Wednesday, 30th October 2024

ಒಂದರಿಂದ ಇನ್ನೊಂದು ಕೆಲಸಕ್ಕೆ ತೊಡಗುವುದೇ ವಿಶ್ರಾಂತಿ

ಡಾ.ಪರಮೇಶ್, ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ

ಮಹಾ ಬಯಲು -೧೧

ದಿನದ ೨೪ ಗಂಟೆಗಳಲ್ಲಿ ಶ್ರೀಗಳು ನಿದ್ದೆಗೆ ಜಾರುತ್ತಿದ್ದದ್ದು ಕೇವಲ ನಾಲ್ಕು ಗಂಟೆಗಳು ಮಾತ್ರ. ಇನ್ನುಳಿದ ೨೦ ಗಂಟೆಗಳ ಕಾಲ ಶ್ರೀಗಳದ್ದು ನಿರಂತರ ಪ್ರಯಾಣ. ನಿರಂತರ ಜನಸೇವಾ ಕಾರ್ಯ. ತ್ರಿವಿಧ ದಾಸೋಹ ಕಾರ್ಯಕ್ರಮ. ಹಾಗಾದರೆ ಶ್ರೀಗಳಿಗೆ ವಿಶ್ರಾಂತಿ ಯೇ ಇಲ್ಲವಾ? ವಿಶ್ರಾಂತಿ ವಿಚಾರವಾಗಿ ಶ್ರೀಗಳನ್ನ ಖುದ್ದು ನಾನೇ ಕೇಳಿದ್ದೆ. ಅದಕ್ಕವರು ‘ಒಂದು ಕೆಲಸ ಮುಗಿಸಿ ಇನ್ನೊಂದು ಕೆಲಸದಲ್ಲಿ ತೊಡಗುವುದೇ ವಿಶ್ರಾಂತಿ, ಕಣ್ಣಿನ ಕೆಲಸ ಮುಗಿದ ತಕ್ಷಣ, ಕಿವಿಗೆ, ಕಿವಿಯ ನಂತರ ಕೈಗಳಿಗೆ, ಕೈಗಳ ನಂತರ ಕಾಲುಗಳಿಗೆ ಹೀಗೆ ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ನಾವು ಬದಲಾಗುತ್ತಾ ವಿಶ್ರಾಂತಿ ಪಡೆಯಬೇಕು’ ಎಂದಿದ್ದರು.

ಸಹಜವಾಗಿ ಮನುಷ್ಯನಿಗೆ ವಯಸ್ಸೂ ಹೆಚ್ಚುತ್ತಾ ದೇಹದಲ್ಲಿನ ಅಂಗಾಂಗಳಲ್ಲಿ ಜೀವಾಣುಗಳು ನಶಿಸುತ್ತಾ ಬರುತ್ತವೆ. ಆದರೆ ಶ್ರೀಗಳ ದೇಹ ಯಾವತ್ತೂ ವಿಶ್ರಾಂತಿ ಪಡೆದಿಲ್ಲ. ಅವರು ದಣಿವರಿಯದ ಮಹಾಜ್ಞಾನಿ ಯಾಗಿದ್ದರು. ‘ಕೆಲಸ ಯಾವತ್ತು ಮನಸ್ಸಿಗೆ ಹೊರೆಯಾಗುತ್ತದೆಯೋ ಆಗ ದೇಹಕ್ಕೂ ಹೊರೆಯಾದಂತೆ ಕಾಣುತ್ತದೆ. ಯಾವಾಗ ಮನಸ್ಸಿಗೆ ಮಾಡುವ ಪ್ರತಿಯೊಂದು ಕೆಲಸವೂ ಆಸಕ್ತಿಕರವೂ ಹೊಸ ವಿಚಾರಗಳ ಅಧ್ಯಯನ ಭಂಡಾರವಾಗಿ ಕಾಣಿತ್ತದೆಯೋ ಆಗ ಆ ಕೆಲಸ ನಮಗೆ ಹೊರೆ ಎಂದೆನಿಸುವುದಿಲ್ಲ. ಪ್ರತಿಯೊಂದು ಕೆಲಸವನ್ನ ಅತ್ಯಂತ ತ್ವರಿತಗತಿಯಲ್ಲಿ ಪರಿಪೂರ್ಣವಾಗಿ ಮುಗಿಸುವುದು ಒಂದು ಕಲೆ ಆ ಕಲೆ ಅರಿತುವನು ಕಾಯಕಯೋಗಿಯಾಗುತ್ತಾನೆ’ ಎಂದು ಹೇಳುತ್ತಿದ್ದರು.

