Thursday, 19th September 2024

ರಾಷ್ಟ್ರಸೇವೆಗೆ ಸಮರ್ಪಿಸಿಕೊಂಡ ಪ್ರಖರ ವಾಗ್ಮಿ, ಚಿಂತಕ, ಸಂಘಟಕ ದತ್ತಾತ್ರೇಯ ಹೊಸಬಾಳೆ

ಶಶಾಂಕ್ ಮುದೂರಿ

ಕನ್ನಡಿಗ ಸ್ವಯಂಸೇವಕನಿಗೆ ಉನ್ನತ ಜವಾಬ್ದಾರಿಯ ಗೌರವ

ಮಲೆನಾಡಿನ ಮೂಲೆಯಲ್ಲಿ ಜನಿಸಿ, ಹಳ್ಳಿಯ ಶಾಲೆಯಲ್ಲೇ ಆರಂಭಿಕ ಶಿಕ್ಷಣ ಪಡೆದ ದತ್ತಾತ್ರೇಯ ಹೊಸಬಾಳೆಯವ ರಿಗೆ ಹೊಸ ಜವಾಬ್ದಾರಿ, ಗೌರವ. ಶಿವಮೊಗ್ಗ ಜಿಲ್ಲೆಯ ಸೊರಬದವರಾದ ಇವರು ತಮ್ಮನ್ನು ತಾವು ದೇಶಸೇವೆಗೆ ಸಮರ್ಪಿಸಿಕೊಂಡ ಪರಿಯೇ ವಿಶಿಷ್ಟ. ಈ ಪ್ರಖರ ವಾಗ್ಮಿಯು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯ ವಾಹರಾಗಿ ನಿಯುಕ್ತರಾಗಿರುವ ವಿಚಾರವು ಸಂಚಲನವನ್ನೇ ಮೂಡಿಸಿದೆ. ಮೂರು ವರ್ಷಗಳ ಅವಧಿಯ ಈ ಹುದ್ದೆಯು ಬಹು ಜವಾಬ್ದಾರಿಯುತ ಎನಿಸಿದ್ದು, ಸಂಘದ ಉನ್ನತ ಹುದ್ದೆಯಾದ ಸರಸಂಘಚಾಲಕರ ಹುದ್ದೆಯ ನಂತರದ ಸ್ಥಾನ ಹೊಂದಿದೆ. ಇಂತಹ ಉನ್ನತ ಜವಾಬ್ದಾರಿಯ ಗೌರವಕ್ಕೆ ಭಾಜನರಾಗಿರುವ ದತ್ತಾತ್ರೇಯ ಹೊಸಬಾಳೆ ಅವರಿಗೆ ವಿಶ್ವ ವಾಣಿಯ ಹಾರ್ದಿಕ ಅಭಿನಂದನೆಗಳು. ಇವರ ಬದುಕಿನ ಕೆಲವು ಮಹತ್ವದ ಹೆಜ್ಜೆ ಗುರುತುಗಳನ್ನು ಇಲ್ಲಿ ದಾಖಲಿಸ ಲಾಗಿದೆ.

ಜೂನ್ 25, 1975ನೆಯ ಇಸವಿ. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ, ಮಧು ದಂಡವತೆ ಮೊದಲಾದ ನಾಯಕರು ಬೆಂಗಳೂರಿಗೆ ಬಂದಿದ್ದರು. ಉದ್ದೇಶ -ಸಂಸದೀಯ ಸಭೆ. ಅದೇ ಮಧ್ಯರಾತ್ರಿ, ದೂರದ ದೆಹಲಿಯಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಿದರು. ಪ್ರಧಾನಿಯವರ ಸಲಹೆಯ ಮೇರೆಗೆ ರಾಷ್ಟ್ರಪತಿಯವರು ಆಂತರಿಕ ತುರ್ತುಸ್ಥಿತಿ ಹೇರಿದ್ದೇ ತಡ – ದೇಶದಾದ್ಯಂತ ಪ್ರಮುಖ ನಾಯಕರ ಬಂಧನದ ಸರಮಾಲೆಯೇ ಆರಂಭವಾಯಿತು.

