Saturday, 23rd November 2024

ಆರು ಕೋಟಿ ಜನರ ಸ್ಮಾರ್ಟ್ ವಾಚ್ ಡೇಟಾ ಸೋರಿಕೆ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 86

ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್‌ಗಳನ್ನು ಚಾರ್ಜ್‌ಗೆ ಹಾಕಬೇಡಿ

ಸೈಬರ್ ಕಾನೂನು, ಸುರಕ್ಷಾ ಪರಿಣತ ಡಾ.ಅನಂತ ಪ್ರಭು ಎಚ್ಚರಿಕೆ

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಫೋನ್‌ಗಳನ್ನು ಯಾವುದೇ ಕಾರಣಕ್ಕೂ ಚಾರ್ಜ್‌ಗೆ ಹಾಕಬೇಡಿ. ಮೊಬೈಲ್ ಚಾರ್ಜ್‌ಗೆ ಹಾಕಿದರೆ ನಿಮಗೆ ಗೊತ್ತಿಲ್ಲದೇ ಸೈಬರ್ ಕಳ್ಳರು ನಿಮ್ಮ ಡೇಟಾ ಕಳ್ಳತನ ಮಾಡುವ ಸಾಧ್ಯತೆಯಿದೆ ಎಂದು ಸೈಬರ್ ಕಾನೂನು, ಸುರಕ್ಷಾ ಪರಿಣತರಾದ ಡಾ. ಅನಂತ ಪ್ರಭು ತಿಳಿಸಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗೊತ್ತಿಲ್ಲದೇ ಮೊಬೈಲ್ ಚಾರ್ಜ್‌ಗೆ ಹಾಕಿದರೆ ನಿಮ್ಮ ಡೇಟಾ ಕಳ್ಳತನ ಮಾಡುವ ಸಾಧ್ಯತೆಯಿದೆ. ಇತ್ತೀಚೆಗೆ 6 ಕೋಟಿ ಜನರ ಸ್ಮಾರ್ಟ್ ವಾಚ್‌ನ ಡೇಟಾ ಸೋರಿಕೆಯಾಗಿದೆ. ಕೆಲವು ಕಡೆ ಸೈಬರ್ ಖದೀಮರು ಕಂಪ್ಯೂಟರ್‌ಗಳಿಗೆ ಡೇಟಾ ಕೇಬಲ್ ಕನೆಕ್ಟ್ ಆಗಿರುವು ದರಿಂದ ಕ್ಷಣ ಮಾತ್ರದಲ್ಲಿ ನಿಮ್ಮ ಡೇಟಾವನ್ನು ಕದ್ದು ನಿಮಗೆ ಬ್ಲ್ಯಾಕ್ ಮೇಲ್ ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಚಾರ್ಜ್ ಮಾಡುವ ಅನಿವಾರ್ಯತೆ ಸೃಷ್ಟಿ ಯಾದರೆ, ಮೊಬೈಲ್ ಆಫ್ ಮಾಡಿ ಚಾರ್ಜ್‌ಗೆ ಹಾಕಿ, ಜತೆಗೆ ನಿಮ್ಮದೇ ಆದ ಚಾರ್ಜರ್ ಬಳಿಸಿ ಚಾರ್ಜ್ ಮಾಡಿ ಕೊಳ್ಳಿ, ಇಲ್ಲವಾ ದರೆ ಪವರ್ ಬ್ಯಾಂಕ್ ಬಳಸಿ ಚಾರ್ಜ್ ಮಾಡಿಕೊಂಡು ಸೈಬರ್ ಖದೀಮರಿಂದ ಪಾರಾಗಿ ಎಂದು ಸಲಹೆ ನೀಡಿದರು.

ಡೇಟಾ ಸೋರಿಕೆ: ಫಿಟ್ ಬಿಟ್ ವಾಚ್ ಅಥವಾ ಸ್ಮಾರ್ಟ್ ವಾಚ್‌ಗಳು ಯಾವುದೂ ಸುರಕ್ಷಿತವಲ್ಲ. ಇತ್ತೀಚೆಗೆ 6 ಕೋಟಿ ಜನರ ಸ್ಮಾರ್ಟ್ ವಾಚ್‌ನ ಡೇಟಾ ಸೋರಿಕೆಯಾಗಿದೆ. ಶೇ. 100ರಷ್ಟು ಸುರಕ್ಷಿತವಾದ ಉಪಕರಣ ಗಳು ಯಾವುದೂ ಇಲ್ಲ. ಹೀಗಾಗಿ ಫಿಟ್ ಬಿಟ್ ವಾಚ್ ಅಥವಾ ಸ್ಮಾರ್ಟ್ ವಾಚ್‌ಗಳನ್ನು ಬಳಸುವಾಗ ಬಹಳ ಎಚ್ಚರ ವಹಿಸಿ ಎಂದರು.

