ಏರ್ ಸ್ಟ್ರಿಪ್ ಆಗಿ ಬದಲಾಗಿದೆ ಕೊಡಗಿನ ಕಾರ್ಮಾಡದ ಗದ್ದೆ
ಏರ್ ಸ್ಟ್ರಿಪ್ ಆಗಿ ಬದಲಾಗಿದೆ ಕೊಡಗಿನ ಕಾರ್ಮಾಡದ ಗದ್ದೆ
Vishwavani News
December 22, 2022
೩೦ ಕಿರು ವಿಮಾನಗಳ ತಯಾರಿಕೆ ಹೆಗ್ಗಳಿಕೆಯ ದೇಶಿ ಸಾಧಕ
ಅನಿಲ್ ಎಚ್.ಟಿ. ಮಡಿಕೇರಿ
ಕೊಡಗಿನ ಬಾನಂಗಳದಲ್ಲಿ ಅನೇಕ ಅವಕಾಶಗಳನ್ನು ಒದಗಿಸಬಲ್ಲ ನಿಟ್ಟಿನಲ್ಲಿ ಕಾರ್ಮಾಡು ಗ್ರಾಮದ ಸಾಹಸಿಗರು ಕಾರ್ಯಪ್ರ ವತ್ತರಾಗಿದ್ದಾರೆ.
ಕಿರು ವಿಮಾನಗಳನ್ನು ಇಳಿಸಿ ಹಾರಿಸಲು ಸೂಕ್ತವಾದ ಏರ್ ಸ್ಟ್ರಿಪ್ ನಿರ್ಮಿಸಿದ್ದಲ್ಲದೇ ಕಿರು ವಿಮಾನಗಳ ತಯಾರಿಕೆ ಮೂಲಕ ಕೊಡಗಿನ ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ವೈಮಾನಿಕ ಕ್ಷೇತ್ರದಲ್ಲಿ ಸೂಕ್ತ ತರಬೇತಿ ನೀಡಲು ತಂಡವೊಂದು ಸಿದ್ಧವಾಗಿದೆ. ದಕ್ಷಿಣ ಕೊಡಗಿನ ಕಾರ್ಮಾಡು ಗ್ರಾಮದಲ್ಲಿರುವ ಕೊಳ್ಳಿಮಾಡ ರಾಜಿ ಎಂಬುವವರು ಮನೆ ಯಲ್ಲಿಯೇ ೩೦ಕ್ಕೂ ಅಧಿಕ ಕಿರು ವಿಮಾನ ಮಾದರಿಗಳನ್ನು ಸಿದ್ಧಗೊಳಿಸಿದ್ದು ಎಲ್ಲ ಮಾದರಿಗಳೂ ಗಗನದಲ್ಲಿ ಸುಸೂತ್ರವಾಗಿ ಹಾರಾಡುವಂತಿದೆ.
ರಾಜಿ ಅವರ ಸ್ನೇಹಿತ ಮಾಪಂಗಡ ಮುತ್ತಣ್ಣ ಮತ್ತು ಕುಟ್ಟ ಗ್ರಾಮದ ಕೋಡಿಮಣಿ ಯಂಡ ಸುನೀಲ್ ಸುಬ್ಬಯ್ಯ ಅವರು ಕಾರ್ಮಾಡು ಗ್ರಾಮದಲ್ಲಿನ ೨೦೦೦ ಅಡಿ ಗದ್ದೆ ಯನ್ನೇ ೪ ಸೀಟರ್ ಸಾಮರ್ಥ್ಯದ ಕಿರು ವಿಮಾನ ಹಾರಾಟಕ್ಕೆ ಏರ್ ಸ್ಟ್ರಿಪ್ ಆಗಿ ಪರಿವರ್ತಿಸಿದ್ದಾರೆ. ಭವಿಷ್ಯದಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಸಾಧಿಸಲು ಕೊಡಗು ಜಿಲ್ಲೆಗೆ ಬಹಳಷ್ಟು ಅವಕಾಶಗಳಿದ್ದು ಈ ಹಿನ್ನೆಲೆಯಲ್ಲಿ ಕಾರ್ಮಾಡು ಗ್ರಾಮದಲ್ಲಿ ವಿನೂತನ ಪ್ರಯೋಗಗಳು ನಡೆದಿದೆ.
ತಯಾರಿ ಹೇಗೆ?
