Thursday, 19th September 2024

ಅನುಕರಣೆ ಮಾಡಿದರೆ ಬದುಕಿಗೆ ಅರ್ಥವಿಲ್ಲ

ವಿಶ್ವವಾಣಿ ಕ್ಲಬ್ ಹೌಸ್‌ ಸಂವಾದ – 53

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮೊದಲು ಮಾನವನಾಗು ವಿಷಯದ ಬಗ್ಗೆ ಉಪನ್ಯಾಸ ನೀಡಿದ ಸ್ವಾಮಿ ಆದಿತ್ಯಾನಂದರ ಅಭಿಮತ

ಬೆಂಗಳೂರು: ಪ್ರತಿಯೊಬ್ಬರಿಗೂ ಒಂದೊಂದು ವ್ಯಕ್ತಿತ್ವವಿದೆ. ಆದರೆ ಇನ್ನೊಬ್ಬರ ಅನುಕರಣೆ ಮಾಡಿದರೆ, ಈ ಜಗತ್ತಿಗೆ ನನ್ನ ಅವಶ್ಯಕತೆಯೇ ಇರುವುದಿಲ್ಲ.
ಅನುಕರಣೆಯಲ್ಲಿ ಬರುವುದೇಅಹಂಕಾರ. ಆದ್ದರಿಂದ ಅನುಕರಿಸುವ ಬದಲು ನಮ್ಮತನವನ್ನು ನೋಡಬೇಕು ಎಂದು ಮಂಡ್ಯದ ಚಿನ್ಮಯ ಮಿಷನ್‌ನ ಸ್ವಾಮಿ
ಆದಿತ್ಯಾನಂದ ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಆಯೋಜಿಸಿದ್ದ ‘ಮೊದಲು ಮಾನವನಾಗು’ ಅರಿವಿನ ಉಪನ್ಯಾಸದಲ್ಲಿ ಮಾತ ನಾಡಿದ ಅವರು, ಮನಸ್ಸು ಸಾಮಾನ್ಯವಾಗಿ ಅನುಕರಣೆ ಮಾಡುತ್ತದೆ. ಈ ರೀತಿಯ ಅನುಕರಣೆಯಿಂದ ಆಲೋಚನೆ ಮಾಡುವುದನ್ನೇ ನಾವು ಬಿಟ್ಟಿದ್ದೇವೆ. ಆಲೋಚನೆ ಮಾಡುವುದೇ ಮನಸಿನ ಬಹುದೊಡ್ಡ ಕರ್ತವ್ಯ. ಪ್ರತಿ ಯೊಬ್ಬರಿಗೂ ಒಂದೊಂದು ವ್ಯಕ್ವಿತ್ವವಿದೆ. ಆದ್ದರಿಂದ ಬೇರೆಯವ ರನ್ನು ಅನುಕರಿಸಬಾರದು. ಈ ವೈಶಿಷ್ಟಕ್ಕೆ ಈ ಜಗತ್ತಿನಲ್ಲಿ ನಮಗೆ ವಿಶೇಷತೆಯಿರುತ್ತದೆ. ಆದ್ದರಿಂದ ಇನ್ನೊಬ್ಬರನ್ನು ಅನುಕರಣೆ ಮಾಡಿದರೆ, ಜಗತ್ತಿಗೆ ನನ್ನ ಅವಶ್ಯಕತೆಯಿರುವುದಿಲ್ಲ. ಅನುಕರಣೆ ಮಾಡುವುದು ಸುಲಭ. ವಿಚಾರ ಮಾಡುವುದಕ್ಕೆ ಪ್ರಯತ್ನಿ ಸುವುದಿಲ್ಲ. ಆಲೋಚನೆ ಮಾಡುವ ಮೂಲಕ ಮೊದಲು ಮಾನವನಾಗಬೇಕು ಎಂದರು.

