Resort: ನಂದಿ ಬೆಟ್ಟದ ಸರಹದ್ದಿನ ರೆಸಾರ್ಟ್ ವಿಲ್ಲಾಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
Resort: ನಂದಿ ಬೆಟ್ಟದ ಸರಹದ್ದಿನ ರೆಸಾರ್ಟ್ ವಿಲ್ಲಾಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
Ashok Nayak
December 28, 2024
ಮುನಿರಾಜು ಎಂ ಅರಿಕೆರೆ
ಹೊಸ ವರ್ಷಾಚರಣೆ ನೆಪದಲ್ಲಿ ನಡೆಯುವ ಅಕ್ರಮಗಳೀಗೆ ಕಡಿವಾಣದ ಅಂಕುಶ
ಚಿಕ್ಕಬಳ್ಳಾಪುರ : ನಂದಿ ಬೆಟ್ಟದ ತಪ್ಪಲು ಸೇರಿದಂತೆ ೧೦ ಕಿ.ಮೀ.ಸರಹದ್ದಿನಲ್ಲಿ ತಲೆಯೆತ್ತಿರುವ ರೆಸಾರ್ಟ್, ವಿಲ್ಲಾ ಗಳಲ್ಲಿ, ಕಾಟೇಜ್‌ಗಳಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ನಡೆಸುವ ರಾತ್ರಿ ಪಾರ್ಟಿ ಮೋಜು ಮಸ್ತಿಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಜಿಲ್ಲಾ ಪೊಲೀಸರು ವರ್ಷಾರಣೆ ನೆಪದಲ್ಲಿ ಕಾನೂನು ಮೀರಿ ನಡೆದುಕೊಂಡರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹದ್ದು ಮೀರಿದರೆ ಕ್ರಮ
ಹೌದು ಕಳೆದ ಎರಡು ದಶಕಗಳಿಂದೀಚೆಗೆ ಹೊಸ ವರ್ಷಾಚರಣೆಗೂ ನಂದಿಬೆಟ್ಟಕ್ಕೂ ಅದೇನೊ ಒಂಥರ ನಂಟು ಬೆಳೆದುಬಿಟ್ಟಿದೆ.ಬೆಂಗಳೂರಿನ ಐಟಿಗಳಲ್ಲಿ, ದೊಡ್ಡ ಕಂಪನಿಗಳಲ್ಲಿ ಅಷ್ಟೇ ಏಕೆ ಸರಕಾರಿ ಉದ್ಯೋಗದಲ್ಲಿರುವ ಸ್ಥಿತಿವಂತ ಮಂದಿ ಪ್ರಕೃತಿ ಮಡಿಲಲ್ಲಿ ಕುಡಿದು ಕುಣಿದು ಕುಪ್ಪಳಿಸಿ ಹೊಸ ವರ್ಷ 2025ನ್ನು ಆಚರಿಸೋಣ ಎಂತಲೇ ಬೆಟ್ಟದ ಸುತ್ತ ಮುತ್ತ ಬೀಡುಬಿಡುವ ವಾಡಿಕೆಯಿಟ್ಟುಕೊಂಡಿದ್ದಾರೆ.
ಇದನ್ನು ಮನಗಂಡಿರುವ ರೆಸಾರ್ಟ್, ವಿಲ್ಲಾಗಳಲ್ಲಿ, ಕಾಟೇಜ್‌ಗಳ ಮಾಲಿಕರು ಹೊಸವರ್ಷದ ನೆಪದಲ್ಲಿ ಪಾರ್ಟಿ ಗಳನ್ನೇ ಏರ್ಪಡಿಸಿ ಲಕ್ಷಗಟ್ಟಲೆ ಹಣ ಮಾಡುವ ಉದ್ದೇಶದಲ್ಲಿ ಬುಕಿಂಗ್ ಆರಂಭಿಸುತ್ತಾರೆ. ಇಂತಹವವರ ಮೇಲೆ ಹದ್ದಿನ ಕಣ್ಣಿಟ್ಟಿರುವ ಜಿಲ್ಲಾ ಪೊಲೀಸ್ ಪಾರ್ಟಿ ಹೆಸರಿನಲ್ಲಿ ಕಾನೂನುಭಂಗ ಮಾಡಿದರೆ ಕಂಬಿಎಣಿಸುವುದು ಖಚಿತ ಎಂಬ ಸಂದೇಶವನ್ನು ಈಗಾಗಲೇ ರವಾನಿಸಿದ್ದಾರೆ ಎನ್ನಲಾಗಿದೆ.
