Oscar Award : ಆಸ್ಕರ್ ಪ್ರಶಸ್ತಿ ಸಮಾರಂಭದ ಮೇಲೂ ಕಾಡ್ಗಿಚ್ಚಿನ ಕರಿ ನೆರಳು; ರದ್ದಾಗಲಿದೆಯೇ ಕಾರ್ಯಕ್ರಮ?
ಲಾಸ್ ಏಂಜಲಿಸ್‌ನಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಸಾವಿರಾರು ಮನೆಗಳು ಸುಟ್ಟು ಹೋಗಿವೆ. ಹಲವಾರು ಹಾಲಿವುಡ್ ನಟ - ನಟಿಯರು ನಿವಾಸ ತೊರೆದಿದ್ದಾರೆ. ಈ ನಡುವೆ 2025 ರ ಆಸ್ಕರ್ ಪ್ರಶಸ್ತಿ ರದ್ದಾಗಲಿದೆಯೇ ? ಎಂಬ ಅನುಮಾನ ಶುರುವಾಗಿದೆ.
ವಾಷಿಂಗ್ಟನ್ ಜನವರಿ 15, 2025 : ವೇಗವಾಗಿ ಹಬ್ಬುತ್ತಿರುವ ಕಾಡ್ಗಿಚ್ಚಿಗೆ (Los Angeles Wildfire) ಲಾಸ್ ಏಂಜಲಿಸ್ ಅಕ್ಷರಶಃ ನಲುಗಿ ಹೋಗಿದೆ. ಪೆಸಿಫಿಕ್ ಪ್ಯಾಲಿಸೈಡ್ಸ್ (Palisades) ಹಾಗೂ ಪ್ಯಾಸಡೀನಾದ ಈಟನ್ ಕೆಯಾನ್ ಪ್ರದೇಶದಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಹರಸಾಹಸ ಪಡುತ್ತಿದ್ದಾರೆ. ಸಾವಿರಾರು ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ. ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಈವರೆಗೆ ಬೆಂಕಿಯ ಕೆನ್ನಾಲಿಗೆಗೆ 24 ಮಂದಿ ಬಲಿಯಾಗಿದ್ದು, ಸಾವಿರಾರು ಮನೆಗಳು ಸುಟ್ಟು ಕರಕಲಾಗಿವೆ. ಲಕ್ಷಾತಂರ ಮಂದಿ ತಮ್ಮ ನಿವಾಸವನ್ನು ತೊರೆದು ಬೇರೆಡೆ ತರಳಿದ್ದಾರೆ. ಸದ್ಯ ಲಾಸ್ ಏಂಜಲಿಸ್ ನರಕದಂತಾಗಿದ್ದು, ನಗರದಲ್ಲಿ ನಡೆಯಬೇಕಿದ್ದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಮೇಲೂ ಕರಿನೆರಳು ಬೀರಿದ್ದು, ಕಾಡ್ಗಿಚ್ಚಿನ ಕಾರಣದಿಂದ ಆಸ್ಕರ್ (Oscar) ಪ್ರಶಸ್ತಿಗೆ ಚಿತ್ರಗಳ ನಾಮನಿರ್ದೇಶನ ಮಾಡುವ ಪ್ರಕ್ರಿಯೆಯನ್ನು ದಿಢೀರನೇ ಹತ್ತು ದಿನ ಮುಂದೂಡಲಾಗಿದೆ.
ಸತತ ಎರಡನೇ ಬಾರಿಗೆ ಚಿತ್ರಗಳ ನಾಮನಿರ್ದೇಶನ ಘೋಷಣೆಯ ದಿನಾಂಕವನ್ನು ಮುಂದೂಡಲಾಗಿದೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ & ಸೈನ್ಸ್ ಸೋಮವಾರ ಹೇಳಿಕೆ ನೀಡಿದೆ. ಚಿತ್ರ ಜಗತ್ತಿನ ಶ್ರೇಷ್ಠ ಪ್ರಶಸ್ತಿಗೆ ಜನವರಿ 23ರಂದು ನಾಮನಿರ್ದೇಶನ ಘೋಷಿಸಲಾಗುವುದು ಎಂದು ಆಯೋಜರು ತಿಳಿಸಿದ್ದಾರೆ. ಈ ಮೊದಲು ನಾಮನಿರ್ದೇಶನಗೊಂಡ ಚಿತ್ರಗಳ ಪಟ್ಟಿಯನ್ನು ಜನವರಿ 19ರಂದು ಬಿಡುಗಡೆ ಮಾಡಲಾಗಿತ್ತು. ನಂತರ ಲಾಸ್ ಏಂಜಲೀಸ್‌ನಲ್ಲಿ ವಿಕೋಪ ನಿಯಂತ್ರಣಕ್ಕೆ ಬರದ ಕಾರಣ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.