ಇಂದಿನ ಸಮಸ್ಯೆ ಎಂದರೆ ಯಾರು ಮನುಷ್ಯನನ್ನು ಮನುಷ್ಯನನ್ನಾಗಿ ನೋಡುತ್ತಿಲ್ಲ. ಅದಕ್ಕೆ ಹಲವು ಸಮಸ್ಯೆ ಎದುರಾಗುತ್ತಿವೆ. ನಮ್ಮನ್ನು ಅಮ್ಮ ಮಗನಾಗಿ, ಅಣ್ಣ ತಮ್ಮನಾಗಿ, ಗುರು ಶಿಷ್ಯನನ್ನಾಗಿ, ವೈರಿ ವೈರಿಯಾಗಿ ನೋಡುತ್ತೇವೆ ಹೊರತು, ಮನುಷ್ಯ ನಾಗಿ ನಾವು ಯಾರನ್ನು ನೋಡುವುದಿಲ್ಲ. ಆದರೆ ವಾಸ್ತವದಲ್ಲಿ ನಾನೊಬ್ಬ ಮನುಷ್ಯ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಮೊದಲು ಮಾನವವಾಗಬೇಕು. ಮನಸು ಇರುವವವರು ಮಾತ್ರ ಮಾನವ ಅಥವಾ ಮನುಷ್ಯ ಆಗುತ್ತಾನೆ. ಆದ್ದರಿಂದ ಮೊದಲು ಮಾನವನಾಗಬೇಕು ಎಂದು ಹೇಳಿದರು. ಮನಸು ಪ್ರಶಾಂತವಾಗುವುದು ನಿದ್ದೆ ಮಾಡಿದಾಗ ಅಥವಾ ಸತ್ತಾಗ ಮಾತ್ರ. ಎಚ್ಚರವಾಗಿದ್ದಾಗ ಅದು ಒಂದು ಕುಣಿಸುತ್ತದೆ. ಸಾಮಾನ್ಯರ ಮನಸಿಗೆ ತಕ್ಕಂತೆ ಕುಣಿಯುತ್ತಾರೆ. ಆದರೆ ಮಹಾತ್ಮರು ಮನಸ್ಸನ್ನು ಕುಣಿಸುತ್ತಾರೆ. ಸಾಮಾನ್ಯ ರಿಗೂ, ಮಹಾತ್ಮರಿಗೂ ಇರುವ ವ್ಯತ್ಯಾಸವಿದೆ ಎಂದು ಅಭಿಪ್ರಾಯಪಟ್ಟರು.

ವೈರಾಗ್ಯದ ವಸ್ತು ಅಲಂಕಾರವಾಗಿದೆ: ನಮ್ಮ ಧರ್ಮದಲ್ಲಿ ವಿಭೂತಿಗೆ ವಿಶೇಷ ಸ್ಥಾನಮಾನವಿದೆ. ಆದರೆ ವಿಭೂತಿ ಸತ್ತ ಬಳಿಕ ಸುಡುವ ಬೂದಿಯ ಸಂಕೇತ. ವಿಭೂತಿ ಎಂದರೆ ಬೂದಿಯಾಗುತ್ತದೆ  ಎಂದು ಕಲ್ಪನೆ. ಶರೀರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡ ಎಂದು ಹೇಳುತ್ತದೆ. ಆದರೆ ಇಂದು ವಿಭೂತಿ, ಚಂದನ ಇಡುವವರು ಡಿಸೈನ್ ಆಗಿ ಇಡುತ್ತಾರೆ. ವೈರಾಗ್ಯ ತರಬೇಕಾದ ವಿಭೂತಿ, ಚಂದನ ಇಂದು ಅಲಂಕಾರವಾಗಿದೆ. ಆದರೆ ನಾವು ಅನುಕರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿಕೊಂಡರೆ, ಇದರ ಅರಿವಾಗುತ್ತದೆ. ಏನೇ ಮಾಡಿದರೂ ಮೊದಲು ಪ್ರಶ್ನಿಸುವುದನ್ನು ಕಲಿಯಬೇಕು. ಅದಕ್ಕೆ ಮೊದಲು ಮಾನವನಾಗಬೇಕು ಎಂದು ಹೇಳಿದರು.

