Bengaluru's 2nd airport: ನೆಲಮಂಗಲದಲ್ಲಿ ವಿಮಾನ ನಿಲ್ದಾಣಕ್ಕೆ ವಿರೋಧ; ರೈತರನ್ನು ಒಕ್ಕಲೆಬ್ಬಿಸಿದ್ರೆ ಉಗ್ರ ಹೋರಾಟದ ಎಚ್ಚರಿಕೆ
Bengaluru's 2nd airport: ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಚರ್ಚೆಗಳು ಕೇಳಿ ಬಂದಾಗಲೆಲ್ಲ ಸ್ಥಳೀಯ ರೈತರು ಮತ್ತು ರಾಜಕೀಯ ಮುಖಂಡರುಗಳಿಂದ ವಿರೋಧ ವ್ಯಕ್ತವಾಗುತ್ತಲೇ ಇದೆ. ವಿಮಾನ ನಿಲ್ದಾಣ ನಿರ್ಮಾಣ ವಿರೋಧಿಸಿ ಮಾಜಿ ಶಾಸಕ ಕೆ ಶ್ರೀನಿವಾಸಮೂರ್ತಿ ಮತ್ತು ಬಿಜೆಪಿಯ ಹಲವು ನಾಯಕರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.
Deekshith Nair
December 4, 2024
ಬೆಂಗಳೂರು: ನೆಲಮಂಗಲದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru's 2nd airport) ತೀವ್ರ ವಿರೋಧ ವ್ಯಕ್ತವಾಗಿದೆ. ಏರ್‌ಪೋರ್ಟ್ ನಿರ್ಮಾಣಕ್ಕೆ ನೆಲಮಂಗಲ-ಕುಣಿಗಲ್ ರಾಷ್ಟ್ರೀಯ ಹೆದ್ದಾರಿ 75ರ ಸಮೀಪ 6 ಸಾವಿರ ಎಕರೆ ಜಾಗವನ್ನು ರಾಜ್ಯ ಸರ್ಕಾರ ಗುರುತಿಸಿದೆ. ಆದರೆ, ಇದರಿಂದ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತರು, ಪ್ರಾಣಬಿಟ್ಟರೂ, ಊರು ಬಿಡಲ್ಲ ಎಂದು ಆಕ್ರೋಶ ಹೊರಹಾಕುತ್ತಿರುವುದು ಕಂಡುಬಂದಿದೆ.
ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಚರ್ಚೆಗಳು ಕೇಳಿ ಬಂದಾಗಲೆಲ್ಲ ಸ್ಥಳೀಯ ರೈತರು ಮತ್ತು ರಾಜಕೀಯ ಮುಖಂಡರುಗಳಿಂದ ವಿರೋಧ ವ್ಯಕ್ತವಾಗುತ್ತಲೇ ಇದೆ. ವಿಮಾನ ನಿಲ್ದಾಣ ನಿರ್ಮಾಣ ವಿರೋಧಿಸಿ ಮಾಜಿ ಶಾಸಕ ಕೆ ಶ್ರೀನಿವಾಸಮೂರ್ತಿ ಮತ್ತು ಬಿಜೆಪಿಯ ಹಲವು ನಾಯಕರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಈ ಹಿಂದಿನಿಂದಲೂ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ರೈತರನ್ನು ಒಕ್ಕಲೆಬ್ಬಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಎಚ್ಚರಿಕೆ ನೀಡಿದ್ದು, ನೆಲಮಂಗಲ ತಾಲೂಕಿನ ಮೂರು ಗ್ರಾಮ ಪಂಚಾಯಿತಿಗಳಲ್ಲಿ ಸರ್ವೆ(Survey) ಕಾರ್ಯ ನಡೆಯುತ್ತಿದ್ದು, ಅಧಿಕಾರಿಗಳು ಯಾವುದೇ ರೀತಿಯ ಮಾಹಿತಿಯನ್ನು ನೀಡದೆ ಸರ್ವೆ ನಡೆಸುತ್ತಿದ್ದಾರೆ. ತಿಪ್ಪಗೊಂಡನಹಳ್ಳಿ, ಕುಮದ್ವತಿ ಹಾಗೂ ಅರ್ಕಾವತಿ ಜಲಾಶಯ ಒಳಗೊಂಡಿರುವ ಪ್ರದೇಶದಲ್ಲಿ ಸರ್ವೆ ನಡೆಯುತ್ತಿದೆ. ಈ ಭಾಗಗಳಲ್ಲಿ ಬಡ ರೈತಾಪಿ ವರ್ಗವೇ ಹೆಚ್ಚು ವಾಸಿಸುತ್ತಿದ್ದು, ಅವರನ್ನು ಒಕ್ಕಲೆಬ್ಬಿಸಲು ಸರ್ಕಾರ ಹೊರಟಿದೆ . ದಿವಂಗತ ಹಿರಿಯ ನಟಿ ಲೀಲಾವತಿ(Leelavathi) ಗ್ರಾಮವಾದ ಸೋಲದೇವನಹಳ್ಳಿಯಲ್ಲಿಯೂ ಸಹ ಸರ್ವೆ ಕಾರ್ಯ ನಡೆಯುತ್ತಿದೆ. ವಿಮಾನ ನಿಲ್ದಾಣಕ್ಕೆ ನಮ್ಮ ವಿರೋಧವಿದ್ದು, ಈ ಕಾರ್ಯವನ್ನು ಕೈ ಬಿಟ್ಟು ಸರ್ಕಾರ ರೈತರ ಪರ ನಿಲ್ಲಬೇಕು. ಇಲ್ಲದಿದ್ದರೆ ಬಿಜೆಪಿ(BJP) ಹಾಗೂ ಜೆಡಿಎಸ್(JDS) ನಾಯಕರುಗಳು ಜೊತೆಯಾಗಿ ಉಗ್ರ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.
