ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

G Prathap Kodancha Column: ಜಾಗತೀಕರಣದ ಸಂಕವನ್ನು ಮುರಿಯಿತೇ ಸುಂಕದ ಸಮರ ?

ಆರಂಭದಲ್ಲಿ ಐರೋಪ್ಯ ದೇಶಗಳ ಜತೆಗೆ, ಅಮೆರಿಕವು ಮುಕ್ತ ಮಾರುಕಟ್ಟೆಯ ನೇತೃತ್ವ ವಹಿಸಿ ಕೊಂಡು ವ್ಯಾಪಾರಿ ಶಕ್ತಿಯಾಗಿ ಹೊರಹೊಮ್ಮಿತ್ತು. ಆದರೇಕೋ ತಾನೇ ಜಗತ್ತಿಗೆ ಹೇಳಿಕೊಟ್ಟ ಜಾಗತೀಕರಣ, ವ್ಯಾಪಾರಿ ಶಕ್ತಿಯ ಹೊರನಿಂತು, ಸ್ವಸಾಮರ್ಥ್ಯದ ಮೇಲೆ ನೆಲೆ ಕಂಡುಕೊಳ್ಳುವ ಹಳೆ ಸತ್ಯದ ಹೊಸ ಅನ್ವೇಷಣೆಗೆ ಅದು ಹೊರಟಿದ್ದು ಸದ್ಯದ ಕ್ಷಿಪ್ರ ಬೆಳವಣಿಗೆ!

ಜಾಗತೀಕರಣದ ಸಂಕವನ್ನು ಮುರಿಯಿತೇ ಸುಂಕದ ಸಮರ ?

Profile Ashok Nayak Apr 9, 2025 7:38 AM

ಟ್ರಂಪಾಯಣ

ಜಿ.ಪ್ರತಾಪ್‌ ಕೊಡಂಚ

ಅವರವರ ಕ್ಷೇತ್ರದಲ್ಲಿನ ಪರಿಣತಿ, ಸಾಮರ್ಥ್ಯ ಮತ್ತು ಆಯಾ ಪ್ರದೇಶಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳ ಸಮರ್ಪಕ ಬಳಕೆಯ ಮೂಲಕ ಸಮಷ್ಟಿಯ ಉನ್ನತಿಯ ಧ್ಯೇಯ ಹೊತ್ತು 80ರ ದಶಕದಲ್ಲಿ ಹರಡಲಾರಂಭಿಸಿದ್ದು ಜಾಗತೀಕರಣದ ಅಲೆ. ಜಾಗತೀಕರಣದ ಬಲದಿಂದ ಇಂದು ವಿಶ್ವಗ್ರಾಮದ ಕಲ್ಪನೆ ಸಾಕಾರಗೊಂಡಿದ್ದಲ್ಲದೇ ಜಗತ್ತಿನ ಕೆಲವೇ ಭಾಗಗಳಿಗೆ ಸೀಮಿತವಾಗಿದ್ದ ವಸ್ತುಗಳು, ಸೌಲಭ್ಯಗಳು ಜಗದೆಡೆಯೂ ದೊರೆಯುವಂತಾಗಿದೆ. ಇದರಿಂದ ಹಲವು ಅನುಕೂಲಗಳು, ಹಾಗೆಯೇ ಅನಾನುಕೂಲಗಳೂ ಆಗಿವೆ. ಎಲ್ಲಿ ಸಂಪನ್ಮೂಲಗಳು ಅಗ್ಗದಲ್ಲಿ ದೊರೆಯುತ್ತಿವೆಯೋ ಅಲ್ಲಿ ಉತ್ಪಾದಿಸಿದರೆ ಅಗ್ಗದ ಬೆಲೆಯ ಜತೆಗೆ ಗುಣಮಟ್ಟದ ಉತ್ಪನ್ನಗಳನ್ನು ಜಗದಗಲ ಲಭ್ಯ ವಾಗಿಸಬಲ್ಲವು ಎಂಬ ಸೂತ್ರ ಜಾಗತೀಕರಣದ ಮೂಲ ಆಶಯಗಳಂದಾಗಿತ್ತು. ಸಾಮರ್ಥ್ಯಕ್ಕೆ ತಕ್ಕ ಮುಕ್ತ ಅವಕಾಶ, ಸಮಾಜದ ಉನ್ನತಿಯ ಉದ್ದೇಶ ಇದರಲ್ಲಿತ್ತು. ಜಾಗತೀಕರಣ ಇವೆಲ್ಲವನ್ನೂ ಸಾಧ್ಯವಾಗಿಸಿದೆಯೇ? ಸಮರ್ಪಕವಾಗಿ ವಿಮರ್ಶಿಸಿದರೆ, ಉತ್ತರ ಆಶಾದಾಯಕವೇನಲ್ಲ ಎಂಬುದು ಒಪ್ಪಲೇಬೇಕಾದ ಸತ್ಯ!