ಮೋಸ ಹೋಗಬೇಡಿ: ಹಲವು ಮಂದಿ ಆನ್‌ಲೈನ್ ವೆಬ್‌ಸೈಟ್ ಮೂಲಕ ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿ ಲಕ್ಷಾಂತರ ರುಪಾಯಿ ಗಳಿಸಿದ್ದೇವೆ. ಒಮ್ಮೆ ನೀವು ಪ್ರಯತ್ನಿಸಿ ಎಂದು ಬಿಟ್ಟಿ ಸಲಹೆ ನೀಡುತ್ತಾರೆ. 5 ಲಕ್ಷ ಹೂಡಿಕೆ ಮಾಡಿ 5 ತಿಂಗಳಿನಲ್ಲಿ 10 ಲಕ್ಷ ನೀಡುತ್ತೇವೆ ಎಂದು ಕೆಲವು ಕಂಪನಿ ವೆಬ್ ಸೈಟ್‌ಗಳು ಹಾಗೂ ಕೆಲವು ಸ್ನೇಹಿತರು ಸಲಹೆ ನೀಡುತ್ತಾರೆ. ಆದರೆ, ಆರಂಭದಲ್ಲಿ ಒಂದೆರಡು ತಿಂಗಳು ಹಣ ನೀಡಿ ಆ ನಂತರ ನಿಮ್ಮ ಲಕ್ಷಾಂತರ ಹಣ ಪಡೆದು ವಂಚಿಸು ತ್ತಾರೆ. ಬಳಿಕ ನೀವು ಹೂಡಿಕೆ ಮಾಡಿದ ಕಂಪನಿಗಳು ಸಹ ವೆಬ್‌ಸೈಟ್‌ನಿಂದ ಮಾಯವಾಗಿರುತ್ತವೆ. ನೀವು ಬಹಳ ಕಷ್ಟ ಪಟ್ಟು ಸಂಪಾದಿಸಿದ ಹಣ ನೀರಿನಲ್ಲಿ ಹೋಮವಾದಂತೆ ಆಗುತ್ತದೆ. ಹೀಗಾಗಿ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡುವಾಗ ಬಹಳ ಎಚ್ಚರಿಕೆ ಇರಲಿ ಎಂದು ತಿಳಿಸಿದರು.

ಕೆಲವೊಂದು ವೆಬ್‌ಸೈಟ್ ಅಥವಾ ಆನ್‌ಲೈನ್ ಜಾಹೀರಾತುಗಳಲ್ಲಿ ಕಡಿಮೆ ಬೆಲೆಗೆ ಮೊಬೈಲ್ ಸೇರಿ ದಂತೆ ಎಲೆಕ್ಟ್ರಾನಿಕ್ ಉಪಕರಣಗಳು ಸಿಗುತ್ತದೆ ಎಂದು
ಹಾಕಲಾಗಿರುತ್ತದೆ. ಜತೆಗೆ ಅದರ ಕೆಳಗೆ ಹಲವರ ಫೇಕ್ ರಿವ್ಯೂವ್(ನಕಲಿ ವಿರ್ಮಶೆ)ಗಳನ್ನು ಬರೆಯಲಾಗಿರುತ್ತದೆ. ಇಂತಹ ಫೇಕ್ ರಿವ್ಯೂವ್ ನೋಡಿ ವಸ್ತುಗಳನ್ನು ಖರೀದಿಸಲು ಹೋಗಿ ನಿಮ್ಮ ಹಣವನ್ನು ಕಳೆದುಕೊಂಡು ಮೋಸ ಹೋಗಬೇಡಿ ಎಂದರು.

