ಭೀಕರ ಅಪಘಾತ: ಪತಿ, ಪತ್ನಿ, ಮಗು ಸ್ಥಳದಲ್ಲೇ ಸಾವು
ಭೀಕರ ಅಪಘಾತ: ಪತಿ, ಪತ್ನಿ, ಮಗು ಸ್ಥಳದಲ್ಲೇ ಸಾವು
Vishwavani News
August 24, 2022
ಬಳ್ಳಾರಿ: ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪತಿ-ಪತ್ನಿ-ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಳ್ಳಾರಿ ತಾಲೂಕಿನ ಹೊಸ ಎರೆಗುಡಿ ಗ್ರಾಮದ ವೀರೇಶ, ಇವರ ಪತ್ನಿ ಅಂಜಲಿ ಮತ್ತು ಮಗ ದಿನೇಶ್ ಮೃತ ದುರ್ದೈವಿಗಳು.
ಅಂಜಲಿ ಬಿ.ಎಡ್ ಓದುತ್ತಿದ್ದರು. ಇಂದು ಪರೀಕ್ಷೆ ಇತ್ತು. ಹಾಗಾಗಿ ಪರೀಕ್ಷಾ ಕೇಂದ್ರಕ್ಕೆ ಬೈಕ್ನಲ್ಲಿ ಇಬ್ಬರು ಮಕ್ಕಳೊಂದಿಗೆ ವೀರೇಶ್ ಕರೆದೊಯ್ಯುತ್ತಿದ್ದರು. ವೀರೇಶ್ ಹಾಸ್ಟೆಲ್ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದರು. ಮಾರ್ಗ ಮಧ್ಯೆ ಯಮನಂತೆ ಬಂದ ಲಾರಿ ಹಿಂಬದಿಯಿಂದ ಬೈಕ್ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಗಂಡ- ಹೆಂಡತಿ-ಮಗ ಸ್ಥಳದಲ್ಲೇ ಕೊನೆಯು ಸಿರೆಳೆದಿದ್ದಾರೆ. ಹನಿ ಎಂಬ ಹೆಣ್ಣು ಮಗುವಿಗೆ ಸ್ಥಿತಿ ಗಂಭೀರ ವಾಗಿದೆ. ವಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಮೂವರ ಶವಗಳನ್ನು ರವಾನಿಸಲಾಗಿದೆ.
ಶವಾಗಾರದ ಮುಂದೆ ಎರೆಗುಡಿ ಗ್ರಾಮಸ್ಥರು ಹಾಗೂ ಸಂಬಂಧಿಕರು ಜಮಾಯಿಸಿದ್ದು, ಕ್ರೂರ ವಿಧಿಯನ್ನು ಶಪಿಸುತ್ತಿದ್ದಾರೆ. ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.