Maha Kumbh Mela: ರಾಯಚೂರಿನ ಜಿಲ್ಲಾಧಿಕಾರಿಯಾಗಿದ್ದ ಐ.ಆರ್.ಪೆರಮಾಳ್ ಈಗ ಸನ್ಯಾಸಿ
Maha Kumbh Mela: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಆರಂಭವಾಗಿದೆ. ರಾಯಚೂರಿನ ಜಿಲ್ಲಾಧಿಕಾರಿಯಾಗಿದ್ದ ಐ.ಆರ್.ಪೆರಮಾಳ್ ಅವರು ಸನ್ಯಾಸಿಯಾಗಿ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ. 1993-94ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐ.ಆರ್. ಪೆರುಮಾಳ್ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ (Maha Kumbh Mela) ಆರಂಭವಾಗಿದೆ. ದೇಶದ ವಿವಿಧ ಭಾಗಗಳ, ಜಗತ್ತಿನ ವಿವಿಧ ಕಡೆಗಳ ಭಕ್ತರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದು, ಹಲವು ಅಚ್ಚರಿಯ ಸಂಗತಿಗಳು ಅನಾವರಣಗೊಳ್ಳುತ್ತಿದೆ. ಈ ಪೈಕಿ ರಾಯಚೂರಿನ ಜಿಲ್ಲಾಧಿಕಾರಿಯಾಗಿದ್ದ ಐ.ಆರ್.ಪೆರಮಾಳ್ (IR Perumal) ಅವರು ಸನ್ಯಾಸಿಯಾಗಿ ಮಹಾ ಕುಂಭಮೇಳದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸದ್ಯ ಅವರ ಫೋಟೊ ವೈರಲ್ ಆಗಿದೆ.
1993-94ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐ.ಆರ್. ಪೆರುಮಾಳ್ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ಮಾತ್ರವಲ್ಲ ತಮಿಳುನಾಡು ಮೂಲದ ಇವರು ರಾಜ್ಯದ ನಾನಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2012ರಲ್ಲಿ ನಿವೃತ್ತರಾಗಿದ್ದ ಅವರು 2014ರಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯ ಇರಂಜುಮುಡಿ ಶಿವನ ದೇವಾಲಯ ಬಳಿ ಮಠ ಕಟ್ಟಿಕೊಂಡಿದ್ದರು. ನಂತರ ಸನ್ಯಾಸತ್ವ ಸ್ವೀಕರಿಸಿ ಶಿವಯೋಗಿ ಪೆರುಮಾಳ್ ಸ್ವಾಮೀಜಿ ಆಗಿದ್ದಾರೆ.
ಶಿವಯೋಗಿ ಪೆರುಮಾಳ್ ಸ್ವಾಮೀಜಿಯಾಗಿರುವ ಅವರು ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುವ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
'ಐಐಟಿ ಬಾಬಾ' ಅಭೇ ಸಿಂಗ್
ಕೆಲವು ದಿನಗಳ ಹಿಂದೆ ಮಹಾ ಕುಂಭಮೇಳದಲ್ಲಿ ಐಐಟಿ ಬಾಬಾ ಖ್ಯಾತಿಯ ಅಭೇ ಸಿಂಗ್ ಗಮನ ಸೆಳೆದಿದ್ದರು. ಅವರು ಐಐಟಿ ಬಾಂಬೆಯ ಮಾಜಿ ಏರೋಸ್ಪೇಸ್ ಎಂಜಿನಿಯರ್ ಆಗಿದ್ದರು. ಹರಿಯಾಣ ಮೂಲದ ಅಭೇ ಸಿಂಗ್ ಐಐಟಿ ಬಾಂಬೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್ ಮಾಡಿ ಆಧ್ಯಾತ್ಮಿಕತೆಗಾಗಿ ಎಲ್ಲವನ್ನೂ ತೊರೆದು ಈಗ ಐಐಟಿ ಬಾಬಾ ಎನಿಸಿಕೊಂಡಿದ್ದಾರೆ. ವಿವಿಧ ಶೈಕ್ಷಣಿಕ ಮಾರ್ಗಗಳನ್ನು ಅನ್ವೇಷಿಸಿದ ನಂತರ, ಸಿಂಗ್ ಆಧ್ಯಾತ್ಮಿಕತೆಯಲ್ಲಿ ತಮ್ಮ ನಿಜವಾದ ಗುರಿಯನ್ನು ಕಂಡುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ
ಅಭೇ ಸಿಂಗ್ ಐಐಟಿ ಬಾಂಬೆಯಲ್ಲಿ 4 ವರ್ಷಗಳನ್ನು ಕಳೆದಿದ್ದರು ಮತ್ತು ಅಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದರು. ಆದರೆ ಪದವಿಯ ನಂತರ ಅವರು ತಮ್ಮ ವೃತ್ತಿ ಜೀವನವನ್ನು ತ್ಯಜಿಸಿ ನಂತರ ಡಿಸೈನ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ಅವರು ಕಲೆಯ ಕಡೆಗೆ ಆಕರ್ಷಿತರಾದರು. ಈ ಸಮಯದಲ್ಲಿ ಸಿಂಗ್ ಛಾಯಾಗ್ರಹಣದ ಬಗ್ಗೆ ಆಳವಾದ ಉತ್ಸಾಹವನ್ನು ಬೆಳೆಸಿಕೊಂಡರು. ಇದು ಅವರ ವೃತ್ತಿಜೀವನದಲ್ಲಿ ಪ್ರಮುಖ ತಿರುವು ನೀಡಿತ್ತು.
ಅಭೇ ಸಿಂಗ್ ಕೆಲವು ವರ್ಷಗಳ ಕಾಲ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದರು. ಆದರೆ ಅವರ ನಿಜವಾದ ಕರೆ ಬೇರೆಡೆ ಇದೆ ಎಂದು ಕಂಡುಕೊಂಡರು. ವೃತ್ತಿ ಜೀವನದ ಮಾರ್ಗಗಳು ಅವರಿಗೆ ಬಯಸಿದ ಯಶಸ್ಸನ್ನು ತರಲಿಲ್ಲ. ನಂತರ ಅವರ ಆಸಕ್ತಿ ಆಧ್ಯಾತ್ಮಿಕತೆಯತ್ತ ತಿರುಗಿತು. ಇದೀಗ ಸನ್ಯಾಸಿಯಾಗಿ ಗುರುತಿಸಿಕೊಂಡಿದ್ದಾರೆ.