ಡಿವಿಜಿ ಅವರ ಕಗ್ಗ ನನಗೆ ಪ್ರೇರಣೆ ನಾನು ಚಿಕ್ಕವನಿದ್ದಾಗ ಚಿನ್ಮಯ ಮಿಷಿನ್‌ಗೆ ಸೇರಲು ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಕಾರಣ. ಮಂಕುತಿಮ್ಮನ ಕಗ್ಗದ ಕ್ಯಾಸೆಟ್ ಅನ್ನು ಹಲವು ಬಾರಿ ಕೇಳಿದ್ದೆ. ಆದರೆ ಒಮ್ಮೆ ಶೇಷಾದ್ರಿಪುರ ಕಾಲೇಜಿನಲ್ಲಿ ಬ್ರಹ್ಮನಂದರಿಂದ ಪ್ರವಚನವಿತ್ತು. ಹೋದಾಗ ಅಲ್ಲಿನ ಮ್ಯಾಗಜಿನ್‌ನ್ನು
ಪಡೆದುಕೊಂಡೆ. ಬಳಿಕ ಅದರಲ್ಲಿ ಬಂದ ವೇದಾಂತ ಕೋರ್ಸ್ ಜಾಹಿರಾತಿಗೆ ಅಪ್ಲೇ ಮಾಡಿದೆ.

ಅಲ್ಲಿಯವರೆಗೆ ನನಗೆ ಭಗವದ್ಗೀತೆ ಇದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ ಎಂದು ಹೇಳಿದರು. ಮಂಡ್ಯದಲ್ಲಿ ಎರಡು ತರಗತಿಗಳನ್ನು ಮಾಡುತ್ತಿದ್ದೆ. ಅಲ್ಲಿ ನಾನು ತರಗತಿ ಮಾಡುವುದು ನನ್ನ ಖುಷಿಗೆ. ನನ್ನ ಮನಸಿಗೆ ಇಷ್ಟವಾಗುವುದನ್ನು ಹೇಳಿಕೊಡುತ್ತೇನೆ. ಅದರಿಂದ ಅವರಿಗೆ ಉಪಯೋಗವಾಗಬಹುದು. ಆದರೆ ಕರೋನಾ ಕಾರಣದಿಂದ ಈಗ ತರಗತಿಗಳು ನಿಂತು ಹೋಗಿದೆ ಎಂದರು.

ಈ ರೀತಿ ತರಗತಿ ಮಾಡುವಾಗ ಒಮ್ಮೆ ನಾನು ಶಿವರಾಮ ಕಾರಂತರ ಬಾಳ್ವೇವೆ ಬೆಳಕು ವಿಚಾರ ಸಾಹಿತ್ಯವನ್ನು ಓದಿದ್ದೆ. ಅದರ ಮೇಲೆಯೇ 76 ದಿನ
ತರಗತಿ ಮಾಡಿದೆ. ಡಿವಿಜಿ ಅವರಿಂದ ಪ್ರೇರಣೆಯಾಗಿದ್ದರೂ, ಕಾರಂತರ ಚಿಂತನೆ ಅದ್ಭುತ. ಅವರ ಸಾಹಿತ್ಯ ನನ್ನನ್ನು ಹೊಸವ್ಯಕ್ತಿಯನ್ನಾಗಿ ಮಾಡಿತ್ತು. ಇದಾದ ಬಳಿಕ ಸಿದ್ಧಯ್ಯ ಪುರಾಣಿಕರ ವಚನಗಳು ಸಿಕ್ಕವು. 525 ವಚನಗಳನ್ನು ಅನುವಾದ ಮಾಡಿದೆ. ಅವರ ಪ್ರತಿ ವಚನವೂ ಸ್ವ ಅನುಭವದಿಂದ ಬರೆದಿರುವುದು.

ಸಿದ್ಧಯ್ಯ ಪುರಾಣಿಕ್ ಅವರ ವಚನ ಮನುಷ್ಯನಾಗಿ ಬದುಕು ಹೇಗೆ ಎಂದು ಹೇಳಿಕೊಡುತ್ತದೆ. ಮನುಷ್ಯನನ್ನು ಮನುಷ್ಯನಾಗಿ ನೋಡುವುದೇ ಕಷ್ಟ ಎಂದು ಪುರಾಣಿಕರು ಹೇಳುತ್ತಾರೆ. ಎಲ್ಲರೂ ಅವರವರ ದೃಷ್ಟಿಯಲ್ಲಿ ಮಾತ್ರ ನೋಡುತ್ತಾರೆ. ಅದು ಸಮಸ್ಯೆ. ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದೊಂದು ರೀತಿ ಕಾಣುತ್ತಾರೆ. ಆದರೆ ಎಂದಿಗೂ ಮನುಷ್ಯನನ್ನಾಗಿ ಕಾಣುವುದಿಲ್ಲ ಎಂದು ಹೇಳಿದರು.

ಚಿನ್ಮಯ ಮಿಷನ್‌ನಲ್ಲಿ ಧರ್ಮವಿಲ್ಲ: ಚಿನ್ಮಯ ಮಿಷಿನ್‌ನಲ್ಲಿ ಎಂದಿಗೂ ಧರ್ಮ, ಜಾತಿಯನ್ನು ಕೇಳುವುದಿಲ್ಲ. ಅಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್‌ಗಳು ಎಲ್ಲರೂ ಸನ್ಯಾಸಿಗಳಾದಿದ್ದಾರೆ. ಅಲ್ಲಿ ಜಾತಿ, ಧರ್ಮ ಕೇಳುವುದಿಲ್ಲ. ಮನಸು ಸರಿಮಾಡುವುದಕ್ಕೆ ಅಷ್ಟೇ ನಾನು ಇರುವುದು ಎಂದು ಚಿನ್ಮಯರು ಹೇಳುತ್ತಿದ್ದರು. ಕರ್ಮ ವನ್ನು ಮಾಡಬೇಕು. ಆತ್ಮ ಶುದ್ಧತೆಗೆ ಅನುಕರಣೆ ಮಾಡಬೇಕು.

ಆಲೋಚನೆ ಮಾಡುವುದು ಕಲಿಯಬೇಕು: ಯಾರೇ ಆಗಲಿ ಅನುಕರಣೆ ಮಾಡುವುದು ತಪ್ಪು. ಮೊದಲು ಆಲೋಚನೆ ಮಾಡಬೇಕು. ಆಗ ನನ್ನ ಅಹಂಕಾರ ಎನ್ನುವುದ ನಾಶವಾಗುತ್ತದೆ. ದುಃಖಕ್ಕೆ ಕಾರಣ ನನ್ನ ಅಜ್ಞಾನ ಕಾರಣ ಎನ್ನುವುದು. ಅದಕ್ಕೆ ಹೆಸರೇ ಮಾಯ ಎಂದು. ಇದನ್ನು ಅರಿತಾಗ ಮಾತ್ರ ವಾಸ್ತವವನ್ನು ತಿಳಿಯುತ್ತೇವೆ. ವಾಸ್ತವ ಎಂದರೆ ಏನೇ ಆದರೂ ಅದಕ್ಕೆ ಕಾರಣ ನಾನು ಎನ್ನುವುದು ಅರಿಯಬೇಕು. ಮನಸ್ಸು ಎನ್ನುವಂತದ್ದು ಉತ್ತಮ ವ್ಯಕ್ತಿಯನ್ನಾಗಿ ಹಾಗೂ ದುಃಖಿಯನ್ನಾಗಿ ಮಾಡುತ್ತದೆ. ಅದನ್ನು ಹುಡುಕಬೇಕಷ್ಟೇ ಎಂದು ಅಭಿಪ್ರಾಯಪಟ್ಟರು.