ಮರುದಿನ, ಅಂದರೆ ಜೂನ್ 26ರಂದು ಚುಮು ಚುಮು ನಸುಕಿನ ಮುಂಜಾನೆ. ಬೆಳಗಿನ 6 ಗಂಟೆಗೆ, 21 ವರ್ಷ ವಯಸ್ಸಿನ ಓರ್ವ ತರುಣನು ಚುರುಕಾಗಿ ನಡೆಯುತ್ತಾ ಬಂದ. ವಾಜಪೇಯಿ, ಅಡ್ವಾಣಿ ಮೊದಲಾದವರನ್ನು ಭೇಟಿ ಮಾಡಿ, ದೇಶಕ್ಕೆ ಎರಗಿದ ತುರ್ತು ಪರಿಸ್ಥಿತಿಯ ವಿಚಾರವನ್ನು ಮೊದಲಿಗೆ ತಿಳಿಸಿದ್ದೇ ಆ ಯುವಕ. ಅವರು ಬೇರಾರು ಅಲ್ಲ, ದತ್ತಾತ್ರೇಯ ಹೊಸಬಾಳೆ.
ಸಂಘದ ಪ್ರಮುಖ ನಾಯಕರಿಗೆ ತುರ್ತುಪರಿಸ್ಥಿತಿಯ ವಿಚಾರವನ್ನು ತಿಳಿಸಿದ ಹೊಸಬಾಳೆಯವರು, ಹೋರಾಟವನ್ನು ಮುಂದುವರಿಸುವ ದೃಷ್ಟಿಯಿಂದ ಭೂಗತರಾದರು. ಅಂದಿನ ಪರಿಸ್ಥಿಿತಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಲವು ಯುವಕರು, ನಾಯಕರು ಭೂಗತರಾಗಿದ್ದುಕೊಂಡೇ ಹೋರಾಟ ನಡೆಸುವ ನಿರ್ಧಾರ ಕೈಗೊಂಡಿದ್ದರು.

ತುರ್ತುಪರಿಸ್ಥಿತಿಯ ಆ ಕರಾಳ ದಿನಗಳಲ್ಲಿ ವಾಕ್ ಸ್ವಾತಂತ್ರ್ಯ ಇರಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಇರಲಿಲ್ಲ. ಯಾರನ್ನು ಬೇಕಾದರೂ ಬಂಧನದಲ್ಲಿರಿಸುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿತ್ತು. ಕೇಂದ್ರ ಸರಕಾರದ ನಿರ್ದೇಶನದಂತೆ, ಲಕ್ಷಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು. ಇಂದಿರಾಗಾಂಧಿಯವರ ಸರಕಾರದ ವೈಫಲ್ಯತೆ ಮತ್ತು ದುರಾಡಳಿತದ ವಿರುದ್ಧ
ಜನಾಂದೋಲನವನ್ನು ರೂಪಿಸುವ ನಾಯಕತ್ವವನ್ನು ವಹಿಸಿದ ಜಯಪ್ರಕಾಶ ನಾರಾಯಣ್ ಅವರನ್ನು ಸಹ ಬಂಧಿಸಲಾಗಿತ್ತು.

