Health Tips: ಪ್ರತಿನಿತ್ಯ 4 ಕಿ.ಮೀ. ವಾಕ್ ಮಾಡಿ ಸಾಕು! ನಿಮ್ಮ ಹೃದಯ ಸದಾ ಆರೋಗ್ಯವಾಗಿರುತ್ತೆ
ಒತ್ತಡದ ಜೀವನ ಶೈಲಿ, ಧೂಮಪಾನ, ಕೆಟ್ಟ ಚಟ, ಜಂಕ್ ಫುಡ್ ಸೇವನೆಗಳೆಲ್ಲವೂ ಹೃದಯ ಸಂಬಂಧಿತ ಸಮಸ್ಯೆಗಳಿಗೆ ಮೂಲ ಕಾರಣ. ದೇಹಕ್ಕೆ ಸರಿಯಾದ ವ್ಯಾಯಾಮ ಸಿಗದಿರುವುದು ಹೃದಯದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಾಗಾಗಿ ಇವೆಲ್ಲ ನಿಯಂತ್ರಣದಲ್ಲಿ ಇರಿಸಲು ನಿಯಮಿತ ವ್ಯಾಯಾಮವನ್ನು ಮಾಡುವುದು ಬಹಳ ಮುಖ್ಯ.

Heart Healthy steps

ನವದೆಹಲಿ: ಆಧುನಿಕ ಜೀವನ ಶೈಲಿ ಅನಾರೋಗ್ಯದ ಸಮಸ್ಯೆ ಕಾಡಲು ಮುಖ್ಯ ಕಾರಣವಾಗುತ್ತಿದೆ. ಅದರಲ್ಲಿಯೂ ದೇಹಕ್ಕೆ ವ್ಯಾಯಾಮವಿಲ್ಲದಿರುವುದು, ತಿನ್ನುವ ಆಹಾರದ ಬಗ್ಗೆ ಕಾಳಜಿ ಇಲ್ಲದಿರುವುದು, ಅತಿಯಾದ ತೂಕ ಇತ್ಯಾದಿ ಆರೋಗ್ಯ ಸಮಸ್ಯೆಗಳು ನಿತ್ಯ ಹೆಚ್ಚುತ್ತಲೇ ಇದೆ. ಅದರಲ್ಲೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿದ್ದು ಇದಕ್ಕೆ ಆಧುನಿಕ ಜೀವನ ಶೈಲಿಯೇ ಮುಖ್ಯ ಕಾರಣ. ಹಾಗಾಗಿ ಹೃದಯದ ಆರೋಗ್ಯಕ್ಕಾಗಿ ಪ್ರಾಥಮಿಕ ಹಂತದಲ್ಲಿಯೇ ಪರಿಹಾರ ಕ್ರಮವನ್ನು ಚಿಂತಿಸದಿದ್ದರೆ ಮುಂದೆ ಆಸ್ಪತ್ರೆಗಳ ಅಲೆದಾಟ ತಪ್ಪಿದ್ದಲ್ಲ (Health Tips). ಕೆಲವೊಂದು ಹವ್ಯಾಸವನ್ನು ನೀವು ಅಭ್ಯಾಸ ಮಾಡುವುದರಿಂದ ಹೃದ್ರೋಗ ಸಮಸ್ಯೆ ಬರಲಾರದು. ಅದರ ಜತೆಗೆ ನಿಮ್ಮ ಇಡೀ ದೇಹ ಮತ್ತು ಮನಸ್ಸು ಬಹಳ ಕ್ರಿಯಾಶೀಲವಾಗಿ ಇರಲಿದೆ.
ಒತ್ತಡದ ಜೀವನ ಶೈಲಿ, ಧೂಮಪಾನ, ಕೆಟ್ಟ ಚಟಗಳ ಅಭ್ಯಾಸ ಕ್ರಮ, ಜಂಕ್ ಫುಡ್ ಸೇವನೆಗಳೆಲ್ಲವೂ ಹೃದಯ ಸಂಬಂಧಿತ ಸಮಸ್ಯೆಗಳಿಗೆ ಮೂಲ ಕಾರಣವಾಗುತ್ತವೆ. ದೇಹಕ್ಕೆ ಸರಿಯಾದ ವ್ಯಾಯಾಮ ಸಿಗದಿರುವುದು ಹೃದಯದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಾಗಾಗಿ ಇವೆಲ್ಲ ನಿಯಂತ್ರಣದಲ್ಲಿ ಇರಿಸಲು ನಿಯಮಿತ ವ್ಯಾಯಾಮವನ್ನು ಮಾಡುವುದು ಬಹಳ ಮುಖ್ಯ.
ನಿತ್ಯ ವಾಕಿಂಗ್ ಮಾಡಿ
ನಿತ್ಯ ಬೆಳಗ್ಗೆ ಬೇಗ ಎದ್ದು ವಾಕಿಂಗ್ ಮಾಡಬೇಕು. ನೀವು ನಿಧಾನವಾಗಿ ನಡೆದರೆ ಅದು ದೇಹದ ಆರೋಗ್ಯದ ಮೇಲೆ ಅಷ್ಟಾಗಿ ಪರಿಣಾಮ ಬೀರದೆ ಇರುವ ಸಾಧ್ಯತೆ ಇದೆ. ಹಾಗಾಗಿ ವೇಗದ ನಡಿಗೆ ಬಹಳ ಮುಖ್ಯ. ಎಷ್ಟು ಕಿಲೋ ಮೀಟರ್ ನಡೆದಿದ್ದೀರಿ ಎನ್ನುವುದಕ್ಕಿಂತಲೂ ಎಷ್ಟು ವೇಗವಾಗಿ ಎಷ್ಟು ದೂರ ವಾಕಿಂಗ್ ಮಾಡಿದ್ದೀರಿ ಎಂಬುದು ಮುಖ್ಯವಾಗಲಿದೆ. ನಿತ್ಯ 40 ನಿಮಿಷಗಳಲ್ಲಿ 4 ಕಿ.ಮೀ.ನಂತೆ ವಾಕಿಂಗ್ ಮಾಡಿದರೆ ಯಾವುದೇ ಹೃದಯ ಸಂಬಂಧಿತ ಸಮಸ್ಯೆ ಬರಲಾರದು ಎಂದು ವೈದ್ಯಕೀಯ ತಜ್ಞರು ಈ ಬಗ್ಗೆ ಸಲಹೆ ನೀಡಿದ್ದಾರೆ.
