Saturday, 23rd November 2024

ಕೊಲ್ಹಾರಕ್ಕೆ ಜಿ.ಎಂ ರಾಹುಲ್ ರತ್ನಂ ಪಾಂಡೆ ಭೇಟಿ, ಪರಿಶೀಲನೆ

ಕೊಲ್ಹಾರ: ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ಯುಕೆಪಿ ವತಿಯಿಂದ ಕೈಗೊಂಡಿರುವ ಹಲವು ಕಾಮಗಾರಿಗಳ ಸ್ಥಳಗಳಿಗೆ ಆರ್ ಅ್ಯಂಡ್ ಆರ್ ನ ಪ್ರಧಾನ ವ್ಯವಸ್ಥಾಪಕ ರಾಹುಲ್ ರತ್ನಂ ಪಾಂಡೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಕಾಮಗಾರಿಗಳ ಪರಿಶೀಲನೆ ವೇಳೆ ಅವರು, ಈಗಾಗಲೇ ಆದೇಶಿಸಿದಂತೆ 28 ವಾಣಿಜ್ಯ ಮಳಿಗೆಗಳನ್ನು ಹದಿನೈದು ದಿನಗಳಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸು ವುದರ ಜೊತೆಗೆ ಉಳಿದ 38 ಮಳಿಗೆಗಳನ್ನು ಮತ್ತು ದಾಖಲೆ ಸಲ್ಲಿಸದ 4 ವಾಣಿಜ್ಯ ಮಳಿಗೆಗಳ ದಾಖಲೆಗಳನ್ನು ಸಂಗ್ರಹಿಸಿ ಅವುಗಳನ್ನು ಸಹ ಆದೇಶದಂತೆ ಹಸ್ತಾಂತರಿಸ ಬೇಕೆಂದು ಎಇಇ ಎಸ್.ಟಿ.ಬಬಲೇಶ್ವರ ಅವರಿಗೆ ಸೂಚಿಸಿದರು.

ಇದೇ ವೇಳೆ 23 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಯುಜಿಡಿ ಕಾಮಗಾರಿಯನ್ನು ಪರಿಶೀಲಿಸ ಲಾಗುತ್ತಿದ್ದು, ಅದನ್ನು ಸಹ ಹದಿನೈದು ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ನೀಡಬೇಕೆಂದು ಎಇಇ ಎಸ್.ಟಿ. ಬಬಲೇಶ್ವರ ಅವರಿಗೆ ಸೂಚಿಸಿದರು.

ಎಇಇ ವಿರುದ್ದ ಜಿಎಂಗೆ ದೂರು

ಪಟ್ಟಣದ 16 ನೇ ವಾರ್ಡಿನ ಈದ್ಗಾ ಮೈದಾನದಲ್ಲಿ ಕೈಗೊಳ್ಳಲಾಗಿರುವ ಸೋಲಾರ್ ವಿದ್ಯುತ್ ದ್ವೀಪಗಳ ಅಳವಡಿಕೆ ಕಾಮಗಾರಿ ಸ್ಥಳಕ್ಕೆ ಜಿ.ಎಂ ಪಾಂಡೆ ಅವರು ಭೇಟಿ ನೀಡಿದ ವೇಳೆ 16 ನೇ ವಾರ್ಡಿನ ಪ.ಪಂ ಸದಸ್ಯ ತೌಶೀಪ್ ಗಿರಗಾಂವಿ, ಇನ್ನೋರ್ವ ಸದಸ್ಯ ಬಾಬು ಭಜಂತ್ರಿ ಮತ್ತು ಮುಖಂಡ ಮಂಜುನಾಥ ತುಂಬರಮಟ್ಟಿ ಮಾತನಾಡಿ, ಸೋಲಾರ್ ದ್ವೀಪಗಳ ಕಾಮಗಾರಿ ಸಂಪೂರ್ಣ ಕಳಪೆಮಟ್ಟದಿಂದ ಕೂಡಿದ್ದು, ಕಾಮಗಾರಿಗಳ ಕುರಿತು ಎಇಇ ಎಸ್.ಟಿ.ಬಬಲೇಶ್ವರ ಅವರಿಗೆ ಪ್ರಶ್ನಿಸಿದರೆ ಜನಪ್ರತಿನಿಧಿಗಳಾದ ನಮಗೂ ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದೇ ದಬ್ಬಾಳಿಕೆ ಮಾತುಗಳಾಡುತ್ತಾರೆ ಎಂದು ಆರೋಪಿಸಿದರು.

ಅಲ್ಲದೇ ಕಳಪೆ ಕಾಮಗಾರಿ ಆರೋಪದ ಕುರಿತು ಪ್ರಶ್ನಿಸಿದ ಖಾಸಗಿ ಸುದ್ದಿ ವಾಹಿನಿ ವರದಿಗಾರ ಶರಣು ಮಾದರ ಅವರ ಮೇಲೆ ಎಇಇ ಎಸ್.ಟಿ.ಬಬಲೇಶ್ವರ ಹಲ್ಲೆ ಮಾಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಜಿ.ಎಂ ಅವರಿಗೆ ಒತ್ತಾಯಿಸಿದರು.

ಇದೇ ವೇಳೆ ಎಸ್.ಟಿ.ಬಬಲೇಶ್ವರ ಅವರು ವರದಿಗಾರ ಶರಣು ಮಾದರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಸ್ಥಳೀಯ ಪತ್ರಕರ್ತರು ಸಹ ಜಿ.ಎಂ ಅವರಿಗೆ ಮೌಖಿಕ ದೂರು ನೀಡಿದರು. ಈ ಕುರಿತು ಎಇಇ ಅವರ ಮೇಲಾಧಿಕಾರಿ ಗಳಿಗೆ ಲಿಖಿತ ದೂರು ಸಲ್ಲಿಸಿ. ಅವರಿಂದ ವರದಿ ತರಿಸಿಕೊಂಡು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಪ್ರಧಾನ ವ್ಯವಸ್ಥಾಪಕ ರಾಹುಲ್ ರತ್ನಂ ಪಾಂಡೆ ಪ್ರತಿಕ್ರಿಯಿಸಿದರು.