ಆರಂಭದಲ್ಲಿ ಐರೋಪ್ಯ ದೇಶಗಳ ಜತೆಗೆ, ಅಮೆರಿಕವು ಮುಕ್ತ ಮಾರುಕಟ್ಟೆಯ ನೇತೃತ್ವ ವಹಿಸಿ ಕೊಂಡು ವ್ಯಾಪಾರಿ ಶಕ್ತಿಯಾಗಿ ಹೊರಹೊಮ್ಮಿತ್ತು. ಆದರೇಕೋ ತಾನೇ ಜಗತ್ತಿಗೆ ಹೇಳಿಕೊಟ್ಟ ಜಾಗತೀಕರಣ, ವ್ಯಾಪಾರಿ ಶಕ್ತಿಯ ಹೊರನಿಂತು, ಸ್ವಸಾಮರ್ಥ್ಯದ ಮೇಲೆ ನೆಲೆ ಕಂಡುಕೊಳ್ಳುವ ಹಳೆ ಸತ್ಯದ ಹೊಸ ಅನ್ವೇಷಣೆಗೆ ಅದು ಹೊರಟಿದ್ದು ಸದ್ಯದ ಕ್ಷಿಪ್ರ ಬೆಳವಣಿಗೆ!

ಇದನ್ನೂ ಓದಿ: G Prathap Kodancha Column: ರಾಷ್ಟ್ರಗಳ ಜಗಳದ ಸುತ್ತ ಎದ್ದಿದೆ ಅನುಮಾನದ ಹುತ್ತ !

ಏಪ್ರಿಲ್ 2 ಅಮೆರಿಕದ ಪಾಲಿಗೆ ವಿಮೋಚನಾ ದಿನ ಅಂದರೆ ‘ಲಿಬರೇಷನ್ ಡೇ’! ಅಂದು, ಯಾವ್ಯಾವ ದೇಶಗಳು ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿ ಲಾಭ ಮಾಡಿಕೊಳ್ಳುತ್ತಿವೆಯೋ ಅದಕ್ಕೆ ತಕ್ಕಂತೆ ಪ್ರತಿರೂಪದ ಸುಂಕ ವಿಧಿಸಿ, ಸೇರಿಗೆ ಸವ್ವಾಸೇರು ಮಾಡುತ್ತೇವೆ ಎಂದು ಬೆದರಿಸು ತ್ತಿದ್ದ, ಅಮೆರಿಕದ ಅಧ್ಯಕ್ಷ ಟ್ರಂಪ್ ಸಾಹೇಬರು ನುಡಿದಂತೆ ನಡೆದಿದ್ದಾರೆ!

ಜಗತ್ತಿನ 180ಕ್ಕೂ ಹೆಚ್ಚು ದೇಶಗಳಿಂದ ಆಮದಾಗಲಿರುವ ಉತ್ಪನ್ನಗಳ ಮೇಲೆ ಪ್ರತಿಶತ 73ರಿಂದ 10ರ ತನಕದ ಸುಂಕ ವಿಧಿಸುವ ನಿರ್ಧಾರವನ್ನು ಪ್ರಕಟಿಸಿ ವಿಮುಕ್ತರಾಗಿದ್ದಾರೆ. ಈ ದೇಶಗಳ ಪಟ್ಟಿ ಯಲ್ಲಿ ಜನವಸತಿಯಿಲ್ಲದ, ಅಮೆರಿಕದೊಂದಿಗೆ ವ್ಯಾಪಾರ ವಹಿವಾಟು ಒಪ್ಪಂದಗಳನ್ನು ಹೊಂದಿರದ ಸ್ವೆಲ್ಬಾರ್ಡ್, ಜಾನ್ ಮೇಯೆನ್ ನಂಥ ನಾರ್ವೆ ಒಡೆತನದ ದ್ವೀಪಗಳು, ಆಸ್ಟ್ರೇಲಿಯಾ ಆಡಳಿತದ ಹೆರ್ಡ್ ಮತ್ತು ಮ್ಯಾಕ್ ಡೊನಾಲ್ಡ್ ಐಲೆಂಡ್‌ನಂಥ ದ್ವೀಪ ರಾಷ್ಟ್ರಗಳೂ ಸೇರಿಕೊಂಡಿವೆ. ‌ಶತ್ರು-ಮಿತ್ರರ ಪರಿವೆಯೇ ಇಲ್ಲದೆ ಸುಂಕ ವಿಧಿಸಿ, ಸರ್ವರಿಗೂ ಸಮಪಾಲು-ಸಮಬಾಳು ಎಂಬು ದನ್ನು ಟ್ರಂಪ್ ಸಾಕಾರಗೊಳಿಸಿದ್ದಾರೆ. ಅಲ್ಲಿರುವ ಪೆಂಗ್ವಿನ್ ಸಹಿತದ ಪ್ರಾಣಿ ಪಕ್ಷಿಗಳೇ ಅಮೆರಿಕ ಸರಕಾರದ ಜತೆ ಚರ್ಚೆಗಿಳಿದು ದ್ವೀಪ ಪಕ್ಷಿಗಳ ’ದ್ವೀಪಕ್ಷಿಯ’ ಮಾತುಕತೆಗೆ ಹೊಸ ಅನ್ವರ್ಥಕತೆ ದೊರಕಿಸಬೇಕಾಗಿದೆ!

ಜಾಗತೀಕರಣದಿಂದಾಗಿ ಅಗ್ಗದ ಬೆಲೆಯಲ್ಲಿ ಉತ್ಪನ್ನಗಳು ಗ್ರಾಹಕನನ್ನು ತಲುಪುತ್ತಿವೆ. ಗುಣಮಟ್ಟ ಮುಂಚಿನಷ್ಟಿದೆಯೇ? ವಿಮರ್ಶಿಸಿದರೆ, ಅದು ಹೋಲಿಸಲಾಗದ ಹಂತ ತಲುಪಿದೆ. ದರ ಸಮರದ ಧಾವಂತದಲ್ಲಿ ಅಪರಿಮಿತ ಪ್ರಮಾಣದಲ್ಲಿ ಉತ್ಪಾದಿಸಬಲ್ಲ ತಂತ್ರಜ್ಞಾನ, ಕೈಗಾರಿಕಾ ನೀತಿಗಳು ರೂಪುಗೊಂಡು ‘ಗುಣಮಟ್ಟ’ದ ಪ್ರಶ್ನೆಯನ್ನೇ ಗೌಣವಾಗಿಸಿವೆ!

