖೆ ಹಮ್ಮಿಕೊಂಡಿರುವುದು ಸಮಯೋಚಿತ ಹಾಗೂ ಔಚಿತ್ಯಪೂರ್ಣವೂ ಹೌದು. ಹೀಗಾಗಿ ಅದ್ಧೂರಿತನಕ್ಕೆ ತಡೆ ನೀಡಿ, ಸರಳತನವನ್ನು ರೂಢಿಸಿಕೊಳ್ಳೋಣ. ಕೊರೋನಾ ಕಾಲದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡೋಣ.

ಎಸ್.ಟಿ. ಸೋಮಶೇಖರ್, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು

***

ಕ್ಷಣ ಕ್ಷಣದ ಸುದ್ದಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್ ಲೈಕ್‌ ಮಾಡಿ.

https://www.facebook.com/Vishwavanidaily

Leave a Reply

Your email address will not be published. Required fields are marked *

error: Content is protected !!