Health Tips: ಮಕ್ಕಳ ಊಟದ ತಟ್ಟೆಯಲ್ಲಿ ಏನಿರಬೇಕು?
Health Tips: ನಿಮ್ಮ ಮನೆಯ ಮಕ್ಕಳು ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂಬುದು ನಿಮಗೆ ಗೊತ್ತಿರಬೇಕು. ನಿಮ್ಮ ಮಕ್ಕಳಿಗಾಗಿ ಹೆಲ್ತ್ ಟಿಪ್ಸ್ ಇಲ್ಲಿದೆ.
Deekshith Nair
January 12, 2025
ಬೆಂಗಳೂರು: ಮಕ್ಕಳ ಊಟದ ತಟ್ಟೆಯನ್ನು ಮತ್ತು ಹೊಟ್ಟೆಯನ್ನು ತುಂಬಿಸುವುದು ಕಷ್ಟವಲ್ಲದಿದ್ದರೂ ಸುಲಭವಲ್ಲ. ಅದರಲ್ಲೂ, ಅವರಿಷ್ಟದ ತಿನಿಸುಗಳನ್ನು ಬಿಟ್ಟು, ಆರೋಗ್ಯಕರ ಆಯ್ಕೆಗಳನ್ನು ಒಪ್ಪಿಕೊಳ್ಳುವಂತೆ ಮಾಡುವುದು ಕಷ್ಟವೇ. ಆದರೆ ಎಳೆಯ ವಯಸ್ಸಿನಲ್ಲಿ ಬೆಳೆಯುವ ಅಭ್ಯಾಸಗಳು ಅವರನ್ನು ಜೀವನದುದ್ದಕ್ಕೂ ಕಾಪಾಡಬಲ್ಲವು (Health Tips) ಹಾಗಾಗಿ ಆರೋಗ್ಯಕರ ಆಹಾರಾಭ್ಯಾಸಗಳನ್ನು ಅವರಲ್ಲಿ ಶಿಶು ದಿನಗಳಲ್ಲೇ ಬೆಳೆಸುವುದು ಅಗತ್ಯ. ಹಾಗಾದರೆ ಪುಟ್ಟ ಮಕ್ಕಳ ಆಹಾರದಲ್ಲಿ ಏನೇನಿರಬೇಕು ಮತ್ತು ಯಾಕೆ?
ಮಕ್ಕಳಲ್ಲಿ ಮಧುಮೇಹ ಈಗ ಹೊಸ ವಿಷಯವಲ್ಲ. ಅತಿಯಾದ ಜಂಕ್ ಸೇವನೆ, ಕೆಟ್ಟ ಕೊಬ್ಬುಗಳು ದೇಹ ಸೇರುತ್ತಿರುವುದು, ಸಂಸ್ಕರಿತ ಆಹಾರಗಳಿಲ್ಲದ ದಿನವಿಲ್ಲ ಎಂಬಂತೆ ಆಗಿರುವುದು ಮತ್ತು ಆಟೋಟರಹಿತವಾದ ಜನ ಜೀವನಗಳು ಬಾಲ್ಯದಲ್ಲೇ ಜೀವನಶೈಲಿಯ ಸಮಸ್ಯೆಗಳು ಕಾಡುವಂತೆ ಮಾಡಿದೆ(Healthy Food For Kids) ಸರಿಯಾದ ಊಟ, ಆಟ ಮತ್ತು ನಿದ್ದೆ ಬಾಲ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಇದರಿಂದ ಬುದ್ಧಿ ಮತ್ತು ದೇಹಗಳೆರಡೂ ಸಬಲವಾಗಿ ಬೆಳೆಯಲು ಸಾಧ್ಯವಿದೆ. ಮಕ್ಕಳ ನಿತ್ಯದ ಆಹಾರದಲ್ಲಿ ತಪ್ಪದೇ ಇರಬೇಕಾದ್ದೇನು?