ಈ ನಡುವೆ ಈ ಬಾರಿಯ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮ ರದ್ದಾಗಲಿದೆ ಎಂಬ ವಂದಂತಿಯೂ ಕೇಳಿ ಬರುತ್ತಿದೆ. ವರದಿಯ ಪ್ರಕಾರ, ಟಾಮ್ ಹ್ಯಾಂಕ್ಸ್, ಎಮ್ಮಾ ಸ್ಟೋನ್, ಮೆರಿಲ್ ಸ್ಟ್ರೀಪ್ ಮತ್ತು ಸ್ಟೀವನ್ ಸ್ಪೀಲ್ಬರ್ಗ್ ಸೇರಿದಂತೆ ತಾರೆಗಳ ನೇತೃತ್ವದಲ್ಲಿ ಅಧಿಕೃತ ಅಕಾಡೆಮಿ ಪ್ರಶಸ್ತಿ ಸಮಾರಂಭದ ತೀರ್ಮಾನ ಆಗಲಿದೆ ಎಂದು ಹೇಳಲಾಗುತ್ತಿದೆ.
ಜಗತ್ತಿನ ಸಿನಿಮೋದ್ಯಮದ ಕೇಂದ್ರಸ್ಥಾನ ಎಂದೇ ಪರಿಗಣಿತವಾಗಿರುವ ಹಾಲಿವುಡ್‌ಗೂ ಕಾಡ್ಗಿಚ್ಚಿನ ಬಿಸಿ ತಟ್ಟಿದೆ. ಸನ್‌ಸೆಟ್ ಫೈರ್ ಕಾಡ್ಗಿಚ್ಚು ಹಾಲಿವುಡ್‌ನಲ್ಲಿ ಹಾನಿಗೆ ಕಾರಣವಾಗಿದೆ. ಸದ್ಯ ಇಲ್ಲಿನ ಕಾಡ್ಗಿಚ್ಚು ತಹಬದಿಗೆ ಬಂದಿರುವುದಾಗಿ ಸ್ಥಳೀಯ ಆಡಳಿತ ಘೋಷಿಸಿದೆಯಾದರೂ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಬಿಲ್ಲಿಕ್ರಿಸ್ಟಲ್, ಮೆಲ್ ಗಿಬ್ಸನ್, ಜೆಫ್ ಬ್ರಿಡ್ಜಸ್, ಪ್ಯಾರಿಸ್ ಹಿಲ್ಟನ್, ಮ್ಯಾಂಡಿ ಮೂರ್ ಸೇರಿದಂತೆ ಹಲವು ಖ್ಯಾತನಾಮ ಹಾಲಿವುಡ್ ಸ್ಟಾರ್‌ಗಳ ಮನೆಗಳು ಬೆಂಕಿಯ ಕೆನ್ನಾಲಗೆಗೆ ತುತ್ತಾಗಿವೆ.
ಈ ಸುದ್ದಿಯನ್ನೂ ಓದಿ : Los Angeles Wildfire: ಲಾಸ್ ಏಂಜಲಿಸ್‌ನಲ್ಲಿ ನಿಲ್ಲದ ಕಾಡ್ಗಿಚ್ಚು; ಸಾವಿನ ಸಂಖ್ಯೆ 24ಕ್ಕೆ ಏರಿಕೆ- ಮತ್ತೊಂದೆಡೆ ಮನೆಗಳಿಗೆ ಖದೀಮರು ಕನ್ನ