Randeep Hooda: 500 ಸಸಿ ನೆಟ್ಟು ಪರಿಸರ ಕಾಳಜಿ ಮೆರೆದ ಬಾಲಿವುಡ್ ನಟ!
World Environment day: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಬಾಲಿವುಡ್ ನಟ ಹಾಗೂ ಚಲನಚಿತ್ರ ನಿರ್ದೇಶಕ ರಣದೀಪ್ ಹೂಡಾ ಮಧ್ಯಪ್ರದೇಶನಲ್ಲಿರುವ ಪ್ರಸಿದ್ಧ ಕಾನ್ಹಾ ರಾಷ್ಟ್ರೀಯ ಉದ್ಯಾನದಲ್ಲಿ 500 ಗಿಡಗಳನ್ನು ನೆಡುವ ಮೂಲಕ ಪರಿಸರ ಪ್ರೇಮವನ್ನು ಮೆರೆದಿದ್ದಾರೆ.


ಮಧ್ಯಪ್ರದೇಶ: ವಿಶ್ವ ಪರಿಸರ ದಿನದ ಅಂಗವಾಗಿ(World Environment day) ಬಾಲಿವುಡ್ ನಟ, ನಿರ್ದೇಶಕ ರಣದೀಪ್ ಹೂಡಾ(Actor Randeep Hooda) ಬರೋಬ್ಬರಿ 500 ಸಸಿಗಳನ್ನು ನೆಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ. ಮಧ್ಯಪ್ರದೇಶನಲ್ಲಿರುವ ಕಾನ್ಹಾ ರಾಷ್ಟ್ರೀಯ ಉದ್ಯಾನದಲ್ಲಿ ಪತ್ನಿ ಲಿನ್ ಲೈಶ್ರಮ್ ಜೊತೆಗೂಡಿ ಸಸಿಗಳನ್ನು ನೆಟ್ಟಿದ್ದಾರೆ. ಇನ್ನು ಈ ವೇಳೆ ಮಾತನಾಡಿದ ರಣದೀಪ್ ಹೂಡಾ, "ವಿಶ್ವ ಪರಿಸರ ದಿನವು ಕೇವಲ ಆಚರಣೆ ಅಲ್ಲ, ಅದು ಪರಿಸರವನ್ನು ನಾವು ಎಷ್ಟು ನಾಶ ಮಾಡಿದ್ದೇವೆ ಎಂಬುದನ್ನು ಎಚ್ಚರಿಸುತ್ತದೆ. ಅರಣ್ಯಗಳು ನಮ್ಮ ಶ್ವಾಸಕೋಶಗಳಿದ್ದಂತೆ ಅವು ಇಲ್ಲದಿದ್ದರೆ ಜೀವನವೂ ಇಲ್ಲ. ನನಗೆ ವನ್ಯಜೀವಿಗಳ ಜೊತೆಗೆ ಆಧ್ಯಾತ್ಮಿಕ ಸಂಪರ್ಕವಿದೆ. ಪ್ರತಿ ಬಾರಿ ಕಾನ್ಹಾ ಉದ್ಯಾನಕ್ಕೆ ಹೋಗುವಾಗ ಪರಿಸರದ ಸಂರಕ್ಷಣೆಯ ಅಗತ್ಯತೆ ಮತ್ತಷ್ಟು ನನ್ನನ್ನು ಕಾಡುತ್ತದೆ" ಎಂದು ಹೇಳಿದ್ದಾರೆ.
