Health Tips: ತಲೆಯ ಚರ್ಮದ ಆರೈಕೆ ಹೇಗಿದ್ದರೆ ಸೂಕ್ತ?
Health Tips: ನಿಮ್ಮ ತಲೆಯ ಚರ್ಮದ ಆರೈಕೆಗಾಗಿ ಇಲ್ಲಿವೆ ಟಿಪ್ಸ್‌ಗಳು.
Deekshith Nair
January 13, 2025
ಬೆಂಗಳೂರು:ಚರ್ಮದ ಸೌಂದರ್ಯ ಕಾಪಾಡಿಕೊಳ್ಳುವಲ್ಲಿ ಕೆಲವು ನಿಯಮಿತವಾದ ಕ್ರಮಗಳು ಹೆಚ್ಚಿನ ಪ್ರಯೋಜನ ನೀಡುತ್ತವೆ. ಉದಾ, ನಿರ್ಜೀವ ಮತ್ತು ಒಣ ಚರ್ಮವನ್ನು ತೆಗೆದುಹಾಕುವುದು. ಇದನ್ನು ಎಕ್ಸ್‌ಫಾಲಿಯೇಶನ್(Exfoliation) ಎಂದೂ ಕರೆಯಲಾಗುತ್ತದೆ(Health Tips) ಮರದಲ್ಲಿರುವ ಒಣ ಎಲೆಗಳು ಖಾಲಿಯಾದರೆ ಮಾತ್ರವೇ ಹೊಸ ಚಿಗುರಿಗೆ ಅವಕಾಶ. ಹಾಗೆಯೇ ನಮ್ಮ ಚರ್ಮದಲ್ಲೂ ಮೃತ ಕೋಶಗಳು ಖಾಲಿಯಾದಾಗಲೇ ಹೊಸ ಕೋಶಗಳು ಕಾಣಿಸಿಕೊಳ್ಳಲು ಅನುಕೂಲವಾಗುತ್ತದೆ(Skin Care) ಈ ಪ್ರಕ್ರಿಯೆಯು ಮುಖದ ಚರ್ಮಕ್ಕೆ ಮಾತ್ರವಲ್ಲದೆ ತಲೆಯ ಚರ್ಮಕ್ಕೂ ಅಗತ್ಯವಿದೆಯೇ? ಇದರಿಂದ ಕೂದಲಿಗೆ ಹಾನಿಯಾಗುವುದಿಲ್ಲವೇ?
ಸೌಂದರ್ಯ ತಜ್ಞರ ಪ್ರಕಾರ, ಕೂದಲಿನ ಚರ್ಮಕ್ಕೂ ಎಕ್ಸ್‌ಫಾಲಿಯೇಶನ್ ಅಗತ್ಯವಿದೆ. ಹಿಂದಿನ ಕಾಲದಲ್ಲಿ ತಲೆಸ್ನಾನಕ್ಕೆಂದು ಉಪಯೋಗಿಸುತ್ತಿದ್ದ ತರಿಯಾದ ಅಂಟುವಾಳ ಪುಡಿ, ಸೀಗೆ ಪುಡಿಯಂಥವುಗಳನ್ನು ತಲೆಯ ಚರ್ಮಕ್ಕೆ ಉಜ್ಜಿದಾಗ ತನ್ನಷ್ಟಕ್ಕೇ ಮೃತಕೋಶಗಳು ಖಾಲಿಯಾಗಿಬಿಡುತ್ತಿದ್ದವು. ಆನಂತರ ಅವರು ಉಪಯೋಗಿಸುತ್ತಿದ್ದ ದಾಸವಾಳದ ರಸ ಅಥವಾ ಲೋಳೆಸರದಂಥವು ಚೆನ್ನಾಗಿ ಕಂಡೀಶನಿಂಗ್ ಮಾಡುತ್ತಿದ್ದವು. ಹಾಗಾಗಿ ಕೂದಲ ಆರೋಗ್ಯ ಸಹಜವಾಗಿಯೇ ಚೆನ್ನಾಗಿರುತ್ತಿತ್ತು. ಆದರೀಗ ರಾಸಾಯನಿಕ ಶಾಂಪೂಗಳನ್ನು ಬಳಸುವ ಕಾಲ. ಹಾಗಾಗಿ ಒಣ ಚರ್ಮವನ್ನು ತೆಗೆಯುವುದು ಅಗತ್ಯವಾಗಬಹುದು.
