Sunday, 1st December 2024

ಆರ್‌ಬಿಐ ಅಧಿಕಾರಿಗಳೇ ತಬ್ಬಿಬ್ಬಾದರು !

ಡಾ.ಪರಮೇಶ್
ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ.

ಕಲಿಕೆಯು ಉತ್ಸಾಹವು ಶ್ರೀಗಳಲ್ಲಿ ಯಾವತ್ತೂ ಕೂಡ ಕುಂದಿರಲಿಲ್ಲ. ಅವರು ಜಗತ್ತಿನ ಎಲ್ಲಾ ವಿಚಾರಗಳ ಬಗ್ಗೆ ತೆರೆದ
ಕಿಟಕಿ ಯಂತಾಗಿದ್ದರು. ಅವರಿಗೆ ತಿಳಿದು ಕೊಳ್ಳಬೇಕು ಎನ್ನುವ ಆಸಕ್ತಿ ಅವರನ್ನ ನೂರನೇ ವಯಸ್ಸಿನಲ್ಲಿಯೂ ಇತ್ತು ೧೧೦ನೇ ವಯಸ್ಸಿನಲ್ಲಿಯೂ ಇತ್ತು.

ಮಠಕ್ಕೆ ಯಾರೇ ಬಂದರೂ ಅವರು ಪಾಂಡಿತ್ಯ ಪಡೆದಿದ್ದ ಎಲ್ಲಾ ವಿಚಾರಗಳನ್ನ ಶ್ರೀಗಳಿಗೆ ಹೇಳಬೇಕಿತ್ತು. ಜೊತೆಗೆ ಶ್ರೀಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಒಮ್ಮೆ ಶ್ರೀಗಳ ಬಳಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಉನ್ನತ ದರ್ಜೆಯ ಅಧಿಕಾರಿ ಯೊಬ್ಬರು ಬಂದಿದ್ದರು. ಶ್ರೀಗಳ ಬಳಿ ಕುಳಿತು ಹೀಗೆ ಮಾತನಾಡುತ್ತಿದ್ದಾಗ ಶ್ರೀಗಳು ದೇಶದ ಜಿಡಿಪಿ ಬಗ್ಗೆ ಹಾಗೂ ರೂಪಾಯಿ ಅಪಮೌಲ್ಯೀಕರಣದ ಬಗ್ಗೆ ಮಾತನಾಡಲಿಕ್ಕೆ ಪ್ರಶ್ನಿಸಲಿಕ್ಕೆ ಶುರುಮಾಡಿದರು. ಅಕ್ಷರಶಃ ಆ ಅಧಿಕಾರಿ ಶ್ರೀಗಳಿಂದ ಇದ್ಯಾವುದನ್ನೂ ನಿರೀಕ್ಷಿಸಿರಲಿಲ್ಲ.

ಡಾಲರ್ ಮುಂದೆ ರೂಪಾಯಿ ಅಮೌಲ್ಯೀಕರಣ ಯಾಕೆ ಆಗ್ತಿದೆ. ಸ್ವತಂತ್ರಪೂರ್ವದಲ್ಲಿ ಇದ್ದ ಆರ್ಥಿಕ ವ್ಯವಸ್ಥೆಗೂ ಇತ್ತೀಚಿನ ಆರ್ಥಿಕ ವ್ಯವಸ್ಥೆಗೂ ಏನು ವ್ಯತ್ಯಾಸ. ಹೇಗೆಲ್ಲಾ ದೇಶದ ಜಿಡಿಪಿ ಮೇಲೆತ್ತಬೇಕು ಎಂಬೆಲ್ಲಾ ಕುರಿತಾಗಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಲು ಶುರು ಮಾಡಿದರು.

ಆರ್‌ಬಿಐ ಅಧಿಕಾರಿಗಳಿಗೆ ದೇಶದ ಸಂಪನ್ಮೂಲ ಕೇವಲ ಶ್ರೀಮಂತರಲ್ಲಿ ಕ್ರೊಢೀಕರಣ ವಾಗುತ್ತಿರುವ ಬಗ್ಗೆ, ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಂಬಲ ಬೆಲೆ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಭಾರತದಿಂದ ರಫ್ತು ಪ್ರಮಾಣ ಹೆಚ್ಚಿಸುವ ಬಗ್ಗೆ, ಜೊತೆಗೆ ಭಾರತದೊಂದಿಗೆ ವ್ಯವಹಾರ ನಡೆಸುವ ಇತರೆ ದೇಶಗಳೊಂದಿಗೆ ರೂಪಾಯಿ ರೂಪದಲ್ಲಿಯೇ ವ್ಯವಹರಿಸುವ ಬಗ್ಗೆ ಹೀಗೆ
ನಾನಾ ವಿಚಾರಗಳಲ್ಲಿ ಶ್ರೀಗಳು ಸಲಹೆ ನೀಡಿದರು.