ಶಾಲಾ ವಿದ್ಯಾರ್ಥಿಗಳಿಗೆ ರಾಜಿ, ತಾವು ತಯಾರಿಸಿದ ಮಿನಿ ವಿಮಾನ ಮಾದರಿಗಳನ್ನು ಪ್ರದರ್ಶಿಸುವ ತರಬೇತಿ ಶಿಬಿರ ಆಯೋಜಿ ಸುವ ಮೂಲಕ ಮಕ್ಕಳಲ್ಲಿ ಹೊಸದೊಂದು ಚಿಂತನೆಗೆ ಕಾರಣರಾದರು. ಅಲ್ಯುಮಿನಿಯಂ ಮತ್ತು ಥರ್ಮೊಕೋಲ್ ಬಳಸಿ ರಾಜಿ ಅವರು ಹಾರಾಟಕ್ಕೆ ಯೋಗ್ಯವಾಗಿರುವ ಅನೇಕ ಕಿರು ವಿಮಾನಗಳನ್ನು ತಯಾರಿಸಿದರು. ಪ್ರತೀ ವಿಮಾನಕ್ಕೂ ೩೦ ಸಾವಿರದಿಂದ ೮೦ ಸಾವಿರದವರೆಗೆ ವೆಚ್ಚ ಮಾಡಿರುವ ರಾಜಿ, ಈ ವಿಮಾನಗಳನ್ನು ೧೫-೨೦ ದಿನಗಳಲ್ಲಿ ನಿರ್ಮಾಣ ಮಾಡುತ್ತ ಬಂದಿದ್ದಾರೆ. ಹೀಗಾಗಿ ಇವರ ಮನೆಯಲ್ಲಿ ಮಿನಿ ವಿಮಾನಗಳ ಬೃಹತ್ ಸಂಗ್ರಹವೇ ಕಂಡುಬರುತ್ತಿದೆ.
ಬಾಲ್ಯದಲ್ಲಿಯೇ ತನಗೆ ವೈಮಾನಿಕ ಕ್ಷೇತ್ರದಲ್ಲಿದ್ದ ಆಸಕ್ತಿಯಿಂದಾಗಿಯೇ ಇದೀಗ ವಿಮಾನಗಳನ್ನು ಮನೆಯಲ್ಲಿಯೇ ಆಸಕ್ತಿಯಿಂದ ನಿರ್ಮಾಣ ಮಾಡುತ್ತಿರುವುದಾಗಿ ರಾಜಿ ನುಡಿದರು. ‘ಅಪಘಾತದಿಂದ ಕಾಲುಗಳು ನಲುಗಿದ್ದರೂ ಮತ್ತೆ ನನ್ನ ಕಾಲ ಮೇಲೇ ಎದ್ದು ನಿಲ್ಲುತ್ತೇನೆ ಎಂಬ ಛಲದಿಂದ ಇದೇ ಕ್ಷೇತ್ರದಲ್ಲಿ ತೊಡಗಿಸಿಕೊಂಡುಕೊಡಗಿನ ಆಸಕ್ತರಿಗೆ ನೆರವಾಗುವ ನಿಟ್ಟಿನಲ್ಲಿ ಸ್ವಂತ
ಖರ್ಚಿನಲ್ಲಿ ವಿಮಾನ ತಯಾರಿಕೆಗೆ ತೊಡಗಿಕೊಂಡೆ’ ಎಂದೂ ರಾಜಿ ‘ವಿಶ್ವವಾಣಿ’ಯೊಂದಿಗೆ ಹೇಳಿದರು.
ಕಾರ್ಮಾಡು ಗ್ರಾಮದ ಹಸಿರು ಹಾಸಿನ ಏರ್ ಸ್ಟ್ರಿಪ್‌ನಲ್ಲಿ ಆಯೋಜಿಸಲಾಗಿದ್ದ ವೈಮಾನಿಕ ಮಾರ್ಗ ದರ್ಶಿ ಕಾರ್ಯಕ್ರಮದಲ್ಲಿ ರಾಜಿ ಮತ್ತು ಮಾಪಂಗಡ ಮುತ್ತಣ್ಣ ತಮ್ಮ ಗೆಳೆಯರೊಂದಿಗೆ ೬೦ ಕ್ಕೂ ಅಧಿಕ ಮಕ್ಕಳಿಗೆ ವಿಮಾನಗಳ ಬಗ್ಗೆ ಅನೇಕ ಮಾಹಿತಿ ನೀಡಿದರು. ಮಕ್ಕಳೂ ಅಷ್ಟೇ ಆಸಕ್ತಿಯಿಂದ ಲೋಹದ ಹಕ್ಕಿಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿವಳಿಕೆ ಪಡೆದರು.
ರಾಜಿ ತಯಾರಿಕೆಯ ಪ್ರತಿಯೊಂದು ಮಿನಿ ವಿಮಾನಗಳೂ ಒಂದಕ್ಕೊಂದು ಒಂದು ವಿಭಿನ್ನವಾಗಿದ್ದು ನೀರಿನಲ್ಲಿ ತೇಲಬಲ್ಲ ವಿಮಾನ, ಗ್ಲೈಡರ್, ಡ್ರೋಣ್ ಹೀಗೆ ಅನೇಕ ನವೀನ ಮಾದರಿಯ ವಿಮಾನಗಳನ್ನು ಇವರು ತಯಾರಿಸಿದ್ದು ವಿಶೇಷ. ಒಂದು ಸಂಸ್ಥೆ ಸಿದ್ದಪಡಿಸುವಂಥ ಇಂಥ ವಿಮಾನಗಳನ್ನು ಓರ್ವ ವ್ಯಕ್ತಿ ತಯಾರಿಸಿದ್ದಾರೆ ಎಂಬುದೇ ಕೊಡಗಿಗೆ ಹೆಮ್ಮೆ ತರುವ ವಿಚಾರ ವಾಗಿದೆ.