ಭೂಗತ ಹೋರಾಟ 
ಇಂತಹ ದುರ್ಭರ ಸನ್ನಿವೇಶದ ವಿರುದ್ಧ ಹೋರಾಡಲು ಭೂಗತರಾದ ಹೊಸಬಾಳೆಯವರು, ರಹಸ್ಯವಾಗಿ ಜನಸಂಘಟನೆಗೆ ತೊಡಗಿಕೊಂಡರು. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ, ಪತ್ರಿಕಾ ಸೆನ್ಸಾರ್‌ನಿಂದ ಜನರಿಂದ ಮುಚ್ಚಿಟ್ಟಿದ್ದ ಮಾಹಿತಿಯನ್ನು ಜನರಿಗೆ ತಲುಪಿಸುವುದಕ್ಕಾಗಿ ಹೋರಾಡಿದರು. ದೇಶದ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿದ್ದ ಪೊಲೀಸ್
ದಬ್ಬಾಳಿಕೆ, ಆಡಳಿತ ಯಂತ್ರದ ಅಟ್ಟಹಾಸದ ವಿವರಗಳನ್ನು ತಲುಪಿಸುವುದು ಈ ಹೋರಾಟದ ಒಂದು ಅಂಗ ಎನಿಸಿತ್ತು. ಆದರೆ ಸರಕಾರದ ಹಿಡಿತ ಬಿಗಿಯಾಗಿತ್ತು. ಕೆಲವೇ ದಿನಗಳಲ್ಲಿ ವಿಶೇಷಾಧಿಕಾರ ಹೊಂದಿದ್ದ ಪೊಲೀಸರ ಕಣ್ಣು ಇವರ ಮೇಲೆ ಬಿತ್ತು. 18.12.1975ರಂದು ಮೀಸಾ ಕಾಯಿದೆಯಡಿ ಹೊಸಬಾಳೆಯವರನ್ನು ಬಂಧಿಸಲಾಯಿತು.

ತುರ್ತುಪರಿಸ್ಥಿತಿಯ ಆ ಕರಾಳ ಶಾಸನದ ವ್ಯಾಪ್ತಿಯಲ್ಲಿ ಬಂಧನಕ್ಕೆ ಒಳಗಾದಾಗ ದತ್ತಾತ್ರೇಯ ಹೊಸಬಾಳೆಯವರಿಗೆ ಕೇವಲ 21 ವರ್ಷ! ಮೊದಲ ಏಳು ತಿಂಗಳ ಕಾಲ ಅವರನ್ನು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಇಡಲಾಗಿತ್ತು. ಆಗ ಆಡ್ವಾಣಿ, ವಾಜಪೇಯಿ ಮೊದಲಾದವರ ನಿರಂತರ ಸಂಪರ್ಕ, ಮಾರ್ಗದರ್ಶನ. ನಂತರ ಹೊಸಬಾಳೆಯವರನ್ನು ಬಳ್ಳಾರಿಯ ಜೈಲಿಗೆ ಸ್ಥಳಾಂತರಿಸ ಲಾಯಿತು. ಹದಿನಾಲ್ಕು ತಿಂಗಳುಗಳ ಬಂಧನದ ನಂತರ, 1977ರ ಫೆಬ್ರವರಿಯಲ್ಲಿ ಲೋಕಸಭಾ ಚುನಾವಣೆಯ ಘೋಷಣೆಯ ನಂತರ, ಎಲ್ಲಾ ನಾಯಕರ ಜತೆ ಹೊಸಬಾಳೆಯವರನ್ನು ಸಹ ಬಿಡುಗಡೆ ಮಾಡಲಾಯಿತು. ಆ ನಂತರ ಇವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಪೂರ್ಣಾವಧಿ ಕಾರ್ಯಕರ್ತರಾದರು.

ಪ್ರತಿಭಾವಂತ ತರುಣ
ತಮ್ಮ ಜೀವನವನ್ನು ದೇಶ ಕಟ್ಟಲು ಮತ್ತು ಸಂಘದ ಸೇವೆಗಾಗಿ ಸಮರ್ಪಿಸಿಕೊಂಡಿರುವ ದತ್ತಾತ್ರೇಯ ಹೊಸಬಾಳೆಯವರು ಮನಸ್ಸು ಮಾಡಿದ್ದರೆ ವಿಶ್ವವಿದ್ಯಾಲಯವೊಂದರಲ್ಲಿ ಹಿರಿಯ ಪ್ರೊಫೆಸರ್ ಆಗಿಯೋ, ಸರಕಾರದ ಉನ್ನತ ಅಧಿಕಾರಿಯಾಗಿಯೋ ಕಾರ್ಯನಿರ್ವಹಿಸುತ್ತಾ, ನೆಮ್ಮದಿಯ ಜೀವನ ನಡೆಸಬಹುದಿತ್ತು. ಅದಕ್ಕೆೆ ಅಗತ್ಯ ಎನಿಸಿದ ಎಂ.ಎ. ಪದವಿಯ ತಳಪಾಯ
ಅವರಿಗಾಗಲೇ ಲಭಿಸಿತ್ತು. ಆದರೆ ಅವರು ನೆಮ್ಮದಿ ಕಂಡುಕೊಂಡಿದ್ದು ದೇಶಸೇವೆಯಲ್ಲಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೆಲಸಗಳಲ್ಲಿ.