ಮೊದಲು ಮಾನವನಾಗಲು ತಿಳಿದವರ ಜತೆ ಹೆಚ್ಚು ಸಂಪರ್ಕ ಇಟ್ಟುಕೊಂಡಿರಬೇಕು. ಆಸಕ್ತಿಗಳು ಏನಿದೆ ಎಂದು ತಿಳಿದು ಅಂತವರ ಜತೆ ಸ್ನೇಹ ಬೆಳೆಸಿ ಕೊಳ್ಳುತ್ತೇವೆ. ಆದರೆ ಯಾರೂ ಕೂಡ ನಮ್ಮ ದುಃಖ ಹಂಚಿಕೊಳ್ಳಲು ಸಾಧ್ಯವಿಲ್ಲ. ನಮ್ಮ ದುಃಖವನ್ನು ನಾವೇ ಅನುಭವಿಸಬೇಕು. ಇದು ಯಾವಾಗ ಅರಿವಿಗೆ ಬರುವುದೋ ಅಷ್ಟು ವೇಗವಾಗಿ ಮನುಷ್ಯನಾಗುತ್ತೇವೆ ಎಂದು ಹೇಳಿದರು.

ಎಲ್ಲ ಧರ್ಮಗಳು ಹೇಳಿರುವುದು ಒಂದೇ: ಎಲ್ಲ ಧರ್ಮ ಹೇಳುವುದು ಒಂದೇ ಸುಖ-ಶಾಂತಿಯನ್ನು ಹೇಳುತ್ತದೆ. ಕುರಾನ್, ಹದೀಸ್ ಹೇಳಿರುವುದೆಲ್ಲ
ಉಪನಿಷತ್‌ ನಲ್ಲಿ ಇರುವುದೇ ಆಗಿದೆ. ಇನ್ನು ಸಾಕ್ರಟಿಸ್ ಹೇಳಿದ್ದೆಲ್ಲ ಉಪನಿಷತ್‌ನಲ್ಲಿದೆ. ಎಲ್ಲೇ ಹುಟ್ಟಿದ್ದರೂ, ವಿಷಯ ಒಂದೇ. ಸುಖ-ಶಾಂತಿ ನಮ್ಮಲ್ಲಿಯೇ ಇರುತ್ತದೆ. ದೇವರು ಅಂತಿಮವಲ್ಲ. ಆದರೆ ದೇವರ ಮೂಲಕ ನಾವು ಮೇಲಕ್ಕೆ ಬರಬೇಕು. ದೇವರಿಗೆ ಏನೇ ಪೂಜೆ ಮಾಡಿದರೂ ದೇವರು ಪರೀಕ್ಷೆಯನ್ನು ಪಾಸ್ ಮಾಡುವುದಿಲ್ಲ. ಕಷ್ಟ ಪಟ್ಟರೆ ಮಾತ್ರ ಸುಖ ಸಿಗುತ್ತದೆ. ಜಗತ್ತಿನ ವ್ಯವಸ್ಥೆ ಬದಲಾಯಿಸಲು ಸಾಧ್ಯವಿಲ್ಲ. ಅವತಾರ ಪುರಷನಾಗಿದ್ದರೂ ರಾಮ, ಕೃಷ್ಣ ಸಾಯಲೇಬೇಕು. ಶ್ರದ್ಧೆಯಿಂದ ಮನಸ್ಸಿಟ್ಟು ಕೆಲಸ ಮಾಡಿದರೆ ಅದೇ ದೈವ. ಯಾವುದೇ ಯಶಸ್ಸಿಗೆ ಅಡ್ಡದಾರಿಯಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ದೇವರು ಎಂದರೆ ಯಾರು?
ಉಪನ್ಯಾಸದಲ್ಲಿ ದೇವರ ಮಹತ್ವದ ಬಗ್ಗೆ ಮಾತನಾಡಿದ ಸ್ವಾಮೀಜಿಗಳು, ಒಮ್ಮೆ ನಡೆದುಕೊಂಡು ಹೋಗುವಾಗ ಯಾರಿಗಾದರೂ ಗಣಪತಿ ದೇವಾಲಯ ಕಂಡರೆ
ನಮಸ್ಕರಿಸುತ್ತಾರೆ. ಆದರೆ ಮುಂದೆ ಹೋದಾಗ ಮಸೀದಿ ಸಿಕ್ಕರೆ, ಚರ್ಚ್ ಸಿಕ್ಕರೆ, ಗುರುದ್ವಾರ ಸಿಕ್ಕರೆ ಅದಕ್ಕೆ ನಮಸ್ಕರಿಸುವುದಿಲ್ಲ. ಏಕೆಂದರೆ ನೀನು ಹಿಂದೂ
ಎಂದರ್ಥ. ಹಿಂದೂವಾಗಿದ್ದರೆ ದೇವಾಲಯದಲ್ಲಿ, ಮುಸ್ಲಿಂ ಆಗಿದ್ದರೆ ಮಸೀದಿಯಲ್ಲಿ, ಕ್ರಿಶ್ಚಿಯನ್ ಆಗಿದ್ದರೆ ಚರ್ಚ್‌ನಲ್ಲಿ ದೇವರು ಕಾಣುತ್ತಾರೆ. ಆದರೆ ಇನ್ನೊಂದು
ಧರ್ಮದ ಧಾರ್ಮಿಕ ಕೇಂದ್ರದಲ್ಲಿ ದೇವರು ಕಾಣಲಿಲ್ಲ ಎಂದರೆ, ಅಲ್ಲಿಯೂ ಅಲ್ಲ ಎಂದರ್ಥ. ಅದಕ್ಕೆ ಶಿವರುದ್ರಪ್ಪ ಅವರು, ‘ಎಲ್ಲೋ ಹುಡುಕಿದೆ ಇಲ್ಲದ ದೇವರ‘ ಎನ್ನುವ ಕವಿತೆಯನ್ನು ರಚಿಸಿದರು ಎಂದು ನೆನಪು ಮಾಡಿಕೊಂಡರು.