ಚೀನಾದಂಥ ಕೆಲ ದೇಶಗಳು ತಮ್ಮದಲ್ಲದ, ತಮ್ಮರಿವಿಗೇ ಇರದಿದ್ದ ಕ್ಷೇತ್ರಗಳಲ್ಲೂ ಕ್ಷಿಪ್ರ ಪರಿಣತಿ ಸಾಧಿಸಿಕೊಂಡು, ದರವೆಂಬ ಪಾಶುಪತಾಸ್ತ್ರದ ಮೂಲಕ ಮೂಲ ಉತ್ಪಾದಕ ಶಕ್ತಿಗಳಿಗೆ ತಲೆಯೆತ್ತ ದಂತೆ ಮಾಡಿವೆ. ಬಹುತೇಕ ಎಲ್ಲ ರೀತಿಯ ಉತ್ಪಾದಕ ವಲಯದ ಮೇಲೆ ಇಂದು ಚೀನಾ ಒಂದು ಹಂತದ ಏಕಸ್ವಾಮ್ಯ ಸ್ಥಾಪಿಸಿಕೊಂಡಿದೆ.

ಜಾಗತೀಕರಣದ ಅಲೆಯ ಮೊದಲ ಫಲಾನುಭವಿಗಳು ಗ್ರಾಹಕರಾದರೂ, ಜಗತ್ತೇ ತನ್ನ ಮೇಲೆ ಅವಲಂಬಿತವಾಗಬೇಕಾದಂಥ ಸಾಮರ್ಥ್ಯ ಕಟ್ಟಿಕೊಂಡು ದೈತ್ಯ ಶಕ್ತಿಯಾಗಿ ಬೆಳೆದ ಬಹುದೊಡ್ಡ ಫಲಾನುಭವಿ ಚೀನಾ. ವಿಶ್ವದೆಡೆಯ ಬೇಕು-ಬೇಡಗಳ ಸೂಕ್ಷ್ಮತೆ ಅರಿತು, ತಕ್ಕ ಕೈಗಾರಿಕಾ ನೀತಿ ಜಾರಿಗೊಳಿಸಿ ಉತ್ಪಾದಕ ವಲಯದಲ್ಲಿ ದೈತ್ಯಶಕ್ತಿಯಾಗಿ ಚೀನಾ ಬೆಳೆದು ನಿಂತಿದ್ದೇ ಒಂದು ಸೋಜಿಗ!

ಈ ದೈತ್ಯಶಕ್ತಿ ಅಗ್ಗದ ವಸ್ತುಗಳು ಜಗದೆಡೆ ಸಿಗುವಂತೆ ಮಾಡುವುದರ ಮೂಲಕ ಗ್ರಾಹಕರಿಗೆ ಆಯ್ಕೆ ಗಳ ಜತೆಗೆ ಉಳಿತಾಯವನ್ನು ಮಾಡಿಕೊಟ್ಟಿದ್ದು ಹೌದಾದರೂ, ಹಲವು ದೇಶಗಳ ಉತ್ಪಾದಕತೆಯ ಅಂತಃಸತ್ವವನ್ನು ಒಣಗಿಸಿದ್ದು ಕೂಡಾ ಒಪ್ಪಲೇಬೇಕಾದ ಕಹಿಸತ್ಯ.

ತಮ್ಮಲ್ಲಿನ ಉತ್ಪಾದಕ ಶಕ್ತಿಯನ್ನು ಕಳೆದುಕೊಂಡು, ದಿನನಿತ್ಯದ ಬದುಕಿಗೆ ‘ತಾವೆಷ್ಟು ಪರಾವಲಂಬಿ ಗಳಾಗಿದ್ದೇವೆ?’ ಎಂಬ ಕರಾಳತೆಯ ಕಿರುಪರಿಚಯವನ್ನು ಅಮೆರಿಕ ಸಹಿತ ಹಲವು ರಾಷ್ಟ್ರಗಳಿಗೆ ಮಾಡಿಸಿದ್ದು ಕೆಲ ವರ್ಷಗಳ ಹಿಂದೆ ಅಪ್ಪಳಿಸಿದ ಕೋವಿಡ್ ಮಹಾಮಾರಿ. ಆದರೆ, ತಾನೇ ಹೊಸೆದ ದಾರ ತೊರೆದು, ತನ್ನ ಸೂತ್ರವೇ ತಪ್ಪೆಂದು ಒಪ್ಪಿಕೊಳ್ಳುವುದು ಹೇಗೆ? ತಮ್ಮ ಸ್ವತಂತ್ರ ಇರುವಿಗೆ ಅಪಾಯದ ವಾಸನೆ ಸಿಕ್ಕಿದರೂ, ಅದನೊಪ್ಪಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂಬ ತವಕ ಕೋವಿಡ್ ನಂತರ ಹಲವೆಡೆ ಕಾಣಿಸಿತ್ತು.