1954ರಲ್ಲಿ ಮಲೆನಾಡಿನ ಹೃದಯ ಎನಿಸಿದ ಸೊರಬದಲ್ಲಿ ಜನಿಸಿದ ದತ್ತಾತ್ರೇಯ ಹೊಸಬಾಳೆಯವರು, 1970ರಲ್ಲಿ ಉನ್ನತ ಅಂಕಗಳೊಂದಿಗೆ ಎಸ್ ಎಸ್‌ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಸೊರಬದ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಅವರಿಗೆ ಅಂದಿನ ರಾಷ್ಟ್ರೀಯ ಮೆರಿಟ್ ಸ್ಕಾಲರ್ ಶಿಪ್‌ನ ಗೌರವ. 1970ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ
ಅಧ್ಯಯನ ನಡೆಸಿ, 1974ರಲ್ಲಿ ಬಿಎ (ಆನರ್ಸ್) (ಇಂಗ್ಲಿಷ್) ಪದವಿ ಪಡೆದರು.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ. ತರಗತಿಗೆ ಸೇರ್ಪಡೆಗೊಂಡರು. ಅಂದಿನ ದಿನಗಳಲ್ಲಿ ಎಂ.ಎ. ಓದಿದ ಬಹಳಷ್ಟು ಮಂದಿ ಲೆಕ್ಚರರ್ ವೃತ್ತಿ ಆರಂಭಿಸುವ ಪರಿಪಾಠ. ಹಾಗೆಯೇ ಮುಂದುವರಿದು ಪ್ರೊಫೆಸರ್ ಆಗುವ ಅವಕಾಶ. ಉತ್ತಮ ಸಂಬಳ ತರುವ ವೃತ್ತಿಯೊಂದನ್ನು ಪಡೆಯಲು ಅದಾಗಲೇ ಎಂ.ಎ. ಅಧ್ಯಯನದ ಬುನಾದಿ ಹೊಸಬಾಳೆಯವರಿಗೆ ದೊರಕಿತ್ತು.

ದೇಶ ಸೇವೆಯತ್ತ ಆಸಕ್ತಿ
ಆದರೆ ದತ್ತಾತ್ರೇಯ ಹೊಸಬಾಳೆಯವರ ಆಸಕ್ತಿಯೇ ವಿಭಿನ್ನ, ವಿಶಿಷ್ಟ. ಮೊದಲಿನಿಂದಲೂ ದೇಶಾಭಿಮಾನ, ದೇಶ ಸೇವೆ ಅವರ ಆತ್ಮೀಯ ಮೊದಲ ಆಯ್ಕೆ. 1974ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ. ಓದುತ್ತಿರುವಾಗಲೇ, ಲೋಕನಾಯಕ ಜಯಪ್ರಕಾಶ ನಾರಾಯಣರ ಕರೆಗೆ ಓಗೊಟ್ಟರು. ಜೆ.ಪಿ. ಆಂದೋಲನ ಅಥವಾ ನವ ನಿರ್ಮಾಣ ಆಂದೋಲನ ಎಂಬ ಹೆಸರಿನ ಆ ಒಂದು
ಹೋರಾಟವು ದೇಶದ ಭವಿಷ್ಯವನ್ನು ಕಾಯುವ ಉದ್ದೇಶ ಹೊಂದಿತ್ತು, ದುರಾಡಳಿತದ ಬಾಹುಗಳಿಂದ ದೇಶವನ್ನು ರಕ್ಷಿಸುವ ಧ್ಯೇಯವನ್ನು ಹೊಂದಿತ್ತು.