ಓದುತ್ತಿದ್ದಾಗ ಕಣ್ಣಿಗೆ ಕೆಲಸ, ಓದಿದ ಕೆಲಸ ಮುಗಿದ ತಕ್ಷಣ ಕೇಳುವ ಕೆಲಸ, ಓದಿದ್ದನ್ನು ಕೇಳಿದ್ದನ್ನು ನೆನಪಿಡುವಂತೆ ಬರೆದಿಡುವುದು ಮತ್ತೊಂದು ಕೆಲಸ
ಹೀಗೆ ಒಂದು ಕೆಲಸದಿಂದ ಮತ್ತೊಂದು ಕೆಲಸಕ್ಕೆ ಶ್ರೀಗಳು ಬದಲಾಗುತ್ತಿದ್ದರು. ಬದಲಾವಣೆಯನ್ನು ಇತರರಲ್ಲಿಯೂ ಬಯಸುತ್ತಿದ್ದರು. ಇಷ್ಟೆಲ್ಲಾ ಕೆಲಸಗಳು ಮುಗಿದ ನಂತರ ಧ್ಯಾನದ ಮುಖೇನ ತಾವು ತಿಳಿದುಕೊಂಡ ಎಲ್ಲಾ ವಿಚಾರಗಳ ಮೇಲೆಯೂ ಸೂಕ್ಷ್ಮ ಆಲೋಚನೆ ಮಾಡುತ್ತಿದ್ದರು. ಧ್ಯಾನದಲ್ಲಿ ಸಿಗುತ್ತಿದ್ದ ಪ್ರತಿಯೊಂದು ಹೊಸ ವಿಚಾರಗಳನ್ನ ಅಂದಿನ ಪ್ರಾರ್ಥನೆಯಲ್ಲಿ ಮಕ್ಕಳಿಗೆ ತಿಳಿ ಹೇಳುತ್ತಿದ್ದರು. ಒಬ್ಬರು ಯೋಗಿಯಾಗಿ ತಾವು
ತಿಳಿದಿದ್ದನ್ನ ಮತ್ತೊಬ್ಬರಿಗೆ ಅತ್ಯಂತ ಸರಳ ಭಾಷೆಯಲ್ಲಿ ಪ್ರೇಮದಿಂದ ತಿಳಿಸುವುದೇ ನಿಜವಾದ ಆಶೀರ್ವಚನ ಎಂದು ಶ್ರೀಗಳು ನಂಬಿದ್ದರು. ಜೊತೆಗೆ ಮಠಕ್ಕೆ ಯಾರೇ ಬಂದರೂ ತಮ್ಮ ಕಚೇರಿಯಲ್ಲಿಯೇ ಕುಳಿತು ಅವರು ಏತಕ್ಕಾಗಿ ನನ್ನ ಬಳಿಗೆ ಬರುತ್ತಿದ್ದಾರೆ ಎಂಬ ಸೂಕ್ಷ್ಮ ಸುಳಿವು ಶ್ರೀಗಳಿಗೆ ಸದಾ ಕಾಲ
ದೊರಕುತ್ತಿತ್ತು.

ಅವರು ಬಂದ ತಕ್ಷಣವೇ ‘ಇದೇ ಕೆಲಸಕ್ಕಾಗಿ ನನ್ನ ಬಳಿಗೆ ಬಂದಿದ್ದೀಯ ಅಲ್ವಾ?’ ಎಂದು ಕೇಳುತ್ತಿದ್ದರು. ಜೊತೆಗೆ ಶ್ರೀಗಳ ಮತ್ತೊಂದು ವಿಶೇಷ ಗುಣ ಬಂದವರಿಂದ ಎಲ್ಲಾ ಮಾಹಿತಿ ಪಡೆಯುವುದು ಜೊತೆಗೆ ಅವರಿಗೆ ಪುಸ್ತಕಗಳನ್ನ ಕೊಟ್ಟು ಓದಲು ಹೇಳುವುದು. ಹೌದು. ಅವರು ಪ್ರತಿ ಬಾರಿ ಅವರ ಆಪ್ತರು ಮಠದ ಹಿರಿಯ ಭಕ್ತರು ಸಾಮಾನ್ಯ ಜನರು ಮಠಕ್ಕೆ ಬಂದರೆ ಅವರಿಗೆ ತಮ್ಮಲ್ಲಿರುವ ಪುಸ್ತಕ ಕೊಟ್ಟು ಅಲ್ಲಿಯೇ ಓದಲಿಕ್ಕೆ ಹೇಳುತ್ತಿದ್ದರು. ದೇಶಕ್ಕೆ ಸಂಬಂಽಸಿದ, ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳು ಅವರಲ್ಲಿ ಬಹಳ ಇದ್ದವು. ಅವುಗಳನ್ನ ಅವರಾಗಲೇ ಓದಿ ಮುಖ್ಯವಾದ ವಾಕ್ಯಗಳ ಕೆಳಗೆ ಗೆರೆಗಳನ್ನು ಹಾಕುತ್ತಿದ್ದರು. ಅದನ್ನ ಓದುವಾಗ ‘ಆ ವಾಕ್ಯವನ್ನ ಗಮನಿಸು’ ಎನ್ನುತ್ತಿದ್ದರು.

ನಾನೇ ಅನೇಕ ಸಮಯ ಶ್ರೀಗಳ ಮುಂದೆ ಅವರು ನೀಡಿದ ಪುಸ್ತಕಗಳನ್ನು ಓದಿದ್ದೇನೆ. ‘ಪುಸ್ತಕ ಜ್ಞಾನದ ಕಣಜ. ನಾವು ಅಧ್ಯಯನ ನಡೆಸಿದಂತೆಲ್ಲಾ ನಮ್ಮ ಮಾತುಗಳ ತೂಕ ಹೆಚ್ಚುತ್ತದೆ. ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ’ ಎಂದು ಶ್ರೀಗಳು ಹೇಳುತ್ತಿದ್ದರು