ಅಧ್ಯಾತ್ಮ ಹೇಳುವುದು ಒಂದು ಮಾತು, ಅದು ‘ನನ್ನನ್ನು ನಾನು ಮರೆಯಬಾರದು’ ಎಂದು
? ಮನುಷ್ಯನಿಗೆ ತಮ್ಮ ಮನಸೇ ಶತ್ರು.
? ಆತ್ಮಶುದ್ಧ ಮಾಡಿಕೊಳ್ಳಲು ಅನುಕರಣೆ ಮಾಡಬೇಕು. ಇದನ್ನೇ ಶಂಕರಾಚಾರ್ಯರು ಹೇಳಿದ್ದು
? ಅಜೀರ್ಣಕ್ಕೆ ಕಾರಣ ಅಂಬಲಿಯಾದರೆ, ಗಂಜಿಯಾದರೇನು ಸಮಸ್ಯೆ ಒಂದೇ ಅಲ್ಲವೇ
? ನಮಗೆ ನಾವೇ ಮಿತ್ರ. ನಮಗೆ ನಾನೇ ಶತ್ರು
? ದೇವರು ಎಂದರೆ, ಮನಸಿನಲ್ಲಿ ಹೊಸ ಆಲೋಚನೆ ಸೃಷ್ಟಿಸುವುದು
? ರಾಮನಲ್ಲಿರುವಲ್ಲಿ ಕಾಮಕ್ಕೆ ಅವಕಾಶವಿಲ್ಲ. ಕಾಮ ಇರುವಲ್ಲಿ ರಾಮನಿಗೆ ಅವಕಾಶವಿಲ್ಲ.