ಇವೆಲ್ಲದರ ಹಿಂದೆ ಸರಕಾರ, ದೇಶ, ಭೌಗೋಳಿಕ ಸೀಮೆಗೂ ಮೀರಿದ ವ್ಯಾಪಾರಿ ಹಿತಾಸಕ್ತಿಯ ಪ್ರಭಾವವಿರುವುದು ಸತ್ಯ. ಆದರದು ಕಣ್ಣಿಗೆ ಕಾಣಿಸದ ಮಾಯಾಶಕ್ತಿ! ಹಾಗಾಗಿ ತಪ್ಪು-ಒಪ್ಪುಗಳು ಸರ್ವಸಮ್ಮತವಾಗಿ ಹೊರಬರಲು ಲಾಭ-ಲುಕ್ಸಾನು, ಹಿಡಿತ-ಹೊಡೆತಗಳ ಕಬಂಧ ಬಾಹುಗಳು ಸುಲಭದಲ್ಲಿ ಬಿಡುವುದಿಲ್ಲ.

18ನೇ ಶತಮಾನದ ಬ್ರಿಟನ್‌ನ ಕೈಗಾರಿಕಾ ಕ್ರಾಂತಿಯ ಕಿಚ್ಚಿನಲ್ಲಿ ಭಾರತವೂ ಸೇರಿದಂತೆ, ಹಲವು ರಾಷ್ಟ್ರಗಳಲ್ಲಿ ಆಹುತಿಯಾದ ಬಹುತೇಕ ಕೈಗಾರಿಕೆಗಳು ಇಂದಿಗೂ ತಲೆ ಎತ್ತಿ ನಿಲ್ಲಲಾಗುತ್ತಿಲ್ಲ. ಅಂಥದೇ ಪರಿಣಾಮ, ಜಾಗತೀಕರಣದಿಂದ ಅಮೆರಿಕವೂ ಸೇರಿದಂತೆ ಹಲವು ದೇಶಗಳಲ್ಲಿನ ಕೈಗಾರಿಕೆಗಳು, ಉತ್ಪಾದಕ ವಲಯದ ಮೇಲಾಗಿದೆ. ಅಟೋಮೊಬೈಲ್ ವಲಯದ ದೈತ್ಯಶಕ್ತಿ ಯಾಗಿದ್ದ ಅಮೆರಿಕದ ಡೆಟ್ರಾಯಿಟ್‌ನಂಥ ನಗರಗಳು, ಉತ್ಪಾದಕ ವಲಯದಲ್ಲಿ ಮನೆಮಾತಾಗಿದ್ದ ಒಹಾಯೊ ರಾಜ್ಯದ ಹಲವು ಪ್ರದೇಶಗಳು, ಒಂದು ಕಾಲದಲ್ಲಿ ಉಕ್ಕು ಮತ್ತು ಕಬ್ಬಿಣದ ಉದ್ಯಮದ ರಾಜಧಾನಿಗಳೆನಿಸಿಕೊಂಡಿದ್ದ ಪೆನ್ಸಿಲ್ವೇನಿಯಾ ರಾಜ್ಯದ ಪಿಟ್ಸ್‌ಬರ್ಗ್, ಬೆತ್ಲೆಹ್ಯಾಮ್‌ನಂಥ ನಗರ ಗಳು ಅಕ್ಷರಶಃ ನಲುಗಿಹೋಗಿವೆ.

ಅಲ್ಲಿನ ಹಲವು ಪ್ರದೇಶಗಳಲ್ಲಿ ಪಾಳು ಬಿದ್ದ ಕಾರ್ಖಾನೆಗಳು, ಬಳಸದೇ ಬಿಟ್ಟು ಹೋದ ಮನೆಗಳ ಸಹಿತ ಸಾವರಿಸಿಕೊಂಡು ನಿಲ್ಲಲಾಗದ ತಲೆಮಾರು, ಸಮುದಾಯಗಳನ್ನೇ ಸೃಷ್ಟಿಸಿವೆ. ಸುಮಾರು ಮೂರ್ನಾಲ್ಕು ದಶಕಗಳ ನಂತರವೂ ಮುಂದುವರಿದ ರಾಷ್ಟಗಳೇ ಈ ಹೊಡೆತದಿಂದ ಸುಧಾರಿಸಿ ಕೊಂಡಿಲ್ಲ ಎಂಬುದನ್ನು ಗಮನಿಸಿದರೆ ಕರಾಳತೆ, ತದನಂತರದ ಸರಕಾರಗಳ ವಿಫಲತೆಯ ಪರಿಚಯವೂ ಆಗುತ್ತದೆ.

ಇಂಥದೇ ಪರಿಣಾಮ ಜರ್ಮನಿಯ ವಾಹನ ಉತ್ಪಾದಕ ವಲಯದಲ್ಲೂ ಕಾಣಿಸುತ್ತಿದೆ. ಜರ್ಮನಿಯ ಬಹುದೊಡ್ಡ ವಾಹನ ಉತ್ಪಾದಕ ಸಂಸ್ಥೆಯಾದ ವೋಕ್ಸ್ ವ್ಯಾಗನ್ ತನ್ನೊಂದು ಬಹುದೊಡ್ಡ ಕಾರ್ಖಾನೆಯನ್ನು ಮುಚ್ಚುತ್ತಿದೆ. ಜರ್ಮನಿಯ ವಾಹನ ಉತ್ಪಾದಕ ವಲಯವು ಚೀನಾದ ದರ ಸಮರದ ಹೊಡೆತಕ್ಕೆ ಸಿಲುಕಿ ತತ್ತರಿಸಿದೆ. ಉಕ್ರೇನ್-ರಷ್ಯಾ ಯುದ್ಧವು ಯೂರೋ ವಲಯದಲ್ಲಿ ಈ ಹೊಡೆತಗಳ ಪರಿಣಾಮ ತೀವ್ರತೆಯನ್ನು ಹೆಚ್ಚಿಸಿದೆಯಾದರೂ, ಇವೆಲ್ಲದರ ಮೂಲವು ಜಾಗತೀ‌ ಕರಣದ ಸುನಾಮಿ ಎಂಬುದು ಗಮನಿಸಲೇಬೇಕಾದ ಸತ್ಯ.