ಪ್ರಕೃತಿಯ ಮಡಿಲಿನಲ್ಲಿ ವರ್ಷಾಚರಣೆ
ನಂದಿಗಿರಿಧಾಮ ಅಂದರೆ ತಂಪಾದ ಹವಾಗುಣ, ಮಂಜುಮುಸುಕಿದ ವಾತಾವರಣ, ಗಿಡ, ಮರ, ಬಳ್ಳಿಗಳ ಸೊಬಗು, ಸಾಲಾಗಿ ಮಲಗಿರುರುವ ಬೆಟ್ಟಸಾಲುಗಳು, ಇವುಗಳ ಒಡಲಿನಲ್ಲಿ ನಕ್ಕು ನಲಿಯುವ ಬಗೆಬಗೆಯ ಹೂಗಳ ವಯ್ಯಾರ, ಸೂರ್ಯೋದಯ ಹಾಗೂ ಸೂರ್ಯಸ್ತಗಳ ವಿಹಂಗಮ ನೋಟ ನೋಡುವುದಕ್ಕೆ ತುಂಬಾ ಮಂದಿ ನಂದಿಬೆಟ್ಟಕ್ಕೆ ದಾಂಗುಡಿಯಿಡುತ್ತಾರೆ.ಆದರೆ ಜಿಲ್ಲಾಡಳಿತ ಡಿ.೩೧ರಿಂದ ಜನವರಿ ೨ ರಬೆಳಗಿನವರೆಗೆ ಸಾರ್ವಜನಿಕರ ನಿಷೇಧ ಹೇರಿ ರುವ ಕಾರಣ ರೆಸಾರ್ಟ್, ವಿಲ್ಲಾಗಳಲ್ಲಿ, ಕಾಟೇಜ್‌ಗಳತ್ತ ಮುಖಮಾಡುವುದು ಗುಟ್ಟಾಗಿ ಉಳಿದಿಲ್ಲ.ಇದೇ ಕಾರಣವಾಗಿ ಡಿ.೩೧ರ ರಾತ್ರಿ ನಡೆಯುವ ಪಾರ್ಟಿಗಳಲ್ಲಿ ಸಂತೋಷ ಕೂಟಗಳ ಜತೆಗೆ ಅನೈತಿಕ ಚಟವಟಿಕೆಗಳಿಗೂ ಅವಕಾಶ ನೀಡುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಜೋರು ಚರ್ಚೆಯಿದ್ದು ಇದಕ್ಕೆ ಪೂರಕವಾಗಿ ಪೊಲೀಸರು ಕೂಡ ಈಬಾರಿ ಇಂತಹ ಪಾರ್ಟಿಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ ಎನ್ನಲಾಗಿದೆ.
