HD Kumaraswamy: ರಾಜ್ಯದ ನಿರುದ್ಯೋಗಿ ಯುವಜನರಿಗೆ ಕೌಶಲ್ಯಾಧಾರಿತ ಉದ್ಯೋಗಾವಕಾಶ; ಅಧಿಕಾರಿಗಳ ಜತೆ ಎಚ್.ಡಿ.ಕೆ ಮಹತ್ವದ ಸಭೆ
ಮಂಡ್ಯ ಲೋಕಸಭೆ ಕ್ಷೇತ್ರವೂ ಸೇರಿದಂತೆ ರಾಜ್ಯದ ನಿರುದ್ಯೋಗಿ ಯುವಜನರಿಗೆ ಕೌಶಲ್ಯಾಧಾರಿತ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಬಗ್ಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಮಹತ್ವದ ಸಭೆ ನಡೆಸಿದರು. ಈ ಕುರಿತ ವಿವರ ಇಲ್ಲಿದೆ.
Vishwavani News
January 3, 2025
ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರವೂ ಸೇರಿದಂತೆ ರಾಜ್ಯದ ನಿರುದ್ಯೋಗಿ ಯುವಜನರಿಗೆ ಕೌಶಲ್ಯಾಧಾರಿತ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಬಗ್ಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಮಹತ್ವದ ಸಭೆ ನಡೆಸಿದರು. ಮುಖ್ಯವಾಗಿ ಶೇ.80 ರಷ್ಟು ಕೃಷಿಯನ್ನೇ ನಂಬಿಕೊಂಡಿರುವ ಮಂಡ್ಯ ಜಿಲ್ಲೆಯಲ್ಲಿ ಕೌಶಲ್ಯ ತರಬೇತಿ, ಉದ್ಯೋಗ ಅವಕಾಶಗಳ ಬಗ್ಗೆ ಸಚಿವರು ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ಜತೆ ವಿಸ್ತೃತ ಸಮಾಲೋಚನೆ ನಡೆಸಿದರು.
ಬೆಂಗಳೂರಿನ ಎಚ್‌ಎಂಟಿ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಕೇಂದ್ರ ಸಚಿವರು, ಪ್ರಮುಖವಾಗಿ ಡಿಪ್ಲೊಮೊ, ಐಟಿಐ, ಎಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಮುಂತಾದ ವಿಭಾಗಗಳಲ್ಲಿ ಉತ್ತೀರ್ಣರಾಗಿರುವ ಯುವಜನರಿಗೆ ಅವರವರ ಕುಶಲತೆಗೆ ತಕ್ಕಂತೆ ಉದ್ಯೋಗ ಕಲ್ಪಿಸಬೇಕು. ಅಗತ್ಯವಾಗಿ ನಾವು ಅಪ್ರಂಟೀಸ್ ಮೇಳ ಮಾಡಿದರೆ ಉತ್ತಮ ಎಂದು ಸಚಿವರು ಹೇಳಿದರು.
ಈ ಸುದ್ದಿಯನ್ನೂ ಓದಿ | Glopixs: ಡಿಜಿಟಲ್ ಮನರಂಜನೆ ಕ್ಷೇತ್ರಕ್ಕೆ ಗ್ಲೋಪಿಕ್ಸ್ ಒಟಿಟಿ; ಲೋಗೊ ಅನಾವರಣ
ಅರ್ಹ ಅಭ್ಯರ್ಥಿಗಳಿಗೆ ಲಭ್ಯವಿರುವ ಉದ್ಯೋಗಗಳಿಗೆ ಅನುಗುಣವಾಗಿ, ಉದ್ಯೋಗ ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಕೌಶಲ್ಯ ತರಬೇತಿ ನೀಡುವ ಬಗ್ಗೆ ಕೌಶಲ್ಯಾಭಿವೃದ್ಧಿ ಇಲಾಖೆ, ಮಧ್ಯಮ ಸಣ್ಣ ಕೈಗಾರಿಕೆಗಳ ಇಲಾಖೆಯ ಅಧಿಕಾರಿಗಳ ಜತೆ ಸಚಿವರು ಸಮಾಲೋಚನೆ ನಡೆಸಿದರು.