ಬಹುತೇಕ ದ್ವಿಪಕ್ಷೀಯ ತಳಹದಿಯ ಮೇಲೆ ನಿಂತಿರುವುದು ಅಮೆರಿಕದ ರಾಜಕೀಯ ವ್ಯವಸ್ಥೆ. ಇಲ್ಲಿ ಡೆಮಾಕ್ರಟಿಗರು ಮತ್ತು ರಿಪಬ್ಲಿಕನ್ ಎಂಬೆರಡು ಪ್ರಮುಖ ಪಕ್ಷಗಳದ್ದೇ ಪಾರುಪತ್ಯ. ಡೆಮಾಕ್ರಟಿಗರು ಶ್ರೀಮಂತರ ಪರ, ಜಾಗತೀಕರಣದ ಸಹಿತ ಎಡಪಂಥೀಯ ನಿಲುವುಗಳ ಸಮರ್ಥಕರೆಂಬ ಅಭಿಪ್ರಾಯ ಹೊಂದಿದ್ದರೆ, ರಿಪಬ್ಲಿಕನ್ನರು ಶ್ರಮಿಕ ವರ್ಗದ ಪರ, ವಲಸೆ ವಿರೋಧಿಗಳು ಮತ್ತು ಬಲಪಂಥೀಯ ನಿಲುವುಗಳ ಸಮರ್ಥಕರೆಂಬ ಚಿತ್ರಣ ಹೊಂದಿದ್ದಾರೆ. ಈ ಬಾರಿ ಇಲ್ಲಿನದು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನೇತೃತ್ವದ ಸರಕಾರ.

ಟ್ರಂಪ್‌ರೇನೂ ಮೂಲತಃ ರಿಪಬ್ಲಿಕನ್ನರೇನಲ್ಲ, ಅವರೊಬ್ಬ ಉದ್ಯಮಿ! ಡೆಮಾಕ್ರಟಿಕ್ ಪಕ್ಷದ ಸಮರ್ಥಕರಾಗಿದ್ದ ಟ್ರಂಪ್ ಕಾಲಾಂತರದಲ್ಲಿ ರಿಪಬ್ಲಿಕನ್ ಆಗಿ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ್ದೇ ಅಚ್ಚರಿಯ ಬೆಳವಣಿಗೆ. ಮೂಲತಃ ರಿಪಬ್ಲಿಕನ್ ಪಕ್ಷದ ಕೆಲ ಗುಂಪುಗಳು ಟ್ರಂಪ್ ಮತ್ತವರ ಪಡೆಯನ್ನು ವಲಸಿಗರಂತೆ ಕಾಣುವ ಬೆಳವಣಿಗೆಗಳೂ ನಡೆದಿವೆ ಮತ್ತು ನಡೆಯುತ್ತಲಿವೆ.

‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಎಂಬ ಘೋಷವಾಕ್ಯದೊಡನೆ ಅಧ್ಯಕ್ಷೀಯ ಚುನಾವಣೆ ಸೆಣಸಿ ಅಧಿಕಾರ ಹಿಡಿದ ಟ್ರಂಪ್, ತಮ್ಮ ಹಿಂದಿನ ಅವಧಿಯಲ್ಲೂ ತೆರಿಗೆ ಸಮರದ ಛಾಪು ತೋರಿಸಿದ್ದರು. ಯಶಸ್ವಿ ಉದ್ಯಮಿ, ಸಂಧಾನ ಚತುರ ಎಂದು ಕರೆಸಿಕೊಳ್ಳುವ ಟ್ರಂಪ್ ಸಾಹೇಬರ ಯಶಸ್ಸು, ಸಂಧಾನ ಪರಿಣತಿ ಅವರ ಬೆಂಬಲಿಗರಿಗೆ ಒಂದು ರೀತಿ ಕಂಡರೆ, ವಿರೋಧಿ ಪಾಳಯಕ್ಕೆ ಇನ್ನೊಂದೇ ರೀತಿಯಲ್ಲಿ ಕಾಣಿಸುತ್ತದೆ!

ಸತ್ಯ ಇವೆರಡೂ ಪಾಳಯಗಳ ವಾದಗಳ ನಡುವಿನಲ್ಲಿದೆಯಾದರೂ, ಟ್ರಂಪ್ ಯಾರ ನಿರೀಕ್ಷೆಗೂ ಸಿಗದ, ಅಂದುಕೊಂಡದ್ದನ್ನು ಸಾಧಿಸಿಯೇ ತೀರುವ ಹಠಸಾಧಕ ಎಂಬದನ್ನಂತೂ ಅವರ ವಿರೋಧಿ ಗಳೂ ಒಪ್ಪುತ್ತಾರೆ. ತೆರಿಗೆ ಸಮರದ ಬೆದರಿಕೆ ಹುಟ್ಟಿಸಿ, ಎಲ್ಲರನ್ನೂ ಅಮೆರಿಕದೊಡನೆ ಸಂಧಾನಕ್ಕೆ ಬರುವಂತೆ ಮಾಡಬಹುದು ಬಿಟ್ಟರೆ, ಏಕಾಏಕಿ ಎಲ್ಲರ ಮೇಲೂ ತೆರಿಗೆಯ ಕತ್ತಿ ಬೀಸಲಾರರು ಎಂಬ ಬಹುಮಾನ್ಯ ನಿರೀಕ್ಷೆ ಹುಸಿಯಾಗಿಸಿದ್ದಾರೆ.