ನೈತಿಕತೆ ಮೀರದಿರಲಿ
ಹೊಸ ವರ್ಷಾಚರಣೆಯನ್ನು ಆಚರಿಸಲು ಬೆಂಗಳೂರಿಗೆ ಸಮೀಪವಿರುವ ನಂದಿಗಿರಿಧಾಮದ ತಪ್ಪಲು, ಅಕ್ಕಪಕ್ಕದ ಖಾಸಗಿ ರೆಸಾರ್ಟ್ ಮೊದಲಾದ ಪ್ರಕೃತಿಯ ತಾಣಗಳಿಗೆ ಬರುವ ಯುವಕ ಯುವತಿಯರು,ಟೆಕ್ಕಿಗಳು ನೈತಿಕತೆಯ ಆವರಣದ ಒಳಗೆ ೨೦೨೫ನ್ನು ಸ್ವಾಗತಿಸಿ ಆನಂದ ಪಡುವುದರತ್ತ ಚಿತ್ತ ಹರಿಸಿದರೆ ಅವರಿಗೂ ಕ್ಷೇಮ,ಹೊಸ ವರ್ಷಕ್ಕೂ ಅನಂದ ಉಂಟಗಲಿದೆ. ತಪ್ಪಿದಲ್ಲಿ ಸಿಹಿ ನೆನಪು ಕಾಣಲು ಬಂದು ಎಸಗುವ ತಪ್ಪಿನಿಂದಾಗಿ ಪೊಲೀಸರ ಅತಿಥಿಯಾಗಿ ವರ್ಷಪೂರ್ತಿ ಕಹಿ ಅನುಭವದಲ್ಲೇ ಕೊರಗುವಂತಾಗುವುದು ಬೇಡ ಎನನುವುದು ಗ್ರಾಮೀಣ ಪ್ರದೇಶದ ಹಿರಿಯರ ಎಚ್ಚರಿಕೆಯಾಗಿದೆ. ಏಕೆಂದರೆ ನಂದಿ ಬೆಟ್ಟದ ಸುತ್ತಮುತ್ತಲಿನಲ್ಲಿರುವ ರೆಸಾರ್ಟ್ಗಳು, ಹೋಮ್ ಸ್ಟೇಗಳು, ಕೆಫೆಗಳು, ಪಾರ್ಟಿ ಹಾಲ್ ಗಳು, ಹೋಟೆಲ್‌ಗಳಲ್ಲಿ ಯಾವುದೇ ರೀತಿಯ ಅನೈತಿಕ ಚಟುವಟಿಕೆ, ಮಾದಕ ದ್ರವ್ಯಗಳು ಸೇವನೆ, ಡಿಜೆ ನೃತ್ಯಗಳನ್ನು ಏರ್ಪಡಿಸಲು ಜಿಲ್ಲಾ ಪೊಲೀಸರು ನಿರ್ಬಂಧ ಹೇರಿದ್ದು, ಪೋಲಿಸ್ ಇಲಾಖೆ ಕೂಡ ಡಿಸೆಂಬರ್ ೩೧ ರಾತ್ರಿ ನಂದಿ ಬೆಟ್ಟದ ಸುತ್ತ ಮುತ್ತಲೂ ಹದ್ದಿನ ಕಣ್ಣು ಇಟ್ಟಿದ್ದಾರೆ ಎಂಬುದನ್ನು ಅರಿಯುವುದು ಕ್ಷೇಮ ಎನ್ನುವುದು ಪ್ರಕೃತಿ ಪ್ರಿಯರ ಸಲಹೆಯಾಗಿದೆ.
