ತುಮಕೂರು : ನೂರು ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿರುವ ತುಮಕೂರು ವಿವಿ ಬಿದರಕಟ್ಟೆ ನೂತನ ಕ್ಯಾಂಪಸ್ ಗೆ ಮುಂದಿನ ವಾರದಿಂದ ವಿಜ್ಞಾನ ವಿಭಾಗದ ತರಗತಿಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಕುಲಪತಿ ಪ್ರೊ ವೆಂಕಟೇಶ್ವರಲು ತಿಳಿಸಿದರು.
ನೂತನ ಕ್ಯಾಂಪಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಕ್ಯಾಂಪಸ್ 240 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, 99 ವರ್ಷಗಳ ಲೀಸ್ ಗೆ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ರೂಸಾದಿಂದ ಅನುದಾನಕ್ಕೆ ಕೋರಿದ್ದೇವೆ. ಯುಜಿಸಿಯಿಂದ ಸದ್ಯಕ್ಕೆ ಯಾವುದೆ ಅನುದಾನ ಬಂದಿಲ್ಲ. ತುಮಕೂರು ವಿಶ್ವವಿದ್ಯಾಲಯದಲ್ಲಿ ಈಗ ಮೂವತ್ತು ಕೋರ್ಸ್‌ಗಳು ನಡೆಯುತ್ತಿವೆ ಎಂದರು.
ಸಿಬ್ಬಂದಿ ನೇಮಕ ಅಗತ್ಯವಿದೆ
ಸ್ನಾತಕ ಮತ್ತು ಸ್ನಾತಕೋತ್ತರ ಸೇರಿ 175 ಮಂದಿ ಪ್ರಾಧ್ಯಾಪಕರಿದ್ದಾರೆ. 150 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಕಾಯಂ ಭೋದಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕದ ಅಗತ್ಯವಿದೆ ಎಂದು ಸ್ಪಷ್ಟ ಪಡಿಸಿದರು.
ಅನುದಾನಕ್ಕೆ ಮನವಿ
ಅನುದಾನ ಪಡೆಯುವ ಸಂಬಂಧ ಕೇಂದ್ರ ಸಚಿವ ವಿ ಸೋಮಣ್ಣ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರದಿಂದಲೂ ಅನುದಾನ ನಿರೀಕ್ಷೆ ಮಾಡಲಾಗಿದೆ, ಐವತ್ತು ಕೋಟಿ ವೆಚ್ಚದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಪಿಜಿ ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದಲೂ ವಿವಿಗೆ ಅನುಕೂಲವಾಗಲಿದೆ ಎಂದರು.
ನೂತನ ಫಿಲಂ ಇನ್ಸ್ಟಿಟ್ಯೂಟ್ ಆರಂಭ
ಪುಣೆ ಹೊರತುಪಡಿಸಿ ಉಳಿದ ಕಡೆ ಫಿಲಂ ಇನ್ಸ್ಟಿಟ್ಯೂಟ್ ಇಲ್ಲ, ಈ ಹಿನ್ನೆಲೆಯಲ್ಲಿ ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ನೂತನವಾಗಿ ಫಿಲಂ ಇನ್ಸ್ಟಿಟ್ಯೂಟ್ ಪ್ರಾರಂಭ ಮಾಡಲು ರಾಜೇಂದ್ರ ಸಿಂಗ್ ಬಾಬು ಜೊತೆ ಮಾತುಕತೆ ನಡೆಸಲಾಗಿದೆ ಎಂದು ಕುಲಪತಿ ವೆಂಕಟೇಶ್ವರಲು ತಿಳಿಸಿದರು.
ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ 30 ಎಕರೆ ಭೂಮಿಯನ್ನು ಫಿಲಂ ಇನ್ಸ್ಟಿಟ್ಯೂಟ್ ನಿರ್ಮಾಣ ಮಾಡಲು ನೀಡಲಾಗುವುದು. ಮುಂದಿನ ದಿನಗಳಲ್ಲಿ ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: Tumkur Crime: ಕೆರೆಯಲ್ಲಿ ಮುಳುಗಿದ ಯುವಕ: ಮಳೆಯಲ್ಲಿಯೇ ತೀವ್ರ ಶೋಧ ಬಳಿಕ ಮೃತದೇಹ ಪತ್ತೆ