ಡೇರಿ ಉತ್ಪನ್ನಗಳು: ಬೆಳೆಯುವ ಮಕ್ಕಳ ಮೂಳೆ, ಹಲ್ಲು ಮತ್ತು ಸ್ನಾಯುಗಳಿಗೆ ಡೇರಿ ಉತ್ಪನ್ನಗಳು ಮಹತ್ವದ ಪೋಷಣೆಯನ್ನು ಒದಗಿಸುತ್ತವೆ. ಹಾಲು, ಮೊಸರು, ಚೀಸ್, ಬೆಣ್ಣೆ, ತುಪ್ಪ, ಪನೀರ್ ಮುಂತಾದವೆಲ್ಲ ಮಕ್ಕಳಿಗೆ ಬೇಕಾದ ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಒಳ್ಳೆಯ ಕೊಬ್ಬನ್ನು ನೀಡುತ್ತವೆ. ಇದರಿಂದ ಮಕ್ಕಳ ದೇಹ ಮತ್ತು ಮೆದುಳಿನ ವಿಕಾಸ ಉತ್ತಮವಾಗಿರುತ್ತದೆ. ಒಳ್ಳೆಯ ಅಹಾರಗಳನ್ನು ಮುಂದಾಗಿ ಒದಗಿಸುವುದರಿಂದ ಕಳ್ಳ ಹಸಿವಿನ ಪ್ರಕೋಪ ಕಡಿಮೆಯಾಗಿ ಗುಜರಿ ಆಹಾರ ಸೇವನೆಯ ಆಸೆಯೂ ಕ್ಷೀಣಿಸುತ್ತದೆ. ಇದರಿಂದ ಮಕ್ಕಳ ತೂಕ ಅಗತ್ಯಕ್ಕಿಂತ ಹೆಚ್ಚದಂತೆ ನಿರ್ವಹಿಸಬಹುದು.
ಲೀನ್ ಪ್ರೊಟೀನ್: ದೇಹದ ಸ್ನಾಯುಗಳನ್ನು ಬೆಳೆಸಲು ಪ್ರೊಟೀನ್ ಇಲ್ಲದೆ ಸಾಧ್ಯವಿಲ್ಲ. ಸ್ನಾಯುಗಳೆಂದರೆ ರಟ್ಟೆ ಮಾತ್ರವಲ್ಲ, ಮೆದುಳೂ ಸ್ನಾಯುವೇ! ಬೆಳಗಿನ ಉಪಾಹಾರಕ್ಕೆ ಮಕ್ಕಳಿಗಂತೂ ಬೇಕೇಬೇಕಾದ ಸತ್ವವಿದು. ಮೊಟ್ಟೆ, ಹಾಲು, ಚೀಸ್, ಗ್ರೀಕ್ ಯೋಗರ್ಟ್, ಶೇಂಗಾ ಬೆಣ್ಣೆ (ಪೀನಟ್ ಬಟರ್), ಬಾದಾಮಿ ಬೆಣ್ಣೆ ಮುಂತಾದ ಬೀಜಗಳ ಸಾಂದ್ರ ಕೊಬ್ಬುಗಳು ಮಕ್ಕಳಿಗೆ ಪ್ರಿಯವಾದವು. ಸ್ಯಾಂಡ್‌ವಿಚ್ ಜೊತೆಗೆ ಇಂಥವೆಲ್ಲ ಒಳ್ಳೆಯ ಸಂಗಾತಿ. ಊಟದಲ್ಲೂ ತೋಫು, ಪನೀರ್, ಮೊಳಕೆ ಕಾಳುಗಳು, ಬೇಳೆಗಳು, ಮೀನು, ಚಿಕನ್ ಒಳಗೊಂಡ ಖಾದ್ಯಗಳು ಬೆಳೆಯುವ ಮಕ್ಕಳಿಗೆ ಬೇಕು.