ಒಂದು ಗಿಡ ನೆಡುವುದು ಸಾಮಾನ್ಯ ಕೆಲಸ ಎಂದೆನಿಸಬಹುದು, ಆದರೆ ಅದು ಬಹಳ ಪ್ರಮುಖವಾದುದು. ಗಿಡ ನೈಸರ್ಗಿಕವಾಗಿ ಆಶ್ರಯ, ಆಹಾರ, ಆಮ್ಲಜನಕ ನೀಡುತ್ತದೆ. ಅರಣ್ಯ ಮತ್ತು ವನ್ಯಜೀವಿಗಳು ಒಂದನ್ನು ಹೊರತು ಪಡಿಸಿ ಇನ್ನೊಂದಿಲ್ಲ ಅವು ಪರಸ್ಪರ ಅವಲಂಬಿತವಾಗಿವೆ. ಹಾಗಾಗಿ ಈ ದಿನವನ್ನು ಕೇವಲ ಆಚರಣೆಗೆ ಮಾತ್ರ ಸೀಮಿತಗೊಳಿಸದೆ ಪ್ರತಿದಿನವೂ ಅದರ ಮಹತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಪ್ರಕೃತಿ ನಮ್ಮನ್ನು ಅವಲಂಬಿಸಿಲ್ಲ ನಾವೇ ಪ್ರಕೃತಿಯನ್ನು ಅವಲಂಬಿಸಿದ್ದೇವೆ ಎಂದರು.
ಇನ್ನು ಈ ಕಾನ್ಹಾ ಅರಣ್ಯ ಜೀವ ವೈವಿಧ್ಯತೆಯಿಂದ ಪ್ರಸಿದ್ದಿ ಪಡೆದ ಉದ್ಯಾನವಾಗಿದ್ದು, ಹುಲಿ, ಚಿರತೆ, ಸಾಗರದಜಿಂಕೆ, ಕರಿ ನರಿ ಹಾಗೂ ಇತರೆ ಹಲವಾರು ಪ್ರಾಣಿಗಳು ಮತ್ತು ಸಸ್ಯಜಾತಿಗಳಿಂದ ಕೂಡಿದೆ.
ಈ ಸುದ್ದಿಯನ್ನೂ ಓದಿ: Hombale Films: ಬಿಗ್ ಅಪ್ಡೇಟ್ ನೀಡಿದ ಹೊಂಬಾಳೆ ಫಿಲ್ಮ್ಸ್; ಹೃತಿಕ್ ರೋಷನ್ ಜತೆಗೆ ಬಾಲಿವುಡ್ ಚಿತ್ರ ಘೋಷಣೆ
ವನ್ಯ ಜೀವಿ, ಪರಿಸರದ ಬಗ್ಗೆ ರಣದೀಪ್ ಹೂಡಾಗೆ ಅತೀವ ಕಾಳಜಿ
ವನ್ಯಜೀವಿ ಛಾಯಾಗ್ರಾಹಕನಾಗಿಯೂ ಗುರುತಿಸಿಕೊಂಡಿರುವ ರಣದೀಪ್, ಪರಿಸರ ಸಂರಕ್ಷಣೆಯ ಕಾಲಜಿ ಬಗ್ಗೆ ಸದಾ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ಹಂಚಿಕೊಳ್ಳುತ್ತಿರುತ್ತಾರೆ. ಭಾರತದ ನೈಸರ್ಗಿಕ ಪರಂಪರೆಯ ರಕ್ಷಣೆಗೆ ತಮ್ಮದೇ ಆದ ಶಕ್ತಿ, ಸಮಯ ಹಾಗೂ ಪ್ರೀತಿಯನ್ನು ಮೀಸಲಿಟ್ಟಿದ್ದಾರೆ. ಈ ಗಿಡ ನೆಡುವ ಕಾರ್ಯಕ್ರಮವು ರಣದೀಪ್ ಮತ್ತು ಅವರ ಪತ್ನಿ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಗೆ ಕೊಡುತ್ತಿರುವ ಕೊಡುಗೆಯಾಗಿದೆ. ಇವರ ಈ ಕಾರ್ಯವೈಖರಿ ಹಲವರಿಗೆ ಪ್ರೇರಣೆಯಾಗಿ, ಪರಿಸರದ ಉಳಿವಿನತ್ತ ಗಮನ ಹರಿಸಲು ಉತ್ತೇಜನ ನೀಡುತ್ತಿದೆ.