Saturday, 27th July 2024

ಈ ಗೆಳೆತನ ಕಂಡಿರಾ !

ಸುಜಯ್ ಆರ್‌.ಕೊಣ್ಣೂರ್‌

ಕಮಲಿ ತುಂಬು ಗರ್ಭಿಣಿ. ಅವಳ ಸ್ನೇಹಿತೆ ಭಾನು. ಒಟ್ಟಿಗೇ ಇಬ್ಬರ ದಿನದ ಆರಂಭ. ಜೊತೆಯ ಓಡಾಟ. ಗೋಧೂಳಿ ಸಮಯಕ್ಕೆ ಮನೆಗೆ ಬರುವುದೂ ಒಟ್ಟಿಗೇ. ಅಂದು ಅವಳಿಗೆ ನಡೆಯಲಾಗುತ್ತಿಲ್ಲ. ಹಾಗೂ ಹೀಗೂ ಸ್ವಲ್ಪ ದೂರ ಸಾಗಿದ ನಂತರ ತಡೆಯಲಾರದ ನೋವು.

ಒಳಗಿರುವ ಮಗುವಿಗೆ ಹೊರಬರುವ ಆತುರ. ಪ್ರಸವ ವೇದನೆಯಿಂದ ಅಲ್ಲಿಯೇ ನಿಂತು ಬಿಟ್ಟಳು. ಮಗು ಹೊರ ಪ್ರಪಂಚಕ್ಕೆ ಬಂದೇ ಬಿಟ್ಟಿತು. ಭಾನುವಿಗೆ ಸಡಗರ ಆದರೆ ಗೆಳತಿಯ ಬೇನೆಯನ್ನು ನೋಡಿ ಸಂಕಟ. ಮನೆಗೆ ತಿಳಿಸಬೇಕು. ಗೆಳತಿಯನ್ನು ಸ್ವಲ್ಪ ಸುಧಾರಿಸಿ ಕೊಳ್ಳಲು ಬಿಟ್ಟು ಮನೆಗೆ ದೌಡು. ಅಂಬಾ … ಅಂಬಾ …ಅಂಬಾ ಮನೆಯೊಡೆಯನಿಗೆ ಕರೆ. ಅರೆ!

ಇವಳ್ಯಾಕೆ ಇಂದು ಅಚಾನಕ್ ಬಂದು ಕರೆಯುತ್ತಿದ್ದಾಳೆ. ಸೂಕ್ಷವಾಗಿ ಬೆಳಗಿನಿಂದ ಗಮನಿಸಿ ದ್ದಕ್ಕೆಅರಿವಾಯಿತು. ಓಹೋ! ಕಮಲಿ ಬೆಳಗಿನಿಂದ ಸಪ್ಪಗಿದ್ದಳು. ಬಹುಶಃ ಹೆರಿಗೆ ಆಗಿರ ಬಹುದು. ಆದರೆ ಎಲ್ಲಿರಬಹುದು? ಭಾನುವನ್ನು ಹಿಂಬಾಲಿಸಿದರೆ ತಿಳಿಯುತ್ತದೆ. ಹಾಗೇ ದಿನವೂ ಅವರಿಬ್ಬರೂ ಓಡಾಡುವ ಜಾಗದ ಅರಿವಿದ್ದರಿಂದ ಲಗುಬಗೆಯಿಂದ ಬುಟ್ಟಿ ಹಿಡಿದು ಹೊರಟ ಮನೆಯೊಡೆಯನಿಗೆ ಬೆಟ್ಟ ಹತ್ತಿ ಸ್ವಲ್ಪ ದೂರ ಸಾಗಿದ ನಂತರ ಕಮಲಿ ಮಗುವಿನೊಂದಿಗೆ ಮಲಗಿದ್ದು ನೋಡಿ ಸಂತಸವಾಯಿತು. ಮಗು ವನ್ನು ಬುಟ್ಟಿಯಲ್ಲಿಟ್ಟು ಕೊಂಡು ಹೊರಟಾಗ, ಕಮಲಿಗೆ ಸಮಾಧಾನ.