*ಕ್ರಮ ಖಚಿತ ಎಸ್ಪಿನಂದಿ ಗಿರಿಧಾಮ ಸುತ್ತಮುತ್ತಲೂ ಇರುವ ರೆಸಾರ್ಟ್ಗಳು, ಕೆಫೆ, ಹೊಮ್‌ಸ್ಟೇಗಳು ಹೊಸ ವರ್ಷದ ಅಂಗವಾಗಿ ಕಾರ್ಯಕ್ರಮ ರೂಪಿಸಲು ಸಿದ್ದತೆ ಮಾಡಿಕೊಳ್ಳುವುದು ಸಾಮಾನ್ಯ. ಕಾನೂನು ಇತಿಮಿತಿಯಲ್ಲಿ ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ಆದರೆ ನೆಲದ ಕಾನೂನಿಗೆ ಭಂಗಬರುವ ಹಾಗೆ ನಡೆದುಕೊಂಡರೆ ನೋಡಿಕೊಂಡು ಸುಮ್ಮನಿರಲಾಗದು. ಹೊಸ ವರ್ಷಾಚರಣೆ ನೆಪದಲ್ಲಿ ಮೋಜು ಮಸ್ತಿ, ಮಾದಕ ದ್ರವ್ಯಗಳು ಸೇವನೆ ಇತ್ಯಾದಿ ಅನೈತಿಕ ಚಟುವಟಿಕೆಗಳ ನಡೆಸದಂತೆ ಸಂಬಂಧಪಟ್ಟವರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಡಿವೈಎಸ್ಪಿಗಳ ನೇತೃತ್ವದಲ್ಲಿ ರೆಸಾರ್ಟ್ಗಳು, ಕೆಫೆ, ಹೊಮ್‌ಸ್ಟೇ, ಹೋಟೆಲ್ ಮಾಲಿಕರ ಸಭೆ ನಡೆಸಿ ಅಲ್ಲಿಯೂ ಕೂಡ ಎಚ್ಚರಿಕೆ ನೀಡಲಾಗಿದೆ. ಇದನ್ನು ಮೀರಿ ನಡೆದವರ ಮೇಲೆ ಕ್ರಮವಹಿಸಲು ನಮ್ಮ ಇಲಾಖೆ ಸಿದ್ಧವಿದೆ.ಕುಶಾಲ್ ಚೌಕ್ಸೆ - ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಚಿಕ್ಕಬಳ್ಳಾಪುರ.
ದೇಶದ ಪ್ರಮುಖ ಪ್ರವಾಸಿ ತಾಣವಾದ ನಂದಿಬೆಟ್ಟ,ಅದರ ಸುತ್ತ ಮುತ್ತಲೂ ಇರುವ ಇಶಾ ಫೌಂಡೇಶನ್, ಸ್ಕಂದಗಿರಿ, ಅವಲಬೆಟ್ಟ, ನಂದಿಬೆಟ್ಟದAತಹ ಪ್ರವಾಸಿ ತಾಣಗಳಿಗೆ ಡಿಸೆಂಬರ್ 31ರಂದು ಲಗ್ಗೆ ಇಡುವ ಜನಕ್ಕೆ ಹೇಳುವು ದಿಷ್ಟೇ.ಇಲ್ಲಿಗೆ ಬಂದು ಸಂತೋಷದಿಂದ ಹೊಸವರ್ಷಾಚರಣೆ ಆಚರಿಸಿ ಆರೋಗ್ಯ ನೆಮ್ಮದಿ ಇಟ್ಟುಕೊಂಡು ಮನೆಗಳಿಗೆ ಮರಳಿದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೀರ್ತಿ ಹೆಚ್ಚಲಿದೆ.ಇದನ್ನು ಬಿಟ್ಟು ಪಾರ್ಟಿ, ಮೋಜಿ ಮಸ್ತಿ ಹೆಸರಿನಲ್ಲಿ ಹದ್ದು ಮೀರಿ ನಡೆದರೆ, ಮಾಡಬಾರದ ಅನಾಚರಗಳನ್ನು ಮಾಡಿ ಪೊಲೀಸರಿಗೆ ಅತಿಥಿಯಾದರೆ ಹೊಸವರ್ಷ ಪೂರ್ತಿ ನಿಮ್ಮ ನೆಮ್ಮದಿ ಕಳೆಯಲಿದೆ.ಹೀಗಾಗದಂತೆ ನೋಡಿಕೊಂಡು ಹೊಸವರ್ಷ ಆಚರಣೆ ಮಾಡುವಂತಾಗಲಿ ಎನ್ನುವುದೇ ನಮ್ಮ ಸಲಹೆಯಾಗಿದೆ.-ಸುಧಾವೆಂಕಟೇಶ್.ದಸಂಸ ಮುಖಂಡರು