ಅಲ್ಲದೆ, ಬೆಂಗಳೂರಿನಲ್ಲಿರುವ ಎಚ್‌ಎಂಟಿ ಕೌಶಲ್ಯ ತರಬೇತಿ ಕೇಂದ್ರದ ಮೂಲಕ ಐಟಿಐ, ಡಿಪ್ಲೊಮೊ, ಎಂಜಿನಿಯರಿಂಗ್ ಸೇರಿ ವಿವಿಧ ತಾಂತ್ರಿಕ ಕೋರ್ಸ್‌ಗಳನ್ನು ಮಾಡಿಕೊಂಡಿರುವ ಯುವ ಜನರಿಗೆ ಸೂಕ್ತ ಕೌಶಲ್ಯ ತರಬೇತಿ ನೀಡುವ ಬಗ್ಗೆ ಕಂಪನಿಯ ಅಧಿಕಾರಿಗಳ ಜತೆ ಕೇಂದ್ರ ಸಚಿವರು ಚರ್ಚಿಸಿದರು. ಪ್ರಮುಖವಾಗಿ, ಪ್ರಸಕ್ತ ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಯುವ ಜನರನ್ನು ಸಜ್ಜು ಮಾಡಬೇಕು. ಕೇವಲ ಕೌಶಲ್ಯ ತರಬೇತಿ ನೀಡಿದರಷ್ಟೇ ಸಾಲದು, ಆ ಕುಶಲತೆಗೆ ತಕ್ಕಂತೆ ಉದ್ಯೋಗ ಲಭ್ಯವಾಗುವ ಹಾಗೆ ನೋಡಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಡ್ಯದಲ್ಲಿ ಯುವಜನರಿಗೆ ಉದ್ಯೋಗ
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜನರು ಕೃಷಿ ಚಟುವಟಿಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮಕ್ಕಳು ಎಂಜಿನಿಯರಿಂಗ್, ಡಿಪ್ಲೊಮೊ ಹಾಗೂ ಐಟಿಐ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೆ, ರಾಜ್ಯದ ವಿವಿಧ ಭಾಗಗಳಲ್ಲಿ ಉದ್ಯೋಗ ಕೇಳಿಕೊಂಡು ನನ್ನ ಬಳಿಗೆ ದಿನನಿತ್ಯವೂ ಬರುತ್ತಾರೆ. ಅಂಕಿ ಅಂಶಗಳ ಪ್ರಕಾರ ಮಂಡ್ಯ ಜಿಲ್ಲೆ ಒಂದರಲ್ಲಿಯೇ 50 ಲಕ್ಷ ಜನಸಂಖ್ಯೆ ಇದ್ದು, ಇದರಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನ ಯುವಜನರೇ ಇದ್ದಾರೆ. ಶೇಕಡಾ 80ರಷ್ಟು ಜನರು ಬೇಸಾಯದಲ್ಲಿಯೇ ನಿರತರಾಗಿದ್ದು, ಕೃಷಿ ಆಧಾರಿತ ಉದ್ಯೋಗ ಅವಕಾಶಕ್ಕೆ ಜಿಲ್ಲೆಯಲ್ಲಿ ಹೆಚ್ಚು ಬೇಡಿಕೆ ಇದೆ ಎಂದು ಸಚಿವರು ಸಭೆಯಲ್ಲಿ ಹೇಳಿದರು.
ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಗಾರ್ಮೆಂಟ್ಸ್ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವ ಜನರಿಗೆ ಜವಳಿ ಉದ್ಯಮದಲ್ಲಿ ಉತ್ತಮ ತರಬೇತಿ ಕೊಟ್ಟರೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಅವಕಾಶ ಸೃಷ್ಟಿಸಬಹುದು. ಮಂಡ್ಯದಲ್ಲಿ ಇಂಥ ಪ್ರಯೋಗ ಮಾಡಿದರೆ ಅದನ್ನು ರಾಜ್ಯದ ಇತರೆ ಭಾಗಗಳಿಗೆ ವಿಸ್ತರಿಸಬಹುದು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಮೊಬೈಲ್ ಹೆಲ್ತ್ ಘಟಕ
ಮಂಡ್ಯ ಲೋಕಸಭೆ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳೂ ಪ್ರತಿ ಕ್ಷೇತ್ರಕ್ಕೊಂದು ಮೊಬೈಲ್ ಆರೋಗ್ಯ ಘಟಕಗಳನ್ನು ಆರಂಭಿಸುವ ಬಗ್ಗೆ ಸಚಿವರು ಎಚ್‌ಎಲ್‌ಎಲ್ ಹೆಲ್ತ್ ಕೇರ್ ಸಂಸ್ಥೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಈ ಬಗ್ಗೆ ವಿಸ್ತೃತ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಸಚಿವರು, ಮೊಬೈಲ್ ಆರೋಗ್ಯ ಘಟಕಗಳನ್ನು ಆರಂಭಿಸುವ ಬಗೆ, ಆರೋಗ್ಯ ಸೇವೆಯ ವಿಧಾನ, ಹಣಕಾಸು ಸಂಪನ್ಮೂಲ ಕ್ರೋಢೀಕರಣ ಇತ್ಯಾದಿ ಅಂಶಗಳ ಬಗ್ಗೆ ಸಚಿವರು ಮಾಹಿತಿ ಸಂಗ್ರಹ ಮಾಡಿದರು.
ಆರೋಗ್ಯ ಕ್ಷೇತ್ರದಲ್ಲಿ ನರ್ಸ್, ಲ್ಯಾಬ್ ಅಸಿಸ್ಟೆಂಟ್, ಲ್ಯಾಬ್ ಟೆಕ್ನಿಷಿಯನ್, ವೈದ್ಯಕೀಯ ಪರಿಕರಗಳ ತಯಾರಿಕೆ ಇತ್ಯಾದಿ ವಿಭಾಗಗಳಲ್ಲಿ ಉದ್ಯೋಗಗಳಿಗೆ ಬೇಡಿಕೆ ಇದೆ. ಅರ್ಹ ಯುವಜನರಿಗೆ ಅಗತ್ಯವಾದ ತರಬೇತಿ ಕೊಡಬೇಕು. ಮಂಡ್ಯ ಕ್ಷೇತ್ರದಲ್ಲಿ ಇದಕ್ಕೆ ವಿಪುಲ ಅವಕಾಶಗಳಿವೆ. ಖಾಸಗಿ ಹಾಗೂ ಸಾರ್ವಜನಿಕ ವಲಯದ ಆರೋಗ್ಯ ಕ್ಷೇತ್ರದಲ್ಲಿ ಕೌಶಲ್ಯಾಧಾರಿತ ಉದ್ಯೋಗಗಳಿಗೆ ಬೇಡಿಕೆ ಇದೆ. ಅಲ್ಲದೆ, ಕೇಂದ್ರ ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಇಂತಹ ಉದ್ಯೋಗಿಗಳ ಅಗತ್ಯ ಇದೆ. ಅದಕ್ಕಾಗಿ ಯುವಜನರಿಗೆ ಸೂಕ್ತ ತರಬೇತಿ ಕೊಟ್ಟು ಸಜ್ಜು ಮಾಡಬೇಕಿದೆ ಎಂದು ಸಚಿವರು ಸಲಹೆ ನೀಡಿದರು.
ಈ ಸುದ್ದಿಯನ್ನೂ ಓದಿ | EPF Withdrawal: ಪಿಎಫ್ ಹಣ ಹಿಂಪಡೆಯಲು ಬರಲಿದೆ ATM ಕಾರ್ಡ್; ಬ್ಯಾಂಕ್‌ನಂತೆ ಕಾರ್ಯ ನಿರ್ವಹಿಸಲಿದೆ EPFO
ಅಲ್ಲದೆ, ಕೌಶಲ್ಯ ಆಧಾರಿತ ಉದ್ಯೋಗ ಸೃಷ್ಟಿಗೆ ನರೇಂದ್ರ ಮೋದಿ ಅವರ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದೆ ಹಾಗೂ ಸಂಪನ್ಮೂಲಗಳನ್ನು ಒದಗಿಸಿದೆ. ಅದೆಲ್ಲವನ್ನೂ ಸದ್ಬಳಕೆ ಮಾಡಿಕೊಂಡು ತಮಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸೂಚಿಸಿದರು.