Friday, 18th October 2024

ಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾಗೆ ಎದುರಾಳಿ ಯಾರು ?

ಟ್ರಿನಿಡಾಡ್: ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡ ಫೈನಲ್​ಗೆ ಪ್ರವೇಶಿಸಿದೆ.
ಟ್ರಿನಿಡಾಡ್​ನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಿ ಐಡೆನ್ ಮಾರ್ಕ್ರಾಮ್ ಪಡೆ ಈ ಸಾಧನೆ ಮಾಡಿದೆ.

ಇದಕ್ಕೂ ಮುನ್ನ 2009 ಮತ್ತು 2014 ರಲ್ಲಿ ಸೆಮಿಫೈನಲ್​ವರೆಗೆ ತಲುಪಿದ್ದು ದಕ್ಷಿಣ ಆಫ್ರಿಕಾ ತಂಡದ ಶ್ರೇಷ್ಠ ಸಾಧನೆಯಾಗಿತ್ತು. ಇದೀಗ ಚೊಚ್ಚಲ ಬಾರಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ.

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಿ ದಕ್ಷಿಣ ಆಫ್ರಿಕಾ ತಂಡ ಫೈನಲ್​ಗೆ ಪ್ರವೇಶಿಸಿದೆ. ವಿಶ್ವಕಪ್ ಇತಿಹಾಸದಲ್ಲಿ ಇದು ದಕ್ಷಿಣ ಆಫ್ರಿಕಾ ತಂಡದ ಮೊದಲ ಸೆಮಿಫೈನಲ್ ಗೆಲುವು ಎಂಬುದು ವಿಶೇಷ. ಅಂದರೆ 1992 ರಿಂದ ವಿಶ್ವಕಪ್​ನಲ್ಲಿ ಕಣಕ್ಕಿಳಿ ಯುತ್ತಿರುವ ಆಫ್ರಿಕನ್ನರು ಒಮ್ಮೆಯೂ ಫೈನಲ್​ಗೆ ಪ್ರವೇಶಿಸಿರಲಿಲ್ಲ.

ಇದಕ್ಕೂ ಮುನ್ನ ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡದ ನಾಯಕ ರಶೀದ್ ಖಾನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಮೊದಲ ಓವರ್​ನಿಂದಲೇ ಕರಾರುವಾಕ್ ದಾಳಿ ಸಂಘಟಿಸಿದ ಸೌತ್ ಆಫ್ರಿಕಾ ಬೌಲರ್​ಗಳು ಆರಂಭ ದಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾದರು.

ಮಾರ್ಕೊ ಯಾನ್ಸೆನ್ ಮೊದಲ ಓವರ್​ನಲ್ಲೇ ರಹಮಾನುಲ್ಲಾ ಗುರ್ಬಾಝ್ (0) ವಿಕೆಟ್ ಪಡೆದರೆ, ಬಳಿಕ ಗುಲ್ಬದ್ದಿನ್ ನೈಬ್ (9) ಕ್ಲೀನ್ ಬೌಲ್ಡ್ ಆದರು. ಇನ್ನು ಇಬ್ರಾಹಿಂ ಝದ್ರಾನ್ (2) ರಬಾಡ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು.

ಇದರ ನಡುವೆ ಅಝ್ಮತುಲ್ಲಾ ಒಮರ್​ಝಾಹಿ 10 ರನ್​ಗಳಿಸಿದರೂ ಅನ್ರಿಕ್ ನೋಕಿಯಾ ಎಸೆತದಲ್ಲಿ ಔಟಾದರು. ಅನುಭವಿ ಬ್ಯಾಟರ್ ಮೊಹಮ್ಮದ್ ನಬಿ ಸೊನ್ನೆ ಸುತ್ತಿದರೆ, ನಂಗೆಯಾಲಿಯಾ ಖರೋಟೆ 2 ರನ್​ಗಳಿಸಿ ಔಟಾದರು. ಪರಿಣಾಮ 23 ರನ್​ ಕಲೆ ಹಾಕುವಷ್ಟರಲ್ಲಿ ಅಫ್ಘಾನಿಸ್ತಾನ್ ತಂಡವು 5 ವಿಕೆಟ್ ಕಳೆದುಕೊಂಡಿತು.

ಬಳಿಕ ಬಂದ ಕರೀಮ್ ಜನ್ನತ್ (8) ಮತ್ತು ರಶೀದ್ ಖಾನ್ (8) ಅಲ್ಪ ಹೊತ್ತು ಕ್ರೀಸ್​ನಲ್ಲಿದ್ದರು. ಇವರಿಬ್ಬರ ಪತನದೊಂದಿಗೆ ಪೆವಿಲಿಯನ್ ಪರೇಡ್ ಮುಂದುವರೆಸಿದ ಅಫ್ಘಾನಿಸ್ತಾನ್ ತಂಡ 11.5 ಓವರ್​ಗಳಲ್ಲಿ 56 ರನ್​ಗಳಿಸಿ ಆಲೌಟ್ ಆಯಿತು.

ಸೌತ್ ಆಫ್ರಿಕಾ ಪರ ತಬ್ರೇಝ್ ಶಂಸಿ ಹಾಗೂ ಮಾರ್ಕೊ ಯಾನ್ಸೆನ್ ತಲಾ 3 ವಿಕೆಟ್ ಪಡೆದರೆ, ಕಗಿಸೊ ರಬಾಡ ಹಾಗೂ ಅನ್ರಿಕ್ ನೋಕಿಯಾ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

ಕೇವಲ 57 ರನ್​ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಫಝಲ್ಹಕ್ ಫಾರೂಖಿ ಎಸೆದ 2ನೇ ಓವರ್​ನ 5ನೇ ಎಸೆತದಲ್ಲಿ ಕ್ವಿಂಟನ್ ಡಿಕಾಕ್ (5) ಕ್ಲೀನ್ ಬೌಲ್ಡ್ ಆದರು. ಈ ಹಂತದಲ್ಲಿ ಜೊತೆಗೂಡಿದ ರೀಝ ಹೆಂಡ್ರಿಕ್ಸ್ ಹಾಗೂ ಐಡೆನ್ ಮಾರ್ಕ್ರಾಮ್ ಜವಾಬ್ದಾರಿ ಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 8.5 ಓವರ್​ಗಳಲ್ಲಿ 57 ರನ್​ಗಳ ಗುರಿ ಮುಟ್ಟುವ ಮೂಲಕ ಸೌತ್ ಆಫ್ರಿಕಾ ತಂಡವು 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡವು ಟಿ20 ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಫೈನಲ್​ಗೆ ಪ್ರವೇಶಿಸಿದೆ.