ಸಿಎಂಸಿ ವಿರೋಧ ಪಕ್ಷದ ನಾಯಕರಿಗೆ ಏಕವಚನ ಪದ ಪ್ರಯೋಗಿಸಿದ ಉಷಾ!!
ಸಿಎಂಸಿ ವಿರೋಧ ಪಕ್ಷದ ನಾಯಕರಿಗೆ ಏಕವಚನ ಪದ ಪ್ರಯೋಗಿಸಿದ ಉಷಾ!!
Vishwavani News
July 6, 2022
-ಪ್ರತಿಪಕ್ಷದ ಆಕ್ರೋಶಕ್ಕೆ ಬೇಸತ್ತು ಕಣ್ಣೀರು ಸುರಿಸುತ್ತಾ ಸಭಾತ್ಯಾಗಕ್ಕೆ ಮುಂದಾದ ಅಧ್ಯಕ್ಷೆ ದಾಸರ್
ಗದಗ: ಗದಗ-ಬೆಟಗೇರಿ ನಗರಸಭೆಯ ವಿಶೇಷ ಸಾಮಾನ್ಯ ಸಭೆ ಕದನ ಕುತೂ ಹಲದ ಘಟ್ಟ ತಲುಪಿ ಸಿಎಂಸಿ ಅಧ್ಯಕ್ಷೆ ಉಷಾ ಮಹೇಶ್ ದಾಸರ್ ಪ್ರತಿಪಕ್ಷದ ನಾಯಕ ಎಲ್.ಡಿ.ಚಂದಾವರಿ ವಿರುದ್ಧ ಏಕವಚನ ಪದ ಪ್ರಯೋಗಿಸಿ, ಕೊನೆಗೆ ಅಳುತ್ತಲೇ ಸಭೆಯಿಂದ ಹೊರನಡೆಯಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ.
ನಗರಸಭೆಗೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಹಾಗೂ ನಗರಸಭೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಹೈಸ್ಕೂಲ್ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು ಬುಧವಾರ ನಗರಸಭೆಯ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು.
ಸಭೆ ಆರಂಭಗೊಳ್ಳುತ್ತಿದ್ದಂತೆ ಪ್ರತಿ ಪಕ್ಷದ ನಾಯಕ ಎಲ್.ಡಿ. ಚಂದಾವರಿಯವರು ಎರಡು ತಿಂಗಳಿನಿಂದ ಸಭೆ ನಡೆದಿಲ್ಲ, ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ನೀವು ನಾಲ್ಕು ಜನ ಪಿಎಗಳನ್ನ ಇಟ್ಟುಕೊಂಡು ಏನು ಪ್ರಯೋಜನವಾಗಿಲ್ಲ ಎನ್ನುತ್ತಿದ್ದಂತೆ ಅಧ್ಯಕ್ಷೆ ಉಷಾ ಮಹೇಶ್ ದಾಸರ್ ಹರಿ ಹಾಯ್ದರು.
"ಏಯ್ ಸುಮ್ನೆ ಕುತ್ಕೊಳಪಾ, ನೀನು, ನಿಮ್ಮ ಶಾಸಕ ಸೇರಿಕೊಂಡು ಇಡೀ ಊರನ್ನೇ ಲೂಟಿ ಮಾಡಿದ್ದು ನಮಗೂ ಗೊತ್ತಿದೆ. ಇಟ್ಕೊಂಡಿದಿನಿ ಅಂದ್ರೆ ಏನರ್ಥ? ಅವರು ನನ್ನ ಸಹೋದರ ಸಮಾನರು" ಎಂದು ಆಕ್ರೋಶ ವ್ಯಕ್ತಪಡಿಸಿ ದರು.
ಅಧ್ಯಕ್ಷೆಯ ಪದಪ್ರಯೋಗದಿಂದ ಕುಪಿತಗೊಂಡ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು.
ಇನ್ನುಳಿದ ಸದಸ್ಯರು ಪ್ರತಿಭಟನಾನಿರತ ಸದಸ್ಯರ ಮನವೊಲಿಸಿ ಚರ್ಚೆ ಆರಂಭಿಸುತ್ತಿದ್ದಂತೆ ಕಣ್ಣಾಲಿ ತೇವಗೊಂಡ ಉಷಾ ದಾಸರ್ ಅಳುತ್ತಲೇ ಸಭೆಯಿಂದ ನಿರ್ಗಮಿಸಲು ಮುಂದಾದರು. ಬಿಜೆಪಿ ಸದಸ್ಯರು ಅವರನ್ನು ಸಮಾಧಾನಪಡಿಸಿ, ಸಭೆ ಮುಂದು ವರಿಯಲು ಸಹಕರಿಸಿದರು.