ಆ ದಿನಗಳಲ್ಲಿ ಸಂಪೂರ್ಣ ವೈಫಲ್ಯತೆ ಕಂಡ ಕೇಂದ್ರ ಸರಕಾರದ ಆಡಳಿತದ ವಿರುದ್ಧ ನೀಡಿದ ಜೆ.ಪಿ.ಯವರ ಆಂದೋಲನ ಅದು. ಜೆ.ಪಿ. ಯವರ ಕರೆಯಂತೆ, ತಮ್ಮ ಎಂ.ಎ.ಓದನ್ನು ತೊರೆದು, ಹೋರಾಟದಲ್ಲಿ ಧುಮುಕಿದ ದತ್ತಾತ್ರೇಯ ಹೊಸಬಾಳೆಯವರು  ಸಹಜವಾಗಿಯೇ ಸರಕಾರದ ಗೂಢಚಾರರ ಕಣ್ಣಿಗೆ ಬಿದ್ದಿದ್ದರು. ತುರ್ತುಪರಿಸ್ಥಿತಿಯ ವಿರುದ್ಧ ಭೂಗತರಾಗಿದ್ದುಕೊಂಡೇ
ಹೋರಾಟವನ್ನು ನಡೆಸಿದ್ದರಿಂದಾಗಿ, ಹೊಸಬಾಳೆಯವರು ಬಂಧನಕ್ಕೆ ಒಳಗಾಗಬೇಕಾಯಿತು.

ತುರ್ತುಪರಿಸ್ಥಿತಿಯ ಕಾರ್ಮೋಡಗಳ ತೆರೆ ಸರಿದ ನಂತರ, ಜೈಲಿನಿಂದ ಹೊರಬಂದು, ಪುನಃ 1977ರಲ್ಲಿ ಎಂ.ಎ. ತರಗತಿಗೆ ಸೇರಿದ ಹೊಸಬಾಳೆಯವರು ಅದನ್ನು ಸಂಪೂರ್ಣಗೊಳಿಸಿದ್ದು ಬೇರೆ ಮಾತು. ತುರ್ತುಪರಿಸ್ಥಿತಿಯ ಸಮಯದಲ್ಲಿ ಜೈಲು ವಾಸದ ಕಠಿಣ ದಿನಗಳನ್ನು ಅನುಭವಿಸಬೇಕಾದ ತೊಂದರೆಗೆ ಒಳಗಾದರೂ, ಅಂದು ದೊರೆತ ಸಂಘದ ಹಿರಿಯ ನಾಯಕರ ಪರಿಚಯ, ಒಡನಾಟ, ಗೆಳೆತನವು ಅವರ ಮುಂದಿನ ಸೇವೆಗೆ ಮಾರ್ಗದರ್ಶನ ನೀಡಿದ್ದೂ ನಿಜ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿದ್ದುಕೊಂಡು, ವಿವಿಧ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಹೊಸಬಾಳೆಯವರು ಉತ್ತಮ ವಾಗ್ಮಿ. ದೇಶದ ಪ್ರಚಲಿತ ಸನ್ನಿವೇಶಗಳನ್ನು ಐತಿಹಾಸಿಕ ಹಿನ್ನೆಲೆಯಲ್ಲಿ, ಭವಿಷ್ಯದ ಮುನ್ನೆಲೆಯಲ್ಲಿ ಅವರು ವಿಶ್ಲೇಷಿಸುವ ಪರಿಯೇ ವಿಶಿಷ್ಟ ಅನನ್ಯ.