ರಾಜಿ ಅವರ ಗೆಳೆಯರಾದ ಮಾಪಂಗಡ ಮುತ್ತಣ್ಣ, ಕೋಡಿಮಣಿಯಂಡ ಸುನೀಲ್ ಸುಬ್ಬಯ್ಯ ಅವರು ೨೦೦೦ ಅಡಿಗಳಷ್ಟು ಉದ್ದ, ೧೦೦೦ ಅಡಿ ಅಗಲವಿರುವ ಹಸಿರ ಭೂಮಿಯಲ್ಲಿ ಕೊಡಗಿನ ಮೊದಲ ಖಾಸಗಿ ಏರ್ ಸ್ಟ್ರಿಪ್ ರೂಪಿಸಿದ್ದಾರೆ. ಇಲ್ಲಿ ೪
ಆಸನಗಳ ವಿಮಾನ, ಗೈಡರ್, ಪ್ಯಾರಾ ಮೋಟಾರ್, ಪವರ್ ಗ್ಲೈಡರ್‌ಗಳು ಸಲೀಸಾಗಿ ನೆಲೆ ಕಂಡುಕೊಳ್ಳಬಹುದಾಗಿದೆ.
*
ವೈಮಾನಿಕ ಅಪಘಾತದಲ್ಲಿ ಎರಡೂ ಕಾಲು ಕಳೆದುಕೊಂಡು ಜೀವನದ ಆಸೆಯನ್ನೇ ಬಿಟ್ಟಿದ್ದ ಸಹೋದರ ರಾಜಿ ಅವರಲ್ಲಿ ವಿಮಾನ ತಯಾರಿಕೆಯ ಆಸಕ್ತಿ ಮತ್ತೆ ಮರುಜೀವ ನೀಡುವಲ್ಲಿ ಸಫಲವಾಗಿದೆ. ಆಸಕ್ತಿ ಮತ್ತು ಛಲವಿದ್ದರೆ ಹೇಗೆ ಅದ್ಬುತವಾದ ಕಾರ್ಯ ಕೈಗೊಳ್ಳಬಹುದು ಎಂಬುದಕ್ಕೆ ರಾಜಿ ಉತ್ತಮ ನಿದರ್ಶನ.
-ಹಂಚೆಟ್ಟೀರ ಫ್ಯಾನ್ಸಿ ಮುತ್ತಣ್ಣ ಸಾಹಿತಿ
ಮುಂದಿನ ದಿನಗಳಲ್ಲಿ ದೇಶದ ವೈಮಾನಿಕ ರಂಗ ಹೊಸಹೊಸ ಆಯಾಮ ಪಡೆದುಕೊಳ್ಳುವ ಸಂದರ್ಭ ಕೊಡಗಿನಲ್ಲಿಯೂ ವೈಮಾನಿಕ ಸಾಹಸ ಕ್ರೀಡೆಗೆ ಹೆಚ್ಚು ಅವಕಾಶಗಳಿದ್ದು ಹೀಗಾಗಿಯೇ ಈ ಏರ್‌ಸ್ಟ್ರಿಪ್ ನಿರ್ಮಾಣ ಮಾಡಿದ್ದೇವೆ. ಈಗ ೨೫ ಲಕ್ಷ ರು.ಗಳಿಗೆಲ್ಲ ಉತ್ತಮ ವಿಮಾನ ಖರೀದಿ ಸಾಧ್ಯವಿದೆ. ಇಂಥ ವಿಮಾನಗಳು ಇಲ್ಲಿ ಇಳಿದು ಮತ್ತು ಹಾರಾಟ ಮಾಡಲು ಸಾಧ್ಯವಿದೆ. ಕೊಡಗಿನ ಯುವಪೀಳಿಗೆ ಸಾಹಸವನ್ನು ಇಷ್ಟಪಡುತ್ತದೆ. ಜತೆಗೇ ಗಗನದಿಂದ ಕೊಡಗಿನ ಪ್ರಕೃತಿ ಸೊಬಗನ್ನು ವೀಕ್ಷಿಸುವುದೇ ಬಹಳ ಅಪೂರ್ವ ಅನುಭವ. ಹೀಗಿರುವಾಗ ಕೊಡಗಿನಲ್ಲಿ ವೈಮಾನಿಕ ಸಾಹಸ ಕ್ರೀಡೆಗೆ ಭವಿಷ್ಯದಲ್ಲಿ ಬಹಳಷ್ಟು ಅವಕಾಶವಿದೆ.
- ಕೊಳ್ಳಿಮಾಡ ರಾಜಿ
ಕಿರು ವಿಮಾನಗಳ ತಯಾರಕರು
Read E-Paper click here