ಶಾಂಪೂಗಳು ಕೊಳೆಯನ್ನೇನೊ ತೊಳೆಯುತ್ತವೆ. ಆದರೆ ತಲೆಗೂದಲ ಅಡಿಯಲ್ಲಿ ಅಡಗಿರುವ ಅಧಿಕ ಸೇಬಂ, ಕೆರಾಟಿನ್‌ಗಳನ್ನು ತೆಗೆಯುವುದಕ್ಕೆ, ಹೊಟ್ಟಾಗದಂತೆ ತಡೆಯುವುದಕ್ಕೆ ಕೊಂಚ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ತಲೆಯ ಚರ್ಮದಲ್ಲಿ ಕೊಳೆ, ಎಣ್ಣೆ, ಸತ್ತ ಕೋಶಗಳು ಮುಂತಾದ ಬೇಡದ ಅಂಶಗಳನ್ನು ತೆಗೆದಷ್ಟೂ ಕೂದಲ ಆರೋಗ್ಯ ಚೆನ್ನಾಗಿರುತ್ತದೆ. ಇದರಿಂದ ಉದುರುವುದು, ಹೊಟ್ಟಾಗುವುದು, ತುದಿ ಸೀಳುವುದು, ಕೂದಲು ತುಂಡಾಗುವುದು ಮುಂತಾದ ಬಹಳಷ್ಟನ್ನು ತಡೆಯಬಹುದು. ತಲೆಯ ಚರ್ಮಕ್ಕೆ ಎಕ್ಸ್‌ಫಾಲಿಯೇಟರ್ ಬಳಸುವಾಗ ಗಮನಿಸಬೇಕಾದ ಅಂಶಗಳು ಯಾವುದು?
ಇವುಗಳನ್ನು ಗಮನಿಸಿ: ಇತ್ತೀಚೆಗೆ ಬಳಸಲಾಗುವ ರಾಸಾಯನಿಕ ಎಕ್ಸ್‌ಫಾಲಿಯೇಟರ್‌ಗಳಲ್ಲಿ ಸಾಧ್ಯವಾದಷ್ಟೂ ನೈಸರ್ಗಿಕ ವಸ್ತುಗಳು ಸೇರಿರುವುದಕ್ಕೆ ಆದ್ಯತೆ ನೀಡಿ. ಪೆಪ್ಪರ್‌ಮಿಂಟ್, ರೋಸ್‌ಮೆರಿ ಅಥವಾ ಹಣ್ಣುಗಳ ನೈಸರ್ಗಿಕ ಆಮ್ಲಗಳನ್ನು ಹೊಂದಿರುವ ಎಕ್ಸ್‌ಫಾಲಿಯೇಟರ್‌ಗಳು ಲಭ್ಯವಿವೆ. ಇದಲ್ಲದೆ, ನಿಮ್ಮ ಚರ್ಮದ ಗುಣವೇನು ಎನ್ನುವುದನ್ನು ಗಮನಿಸಿ. ಅದಕ್ಕೆ ಸೂಕ್ತವಾದಂಥ ಉತ್ಪನ್ನಗಳನ್ನು ಆಯ್ದುಕೊಳ್ಳಿ. ಮುಖದ ಚರ್ಮದಲ್ಲಿ ಇರುವಂಥ ವ್ಯತ್ಯಾಸಗಳೇ ತಲೆಯ ಚರ್ಮದಲೂ ಇರುತ್ತವೆ. ಏನವು ಎಂಬುದನ್ನು ತಿಳಿಯೋಣ.
ತೈಲಯುಕ್ತ ಚರ್ಮ: ತಲೆಯ ಚರ್ಮದಲ್ಲಿ ಅಧಿಕ ಎಣ್ಣೆಯಂಶ ಇರಬಹುದು. ಇದು ನೀವು ಬಳಸುವ ಎಣ್ಣೆಯಿಂದಲೇ ಬರಬೇಕೆಂದಿಲ್ಲ. ತ್ವಚೆಯು ಸ್ರವಿಸುವ ನೈಸರ್ಗಿಕ ಎಣ್ಣೆಯೂ ಕಾರಣವಾಗುತ್ತದೆ. ಇದನ್ನು ಸೇಬಂ ಎನ್ನಲಾಗುತ್ತದೆ. ತಲೆಯ ಚರ್ಮದಲ್ಲಿ ಅತಿಯಾಗಿ ಎಣ್ಣೆಯಂಶ ಇದ್ದರೆ ಹೊಟ್ಟಾಗಿ ಯೀಸ್ಟ್ ಸೋಂಕಿಗೆ ಕಾರಣವಾಗಬಹುದು. ಇಂಥವರಿಗೆ ತೈಲದಂಶ ಸಮತೋಲನದಲ್ಲಿ ಇರಿಸುವಂಥ (ಆಯಿಲ್ ಬ್ಯಾಲೆನ್ಸ್) ಶಾಂಪೂಗಳು ಅಗತ್ಯವಿದೆ. ಸ್ಯಾಲಿಸಿಲಿಕ್ ಆಮ್ಲದ ಎಕ್ಸ್‌ಫಾಲಿಯೇಟರ್ ಬಳಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ.