ಸಂಘದ ಕಾರ್ಯಗಳಿಗಾಗಿ ತಮ್ಮ ವೈಯಕ್ತಿಕ ಜೀವನವನ್ನೇ ಮೀಸಲಿಟ್ಟಿರುವ ದತ್ತಾತ್ರೇಯ ಹೊಸಬಾಳೆಯವರದು ಧೀಮಂತ ವ್ಯಕ್ತಿತ್ವ. ಆಕರ್ಷಕವಾಗಿ ಮತ್ತು ವಿದ್ವತ್ಪೂರ್ಣವಾಗಿ ಭಾಷಣ ಮಾಡಬಲ್ಲ ಹೊಸಬಾಳೆಯವರಲ್ಲಿ ನಾಯಕತ್ವದ ಗುಣವು ವ್ಯಕ್ತಿಗತವಾಗಿ ಅಡಕಗೊಂಡಿದೆ. ಅಂತಹ ಶಕ್ತಿಯನ್ನು ದೇಶಸೇವೆಗೆ ಮೀಸಲಿಟ್ಟಿರುವ ಹೊಸಬಾಳೆಯವರು, ಯುವಕರಿಗೆ
ಮಾರ್ಗದರ್ಶನ ನೀಡುವ ಪರಿಯೇ ವಿಶಿಷ್ಟ.

ಭಾರತದ ಉದ್ದಗಲಕ್ಕೂ ಸಂಚಾರ
ದತ್ತಾತ್ರೇಯ ಹೊಸಬಾಳೆಯವರು ತಮ್ಮ ವಿವಿಧ ಜವಾಬ್ದಾರಿಗಳ ನಿರ್ವಹಣೆಯ ಸಂದರ್ಭದಲ್ಲಿ, ಭಾರತದ ಉದ್ದಗಲಕ್ಕೂ ಓಡಾಡಿದ್ದಾರೆ, ದೇಶದ ಎಲ್ಲ ರಾಜ್ಯಗಳಲ್ಲಿ ಸಂಚರಿಸಿದ್ದಾರೆ. ಬೆಂಗಳೂರು, ಮುಂಬಯಿ, ಗುವಾಹಟಿ, ಪಟನಾ ಮೊದಲಾದ ಪ್ರದೇಶಗಳಲ್ಲಿ ಹಲವು ವರ್ಷ ವಾಸಿಸಿದ್ದಾರೆ. ಈಗ ಉತ್ತರ ಪ್ರದೇಶದ ಲಕ್ನೋ ನಗರ ಅವರ ಕಾರ್ಯಕೇಂದ್ರ. ಇದರ ಜತೆಯಲ್ಲೇ ಯುಎಸ್, ನೇಪಾಳ, ರಷ್ಯಾ, ಯುಕೆ, ಯುರೋಪಿನ ಇತರ ದೇಶಗಳು, ಮ್ಯಾನ್ಮಾರ್‌, ಕೀನ್ಯಾ ಮೊದಲಾದ ದೇಶಗಳಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿರುವ ದತ್ತಾತ್ರೇಯ ಹೊಸಬಾಳೆಯವರು, ವಿಶ್ವದ ವಿವಿಧ ಪ್ರದೇಶಗಳ ಕುರಿತು ಅಪೂರ್ವ ಒಳನೋಟ ಹೊಂದಿದ್ದಾರೆ.

ಉತ್ತಮ ವಾಗ್ಮಿ 
ಸೊರಬದ ಹೊಸಬಾಳೆ ಶೇಷಗಿರಿಯಪ್ಪ ಮತ್ತು ಮೀನಾಕ್ಷಮ್ಮ ಅವರ ಏಳು ಮಕ್ಕಳಲ್ಲಿ ಒಬ್ಬರಾದ ದತ್ತಾತ್ರೇಯ ಅವರಿಗೆ ಜ್ಞಾನ ಸಂಗ್ರಹಣೆಯು ಹೆತ್ತವರಿಂದ ಬಂದ ಬಳುವಳಿ ಎಂದೂ ಹೇಳಬಹುದು. ಅವರ ತಾಯಿ ಮೀನಾಕ್ಷಮ್ಮನವರು ಕಸೂತಿ ಕಲಾವಿದೆ,
ಪರಂಪರಾಗತ ಔಷಧ ಅರಿತವರು ಮತ್ತು ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿದ್ದರು.