ಚೀನಾ, ಕೆನಡಾ, ಐರೋಪ್ಯ ಒಕ್ಕೂಟದ ಕೆಲ ಸದಸ್ಯ ಸರಕಾರಗಳು ಪ್ರತಿ ದಾಳಿಯ ಸೂಚನೆ ಕೊಡುತ್ತಿವೆಯಾದರೂ ಇವೆಲ್ಲ ಆರಂಭಿಕ ಕ್ರಿಯೆ-ಪ್ರಕ್ರಿಯೆಗಳು. ಸದ್ಯ ಒಬ್ಬರನ್ನೊಬ್ಬರು ಅವಶ್ಯ ವಿಲ್ಲವೆಂದು ಎತ್ತಿ ಎಸೆದು, ಬಾಗಿಲು ಮುಚ್ಚಿ ಕುಳಿತುಕೊಳ್ಳುವ ಪರಿಸ್ಥಿತಿ ಇಲ್ಲ. ಕೆಲವರು ಏಪ್ರಿಲ್ 9-10ರ ಸುಂಕ ಹೇರಿಕೆಯ ಕಾಲಮಿತಿಯ ಗಡುವು ವಿಸ್ತರಣೆಗೆ ಕೇಳಿಕೊಂಡಿದ್ದಾರೆ. ವಿಯೆಟ್ನಾಮ್ ಸಹಿತ ಕೆಲ ದೇಶಗಳು ಅಮೆರಿಕದ ಮೇಲಿನ ತಮ್ಮ ಸುಂಕ ಕಡಿತಗೊಳಿಸುವುದೂ ಅಲ್ಲದೆ, ಅಮೆರಿಕನ್ ಮಾರುಕಟ್ಟೆಯ ಅವಶ್ಯಕತೆ ಪೂರೈಸಲು ಅಮೆರಿಕನ್ ನೆಲದ ಹೂಡಿಕೆ ಮಾಡಿ, ಇಲ್ಲಿನ ಉತ್ಪಾದಕ ಶಕ್ತಿಗೆ ಬಲ ತುಂಬುವ ಸೂಚನೆಯನ್ನು ಕೊಡುತ್ತಿವೆ.

ಸುಮಾರು 50ಕ್ಕೂ ಹೆಚ್ಚು ಪ್ರಮುಖ ದೇಶಗಳು ಮಾತುಕತೆಗೆ ಮುಂದಾಗಿವೆ ಎನ್ನುವ ಶ್ವೇತಭವನದ ಹೇಳಿಕೆಗಳು ಸಂಧಾನದ ಹಾದಿಯತ್ತ ಸಾಗುವ ಸೂಚನೆ ಕೊಡುತ್ತಿವೆ. ಅಮೆರಿಕದ ಈ ಹೊಡೆತಕ್ಕೆ ವಿಶ್ವದಾದ್ಯಂತ ಷೇರು ಮಾರುಕಟ್ಟೆಗಳು ತೀಕ್ಷ್ಣ ಕುಸಿತ ಕಂಡಿವೆ. ಅನಿಶ್ಚಿತತೆಗಳು ಕಡಿಮೆಯಾಗಿ, ಮುಂದಿನ ರೂಪುರೇಷೆಗಳು ಅನಾವರಣಗೊಳ್ಳುವ ತನಕ ಮುಂದಿನ ಕೆಲ ವಾರಗಳಲ್ಲೂ ಇನ್ನಷ್ಟು ಕುಸಿತದ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಬಹುತೇಕ ಹೂಡಿಕೆದಾರರಿಗೆ ಇದೊಂದು ರೀತಿಯ ‘ತಳಸ್ಪರ್ಶಿ’ ಅನುಭವ! ’ತಳವೆಲ್ಲಿ ಕಾಣುತ್ತಿಲ್ಲ ವಲ್ಲ’ ಎಂಬ ತಳಮಳ! ಅಮೆರಿಕ ಸಹಿತ ಜಗದಗಲ ಈ ಬೆಳವಣಿಗೆಗಳಿಂದ ಹಣದುಬ್ಬರ ಹೆಚ್ಚುವ ಲಕ್ಷಣಗಳು ಗೋಚರಿಸಿವೆ. ಹಣದುಬ್ಬರ ಇಳಿಸಿ, ಆರ್ಥಿಕ ಸ್ಥಿರತೆ ತರುತ್ತೇವೆಂದು ಅಧಿಕಾರಕ್ಕೇರಿದ ಟ್ರಂಪ್ ಪಡೆ, ಸಾಮಾನ್ಯರ ಜೀವನ ಮಟ್ಟವನ್ನು ಹಳ್ಳ ಹಿಡಿಸುತ್ತಿದೆ ಎಂಬ ಉದ್ವೇಗದ ಪ್ರತಿಭಟನೆ ಗಳೂ ನಡೆದಿವೆ.