ಕೊನೆಯದಾಗಿ ‘ನಮ್ಮದು ನಾಗರಿಕತೆಗಳ ಉಗಮದಿಂದ ಬೆಳೆದು ಬಂದ ದೇಶ. ಹಾಗಾಗಿ ಹೊಸದಾಗಿ ಕಟ್ಟಿದ ದೇಶಗಳ ಮುಂದೆ ನಾವು ಮಾರ್ಗದರ್ಶಕ ದೇಶವಾಗಿ ಅಭಿವೃದ್ಧಿ ಹೊಂದಬೇಕು. ಆರ್ಥಿಕತೆಯ ಜೊತೆಗೆ ಗುರು ಸ್ಥಾನದಲ್ಲಿ ದೇಶವನ್ನ ತಂದು ನಿಲ್ಲಿಸಲು ನಿಮ್ಮಂತಹ ಅಧಿಕಾರಿಗಳು ಕೆಲಸ ಮಾಡಬೇಕು’ ಎಂದು ಹೇಳಿದ್ದರು. ಕೊನೆಗೆ ಅಧಿಕಾರಿಗಳು ಶ್ರೀಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಅವರಿಂದ ಸಲಹೆಗಳನ್ನ ಪಡೆದು ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.

‘ನಾವು ನಮ್ಮ ಜೀವನದಲ್ಲಿಯೇ ಇಂತಹ ಸಾಧಕರನ್ನ, ಸ್ವಾಮೀಜಿಗಳನ್ನ ನೋಡಿಲ್ಲ. ತಾವು ತಿಳಿಯದ ವಿಚಾರವಿಲ್ಲ’ ಎಂದು ಅಭಿಪ್ರಾಯಪಟ್ಟರು. ಇದನ್ನೆಲ್ಲಾ ಕೇಳಿ ತಿಳಿದುಕೊಂಡ ನನಗೆ ಶ್ರೀಗಳಿಗೆ ತಿಳಿಯದ ವಿಚಾರವೇ ಇಲ್ಲ ಎನ್ನಿಸುತ್ತದೆ. ಕಾರಣ ಅವರು ಸದಾ ಓದಿನಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರು. ಇಂಗ್ಲಿಷ್ ಚೆನ್ನಾಗಿ ಬಲ್ಲ ಶ್ರೀಗಳು ಕನ್ನಡವಷ್ಟೇ ಅಲ್ಲದೆ ಇಂಗ್ಲಿಷಿನಲ್ಲಿರುವ ಪ್ರಬುದ್ಧ ಗ್ರಂಥಗಳನ್ನ ಓದಿದ್ದರು. ಜೊತೆಗೆ ದಿನ ಪತ್ರಿಕೆಗಳಲ್ಲಿ ಬರುವ ನಿತ್ಯ ವರದಿಗಳನ್ನ ಬಿಟ್ಟೂ ಬಿಡದೆ ಓದುತ್ತಿದ್ದರು.

ಮಠಕ್ಕೆ ದೇಶದ ಮೊದಲ ಪ್ರಜೆ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ ಬಂದಾಗ ಅವರೊಂದಿಗೆ ಯಾವ ಉತ್ಸಾಹದಿಂದ ಮಾತನಾಡಿದ್ದರೊ ಅಷ್ಟೇ ಉತ್ಸಾಹದಿಂದ ಸಾಮಾನ್ಯ ರೈತನೊಂದಿಗೆ, ದಿನಗೂಲಿ ನೌಕರನೊಂದಿಗೂ ಮಾತನಾಡುತ್ತಿದ್ದರು. ಶ್ರೀಗಳ ಆಲೋಚನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಆತನ ಜೀವನದ ಅಪಾರ ಅನುಭವದ ಗುಚ್ಛ ಆತನಿಂದ ಪಡೆಯುವ ಪ್ರತಿಯೊಂದು ವಿಚಾರವೂ ವಿಭಿನ್ನವಾಗಿರುತ್ತದೆ. ನಮ್ಮಲ್ಲಿ ಹೊಸ ಹೊಸ ವಿಚಾರಗಳು ತುಂಬಿಕೊಂಡಂತೆಲ್ಲಾ ನಮ್ಮ ದೃಷ್ಟಿ ಕೋನಗಳು ಬದಲಾಗುತ್ತಾ ಹೋಗುತ್ತದೆ ಎಂದು ಶ್ರೀಗಳು ಹೇಳುತ್ತಿದ್ದದ್ದು ಇದೇ ಕಾರಣಕ್ಕಾಗಿಯೇ.