ಒಡೆಯನ ಹಿಂದೆ ನಿಧಾನವಾಗಿ ಹೆಜ್ಜೆ ಹಾಕಿ ಮನೆ ತಲುಪಿದಳು. ಭಾನುವಿಗೂ ಸಮಾಧಾನ. ಗೆಳತಿಯನ್ನು ಅಕ್ಕರೆಯಿಂದ ಮುತ್ತಿಕ್ಕಿ, ಮಗುವನ್ನು ಸ್ವಚ್ಛ ಮಾಡುವ ಕಾರ್ಯದಲ್ಲಿ ತೊಡಗಿದಳು. ಬಹಳ ವರ್ಷಗಳ ನಂತರ ತವರಿಗೆ ದೀಪಾವಳಿಗೆ ತೆರಳಿದ್ದೆ. ಅಣ್ಣ-ಅತ್ತಿಗೆ ಪ್ರೀತಿಯಿಂದ ಬರ ಮಾಡಿಕೊಂಡರು. ಅಣ್ಣನಿಗೆ ಜಾನುವಾರುಗಳ ಭಾಷೆ, ಅವುಗಳ ಸೂಕ್ಷ್ಮ ನಡೆ ಎಲ್ಲವೂ ಅಪ್ಪ ನಿಂದ ಬಳುವಳಿ. ದನಕರುಗಳಿಗೆ ಮೇವಿತ್ತು ಪ್ರೀತಿಯಿಂದ ಅವುಗಳ ಮೈದಡವಿ, ಮಾತಾಡಿಸಿ ಬರುವುದರಿಂದ ಅವುಗಳಿಗೂ
ಅಣ್ಣನ ಮೇಲೆ ಅಷ್ಟೇ ಪ್ರೀತಿ. ಅಣ್ಣ ಕೊಟ್ಟಿಗೆಯ ಬಾಗಿಲು ತೆರೆದರೆ ಸಾಕು ಅಂಬಾ ಎಂದು ಸ್ವಾಗತಿಸುತ್ತವೆ.

ಗೋ ಪೂಜೆಗಾಗಿ ಅಣ್ಣ ಮಡಿಯುಟ್ಟು, ಪೂಜಾ ಸಾಮಗ್ರಿಗಳೊಂದಿಗೆ ಬಂದಾಗ ಸುಮ್ಮನಿದ್ದ ಹಸು-ಕರುಗಳು ನಾವೆ ಅಪರೂಪದ ಅತಿಥಿಗಳು ಬಂದಿದ್ದು ನೋಡಿ ಗಾಬರಿಗೊಂಡವು. ಗೋಪೂಜೆ ಮಾಡುವ ಮೊದಲು ಕಟ್ಟಿದ್ದ ಪಚ್ಚೆತೆನೆ, ಎಲೆ, ಹೂವು ಎಲ್ಲವನ್ನೂ ಎಳೆದೆಳೆದು ತಿಂದೇ ಬಿಟ್ಟಿತು. ಹಿಂದಿನ ದಿನವಷ್ಟೇ ಹುಟ್ಟಿದ್ದ ಪುಟ್ಟಿ ಕರು ಕೊಟ್ಟಿಗೆಯ ತುಂಬಾ ಓಡಾಡುತ್ತಿತ್ತು. ಕಮಲಿ ತನ್ನ ಮಗುವನ್ನು ನೋಡುತ್ತಾ ಸಂತಸದಿಂದ ಅತ್ತಿಗೆ ತಂದಿಟ್ಟ ಅರಿಶಿಣ, ಜೀರಿಗೆ, ಮೆಣಸು ಬೆರೆಸಿದ ಅನ್ನವನ್ನು (ನಂಜಿ ಗಾಗಿ ಔಷಧಿ) ಮೇಯುತ್ತಿದ್ದಳು.

ಹುಟ್ಟಿ ವರ್ಷವಾದರೂ ನಡೆಯಲು ಕಲಿಯದ ಮನುಷ್ಯ ಪರಾವಲಂಬಿ. ಹುಟ್ಟಿದ ದಿನವೇ ಎದ್ದುನಿಂತು ನಡೆಯುವ ಮೂಕ ಪ್ರಾಣಿ ಸ್ವಾವಲಂಬಿ. ದೇವರ ಆಟ ಬಲ್ಲವರಾರು?

Leave a Reply

Your email address will not be published. Required fields are marked *

error: Content is protected !!