ಒಣ ಚರ್ಮ: ತೈಲದಂಶ ಕಡಿಮೆ ಇರುವಂಥ ಈ ರೀತಿಯ ಚರ್ಮದಿಂದ ತುರಿಕೆ, ಕಿರಿಕಿರಿ, ಹೊಟ್ಟು ಕಾಡಬಹುದು. ಚಳಿಗಾಲದಲ್ಲಿ ಈ ತೊಂದರೆ ಇನ್ನೂ ಹೆಚ್ಚು. ಸಾಕಷ್ಟು ನೀರಿನಂಶ ದೇಹಕ್ಕೆ ದೊರೆಯದಿದ್ದರೂ ಈ ಸಮಸ್ಯೆ ಬಿಗಡಾಯಿಸುತ್ತದೆ. ತಲೆಗೆ ತೈಲದ ಮಸಾಜ್ ಅಗತ್ಯವಾಗುತ್ತದೆ. ಜೊತೆಗೆ, ರೋಸ್‌ಮೆರಿ ಅಥವಾ ಅವಕಾಡೊ ತೈಲವಿರುವ ಎಕ್ಸ್‌ಫಾಲಿಯೇಟರ್‌ಗಳನ್ನು ಬಳಸಬಹುದು.
ಸೂಕ್ಷ್ಮ ಚರ್ಮ: ಯಾವುದೇ ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಮುನ್ನ, ಇವುಗಳಿಗೆ ಅಲರ್ಜಿ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಯಾವುದಾದರೂ ಉತ್ಪನ್ನದ ಬಳಕೆಯಿಂದ ಕೂದಲು ಉದುರುವುದು, ತಲೆಯ ಚರ್ಮ ಕೆಂಪಾಗುವುದು, ದದ್ದಾಗುವುದು, ಉರಿ, ತುರಿಕೆ, ಕಿರಿಕಿರಿ, ಬಿಗಿದಂತೆ ಭಾಸವಾದರೆ ಅಂಥವು ನಿಮಗಲ್ಲ ಎಂದು ತಿಳಿಯಬಹುದು. ಹೈಪೋಅಲರ್ಜೆನಿಕ್ ಅಥವಾ ಸಲ್ಫೇಟ್ ಮುಕ್ತ ಉತ್ಪನ್ನಗಳು ಮಾತ್ರವೇ ಸೂಕ್ಷ್ಮ ಚರ್ಮಗಳಿಗೆ ಹೊಂದುವಂಥದ್ದು.
ಸಾಮಾನ್ಯ ಚರ್ಮ: ಇಂಥವರಿಗೆ ತೈಲಯುಕ್ತ ಅಥವಾ ತೈಲಮುಕ್ತ ಉತ್ಪನ್ನಗಳೇ ಬೇಕೆಂದಿಲ್ಲ. ಇವರಿಗೆ ತಲೆಯ ಚರ್ಮದ ಸಮಸ್ಯೆಯೂ ಕಡಿಮೆಯೆ. ಆದರೂ ಕೂದಲಿನ ಬುಡಕ್ಕೆ ಸರಿಯಾದ ಪೋಷಣೆಯನ್ನು ಒದಗಿಸುವುದರಿಂದ, ಕೇಶ ತೊಂದರೆಗಳಿಂದ ಮುಕ್ತರಾಗಿ, ಸುಂದರ ತಲೆಗೂದಲನ್ನು ಹೊಂದಬಹುದು.
ಈ ಸುದ್ದಿಯನ್ನೂ ಓದಿ:Health Tips: ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಗ್ರೀನ್ ಟೀ ರಾಮಬಾಣ