ಡಾ.ಪರಮೇಶ್
ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ
ಶ್ರೀ ಗಳಿಗೆ ಅನಾರೋಗ್ಯ ಅಷ್ಟಾಗಿ ಬಾಧಿಸಿರಲಿಲ್ಲ. ಶ್ರೀಗಳ ೯೯ ವಯಸ್ಸಿನವರೆಗೆ ದೇಹ ಸಹಜ ಮುಪ್ಪಿತ್ತು. ಬೆನ್ನು ಬಾಗಿತ್ತು. ಉಳಿದಂತೆ ಅವರ ವಯೋ
ಸಹಜವಾಗಿ ಕಣ್ಣಿನ ಪೊರೆ ಚಿಕಿತ್ಸೆ ಹಾಗೂ ಹಲ್ಲಿನ ಸೆಟ್ ಬದಲಿಸಲಾಗಿತ್ತು. ಅದನ್ನ ಹೊರತು ಪಡಿಸಿ ಅವರಿಗೆ ಬಿಪಿಯಾಗಲಿ ಶುಗರ್ ಆಗಲಿ ಇರಲಿಲ್ಲ.
ಕಣ್ಣುಗಳು ಚಿಕ್ಕಮಗುವಿನ ಕಣ್ಣಿನಷ್ಟೇ ಆರೋಗ್ಯ ಪೂರ್ಣವಾಗಿತ್ತು. ತಮ್ಮ ಇಳಿ ವಯಸ್ಸಿನಲ್ಲೂ ಅವರು ನಿಖರವಾಗಿ ಎಲ್ಲವನ್ನೂ ಓದುತ್ತಿದ್ದರು, ಬರೆಯುತ್ತಿದ್ದರು. ಯಾರೇ ಬಂದರು ದೂರದಿಂದಲೇ ಅವರನ್ನಗುರುತು ಹಿಡಿದು ಮಾತನಾಡಿಸುತ್ತಿದ್ದರು.
೨೦೦೬ ರಲ್ಲಿ ಶ್ರೀಗಳಿಗೆ ಮೊದಲ ಬಾರಿಗೆ ಜ್ವರ ಕಾಣಿಸಿಕೊಂಡಿತ್ತು. ಈ ಮೊದಲು ಜ್ವರ ಬಂದಿದ್ದು ಉಂಟು, ಆದರೆ ಸಣ್ಣ ಪುಟ್ಟ ಔಷಧೋಪಚಾರಗಳಿಂದ
ಗುಣಮುಖರಾಗುತ್ತಿದ್ದರು. ಆದರೆ ಈ ಬಾರಿ ಹಾಗಾಗಿರಲಿಲ್ಲ. ಅವರ ಆರೋಗ್ಯದಲ್ಲಿ ಸಣ್ಣ ಬದಲಾವಣೆಯಾಗಿ ಉಸಿರಾಟಕ್ಕೂ ತೊಂದರೆಯಾಗುತ್ತಿತ್ತು. ನಾವು ಪ್ರಾಥಮಿಕ ಚಿಕಿತ್ಸೆ ನೀಡಿದರೂ ಚೇತರಿಸಿಕೊಂಡಿರಲಿಲ್ಲ. ಇದು ಆತಂಕಕ್ಕೀಡು ಮಾಡಿತ್ತು. ನಾನು ನಮ್ಮ ವೈದ್ಯರಾದ ಫಿಸಿಷಿಯನ್ ಡಾ.ಶಾಲಿನಿ, ನರರೋಗ ತಜ್ಞ ಡಾ.ಉಮಾಶಂಕರ್, ಮನೋರೋಗ ತಜ್ಞ ಡಾ.ಗಿರೀಶ್ ಚಂದ್ರ, ಹೃದ್ರೋಗ ತಜ್ಞ ಡಾ. ಭಾನುಪ್ರಕಾಶ್, ಗ್ಯಾಸ್ಟ್ರೋಎಂಟರಲಾಜಿಸ್ಟ್ ಡಾ.ಭೂಷಣ್, ಅರವಳಿಕೆ ತಜ್ಞ ಡಾ.ಸಿವಿಸ್ವಾಮಿ, ಪ್ಯಾಥಲಾಜಿಸ್ಟ್ ಡಾ. ನಿರಂಜನ್ ಮೂರ್ತಿ ಡಾ.ಸುರೇಶ್ ಬಾಬು, ಡಾ.ಕಿರಣ್ ಕಾನ್ಹಾಪುರೆ ಎಲ್ಲರೂ ಒಂದು ತಂಡ ಮಾಡಿಕೊಂಡು ಶ್ರೀಗಳ ಆರೋಗ್ಯ ಪರೀಕ್ಷೆ ಮಾಡಿದೆವು.