***

ಸಿದ್ಧಯ್ಯ ಪುರಾಣಿಕ್ ವಚನ ನೆನಪಿಸಿಕೊಂಡ ಸ್ವಾಮೀಜಿ
ವಿದ್ಯೆ ಬಂತು ವಿನಯ ಹೋಯಿತು
ಬುದ್ಧಿ ಬಂತು ಶ್ರದ್ಧೆ ಹೋಯಿತು
ಶ್ರದ್ಧೆ ಬಂತು ವಿವೇಚನೆ ಹೋಯಿತು
ಸಮೃದ್ಧಿ ಬಂತು ಸಂಸ್ಕೃತಿ ಹೋಯಿತು
ವಿಜ್ಞಾನ ಬಂತು ಸಮಾಧಾನ ಹೋಯಿತು
ಶರೀರ ಸ್ವಾಸ್ಥ ಬಂತು ಚಿತ್ತ ಸ್ವಾತ್ಥ ಚಿತ್ತ ಹೋಯಿತು
ಭೋದನೆ ಬಂತು ಸಾಧನೆ ಹೋಯಿತು
ಮಾತು ಬಂತು ಕೃತಿಯೂ ಹೋಯಿತು
ಜಾತಿ ಬಂತು ಪ್ರೀತಿ ಹೋಯಿತು
ಸ್ವಾತಂತ್ಯ್ರ ಬಂತು ಸೌಜನ್ಯ ಹೋಯಿತು
ಸಿದ್ದೇಶ್ವರ ಬಂದ ಸ್ವಾತಂತ್ರ್ಯ ಧೀರ ಸಿದ್ದೇಶ್ವರ ಹೋದ

***

ಸ್ವಾಮೀಜಿಗಳೊಂದಿಗೆ ಎರಡುವರೆ ದಶಕದ ಒಡನಾಟವಿದೆ. ಧಾರ್ಮಿಕ, ಆಧ್ಯಾತ್ಮದಲ್ಲಿ ಅವರದ್ದು ಆಳವಾದ ಅಧ್ಯಯನ. ಪರಿಚಯವಿಲ್ಲದ ವಿಷಯಗಳನ್ನು ಜನರಿಗೆ ತಿಳಿಸುವುದು ಸ್ವಾಮೀಜಿಗಳ ಹೆಗ್ಗಳಿಕೆ. ಅವರೊಬ್ಬ ಉತ್ತಮ ಅಂಕಣಕಾರರು ಸಹ. ಸಾಹಿತ್ಯ ವಿಷಯದಲ್ಲಿ ಹಲವು ಅಂಕಣ ಬರೆಯುವ ಅವರದ್ದು, ವಿದ್ವತ್ ಹೊಂದಿದ್ದಾರೆ.
– ಷಡಕ್ಷರಿ, ಅಂಕಣಕಾರರು

ನಾನು ಚಿನ್ಮಯನಂದರ ದೊಡ್ಡ ಭಕ್ತ. ಅವರ ಪ್ರವಚನವನ್ನು ಕೇಳುತ್ತಿದ್ದೆ. ಅದು ಪ್ರಭಾವ ಬೀರಿದೆ. ಮೊದಲು ಮಾನವನಾಗು ಎಂದು ಹೇಳುವ ಮಾತು ನಿಜಕ್ಕೂ ಸತ್ಯ. ಯಾವುದೇ ಕ್ಷೇತ್ರದಲ್ಲಾದರೂ ಇರಿ. ಆದರೆ ಮೊದಲು ಮಾನವನಾಗಬೇಕು.
– ಭುಜಂಗ ಶೆಟ್ಟಿ ಮುಖ್ಯಸ್ಥರು, ನಾರಾಯಣ ನೇತ್ರಾಲಯ

ಪುಸ್ತಕ ಓದುವಕ್ಕೆ ಸಮಯವಿಲ್ಲ ಎನ್ನುವ ಸಮಸ್ಯೆ ಬೇಡ. ಬದಲಿಗೆ ವಿಶ್ವವಾಣಿ ಕ್ಲಬ್‌ಹೌಸ್ ಅನ್ನು ಕೇಳಿದರೆ ಪುಸ್ತಕ ಓದಿದಷ್ಟೇ ಜ್ಞಾನ ಲಭಿಸುತ್ತದೆ. ಹಲವು ಸಾಧಕರ ಮಾತುಗಳನ್ನು ಕೇಳಿದರೆ, ಹಲವು ಹೊಸ ವಿಷಯವನ್ನು ತಿಳಿದುಕೊಳ್ಳಬಹುದು.

– ಸ್ವಾಮಿ ಆದಿತ್ಯಾನಂದ ಚಿನ್ಮಯ ಮಿಷನ್, ಮಂಡ್ಯ

Leave a Reply

Your email address will not be published. Required fields are marked *