Friday, 18th October 2024

Rishabh Pant: ಪಂತ್‌ ಗಾಯದ ಬಗ್ಗೆ ಅಪ್​ಡೇಟ್ ನೀಡಿದ ನಾಯಕ ರೋಹಿತ್

ಬೆಂಗಳೂರು: ನ್ಯೂಜಿಲ್ಯಾಂಡ್‌(India vs New Zealand) ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಗಾಯಗೊಂಡು ಮೈದಾನ ತೊರೆದಿದ್ದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌(Rishabh Pant) ಅವರ ಗಾಯದ ಬಗ್ಗೆ ನಾಯಕ ರೋಹಿತ್‌ ಶರ್ಮಾ(Rohit Sharma) ಮಹತ್ವದ ಮಾಹಿತಿ ನೀಡಿದ್ದಾರೆ. ಗುರುವಾರ ಎರಡನೇ ದಿನದಾಟದ ಅಂತ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್‌, ಪಂತ್ ಅವರ ಮೊಣಕಾಲು ಊದಿಕೊಂಡಿದೆ. ಇದೇ ಮೊಣಕಾಲಿಗೆ ಪಂತ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಹೀಗಾಗಿ ಮುನ್ನೇಚ್ಚರಿಕೆಯ ಕ್ರಮವಾಗಿ ನಾವು ಅವರಿಗೆ ವಿಶ್ರಾಂತಿ ನೀಡಿದ್ದೇವೆ. ಸ್ವಲ್ಪ ಚೇತರಿಕೆಯ ಬಳಿಕ ಪಂತ್ ಪಂದ್ಯಕ್ಕೆ ಮರಳುವ ನಿರೀಕ್ಷೆಯಿದೆ ಎಂದಿದ್ದಾರೆ.

ನ್ಯೂಜಿಲ್ಯಾಂಡ್‌ ಬ್ಯಾಟಿಂಗ್‌ ಇನಿಂಗ್ಸ್‌ನ 37ನೇ ಓವರ್‌ನ ಕೊನೆಯ ಎಸೆತದಲ್ಲಿ, ರವೀಂದ್ರ ಜಡೇಜಾ ಎಸೆದ ಚೆಂಡು ಪಂತ್ ಅವರ ಮೊಣಕಾಲಿಗೆ ಬಡಿದಿತ್ತು. ತೀವ್ರ ನೋವಿನಿಂದ ಮೈದಾನದಲ್ಲೇ ನರಳಾಡಿದ ಪಂತ್‌ ಬಳಿಕ ಕುಂಟುತಾ ಮೈದಾನ ತೊರೆದಿದ್ದರು. ಬಳಿಕ ಧೃವ್‌ ಜುರೇಲ್‌ ಕೀಪಿಂಗ್‌ ನಡೆಸಿದ್ದರು. ಮೂರನೇ ದಿನವಾದ ಶುಕ್ರವಾರವೂ ಪಂತ್‌ ಕೀಪಿಂಗ್‌ ನಡೆಸುವುದು ಅನುಮಾನ.

ಇದನ್ನೂ ಓದಿ IND vs NZ: 46 ರನ್‌ಗೆ ಭಾರತ ಸರ್ವಪತನ

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಬೇಗನೆ ಆರಂಭಗೊಂಡ ಪಂದ್ಯದ ಎರಡನೇ ದಿನ ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ, ಕಿವೀಸ್ ವೇಗಿಗಳಾದ ಮ್ಯಾಟ್ ಹೆನ್ರಿ ಹಾಗೂ ವಿಲಿಯಂ ಓರೂರ್ಕಿ (22ಕ್ಕೆ 4) ದಾಳಿಗೆ ಕುಸಿದು ಭೋಜನಾ ವಿರಾಮದ ಬಳಿಕ 31.2 ಓವರ್‌ಗಳಲ್ಲಿ ಕೇವಲ 46 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ಇದು ಟೀಮ್ ಇಂಡಿಯಾ ಟೆಸ್ಟ್ ಇನಿಂಗ್ಸ್‌ವೊಂದರಲ್ಲಿ ಪೇರಿಸಿದ 3ನೇ ಕನಿಷ್ಠ ಮೊತ್ತವಾಗಿದೆ.

ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್, ಡೆವೋನ್ ಕಾನ್‌ವೇ ಹಾಗೂ ಟಾಮ್ ಲಾಥನ್ ಒದಗಿಸಿದ ಉತ್ತಮ ಆರಂಭದ ನೆರವಿನಿಂದ 15ನೇ ಓವರ್‌ನಲ್ಲೇ ಇನಿಂಗ್ಸ್ ಮುನ್ನಡೆ ಸಾಧಿಸಿತು. ದಿನದಂತ್ಯಕ್ಕೆ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 180 ರನ್‌ಕಲೆಹಾಕಿರುವ ಕಿವೀಸ್, ಸದ್ಯ 134 ರನ್ ಮುನ್ನಡೆ ಸಾಧಿಸಿ ಸುಸ್ಥಿತಿಯಲ್ಲಿದೆ. ಆಲ್ರೌಂಡರ್ ರಚಿನ್ ರವೀಂದ್ರ (22* ರನ್, 34 ಎಸೆತ, 2 ಬೌಂಡರಿ) ಜತೆಗೆ ಡೆರಿಲ್ ಮಿಚೆಲ್ (14* ರನ್, 39 ಎಸೆತ, 1 ಬೌಂಡರಿ) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.