ಶ್ರೀಗಳ ಬಹುಕಾಲದ ಶಿಷ್ಯರೂ ಹಾಗೂ ಹಿರಿಯ ವೈದ್ಯರೂ ಆದ ಡಾ.ಶಿವಪ್ಪನವರು ಹಾಗೂ ಡಾ.ಚಂದ್ರಶೇಖರ್, ಡಾ.ಸಿದ್ಧಲಿಂಗೇಶ್ವರ್ ಮಾರ್ಗದರ್ಶನ ಮಾಡುತ್ತಿದ್ದರು. ಎಲ್ಲಾ ವೈದ್ಯರ ಪ್ರಾಥಮಿಕ ವರದಿ ಹಾಗೂ ಅಭಿಪ್ರಾಯ ಆಧರಿಸಿ ಬೆಂಗಳೂರಿನ ಪಲ್ಮನಾಲಜಿಸ್ಟ್ ಡಾ.ಸತೀಶ್ ಕರೆದುಕೊಂಡು ಬಂದೆವು. ಡಾ.ಸತೀಶ್ ಬಂದವರೇ ಶ್ರೀಗಳ ಎಲ್ಲಾ ರೀತಿಯ ಪೂರ್ವ ಮಾಹಿತಿಗಳನ್ನ ಪಡೆದರು. ಶ್ವಾಸಕೋಶದ ಪರಿಸ್ಥಿತಿಯ ಎಲ್ಲಾ ವೈದ್ಯಕೀಯ ದಾಖಲೆಗಳನ್ನ ರೆಫರ್ ಮಾಡಿದರು. ಕೊನೆಗೆ ಶ್ರೀಗಳಿಗೆ ನ್ಯುಮೋನಿಯಾ ಸಮಸ್ಯೆ ಉಂಟಾಗಿದೆ ಇಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಬೆಂಗಳೂರಿನ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು, ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ನಿರ್ಧರಿಸಿ ಎಂದು ಸೂಕ್ಷ್ಮವಾಗಿ ತಿಳಿಸಿದರು. ನಾವು ಆ ಕ್ಷಣಕ್ಕೆ ಆಯ್ತು ಎಂದು ಒಪ್ಪಿಕೊಂಡೆವು.
ಆದರೆ ಹಾಗೆ ಒಪ್ಪಿಕೊಂಡಿದ್ದು ಮುಂದೆ ಶ್ರೀಗಳನ್ನ ಒಪ್ಪಿಸಲಿಕ್ಕೆ ಎಷ್ಟು ಪ್ರಯಾಸ ಪಡಬೇಕು ಎಂಬುದು ಮಾತ್ರ ನಮಗೆ ತಿಳಿದಿರಲಿಲ್ಲ. ಶ್ರೀಗಳಿಗೆ ‘ನಿಮಗೆ ಆರೋಗ್ಯ ಸರಿಯಿಲ್ಲ ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು’ ಎಂದೆವು. ಶ್ರೀಗಳು ಕೇಳಿಸಿಕೊಂಡು ‘ಇಲ್ಲ ನಾ ಎಲ್ಲಿಗೂ ಬರೋದಿಲ್ಲ’ ಎಂದು ಚುಟುಕಾಗಿ ಉತ್ತರಿಸಿದರು. ಪೂರ್ವ ತಯಾರಿಯೊಂದಿಗೆ ಹೋಗಿದ್ದ ನಮಗೆ ಶ್ರೀಗಳು ಒಪ್ಪಗೆ ಸೂಚಿಸದಿದ್ದದ್ದು ಬಹಳ ಆತಂಕಕ್ಕೆ ಕಾರಣವಾಯ್ತು. ನ್ಯುಮೋನಿಯ ಕ್ರಮೇಣವಾಗಿ ಹೆಚ್ಚಾಗುವಂತಹದ್ದು, ತಡಮಾಡುವಂತಿರಲಿಲ್ಲ.ಆನಂತರ ಶ್ರೀಗಳನ್ನ ಒಪ್ಪಿಸಲು ಎರಡು ದಿನ ಬೇಕಾಯ್ತು. ಶ್ರೀಗಳಿಗೆ ನಿತ್ಯ ನಾವು ಅವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಬೇಕಿತ್ತು.