ಇವುಗಳ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದ ಶಂಕೆಗಳಿದ್ದರೂ, ತಕ್ಷಣದ ದರ ಏರಿಕೆಯ ಹೊಡೆತದಿಂದ ಜನಜೀವನ ಆತಂಕಕ್ಕೊಳಗಾಗಿದ್ದನ್ನು ಅಲ್ಲಗಳೆಯುವಂತಿಲ್ಲ. ಸದ್ಯದಲ್ಲಿ ಕೆಲವು ಅಡ್ಡ ಪರಿಣಾಮಗಳಾದರೂ, ದೀರ್ಘಾವಧಿಗೆ ಅಮೆರಿಕದ ಸಾರ್ವಭೌಮತೆಗೆ ಬಲ ನೀಡುವ ಕೈಂಕರ್ಯ ತಮ್ಮದೆಂದು ಪ್ರಸ್ತುತ ಅಮೆರಿಕ ಆಡಳಿತದ ವಾದ.

ವ್ಯಾಪಾರಿ ಹಿತಾಸಕ್ತಿಯ ಬಲದಲ್ಲಿ ದೊಡ್ಡಣ್ಣನೆಂಬ ಸ್ವಯಂಘೋಷಿತ ಪಾತ್ರವನ್ನು ಅಮೆರಿಕ ನಿರ್ವಹಿಸುತ್ತಿತ್ತು. ತನ್ನ ಲಾಭಕ್ಕೆ ಜಗದಗಲ ಗೊಂದಲ, ಯುದ್ಧ ಸೃಷ್ಟಿಸಿ ರಕ್ಷಣಾ ಉತ್ಪನ್ನಗಳ ಮಾರುಕಟ್ಟೆಯ ವಹಿವಾಟು ನಡೆಸಿ ಲಾಭ ನಡೆಸಿಕೊಳ್ಳುತ್ತಿತ್ತು. ಇವೆಲ್ಲದರ ಹಿಂದೆ ಒಂದು ಕಾಲ ದಲ್ಲಿ ಜಗದಗಲ ವಸಹಾತುಗಳನ್ನು ನಿರ್ಮಿಸಿ ಬಹುಕಾಲ ರಾಜ್ಯಭಾರ ಮಾಡಿದ್ದ ಬ್ರಿಟನ್, ಡಚ್, ಫ್ರಾನ್ಸ್ ಮುಂತಾದ ಐರೋಪ್ಯ ವಸಾಹತುಶಾಹಿತ್ವದ ಹಿತಾಸಕ್ತಿಗಳೂ ಇದ್ದವು.

ವಿಶ್ವಸಂಸ್ಥೆ, ನ್ಯಾಟೋ, ವಿಶ್ವ ಅರೋಗ್ಯ ಸಂಸ್ಥೆ, ವಿಶ್ವ ವ್ಯಾಪಾರ ಸಂಸ್ಥೆ ಇತ್ಯಾದಿ ಇತ್ಯಾದಿ ವ್ಯವಸ್ಥಿತ ಹಿತಾಸಕ್ತಿಗಳ ಹೆಸರಿನಲ್ಲಿ ನಡೆಯುತ್ತಿದ್ದರೂ, ಇದರ ಹಿಂದಿರುವುದು ಇದೇ ಸಾಮ್ರಾಜ್ಯಶಾಹಿತ್ವದ, ವಸಾಹತುಶಾಹಿ ಮನಸ್ಥಿತಿಗಳು ಎಂಬುದು ಗಮನಿಸಬೇಕಾದ ಸತ್ಯ.

ಐರೋಪ್ಯ ಸಾಮ್ರಾಜ್ಯಶಾಹಿತ್ವ, ಬ್ರಿಟನ್ ಆಡಳಿತಕ್ಕೆ ಸಡ್ಡು ಹೊಡೆದು ತಮ್ಮದೇ ಧಾರ್ಮಿಕ, ಸಾಮಾಜಿಕ, ರಾಜಕೀಯ ಸ್ವತಂತ್ರ ಹೊಂದಿದ ಸಮಾಜ ಕಟ್ಟಿಕೊಳ್ಳುವ ಹಂಬಲದೊಂದಿಗೆ ಅಮೆರಿಕ ಸೇರಿಕೊಂಡವರೂ ಕಾಲಾಂತರದಲ್ಲಿ ಐರೋಪ್ಯ ಶಕ್ತಿಗಳ ಕೈಗೊಂಬೆಯಾಗಿದ್ದು ಇನ್ನೊಂದು ಅಚ್ಚರಿ!

ಇದನ್ನು ಸೂಕ್ಷ್ಮವಾಗಿ ಗಮನಿಸಿ, ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಭೌಗೋಳಿಕ, ಸಂಪನ್ಮೂಲಗಳ ದೃಷ್ಟಿಯಲ್ಲಿ ಪ್ರಬಲರೇನಲ್ಲದಿದ್ದರೂ, ಸಕಲರನ್ನೂ ನಿಯಂತ್ರಣದಲ್ಲಿಟ್ಟು ಕೊಳ್ಳುವ ರಾಜಕೀಯ ನೀತಿ, ಕಲೆ ಸಿದ್ಧಿಸಿಕೊಂಡ ಸಾಮ್ರಾಜ್ಯಶಾಹಿ ಶಕ್ತಿಯ ಅನಾವರಣ ಆಗುತ್ತದೆ.

