Vishwavani Editorial: ಇದು ಶ್ಲಾಘನೀಯ ನಡೆ
ಈಶಾನ್ಯ ಭಾರತದಲ್ಲಿ ಕೆಲ ತಿಂಗಳ ಹಿಂದೆ ಕಂಡು ಬಂದ ಹಿಂಸಾಚಾರ, ಕೋಮುದಳ್ಳುರಿ ಹಾಗೂ ಇತ್ತೀಚೆಗೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ‘ವಕ್ಫ್ ತಿದ್ದುಪಡಿ ಕಾಯಿದೆ’ಯನ್ನು ವಿರೋಧಿ ಸುವ ನೆಪದಲ್ಲಿ ತಾರಕಕ್ಕೇರಿದ ಗಲಭೆ ಮತ್ತು ಹಿಂಸಾಚಾರಗಳ ನೇಪಥ್ಯದಲ್ಲಿ ಇಂಥ ಕುತ್ಸಿತ ಶಕ್ತಿಗಳ ಸಂಚು, ಪೂರ್ವಸಿದ್ಧತೆ ಇದ್ದುದನ್ನು ತಳ್ಳಿಹಾಕಲಾಗದು.


ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ನಡೆ ಎನ್ನಲಡ್ಡಿಯಿಲ್ಲ. ಕಾರಣ, ಮುಂಬೈ ಬಾಂಬ್ ಸ್ಫೋಟ ಸೇರಿದಂತೆ ದೇಶದ ವಿವಿಧೆಡೆ ವಿವಿಧ ಕಾಲಘಟ್ಟಗಳಲ್ಲಿ ನಡೆದಿರುವ ವಿಧ್ವಂಸಕ ಕೃತ್ಯಗಳನ್ನು ಒಮ್ಮೆ ನೆನಪಿಗೆ ತಂದುಕೊಂಡರೆ, ಅವು ಏಕಾಏಕಿಯಾಗಿ ಅಪ್ರಚೋದಿತವಾಗಿ ನಡೆದ ಘಟನೆಗಳಲ್ಲ, ದುರುಳರು ಇವಕ್ಕಾಗಿ ಸಾಕಷ್ಟು ಕಾಲದವರೆಗೆ ತಯಾರಿ ಮಾಡಿಕೊಂಡಿದ್ದರು ಎಂಬ ಸಂಗತಿಯ ಎಳೆ ಬಿಚ್ಚಿ ಕೊಳ್ಳುತ್ತಾ ಹೋಗುತ್ತದೆ.
ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹತ್ಯಾಕಾಂಡವೂ ಇಂಥ ಸುದೀರ್ಘ ಸಿದ್ಧತೆಯ ಫಲವಾಗಿ ಜರುಗಿದ ಅಪಸವ್ಯವೇ. ಕಣಿವೆ ರಾಜ್ಯದಲ್ಲಿ ಜಾರಿಯಲ್ಲಿದ್ದ 370ನೇ ವಿಧಿಯನ್ನು ರದ್ದು ಗೊಳಿಸಿದ ನಂತರ ಅಲ್ಲಿನ ಒಟ್ಟಾರೆ ಸಾಮಾಜಿಕ ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿತ್ತು ಮತ್ತು ಪ್ರವಾಸೋದ್ಯಮವು ಹುಲುಸಾಗಿ ಬೆಳೆದಿತ್ತು.
ಇದನ್ನೂ ಓದಿ: Vishwavani Editorial: ಇದು ನಮ್ಮವರಿಗೆ ಪಾಠವಾಗಬೇಕು
ಅಂತೆಯೇ, ಅಲ್ಲಿಗೆ ವಿಹರಿಸಲೆಂದು ತೆರಳುವ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳ ವಾಗಿತ್ತು. ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂಬ ಎಣಿಕೆಯಲ್ಲಿ ಒಂದೆಡೆ ಆಳುಗ ವ್ಯವಸ್ಥೆ ಯಿದ್ದರೆ, ಮತ್ತೊಂದೆಡೆ ಈ ಸಕಾರಾತ್ಮಕ ಬೆಳವಣಿಗೆಯಿಂದಾಗಿ ಕಣ್ಣು ಕೆಂಪುಮಾಡಿಕೊಂಡ ಕುತ್ಸಿತ ಶಕ್ತಿಗಳು ಸಾಕಷ್ಟು ಸಿದ್ಧತೆ ಮಾಡಿಕೊಂಡು, ವೇಷ ಬದಲಿಸಿಕೊಂಡು ಪ್ರವಾಸಿಗರ ಮೇಲೆ ಎರಗಿ ಅವರ ಪ್ರಾಣಕ್ಕೆ ಸಂಚಕಾರ ತಂದರು ಎಂಬುದನ್ನು ಮರೆಯಲಾಗದು. ಈಶಾನ್ಯ ಭಾರತದಲ್ಲಿ ಕೆಲ ತಿಂಗಳ ಹಿಂದೆ ಕಂಡು ಬಂದ ಹಿಂಸಾಚಾರ, ಕೋಮುದಳ್ಳುರಿ ಹಾಗೂ ಇತ್ತೀಚೆಗೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ‘ವಕ್ಫ್ ತಿದ್ದುಪಡಿ ಕಾಯಿದೆ’ಯನ್ನು ವಿರೋಧಿಸುವ ನೆಪದಲ್ಲಿ ತಾರಕಕ್ಕೇರಿದ ಗಲಭೆ ಮತ್ತು ಹಿಂಸಾಚಾರಗಳ ನೇಪಥ್ಯದಲ್ಲಿ ಇಂಥ ಕುತ್ಸಿತ ಶಕ್ತಿಗಳ ಸಂಚು, ಪೂರ್ವಸಿದ್ಧತೆ ಇದ್ದುದನ್ನು ತಳ್ಳಿಹಾಕಲಾಗದು.
ಇದು ದೇಶದ ಯಾವುದೇ ಭಾಗದಲ್ಲಾದರೂ ಮರುಕಳಿಸಬಹುದಾದ ಪರಿಸ್ಥಿತಿ. ಆದ್ದರಿಂದ ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಮೇಲೆ ಕಣ್ಣಿಡುವುದು ಸೇರಿದಂತೆ, ಇಂಥ ಸಂಚುಕೋರರನ್ನೂ ಜಾಲಾಡಬೇಕಿರುವುದು ಈ ಕ್ಷಣದ ಅನಿವಾರ್ಯತೆಯಾಗಿದೆ.