ಪಹಲ್ಗಾಮ್ ಭಯೋತ್ಪಾದಕ ದಾಳಿ; ಕಠಿಣ ಕ್ರಮ ಕೈಗೊಂಡ ಬಿಸಿಸಿಐ ಉಪಾಧ್ಯಕ್ಷ
Pahalgam terror attack: ಪಹಲ್ಗಾಮ್ ದಾಳಿ ಬಳಿಕ ಪಾಕ್ ಜತೆ ಕ್ರಿಕೆಟ್ ಆಡುವುದನ್ನೇ ಬಹಿಷ್ಕರಿಸಬೇಕೆಂಬ ಚರ್ಚೆ ಇನ್ನಷ್ಟು ತೀವ್ರಗೊಳ್ಳುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಂತೂ ಯಾವ ಕಾರಣಕ್ಕೂ ಪಾಕಿಸ್ತಾನದ ಜತೆಗೆ ಕ್ರಿಕೆಟ್ ಆಡಬಾರದು ಎಂಬ ರೋಷಾವೇಶದ ಅಭಿಪ್ರಾಯಗಳು ಪುಂಖಾನು ಪುಂಖವಾಗಿ ಹರಿದಾಡುತ್ತಿವೆ. ಹಲವು ಮಾಜಿ ಆಟಗಾರರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ(Pahalgam terror attack) ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಪಾಕಿಸ್ತಾನದ(IND vs PAK) ವಿರುದ್ಧ ಯಾವುದೇ ದ್ವಿಪಕ್ಷೀಯ(Bilateral Series) ಕ್ರಿಕೆಟ್ ಸರಣಿ ಆಡುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಸ್ಪಷ್ಟಪಡಿಸಿದ್ದಾರೆ.
'ನಾವು ಬಲಿಪಶುಗಳ ಜೊತೆಗಿದ್ದೇವೆ ಮತ್ತು ದಾಳಿಯನ್ನು ಖಂಡಿಸುತ್ತೇವೆ. ನಮ್ಮ ಸರ್ಕಾರ ಏನು ಹೇಳಿದರೂ ಅದನ್ನು ಮಾಡುತ್ತೇವೆ. ಸರ್ಕಾರದ ನಿಲುವಿನಿಂದಾಗಿ ನಾವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿಗಳಲ್ಲಿ ಆಡುವುದಿಲ್ಲ. ಆದರೆ ಐಸಿಸಿ ಟೂರ್ನಿಯಲ್ಲಿ ಪಾಕ್ ಜತೆ ನಾವು ಆಡುತ್ತೇವೆ. ಐಸಿಸಿಗೆ ಏನು ನಡೆಯುತ್ತಿದೆ ಎಂಬುದರ ಬಗ್ಗೆಯೂ ತಿಳಿದಿದೆ' ಎಂದು ಅವರು ಸ್ಪೋರ್ಟ್ಸ್ ಟಕ್ ಜತೆ ಮಾತನಾಡುವ ವೇಳೆ ರಾಜೀವ್ ಶುಕ್ಲಾ ಹೇಳಿದರು.
ಇತ್ತೀಚೆಗೆ ಪಾಕಿಸ್ಥಾನದಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ ಪಂದ್ಯವನ್ನು ವೀಕ್ಷಿಸಲು ಬಿಸಿಸಿಐ ಕಡೆಯಿಂದ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪಾಕ್‌ಗೆ ಭೇಟಿ ನೀಡಿದ್ದರು. ಈ ವೇಳೆ ಪಾಕ್ ಕ್ರಿಕೆಟ್ ಮಂಡಳಿ ಉಭಯ ತಂಡಗಳ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಬಗ್ಗೆ ಚರ್ಚೆ ನಡೆಸಿತ್ತು. ತಟಸ್ಥ ತಾಣದಲ್ಲಿ ಸರಣಿ ನಡೆಸುವಂತೆ ಮನವಿ ಮಾಡಿಕೊಂಡಿತ್ತು. ಹೀಗಾಗಿ ಮತ್ತೆ ಎರಡು ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ಆರಂಭವಾಗುವ ಸಾಧ್ಯತೆಯೊಂದು ಕಂಡು ಬಂದಿತ್ತು. ಆದರೆ ಇದೀಗ ಪಾಕ್ ಉಗ್ರ ದಾಳಿ ನಡೆಸಿದ ಪರಿಣಾಮ ದ್ವಿಪಕ್ಷೀಯ ಸರಣಿ ನಡೆಯುವುದು ಕಷ್ಟಸಾಧ್ಯ.
ಭಾರತ ಪಾಕಿಸ್ಥಾನ ನಡುವೆ 2013ರಿಂದ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಕೇವಲ ಐಸಿಸಿ ಟೂರ್ನಿಯಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಕಳೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯವನ್ನಾಡಲು ಭಾರತ ಪಾಕ್‌ಗೆ ತೆರಳದೆ ತನ್ನ ಪಂದ್ಯವನ್ನು ತಟಸ್ಥ ತಾಣವಾದ ದುಬೈನಲ್ಲಿ ಆಡಿತ್ತು.
ಇದನ್ನೂ ಓದಿ IPL 2025 Points Table: ದ್ವಿತೀಯ ಸ್ಥಾನದಲ್ಲೇ ಮುಂದುವರಿದ ಡೆಲ್ಲಿ ಕ್ಯಾಪಿಟಲ್ಸ್
ಪಹಲ್ಗಾಮ್ ದಾಳಿ ಬಳಿಕ ಪಾಕ್ ಜತೆ ಕ್ರಿಕೆಟ್ ಆಡುವುದನ್ನೇ ಬಹಿಷ್ಕರಿಸಬೇಕೆಂಬ ಚರ್ಚೆ ಇನ್ನಷ್ಟು ತೀವ್ರಗೊಳ್ಳುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಂತೂ ಯಾವ ಕಾರಣಕ್ಕೂ ಪಾಕಿಸ್ತಾನದ ಜತೆಗೆ ಕ್ರಿಕೆಟ್ ಆಡಬಾರದು ಎಂಬ ರೋಷಾವೇಶದ ಅಭಿಪ್ರಾಯಗಳು ಪುಂಖಾನು ಪುಂಖವಾಗಿ ಹರಿದಾಡುತ್ತಿವೆ. ಹಲವು ಮಾಜಿ ಆಟಗಾರರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.