ಅದೇ ಕೌಶಲವನ್ನು ಸಂಘಟನೆ, ಜ್ಞಾನ ಸಂಪಾದನೆ ಮತ್ತು ವಿಶ್ಲೇಷಣೆಗಳಲ್ಲಿ ಅಳವಡಿಸಿಕೊಂಡಿರುವ ದತ್ತಾತ್ರೇಯ ಅವರು, ಇಂದಿನ ಸಾಮಾಜಿಕ ಸಮಸ್ಯೆೆಯನ್ನು ಐತಿಹಾಸಿಕ ಮತ್ತು ಸಮಕಾಲೀನ ವಾಸ್ತವಗಳಿಗೆ ಸಮೀಕರಿಸಿ ವಿಶ್ಲೇಷಣೆ ಮಾಡಬಲ್ಲರು.
ಹಿರಿಯರೊಂದಿಗೆ ಚರ್ಚಿಸುವ ರೀತಿಯಲ್ಲೇ, ಹದಿ ಹರೆಯದವರೊಂದಿಗೆ ಸಹ ಲವಲವಿಕೆಯಿಂದ ಸಂವಾದ ನಡೆಸಬಲ್ಲರು. ಸಮಕಾಲೀನ ಸಾಮಾಜಿಕ ಸಂಗತಿಗಳ ಬಗ್ಗೆ ಪಾಂಡಿತ್ಯಪೂರ್ಣವಾಗಿ ಮಾತನಾಡಬಲ್ಲ ದತ್ತಾತ್ರೇಯ ಹೊಸಬಾಳೆಯವರು ಪ್ರಭಾವಶಾಲಿ ಭಾಷಣಕಾರರು.

ಲೇಖಕ, ಸಂಪಾದಕರಾಗಿ ಹೊಸಬಾಳೆ ಬಿ.ಎ. ಆನರ್ಸ್ ಪದವಿಯಲ್ಲಿ ಇಂಗ್ಲಿಷ್ ಆಯ್ಕೆ ಮಾಡಿಕೊಂಡಿದ್ದ ದತ್ತಾತ್ರೇಯ ಹೊಸಬಾಳೆಯವರು ಉತ್ತಮ ವಾಗ್ಮಿ ಮತ್ತು ಲೇಖಕರು. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹಲವು ಚಿಂತನಾ ಪ್ರಧಾನ ಲೇಖನಗಳನ್ನು ಬರೆದಿದ್ದಾರೆ. ಅವರು ‘ಅಸೀಮಾ’ ಕನ್ನಡ ಮಾಸ ಪತ್ರಿಕೆಯ ಸ್ಥಾಪಕ ಸಂಪಾದಕರು.

ತುರ್ತುಪರಿಸ್ಥಿತಿಯ ಉಸಿರುಕಟ್ಟುವ ಮತ್ತು ಘೋರ ಅನುಭವಗಳನ್ನು ಸಂಪಾದಿಸಿ, ಪುಸ್ತಕ ರೂಪದಲ್ಲಿ ಹೊರತರುವಲ್ಲಿ ಹೊಸಬಾಳೆಯವರದು ಪ್ರಮುಖ ಪಾತ್ರ. ಹೊ.ವೆ.ಶೇಷಾದ್ರಿ ಅವರ ಸಂಪಾದಕತ್ವದಲ್ಲಿ ಹೊರಬಂದ ‘ಭುಗಿಲು’ ಪುಸ್ತಕದ ಸಂಪಾದನಾ ತಂಡದಲ್ಲಿ ಹೊಸಬಾಳೆಯವರು ಕಾರ್ಯನಿರ್ವಹಿಸಿದ್ದಾರೆ.

