RCB vs DC: ಡೆಲ್ಲಿ ಚಾಲೆಂಜ್ ಗೆದ್ದೀತೇ ಆರ್‌ಸಿಬಿ?
ಆರ್‌ಸಿಬಿ ಬೌಲಿಂಗ್ ವಿಭಾಗ ಸದ್ಯ ಉತ್ತವಾಗಿದೆ. ವೇಗಿಗಳಾದ ಭುವನೇಶ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಕೃಣಾಲ್ ಪಾಂಡ್ಯ, ಇಂಪ್ಯಾಕ್ಟ್ ಆಟಗಾರ ಸುಯಶ್ ಶರ್ಮ ತಕ್ಕ ಖ್ಯಾತಿಗೆ ತಕ್ಕ ಪ್ರದರ್ಶನ ತೋರುತ್ತಿದ್ದಾರೆ. ಹೀಗಾಗಿ ಇವರ ಮೇಲೆ ಈ ಪಂದ್ಯದಲ್ಲೂ ತಂಡ ನಂಬಿಕೆಯೊಂದನ್ನು ಇಟ್ಟಿದೆ.


ಬೆಂಗಳೂರು: ಆರ್‌ಸಿಬಿ, ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣ(M. Chinnaswamy Stadium)ದಲ್ಲಿ ಎರಡನೇ ಪಂದ್ಯವನ್ನಾಡಲು ಸಜ್ಜಾಗಿದೆ. ಗುರುವಾರ ಅಜೇಯ ಡೆಲ್ಲಿ ಕ್ಯಾಪಿಟಲ್ಸ್(RCB vs DC) ತಂಡದ ಸವಾಲು ಎದುರಿಸಲಿದೆ. ಗುಜರಾತ್ ವಿರುದ್ಧ ಇಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಆರ್‌ಸಿಬಿ ತವರಿನಲ್ಲಿ ಗೆಲುವಿನ ಖಾತೆ ತೆರೆಯುವ ಹಂಬಲದಲ್ಲಿದೆ. ಇನ್ನೊಂದೆಡೆ ಡೆಲ್ಲಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸುವ ಗುರಿ ಹಾಕಿಕೊಂಡಿದೆ. ಹೀಗಾಗಿ ಈ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುವ ನಿರೀಕ್ಷೆ ಇದೆ.
ಆರ್‌ಸಿಬಿಗೆ ತವರಿನ ಕಂಟಕ
ತವರಿನಾಚೆ ನಡೆಯುವ ಪಂದ್ಯಗಳಲ್ಲಿ ಅಮೋಘ ಗೆಲುವುಗಳನ್ನು ಸಾಧಿಸಿ 2025ರ ಐಪಿಎಲ್ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿರುವ ಆರ್‌ಸಿಬಿ ತವರಿನ ಪಂದ್ಯದಲ್ಲಿ ಎಡವುತ್ತಿರುವುದು ವಿಪರ್ಯಾಸ. ತವರಿನ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಆಟಗಾರರು ವಿಫಲರಾಗಿದ್ದಾರೆ. ಸದ್ಯ ಆರ್‌ಸಿಬಿಯ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್, ಮಧ್ಯಮ ಕ್ರಮಾಂಕದಲ್ಲಿ ಜಿತೇಶ್ ಶರ್ಮ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಫಿಲ್ ಸಾಲ್ಟ್ ಕೆಕೆಆರ್ ವಿರುದ್ಧದ ಆರಂಭಿಕ ಪಂದ್ಯದ ಬಳಿಕ ದೊಡ್ಡ ಇನಿಂಗ್ಸ್ ಆಡಿಲ್ಲ. ಹೀಗಾಗಿ ಇವರು ಮತ್ತೆ ಬ್ಯಾಟಿಂಗ್ ಲಯ ಕಂಡುಕೊಳ್ಳಿವ ಅನಿವಾರ್ಯತೆ ಇದೆ.
ಆರ್‌ಸಿಬಿ ಬೌಲಿಂಗ್ ವಿಭಾಗ ಸದ್ಯ ಉತ್ತವಾಗಿದೆ. ವೇಗಿಗಳಾದ ಭುವನೇಶ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಕೃಣಾಲ್ ಪಾಂಡ್ಯ, ಇಂಪ್ಯಾಕ್ಟ್ ಆಟಗಾರ ಸುಯಶ್ ಶರ್ಮ ತಕ್ಕ ಖ್ಯಾತಿಗೆ ತಕ್ಕ ಪ್ರದರ್ಶನ ತೋರುತ್ತಿದ್ದಾರೆ. ಹೀಗಾಗಿ ಇವರ ಮೇಲೆ ಈ ಪಂದ್ಯದಲ್ಲೂ ತಂಡ ನಂಬಿಕೆಯೊಂದನ್ನು ಇಟ್ಟಿದೆ.
ಕನ್ನಡಿಗ ರಾಹುಲ್ ಹೈಲೆಟ್
ಆರ್‌ಸಿಬಿ ತವರಿನ ಪಂದ್ಯವನ್ನಾಡುದಕ್ಕಿಂತ ಕನ್ನಡಿಗ ಕೆ.ಎಲ್ ರಾಹುಲ್ ಪಂದ್ಯದ ಪ್ರಧಾನ ಹೈಲೆಟ್ಸ್ ಆಗಿದ್ದಾರೆ. ಈ ಬಾರಿ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯ ಪಣ ತೊಟ್ಟಿರುವ ರಾಹುಲ್, ಚೆನ್ನೈ ವಿರುದ್ಧ ಚೆಪಾಕ್ ಬೌಲಿಂಗ್ ಟ್ರ್ಯಾಕ್‌ನಲ್ಲಿಯೂ ಬ್ಯಾಟಿಂಗ್ ಸಾಮರ್ಥ ಪ್ರದರ್ಶಿಸಿದ್ದರು. ಇದೀಗ ಅವರ ತವರಿನ ಹಾಗೂ ಬ್ಯಾಟಿಂಗ್ ಟ್ರ್ಯಾಕ್ ಚಿನ್ನಸ್ವಾಮಿಯಲ್ಲಿ ದೊಡ್ಡ ಮೊತ್ತ ಪೇರಿಸುವ ನಿರೀಕ್ಷೆ ಮಾಡಲಾಗಿದೆ. ಇನ್ನೊಂದೆಡೆ ಆರ್‌ಸಿಬಿಯಿಂದ ಬೇರ್ಪಟ್ಟಿರುವ ಫಾಫ್ ಡು ಪ್ಲೆಸಿಸ್ ಮಾಜಿ ತಂಡದ ವಿರುದ್ಧ ಅಬ್ಬರಿಸಲು ಸಜ್ಜಾಗಿದ್ದಾರೆ. ಆರ್‌ಸಿಬಿಗೆ ಹೋಲಿಸಿದರೆ ಡೆಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವೈವಿಧ್ಯಮಯ ಮತ್ತು ಬಲಿಷ್ಠವಾಗಿದೆ.
ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಮೋಹಿತ್ ಶರ್ಮ, ಮುಖೇಶ್ ಕುಮಾರ್ ಘಾತಕ ಬೌಲಿಂಗ್‌ಗೆ ಹೆಸರುವಾಸಿ. ಮುಖ್ಯವಾಗಿ ಸ್ಪಿನ್ ವಿಭಾಗ ಬಲಿಷ್ಠವಾಗಿರುವುದು ಡೆಲ್ಲಿಗೆ ಪ್ಲಸ್ ಪಾಯಿಂಟ್.