ವಿಮಾನ ನಿಲ್ದಾಣಕ್ಕೆ ವಿರೋಧ ಯಾಕೆ?ಬೆಂಗಳೂರಿನ ಬಳಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಮೊದಲಿನಿಂದಲೂ ಜೋರಾದ ಚರ್ಚೆ ಕೇಳಿಬಂದಿದ್ದು, ಇದೀಗ ನಾಲ್ಕು ಕಡೆ ಸ್ಥಳ ಗುರುತಿಸಲಾಗಿದೆ. ಬಿಡದಿ, ನೆಲಮಂಗಲ, ತುಮಕೂರು, ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ಮಾಡಲು ಸ್ಥಳ ಗುರುತಿಸಲಾಗಿದೆ. ಆದರೆ ಈವರೆಗೂ ಖಚಿತವಾದ ಸ್ಥಳ ನಿಗದಿಯಾಗಿರುವುದಿಲ್ಲ.
ನೆಲಮಂಗಲ-ಕುಣಿಗಲ್ ನಡುವಿನ ಯಂಟಗನಹಳ್ಳಿಯಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ನಡುವಿನ ಪ್ರದೇಶದಲ್ಲಿ ಏರ್‌ಪೋರ್ಟ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈಗಗಾಲೇ ನಾನಾ ಹಂತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಡಿಜಿಟಲ್ ಸರ್ವೆ, ಹೆಲಿಕಾಪ್ಟರ್ ಮೂಲಕ ಸರ್ವೆ ಮಾಡುತ್ತಿದ್ದಾರೆ. ಇದು ಈ ಭಾಗದ ರೈತರು, ಸಾರ್ವಜನಿಕರ ನಿದ್ದೆಗೆಡಿಸಿದೆ.
ವಿಮಾನ ನಿಲ್ದಾಣಕ್ಕೆ ಗುರುತಿಸಲಾದ ಸ್ಥಳವು ಫಲವತ್ತಾದ ಭೂಮಿಯಾಗಿದೆ. ನಾವು ಭೂಮಿಯನ್ನು ನಂಬಿಕೊಂಡು ಬದುಕುತ್ತಿದ್ದೇವೆ. ಈ ತುಂಡು ಭೂಮಿ ಹೊರತಾಗಿ ನಮಗೆ ಬೇರೆ ಯಾವ ಆಸ್ತಿಯೂ ಇಲ್ಲ. ನಮ್ಮ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಲು ಸರ್ಕಾರ ಹೊರಟಿದೆ. ಆದ್ದರಿಂದ ನಾವು ರಕ್ತ ಕೊಟ್ಟೇವು, ಭೂಮಿ ಮಾತ್ರ ಬಿಟ್ಟು ಕೊಡುವುದಿಲ್ಲ ಎಂದು ನೆಲಮಂಗಲ ಭಾಗದ ರೈತರು ಹೇಳುತ್ತಿದ್ದಾರೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಟರ್ಮಿನಲ್(Terminal) 1ರಲ್ಲಿ ಪ್ರಯಾಣಿಕರ ದಟ್ಟಣೆ ಸಂಭವಿಸುತ್ತಲೇ ಇತ್ತು. ಈ ಹಿನ್ನೆಲೆ ಟರ್ಮಿನಲ್ 2 ಅನ್ನು ನಿರ್ಮಾಣ ಮಾಡಿದ್ದು, ಇದು ವಿಶ್ವದಲ್ಲೇ ಅತ್ಯಂತ ಸುಂದರ ಟರ್ಮಿನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಮತ್ತೆ ಪ್ರಯಾಣಿಕರ ಹೆಚ್ಚಳ ಹಿನ್ನೆಲೆ ಈ ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು ಬೆಂಗಳೂರಿನ ಸಮೀಪ 2ನೇ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ.
ಈ ಸುದ್ದಿಯನ್ನೂ ಓದಿ:Largest Airport: ಇದು ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣ; ಎಲ್ಲಿದೆ? ಏನಿದರ ವಿಶೇಷತೆ?