ಹಣ್ಣುಗಳು: ದೇಹದ ರೋಗ ನಿರೋಧಕ ಶಕ್ತಿ ಚೆನ್ನಾಗಿರಬೇಕೆಂದರೆ ಸಾಂದ್ರವಾಗಿ ಜೀವಸತ್ವಗಳು ಮತ್ತು ಖನಿಜಗಳು ಮಕ್ಕಳಿಗೆ ದೊರೆಯಬೇಕು. ಅದಕ್ಕಾಗಿ ಹಣ್ಣುಗಳು ಉಪಯುಕ್ತ. ಕಿತ್ತಳೆ, ಸ್ಟ್ರಾಬೆರಿ, ಚೆರ್ರಿ, ಸೇಬು, ಬಾಳೆಹಣ್ಣು, ಪಪ್ಪಾಯ, ದಾಳಿಂಬೆ ಮುಂತಾದ ಬಗೆಬಗೆಯ ಹಣ್ಣುಗಳು ಹೊಟ್ಟೆ ಸೇರಿದರೆ ಮಾತ್ರವೇ ತರಹೇವಾರಿ ಉತ್ಕರ್ಷಣ ನಿರೋಧಕಗಳು ದೇಹಕ್ಕೆ ದೊರೆಯಲು ಸಾಧ್ಯ. ಇದರಿಂದ ಮಕ್ಕಳಿಗೆ ಪದೇಪದೆ ಕಾಡುವ ಶೀತ, ಕೆಮ್ಮು, ಜ್ವರ, ಗಂಟಲುನೋವು ಮುಂತಾದ ಸೋಂಕು ರೋಗಗಳನ್ನು ಹತೋಟಿಗೆ ತರುವುದಕ್ಕೆ ಸಾಧ್ಯ.
ತರಕಾರಿಗಳು: ಇದಂತೂ ಮಕ್ಕಳ ಶತ್ರು! ಹಣ್ಣುಗಳನ್ನಾದರೂ ತಿನ್ನಿಸಬಹುದು, ತರಕಾರಿಗಳನ್ನು ಮಾತ್ರ ಕಷ್ಟ. ಆದರೆ ನಾರು, ವಿಟಮಿನ್‌ಗಳು, ಖನಿಜಗಳು, ಫೈಟೊಕೆಮಿಕಲ್‌ಗಳು ದೇಹಕ್ಕೆ ದೊರೆಯುವುದಕ್ಕೆ ಇವೂ ಅಗತ್ಯ. ವಿಟಮಿನ್ ಎ ಹೆಚ್ಚಿರುವ ಟೊಮೆಟೊ, ಗೆಣಸು, ಕ್ಯಾರೆಟ್, ಕುಂಬಳಕಾಯಿಗಳು ಮಕ್ಕಳ ದೃಷ್ಟಿಯನ್ನು ಕಾಪಾಡುವುದಕ್ಕೆ ಬೇಕು. ವಿಟಮಿನ್ ಸಿ ಇಲ್ಲದಿದ್ದರೆ ಸೋಂಕುಗಳನ್ನು ತಡೆಯಲೇ ಆಗದು. ಹಾಗಾಗಿ ಮಕ್ಕಳಿಗೆ ತರಕಾರಿ ತಿನ್ನಿಸುವುದಕ್ಕೆ ಕಲಿತ ಬುದ್ಧಿಯನ್ನೆಲ್ಲ ಹೆತ್ತವರು ಖರ್ಚು ಮಾಡಬೇಕಾಗುತ್ತದೆ. ತರಕಾರಿಗಳನ್ನು ಬಿಲ್ಲೆಗಳಂತೆ ಅಥವಾ ಕಡ್ಡಿಗಳಂತೆ ಕತ್ತರಿಸಿ ಹಬೆಯಲ್ಲಿ ಕೊಂಚವೇ ಬೇಯಿಸಿ, ಅದಕ್ಕಾಗಿ ಪೌಷ್ಟಿಕವಾದ ಡಿಪ್‌ಗಳನ್ನೋ, ರುಚಿಕರವಾದ ಚಟ್ಣಿಗಳನ್ನೋ ಜೊತೆಗಿರಿಸಬಹುದು. ಮಾತ್ರವಲ್ಲ, ಅವುಗಳನ್ನು ತಿನ್ನುವುದು ಎಷ್ಟು ಅಗತ್ಯ ಎಂಬುದನ್ನು ಮಕ್ಕಳಿಗೆ ತಿಳಿಸಿ ಹೇಳಬೇಕಾದ್ದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ.
