ಚಾಮರಾಜನಗರ: ಪರದೆಯಲ್ಲಿ ಬಿ.ಎಸ್.ವೈ ಫೋಟೋ ಇಲ್ಲದಿದ್ದಕ್ಕೆ ಆಕ್ರೋಶ
ಚಾಮರಾಜನಗರ: ಪರದೆಯಲ್ಲಿ ಬಿ.ಎಸ್.ವೈ ಫೋಟೋ ಇಲ್ಲದಿದ್ದಕ್ಕೆ ಆಕ್ರೋಶ
Vishwavani News
December 13, 2022
ಚಾಮರಾಜನಗರ: ಚಾಮರಾಜನಗರದಲ್ಲಿ ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಉದ್ಘಾಟನೆ, ಶಂಕುಸ್ಥಾಪನೆಗೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದು, ಬಿ.ಎಸ್.ಯಡಿಯೂರಪ್ಪ ನವರ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.
ವೇದಿಕೆಯಲ್ಲಿ ಅಳವಡಿಸಿದ್ದ ಎಲ್‌ಸಿಡಿ ಪರದೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂ ರಪ್ಪನವರ ಫೋಟೋ ಇಲ್ಲದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪಗೆ ಜೈಕಾರ ಹಾಕಿ ಫೋಟೋ ಹಾಕುವಂತೆ ಒತ್ತಾಯಿಸಿದರು.
ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನಕುಮಾರ್ ವೇದಿಕೆ ಏರಿ 'ಇದು ಸರ್ಕಾರದ ಕಾರ್ಯಕ್ರಮವಾದ್ದರಿಂದ ಯಡಿಯೂರಪ್ಪ ಫೋಟೋ ಹಾಕಲಾಗಲ್ಲ. ಅವರ ಬಗ್ಗೆ ಗೌರವ-ಪ್ರೀತಿ ಇದೆ. ಅಭಿಮಾನಿಗಳು ಅಸಮಾಧಾನಗೊಳ್ಳಬಾರದು ಎಂದು ಮನವಿ ಮಾಡಿಕೊಂಡರು.
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಸಿ.ಎಂ. ಬಸವರಾಜ ಬೊಮ್ಮಾಯಿ ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿಗರು ಪಾರಮ್ಯ ಮೆರೆದ ಘಟನೆ ನಡೆಯಿತು. ಸರ್ಕಾರಿ ಕಾರ್ಯಕ್ರಮವಾದ್ದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳಷ್ಟೇ ವೇದಿಕೆಯಲ್ಲಿರುವುದು ಶಿಷ್ಟಾಚಾರ ವಾಗಿದೆ.
ಬಿಜೆಪಿ ಮುಖಂಡರಾದ ಮಾಜಿ ಶಾಸಕ ಪ್ರೊ.ಮಲ್ಲಿಕಾರ್ಜುನಪ್ಪ, ಅಮ್ಮನಪುರ ಮಲ್ಲೇಶ್ ಸಿಎಂ ಸಾಲಿನ ಕುರ್ಚಿಗಳಲ್ಲೇ ಕುಳಿತು ಕೊಂಡರು. ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗುತ್ತಿದ್ದರೂ ಪೊಲೀಸರು, ಅಧಿಕಾರಿಗಳು ಜಾಣಮೌನ ವಹಿಸಿದ್ದರು.
ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗಲಿದೆ ಎಂಬ ಪದ್ಧತಿ ಹಿಂದಿನಿಂದಲೂ ಬಿಜೆಪಿಯಲ್ಲಿ ಇತ್ತು. ಆದರೆ ಎರಡನೇ ಬಾರಿ ಸಿಎಂ ಬಸವರಾಜ ಬೊಮ್ಮಾಯಿ ನಗರಕ್ಕೆ ಭೇಟಿ ನೀಡಿದ್ದಾರೆ.
1988ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಆರ್. ಬೊಮ್ಮಾಯಿ ಚಾಮರಾಜನಗರಕ್ಕೆ ಭೇಟಿ ಕೊಟ್ಟು ತಾಲೂಕು ಕಚೇರಿ ಸಂಕೀರ್ಣ ಮತ್ತು ತಾಲೂಕು ಆಸ್ಪತ್ರೆಯನ್ನು ಉದ್ಘಾಟಿಸಿದ್ದರು.