Saturday, 27th April 2024

ಮಹಾ ಬಯಲು – ೧

ಡಾ.ಪರಮೇಶ್

ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ

ಶ್ರೀಗಳನ್ನು ನೋಡಿದ್ದು ನಾನು ೧೦ ವರ್ಷದ ಬಾಲಕ ನಾಗಿದ್ದಾಗ. ಅದಕ್ಕೂ ಮುನ್ನ ನಾಲ್ಕು ಬಾರಿ ನಮ್ಮ ಮನೆಗೆ ಬಂದಿದ್ದರಂತೆ. ಅದು ಅಷ್ಟೊಂದು ನೆನಪಿಲ್ಲ. ಅಂದ ಹಾಗೆ ನಮ್ಮೂರು ರಾಮನಗರ ಜಿಲ್ಲೆಯ ಮೂಗನಹಳ್ಳಿ. ನನಗೆ ಅಲ್ಪ ಸ್ವಲ್ಪ ನೆನಪಿದ್ದ ಹಾಗೆ ಅದು ನಮ್ಮ ಶಾಲೆಯ ವಾರ್ಷಿಕೋತ್ಸವ ಮತ್ತು ಗಣೇಶೋತ್ಸವ ಕಾರ್ಯಕ್ರಮ. ಇಡೀ ಊರಿಗೆ ಊರೇ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು.

ಗ್ರಾಮಸ್ಥರೇ ರಸ್ತೆಯಲ್ಲದ ಊರಿಗೆ ಅಕ್ಕಪಕ್ಕದ ಮಣ್ಣನ್ನ ಅಗೆದು ಹಾಕಿ ರಿಪೇರಿ ಮಾಡಿ ಹೊಸ ರಸ್ತೆ ನಿರ್ಮಿಸಿದ್ದರು. ಅವರು ಬರುವ ಕೆಲ ದಿನಗಳ ಮುಂಚೆಯಿಂದಲೂ ಎಲ್ಲೆಂದ ರಲ್ಲಿ ಶ್ರೀಗಳ ಮಾತೇ. ಊರಿನವರ ಕನಸು ಮನಸ್ಸಿನಲ್ಲೂ ಶ್ರೀಗಳೇ. ಊರಿ ನಿಂದ ಅರ್ಧ ಕಿ.ಮೀ. ದೂರದಲ್ಲೇ ಶ್ರೀಗಳನ್ನ ಇಳಿಸಿ ದಾರಿಯುದ್ದಕ್ಕೂ ಹೂವಿನ ಹಾದಿ ಮಾಡಿ ಅವರನ್ನ ನಡೆಸಿಕೊಂಡು ಬರಬೇಕುಎಂದು ಊರಿನ ಜನ ತೀರ್ಮಾನ ಮಾಡಿದರು. ಆದ್ರೆ ಊರಿನ ಕೆಲವರು ‘ಬ್ಯಾಡ ಬುದ್ಯೋರಿಗೆ ಆಯಾಸ ವಾಗುತ್ತೆ, ಸೀದ ಊರಿನ ಒಳಗಡೆಯೇ ಕರೆದು ತರೋಣ’ ಎನ್ನುತ್ತಿದ್ದರು.

ಕೊನೆಗೆ ಊರಿನ ದನಗಳನ್ನ ಸಿಂಗರಿಸಿ ಎತ್ತಿನಗಾಡಿ ಮೆರವಣಿಗೆಯೊಂದಿಗೆ ಪೂರ್ಣ ಕುಂಭ ಕಳಸದೊಂದಿಗೆ ಶ್ರೀಗಳನ್ನ ಕರೆದು ತರೋಣ ಎಂದು ತೀರ್ಮಾನಿಸಿದರು. ಅದಕ್ಕೆ ಊರಿನ ಎಲ್ಲರೂ ಒಪ್ಪಿಗೆ ಸೂಚಿಸಿದರು. ಪುಟ್ಟ ಹಳ್ಳಿಯಾದ ನಮ್ಮೂರು ತಾಯಿಗೆ ಮಗು ಕಾದಂತೆ ಕಾಯುತ್ತಾ ನಿಂತಿತ್ತು.