ಬೆಳಗ್ಗೆ ಸಂಜೆ ಸಂಜೆ ಬೆಳಗ್ಗೆ ಮತ್ತೆ ಅದೇ ಅನಾರೋಗ್ಯದ ಬಗ್ಗೆ ಹೇಳಬೇಕಿತ್ತು. ಅವರು ಏನು ಮಾಡುಬೇಕು ಎಷ್ಟು ಹೊತ್ತಿಗೆ ಚಿಕಿತ್ಸೆ ಕೊಡಬೇಕು ಚಿಕಿತ್ಸೆಯಲ್ಲಿ ಏನೆಲ್ಲಾ ಇದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕಿತ್ತು. ಶ್ರೀಗಳು ಕೇಳಿಸಿಕೊಂಡು ‘ಆನಂತರ ತಿಳಿಸುತ್ತೇನೆ’ ಎಂದು ಸುಮ್ಮನಾಗಿ ಬಿಡುತ್ತಿದ್ದರು. ಶ್ರೀಗಳ ದೇಹಾರೋಗ್ಯದ ಬಗ್ಗೆ ಅವರಿಗೆ ಸೇವೆ ಮಾಡುತ್ತಿದ್ದ ಶಿಷ್ಯಂದಿರು ಆರೋಗ್ಯ ಪರೀಕ್ಷೆ ಮಾಡುತ್ತಿದ್ದ ನನ್ನಂತಹ ವೈದ್ಯರು ಮಾತ್ರ
ಚಿಂತಾಕ್ರಾಂತರಾಗುತ್ತಿದ್ದರೇ ಹೊರತು ಶ್ರೀಗಳು ಮಾತ್ರ ದೇಹದ ಬಗ್ಗೆ ಒಮ್ಮೆಯೂ ಯೋಚಿಸುತ್ತಿರಲಿಲ್ಲ. ಅದು ಅವರಿಗೆ ಅವಶ್ಯಕತೆಯೂ ಇರಲಿಲ್ಲ.
ಅವರು ಅನುಸರಿಸಬೇಕಿದ್ದದ್ದು ಶಿವಭಕ್ತಿ ಹಾಗೂ ದಾಸೋಹ ಇವೆರಡೆ. ಅವರು ಕಣ್ಣಿನಿಂದ ನೋಡಬೇಕಿದ್ದದ್ದು ಮಕ್ಕಳು ಅವರ ವಿದ್ಯಾಭ್ಯಾಸ
ನಡೆಯಬೇಕೆಂದಿದ್ದು ದಾಸೋಹ ಕೊಠಡಿಯಲ್ಲಿ; ಭಕ್ತರ ನಡುವೆ ಇವಿಷ್ಟೇ ಅದನ್ನು ಹೊರತುಪಡಿಸಿ ಶ್ರೀಗಳಿಗೆ ಮತ್ತಾವುದರ ಹಂಗಿರಲಿಲ್ಲ. ದೇಹವನ್ನ
ಅವರು ತಮ್ಮ ತತ್ವಗಳಿಗೆ ಅವುಗಳನ್ನ ಅನುಸರಿಸಲು ಮಾರ್ಗದರ್ಶಿಸಲು ಬೇಕಿರುವ ಒಂದು ಬಂಡಿಯಾಗಿಸಿಕೊಂಡಿದ್ದರೆ ಹೊರತು ಅದಕ್ಕೆ ಅಂಟಿಕೂತವ ರಾಗಿರಲಿಲ್ಲ. ನಾನು ಮೊದಲೇ ಹೇಳಿದ ಹಾಗೆ ಅವರ ಅನಾರೋಗ್ಯದ ಬಗ್ಗೆ ಅವರಿಗೆ ಹೇಳಬೇಕಿತ್ತೇ ಹೊರತು ಅವರಾಗೇ ಎಂದೂ
‘ನನಗೆ ಹೀಗಾಗಿದೆ ನೋಡಿ’ ಎಂದವರಲ್ಲ. ಅವರು ನಾವೇನೆ ಶಿವಪೂಜೆಗಾಗಿ ಚಿಕಿತ್ಸೆ ಮಾಡಿದ್ರು ಅವರು ಸ್ನಾನ ಮಾಡಿಬಿಡುತ್ತಿದ್ದರು. ಆನಂತರ ಮತ್ತೆ
ಅನಾರೋಗ್ಯ ಬಿಗಡಾಯಿಸುತ್ತಿತ್ತು. ನಾವು ಅವರಿಗೆ ಚಿಕಿತ್ಸೆ ಕೊಡಬೇಕಿದ್ದರೆ ಅವರ ಶಿವಪೂಜೆ ಪ್ರಸಾದ ತಮ್ಮ ಭಕ್ತರ ಭೇಟಿ ಮಕ್ಕಳ ವಿಚಾರಣೆ ನಂತರ
ಸಮಯ ಉಳಿದ ಸಮಯದಲ್ಲಿ ಚಿಕಿತ್ಸೆ ಕೊಡಬೇಕಿತ್ತು.