ಎಬಿವಿಪಿಯಿಂದ ಸಂಘಕ್ಕೆ 
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನೊಂದಿಗೆ ಹೊಸಬಾಳೆ ಅವರ ಸಂಬಂಧ ಅಪೂರ್ವವಾದುದು. ಎಬಿವಿಪಿಯನ್ನು ದೇಶಾದ್ಯಂತ ಒಂದು ಗಟ್ಟಿ ವಿದ್ಯಾರ್ಥಿ ಸಂಘಟನೆಯಾಗಿ ರೂಪಿಸಿದವರು ಹೊಸಬಾಳೆಯವರು. ಎಬಿವಿಪಿಗೆ ಸೈದ್ಧಾಂತಿಕ ನೆಲೆಗಟ್ಟನ್ನು ರೂಪಿಸಿ, ಅದನ್ನು ಶಕ್ತಿಶಾಲಿ ಮತ್ತು ವಿಚಾರಶೀಲ ಸಂಘಟನೆ ಯನ್ನಾಗಿ ಕಟ್ಟುವಲ್ಲಿ ಅವರ ಕೊಡುಗೆ ಅನನ್ಯ ವಾದುದು. ಎಬಿವಿಪಿಯಲ್ಲಿ ಅವರು ತೋರಿದ ಅಪ್ರತಿಮ ಸಂಘಟನಾ ಕೌಶಲವನ್ನು ಪರಿಗಣಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರು, ಅವರನ್ನು ಸಂಘಕ್ಕೆ ಕರೆಯಿಸಿಕೊಂಡರು.

ಸಾಮಾನ್ಯವಾಗಿ ಸಂಘದಿಂದ ಪರಿವಾರದ ಬೇರೆಬೇರೆ ಸಂಘಟನೆಗಳಿಗೆ ಕಳುಹಿಸಿಕೊಡುವುದು ಸಂಪ್ರದಾಯ. ಆದರೆ ಹೊಸಬಾಳೆ ಅವರ ವ್ಯಕ್ತಿತ್ವವನ್ನು ನೋಡಿ, ಅಂದಿನ ಸರಸಂಘಚಾಲಕರು, ಎಬಿವಿಪಿಯಿಂದ ಸಂಘಕ್ಕೆ ಕರೆಯಿಸಿಕೊಂಡಿದ್ದು ಒಂದು ಅಪರೂಪದ ನಡೆ. ಆದಾದ ಬಳಿಕ ಹೊಸಬಾಳೆಯವರು, ತಮಗೆ ವಹಿಸಿದ ಸಂಘದ ವಿವಿಧ ಜವಾಬ್ದಾರಿಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತ ಬಂದರು.

ಕಳೆದ ಒಂದೂವರೆ ದಶಕದಲ್ಲಿ ರಾಷ್ಟ್ರೀಯ ವಿಚಾರಗಳ ಬಗ್ಗೆ ಒಂದಿಲ್ಲೊಂದು ರೀತಿಯಲ್ಲಿ ಹೊಸಬಾಳೆ ಅವರ ವೈಚಾರಿಕ  ಕೊಡುಗೆ ಇದ್ದೇಇದೆ. ಸರಸಂಘಚಾಲಕರ ನಂತರ ಸಂಘದ ಎರಡನೇ ಮಹತ್ವದ ಜವಾಬ್ದಾರಿಯುತ ಹುದ್ದೆಗೆ ನಿಯುಕ್ತರಾಗಿರುವ  ಹೊಸಬಾಳೆ ಅವರು, ಈ ಹುದ್ದೆಗೆ ಏರಿರುವ ಎರಡನೇ ಕನ್ನಡಿಗರಾಗಿದ್ದಾರೆ. ಈ ಜವಾಬ್ದಾರಿಗೆ ಮೊದಲ ಬಾರಿಗೆ ನಿಯುಕ್ತ ರಾದವರು ಹೊ.ವೆ.ಶೇಷಾದ್ರಿಯವರು.

Leave a Reply

Your email address will not be published. Required fields are marked *