ಶ್ರೀಗಳು ಬಂದೇ ಬಿಟ್ಟರು. ಊರಿನವರ ಕನಸು ಸಾಕಾರಗೊಂಡಿತ್ತು. ಸರಿಯಾಗಿ ಶ್ರೀಗಳನ್ನ ಅಂದೇ ನೋಡಿದ್ದು ನನಗೆ ನೆನಪಿದೆ. ಆಜಾನುಬಾಹು ಶರೀರ, ಎತ್ತರದ ನಿಲುವು, ಕಾವಿ ಧರಿಸಿದ ಶ್ರೀಗಳ ಆ ದೃಢ ವ್ಯಕ್ತಿತ್ವ ಒಂದು ಕ್ಷಣ ದೇವರೇ ಎದುರು ನಿಂತಂತೆ ಭಾಸವಾಗಿತ್ತು. ಇಡೀ ಊರಿನ ಸಂಭ್ರಮ, ಸಂತೋಷವನ್ನು ಹೆಚ್ಚಿಸಿದ ಶ್ರೀಗಳು ಹತ್ತಿರ ಹೋಗಿ ಅವರನ್ನ ತಾಕಲು, ಅವರ ಜೊತೆಗೆ ನಿಲ್ಲಲು ಯತ್ನಿಸುತ್ತಿದ್ದ ನಮ್ಮನ್ನ ಹತ್ತಿರ ಕರೆದು ಬಹಳ ಪ್ರೀತಿಯಿಂದ ನಮ್ಮ ತಲೆ ಸವರಿದ್ದರು. ಅದೊಂದು ತೆರನಾದ ಭಕ್ತಿ, ಸೆಳೆತ ಶ್ರೀಗಳ ಮೇಲೆ ಉಂಟಾಗಿತ್ತು. ಅದು ಮಮತೆ ಪ್ರೀತಿ ವಾತ್ಸಲ್ಯದ ಅಮ್ಮನ ಪ್ರೀತಿಯಷ್ಟೇ ವಿಶಾಲವಾಗಿತ್ತು.

ಇಡೀ ಊರಿನ ಕೆಲವರ ಮನೆಯಲ್ಲಿ ಪಾದ ಪೂಜೆಯಲ್ಲಿ ಪಾಲ್ಗೊಂಡ ಶ್ರೀಗಳು, ಅವತ್ತು ಗ್ರಾಮದ ಮಕ್ಕಳಾದ ನಮ್ಮನ್ನೆಲ್ಲಾ ಸುತ್ತಾ ಕೂರಿಸಿಕೊಂಡು ಮಾತನಾಡುತ್ತಿದ್ದರು. ಇಳಿ ಸಂಜೆಯಲ್ಲಿ, ದೀಪ ಹಚ್ಚಿದ ವೇಳೆಯಲ್ಲಿ ಶ್ರೀಗಳು ಮಾತನಾಡುತ್ತಿದ್ದರು, ನಾವು ಕೇಳುತ್ತಿದ್ದೆವು, ಅದೊಂದು ಮಂತ್ರದಂತೆ ನಮ್ಮನ್ನೆಲ್ಲಾ ಉದ್ದೀಪನಗೊಳಿಸುತ್ತಿತ್ತು. ಶ್ರೀಗಳು ಹೇಳುತ್ತಿದ್ದ ಒಂದು ಮಾತು ನನಗೆ ತುಂಬಾ ಚೆನ್ನಾಗಿ ನೆನಪಿದೆ. ‘ನಿಮ್ಮ ಕಾಯಕವನ್ನ ನೀವು ಶ್ರದ್ಧೆಯಿಂದ ಪೂರೈಸಬೇಕು, ನಿಮ್ಮ ಪಾಲಿನ ಕಾಯಕ ನೀವು ನಿರ್ವಹಿಸಿ ದರೆ ದೇವರು ನೀವು ಬಯಸಿದ ಎಲ್ಲವನ್ನೂ ನೀಡುತ್ತಾನೆ’ ಎಂದದ್ದು ನನ್ನ ಕಿವಿಯಲ್ಲಿ ಹಾಗೇ ಇದೆ.

’ನೀವೆಲ್ಲರೂ ಓದುತ್ತಿದ್ದೀರಾ ಎಂದರೆ ಓದಲೇ ಬೇಕು. ಮಿಕ್ಕ ಯಾವುದರ ಬಗ್ಗೆಯೂ ಗಮನ ಹರಿಸಬಾರದು’ ಎಂದು ಹೇಳಿದ್ದರು. ಶ್ರೀಗಳು ಹೇಳಿದ ಮಾತುಗಳು ನಮ್ಮನ್ನು ಗಾಢವಾಗಿ ಪ್ರಭಾಸಿತ್ತು. ಈಗಲೂ ಪ್ರಭಾಸುತ್ತಿದೆ. ಶ್ರೀಗಳು ಮಕ್ಕಳ ನಂತರ ಗ್ರಾಮದ ಹಿರಿಯರನ್ನು ಮಾತನಾಡಿಸಲಿಕ್ಕೆ ಶುರು ಮಾಡಿದರು. ಶ್ರೀಗಳು ಎಷ್ಟು ಸಂತುಷ್ಟತೆಯಿಂದ ಇದ್ದರು ಎಂದರೆ ಅವರ ಮಾತುಗಳಲ್ಲಿ ಗ್ರಾಮದ ಪ್ರತಿಯೊಂದು ಸಣ್ಣ ಸಣ್ಣ ವಿಚಾರವನ್ನೂ ಸಹ ನೆನಪಿಟ್ಟು ಕೊಂಡಂತೆ ಮಾತನಾಡುತ್ತಿದ್ದರು. ಗ್ರಾಮದಲ್ಲಿ ಮಳೆ ಬೆಳೆಯ ಮಾಹಿತಿ ಅವರಲ್ಲಿ ಇತ್ತು. ಪ್ರತಿಯೊಂದು ಮನೆಯ ಸಂಕಟಗಳು ಅವರಿಗೆ ಗೊತ್ತಿರುತ್ತಿತ್ತು.

‘ಊರಿನಲ್ಲಿ ಕಷ್ಟ ಇರೋರಿಗೆ ನೀವು ಸಹಾಯ ಮಾಡಿದ್ದೀರಾ, ಆತನ ಪರಿಸ್ಥಿತಿ ಹೇಗಿದೆ?’ ಎಂದು ಕೇಳುತ್ತಿದ್ದರು. ಜೊತೆಗೆ ನೋವು
ತೋಡಿಕೊಂಡ ಪ್ರತಿಯೊಬ್ಬರಿಗೆ ಸಮಾಧಾನದ ಮಾತುಗಳನ್ನು ಆಡುತ್ತಿದ್ದರು. ಶ್ರೀಗಳ ಮಾತಿನಿಂದ ಉಂಟಾದ ಸಮಾಧಾನಕ್ಕೆ ನಮ್ಮೂರಿನ ಜನ ತಮ್ಮ ಕಷ್ಟವನ್ನ ಮರೆತು ಕಣ್ಣೀರನ್ನು ಹಿಂದೆಲ್ಲೋ ಕುಳಿತುಕೊಂಡು ಒರೆಸಿಕೊಳ್ಳುತ್ತಿದ್ದನ್ನು ನೋಡಿದ್ದೇನೆ. ಎಷ್ಟೋ ಜನ ತಾಯಂದಿರು ಶ್ರೀಗಳ ಪಾದಕ್ಕೆ ತಮ್ಮ ಮಕ್ಕಳನ್ನ ಕೊಟ್ಟು ‘ಬುದ್ದಿ ಇವನಿಗೆ ಒಳ್ಳೆ ವಿದ್ಯಾ ಬುದ್ಧಿ ಕೊಡಿ ಎಂದು ಹಾರೈಸಿ’ ಎಂದು ಪ್ರಾರ್ಥಿಸಿದ್ದನ್ನ ನೋಡಿದ್ದೇನೆ.

ಶ್ರೀಗಳು ನಮ್ಮ ಪೂಜ್ಯ ತಂದೆಯವರಾದ ಶಿವಣ್ಣನವರನ್ನ ಕಂಡರೆ ಸಾಕಷ್ಟು ಕಾಳಜಿ. ಇದಕ್ಕಾಗಿಯೇ ನಮ್ಮ ತಾತನವರ ಆರಾಧ ನೆಗೆ, ನಮ್ಮ ಅಕ್ಕನ ಮದುವೆಯ ಕಳಶ ಪೂಜೆಗೆ, ನಮ್ಮ ಅಕ್ಕನ ಮಗನ ನಾಮಕರಣಕ್ಕೂ ಬಂದಿದ್ದರು. ಜೊತೆಗೆ ಊರಿನ ದೇವಾ ಲಯದ ಉದ್ಘಾಟನೆಗೂ ಆಗುಮಿಸಿ ಎಲ್ಲರನ್ನ ಹರಸಿದರು. ಹುಟ್ಟು, ಸಾವು ಹಾಗೂ ಊರಿನ ಸಣ್ಣಪುಟ್ಟ ಸಂಭ್ರಮಗಳ ಲ್ಲಿಯೂ ಶ್ರೀಗಳ ಹಾಜರಿಯಿಂದಾಗಿ ಇಡೀ ಊರು ಶ್ರೀಗಳ ದಟ್ಟ ಪ್ರಭಾವಕ್ಕೆ ಒಳಗಾಗಿತ್ತು. ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಸಾಗುತ್ತಿತ್ತು.

ಜೊತೆಗೆ ಊರಿನಲ್ಲಿ ಆಗುವ ಆನಾರೋಗ್ಯಗಳಿಗೆ, ದನಕರುಗಳಿಗೆ ಹುಷಾರಿಲ್ಲದಂತಾದರೆ, ಮಕ್ಕಳಿಗೆ ತೊಂದರೆಯುಂಟಾದರೆ, ಬೆಳೆ
ಹಾಳಾದರೆ ಎಲ್ಲದಕ್ಕೂ ಶ್ರೀಗಳನ್ನ ಪ್ರಾರ್ಥಿಸುತ್ತಿದ್ದರು ಅಲ್ಲದೆ ಸಿದ್ಧಗಂಗಾ ಮಠಕ್ಕೆ ತೆರಳಿ ಶ್ರೀಗಳಿಂದ ತಾಯತ, ಮಂತ್ರಾಕ್ಷತೆ ಗಳನ್ನ ತಂದು ಸಮಸ್ಯೆಯಿಂದ ನಿವಾರಣೆ ಹೊಂದುತ್ತಿದ್ದರು. (ಸಶೇಷ)

Leave a Reply

Your email address will not be published. Required fields are marked *

error: Content is protected !!