ಧಾನ್ಯಗಳು: ಮಕ್ಕಳು ವ್ಯಯ ಮಾಡುವ ಶಕ್ತಿಯೆಲ್ಲ ಬರುವುದು ಇದರಿಂದಲೇ. ಹಾಗಾಗಿ ಸಂಸ್ಕರಿತವಾದ ಸರಳ ಪಿಷ್ಟಗಳ ಬದಲಿಗೆ, ಇಡಿಯಾಗಿರುವ ಸಂಕೀರ್ಣ ಪಿಷ್ಟಗಳನ್ನು ಮಕ್ಕಳಿಗೆ ನೀಡಿ. ಕೆಂಪು ಅಕ್ಕಿ, ಗೋದಿ, ರಾಗಿ, ಜೋಳ, ಓಟ್, ಕಿನೊವಾ, ಯಾವುದೇ ಸಿರಿಧಾನ್ಯಗಳು ಮಕ್ಕಳಿಗೆ ಬೇಕು. ಈ ವಸ್ತುಗಳನ್ನೇ ಬಳಸಿ ಮಾಡಿದ ಬ್ರೆಡ್, ಪಾಸ್ತ, ಟಾರ್ಟಿಲ್ಲ, ಚಪಾತಿ, ದೋಸೆ, ಇಡ್ಲಿಗಳಿಗೆ ಆದ್ಯತೆ ನೀಡಿ. ಇದರಿಂದ ದೀರ್ಘಕಾಲದವರೆಗೆ ಮಕ್ಕಳ ಶಕ್ತಿ ಕುಂದುವುದಿಲ್ಲ.
ಕಡಿಮೆ ಮಾಡಿ: ಕೇಕ್, ಪೇಸ್ಟ್ರಿ, ಕುಕಿ, ಪಿಜ್ಜಾ, ಚಿಪ್ಸ್, ಐಸ್ಕ್ರೀಮ್, ಸೋಡಾದಂಥ ಪಾನೀಯಗಳು, ಫ್ರೂಟ್ ಜ್ಯೂಸ್‌ಗಳು, ಅತಿಯಾಗಿ ಕ್ಯಾಂಡಿ ಮತ್ತು ಚಾಕಲೇಟ್‌ಗಳು, ಯಾವುದೇ ಉಪ್ಪೂರಿದ ಮತ್ತು ಸಂಸ್ಕರಿತ ಆಹಾರಗಳು ಮಕ್ಕಳಿಗೆ ಬೇಡ. ಇವು ಬಾಯಿಗೆ ರುಚಿ ಎಂಬುದು ನಿಜವಾದರೂ, ದೇಹಕ್ಕೆ ಶತ್ರು. ಇಂಥವೆಲ್ಲ ದೀರ್ಘಕಾಲೀನ ಆರೋಗ್ಯ ಸಮಸ್ಯೆಗೆ ನಾಂದಿ ಹಾಡುತ್ತವೆ.
ಈ ಸುದ್ದಿಯನ್ನೂ ಓದಿ:Women Health: ಮಹಿಳೆ ಆರೋಗ್ಯದಲ್ಲಿದೆ ಸಮಾಜದ ಆರೋಗ್ಯ -ಡಾ.ಎಸ್.ಪರಮೇಶ್