ವೇಗದ ನಡಿಗೆಯ ಪ್ರಯೋಜನೆಗಳೇನು?
*ನಿತ್ಯ ನೀವು ಸ್ಪೀಡ್ ವಾಕ್ ಮಾಡುವುದರಿಂದ ದೇಹ ಯಾವಾಗಲೂ ಲವಲವಿಕೆಯಿಂದ, ಕ್ರಿಯಾ ಶೀಲವಾಗಿ ಇರುತ್ತದೆ.
*ದೇಹದ ರಕ್ತದೊತ್ತಡ, ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇರಿಸಲು ವಾಕಿಂಗ್ ಹವ್ಯಾಸ ಬಹಳ ಉತ್ತಮ.
*ಮೂಳೆ ನೋವು, ಸ್ನಾಯು ಸೆಳೆತ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕೆ ನಿತ್ಯ ವಾಕಿಂಗ್ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು.
*ಜಡತ್ವ, ಆಲಸ್ಯತನ ಇತ್ಯಾದಿ ನಿವಾರಣೆಗೆ ನಿತ್ಯ ವಾಕಿಂಗ್ ಬಹಳ ಪ್ರಯೋಜನಕಾರಿ.
*ನಿದ್ರಾಹೀನತೆ ಸಮಸ್ಯೆ ಇರುವವರು ನಿತ್ಯ ಬೇಗನೇ ಎದ್ದು ವಾಕಿಂಗ್ ಮಾಡಿದರೆ ದೇಹಕ್ಕೆ ವ್ಯಾಯಾಮ ಸಿಕ್ಕಂತಾಗಿ ನಿದ್ರೆ ಶೀಘ್ರವೇ ಬರಲಿದೆ.
*ಮಾನಸಿಕ ಸಮಸ್ಯೆಗಳಾದ ಆತಂಕ, ಖಿನ್ನತೆ ಇತ್ಯಾದಿಗಳು ನಿವಾರಣೆ ಆಗಲು ಕೂಡ ನಿತ್ಯ ವಾಕಿಂಗ್ ಹವ್ಯಾಸ ಬಹಳ ಒಳ್ಳೆಯದು.
*ಕೆಲವೊಂದು ಮಾನಸಿಕ ಸಮಸ್ಯೆ, ಒತ್ತಡ ನಿವಾರಣೆಗೆ ಕೂಡ ವಾಕಿಂಗ್ ಮಾಡುವುದು ಒಳ್ಳೆ ಪರಿಹಾರ ಕ್ರಮ.
ಇದನ್ನು ಓದಿ: Health Tips: ಯಾವ ಬಗೆಯ ಅಕ್ಕಿ ಹೆಚ್ಚು ಆರೋಗ್ಯಕರ? ಇಲ್ಲಿದೆ ಡಿಟೇಲ್ಸ್
ಈ ವಿಚಾರ ನೆನಪಿನಲ್ಲಿಡಿ
ನಿಮ್ಮ ದೇಹದ ಆರೋಗ್ಯ ಸ್ಥಿತಿ ಅರ್ಥೈಸಿಕೊಂಡು ವಾಕಿಂಗ್ ಹವ್ಯಾಸ ರೂಢಿಸಿಕೊಳ್ಳಿ. ಆರೋಗ್ಯಕ್ಕೆ ಪ್ರಯೋಜನಕಾರಿ, ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಒಮ್ಮಿಂದೊಮ್ಮೆಲೆ 4-5 ಕಿ.ಮೀ. ನಡೆದರೆ ಅದೇ ನಿಮಗೆ ಆರೋಗ್ಯ ಸಮಸ್ಯೆಗೆ ಕಾರಣ ಆಗಲೂಬಹುದು. ಜತೆಗೆ ಕಾಲಿನಲ್ಲಿ ಗುಳ್ಳೆ ಏಳಬಹುದು, ಸ್ನಾಯು ಸೆಳೆತ, ಕೀಲು ನೋವು, ಮಂಡಿ ನೋವು ಬರುವ ಸಾಧ್ಯತೆ ಇದೆ. ಹಾಗಾಗಿ ಆರಂಭದಲ್ಲಿ ಅರ್ಧ ಕಿಲೋ ಮೀಟರ್ ಬಳಿಕ 1 ಕಿ.ಮೀ.ನಂತೆ ಅಭ್ಯಾಸ ಮಾಡಿದರೆ ಉತ್ತಮ. ವಾಕಿಂಗ್ ಮಾಡುವಾಗ ದೇಹಕ್ಕೆ ವಿಶ್ರಾಂತಿ ಅಗತ್ಯ ಕಂಡು ಬಂದಾಗ ಸ್ವಲ್ಪ ಸ್ಲೋ ವಾಕ್ ಮಾಡುವುದು ಇಲ್ಲವೇ ಸ್ವಲ್ಪ ಹೊತ್ತು ವಿರಮಿಸುವುದನ್ನು ಮಾಡಬೇಕು.