ಅಮೆರಿಕದ ಸುಂಕ ಸಮರವು ವಿರೋಧಿ ಚೀನಾದ ಮೇಲೆ ಎಂದು ಬಿಂಬಿತವಾಗಿದ್ದರೂ, ಐರೋಪ್ಯ ಒಕ್ಕೂಟಗಳ ಮೇಲೂ ಅಮೆರಿಕ ಅದೇ ಅಸ್ತ್ರ ಪ್ರಯೋಗಿಸಿದೆ. ಈ ತನಕ ನೀತಿ ನಿಯಮಗಳ ಅಂಕುಶ ಬಳಸಿಕೊಂಡು ಅಮೆರಿಕದ ಶಕ್ತಿ ಸಂಪನ್ಮೂಲಗಳನ್ನು ತನಗಾಗದವರ ಮೇಲೆ ಬೇಕಾದಂತೆ ಬಳಸಿಕೊಂಡ ಬ್ರಿಟನ್ ಸಹಿತ ಐರೋಪ್ಯ ಒಕ್ಕೂಟಗಳಿಗೂ ಅಮೆರಿಕ ಸಡ್ಡು ಹೊಡೆದಿದೆ. ಜಗತ್ತಿನ ದೈತ್ಯಶಕ್ತಿ ಎಂದು ಬಿಂಬಿಸಿಕೊಂಡ ಒಕ್ಕೂಟ ವ್ಯವಸ್ಥೆಯ ನಡುವಿನ ಈ ಬಿರುಕು ಹೊಸ ಶ್ರೇಯಾಂಕದ ಜಾಗತಿಕ ನಾಯಕತ್ವದ ಹುಟ್ಟಿಗೂ ಮುನ್ನುಡಿಯಾಗಿದೆ.

ಇದಕ್ಕಾಗಿಯೇ ಸಿಡಿಮಿಡಿಗೊಂಡಿರುವ ಐರೋಪ್ಯ ಒಕ್ಕೂಟದ ದೇಶಗಳು ರಷ್ಯಾ-ಉಕ್ರೇನ್ ಯುದ್ಧ ನಿಲ್ಲದಂತೆ ನೋಡಿಕೊಳ್ಳುವ, ತಮ್ಮ ತಮ್ಮ ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಯೋಜನೆಗೆ ಈಗ ಸಿದ್ಧವಾಗುತ್ತಿವೆ. ಸುಂಕ ಹೇರಿದ ಕೂಡಲೇ ಅಮೆರಿಕದಲ್ಲಿ ಉತ್ಪಾದಕರು ಕಾರ್ಖಾನೆ ಆರಂಭಿಸಿ ಉತ್ಪಾದನೆ ಹೆಚ್ಚಿಸಿಕೊಳ್ಳುವುದು ಸಾಧ್ಯವಿಲ್ಲ.

ಹಾಗೆಯೇ ಅಮೆರಿಕವನ್ನು ಹೊರಗಿಟ್ಟು ಸಂಪನ್ಮೂಲಗಳನ್ನು ಹೊಂದಿಸಿಕೊಂಡು ಸಶಕ್ತ ಸೈನ್ಯ, ರಕ್ಷಣಾ ವ್ಯವಸ್ಥೆಗಳನ್ನು ರೂಪಿಸಿಕೊಳ್ಳುವ ಸಾಮರ್ಥ್ಯ ಐರೋಪ್ಯ ಒಕ್ಕೂಟದ ದೇಶಗಳಿಗೂ ಸದ್ಯಕ್ಕಿಲ್ಲ. ಇದನ್ನು ಮನಗಂಡೇ ಅಮೆರಿಕ ಆತಂಕದ ನೆರಳಿನ ಸಾಗುತ್ತಿದ್ದ ಜಾಗತೀಕರಣದ ರೈಲಿನ ಚೈನು ಎಳೆದಂತಿದೆ!

ಈ ರೈಲು ಸದ್ಯಕ್ಕೆ ನಿಂತ ನಿಲ್ಲುವ ಪರಿಸ್ಥಿತಿಯಿಲ್ಲ. ಮುನ್ನಡೆಯುವ ಹೊತ್ತಿಗೆ ಹೊಸ ಎಂಜಿನ್ನುಗಳು ರೈಲು ಎಳೆಯುವ ಸಾಮರ್ಥ್ಯ ರೂಡಿಸಿಕೊಳ್ಳಲೂ ಸಾಧ್ಯತೆಗಳಿವೆ. ಸುಂಕ ಸಮರದ ನೆರಳಿನಲ್ಲಿ ಅಮೆರಿಕ ಸಹಿತ ಎಲ್ಲ ದೇಶಗಳೂ ತಮ್ಮ ತಮ್ಮಲ್ಲಿನ ಉತ್ಪಾದಕ ಶಕ್ತಿಯನ್ನು ತಕ್ಕ ಮಟ್ಟಿಗಾದರೂ ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲಿವೆ. ವಿಶ್ವಗ್ರಾಮದ ಸೀಮೆ ಪರಸ್ಪರ ಸಂಬಂಧಗಳ ಮೇಲೆ ಪುನರ್ನಿಧಾರವಾದರೂ ಅಚ್ಚರಿಯೇನಿಲ್ಲ.

ತಮ್ಮ ತಮ್ಮ ಸಾರ್ವಭೌಮತೆ ಬೆಳೆಸಿಕೊಂಡು ಪರಸ್ಪರ ವಿನಿಮಯಗಳ ಆಧಾರದ ಮೇಲಿನ ಹಲವು ಹೊಸ ‘ಸಂಕ’ಗಳ ರಚನೆಗೆ ‘ಸುಂಕ’ದ ಸಮರ ನಾಂದಿ ಹಾಡಿದೆ ಅನಿಸುತ್ತಿದೆ.

(ಲೇಖಕರು ಹವ್ಯಾಸಿ ಬರಹಗಾರರು)