ನಂಬರ್ ಹುಡುಕಾಟ ಬೇಡ: ಯಾವುದೇ ಕಾರಣಕ್ಕೂ ಗೂಗಲ್‌ನಲ್ಲಿ ಹೆಲ್ಪ್‌ಲೈನ್ ನಂಬರ್ ಹುಡುಕಬೇಡಿ, ಏಕೆಂದರೆ ಮಹಿಳೆಯೊಬ್ಬರು ಆನ್ ಲೈನ್ ಮೂಲಕ ಹೆಲ್ಪ್‌ಲೈನ್ ನಂಬರ್ ಹುಡುಕಿ ತಾವು ಬುಕ್ ಮಾಡಿದ ಫ್ಲೈಟ್ ಕ್ಯಾನ್ಸಲ್ ಮಾಡಲು ಮುಂದಾದಾಗ ಇದರ ಲಾಭ ಪಡೆದುಕೊಂಡ ಸೈಬರ್ ಖದೀಮರು ಹೆಲ್ಪ್‌ ಲೈನ್ ಸಿಬ್ಬಂದಿ ಸೋಗಿನಲ್ಲಿ ಫ್ಲೈಟ್ ಕ್ಯಾನ್ಸಲ್ ಮಾಡುವುದಾಗಿ ಹೇಳಿ ಮಹಿಳೆಯ ಕ್ರಿಡಿಟ್ ಕಾರ್ಡ್ ಮಾಹಿತಿ ಪಡೆದು ಲಕ್ಷಾಂತರ ದೋಚಿದ್ದರು. ಹೀಗಾಗಿ ಗೂಗಲ್‌ ನಲ್ಲಿ ಸಹಾಯವಾಣಿ ನಂಬರ್ ಹುಡುಕಬೇಡಿ. ಒಂದು ವೇಳೆ ಹೆಲ್ಪ್ ಲೈನ್ ನಂಬರ್ ಬೇಕೆಂದರೆ ಕಂಪನಿಯ ವೆಬ್‌ಸೈಟ್‌ಗೆ ಹೋಗಿ ಕಾಂಟ್ಯಾಕ್ಟ್ ಪೇಜ್‌ಗೆ ಹೋಗಿ ಸಹಾಯವಾಣಿ ನಂಬರ್ ಪಡೆದುಕೊಳ್ಳಿ ಎಂದರು.

ಖದೀಮರು ನಮಗಿಂತ 10 ಹೆಜ್ಜೆ ಮುಂದಿದ್ದಾರೆ
ಸೈಬರ್ ಖದೀಮರು ನಮಗಿಂತ 10 ಹೆಜ್ಜೆ ಮುಂದೆ ಇದ್ದಾರೆ. 100 ಸೈಬರ್ ಪ್ರಕರಣಗಳಲ್ಲಿ ಶೇ.೫ರಷ್ಟು ಪ್ರಕರಣಗಳು ಮಾತ್ರ ಕೋರ್ಟ್ ಹಂತಕ್ಕೆ ಬರುತ್ತದೆ. ಉಳಿದ ಶೇ.95ರಷ್ಟು ಪ್ರಕರಣಗಳು ಕೋರ್ಟ್ ಹಂತಕ್ಕೆ ಬರುವುದಿಲ್ಲ. ಏಕೆಂದರೆ ಸೈಬರ್ ಕ್ರೈಂ ಪ್ರಕರಣಗಳು ಬೌಂಡರಿಲೆಸ್ ಮತ್ತು ಫೇಸ್‌ಲೆಸ್ ಆಗಿರುತ್ತದೆ.
ಸೈಬರ್ ಖದೀಮರು ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಕುಳಿತು ಅಪರಾಧ ಕೃತ್ಯ ಎಸಗುತ್ತಿರುತ್ತಾರೆ. ಅಂತಹ ಆರೋಪಿಗಳ ಲೊಕೇಷನ್ ಮತ್ತು ಕಂಪ್ಯೂಟರ್ ಮಾತ್ರ ಪತ್ತೆ ಹಚ್ಚಬಹುದು. ಆದರೆ, ಆ ಕಂಪ್ಯೂಟರ್ ಬಳಸಿದ ವ್ಯಕ್ತಿಯನ್ನು ಪತ್ತೆ ಹಚ್ಚುವುದು ಕಠಿಣದ ಕೆಲಸ. ಹೀಗಾಗಿ ಸೈಬರ್ ಕ್ರೈಂ ಬಗ್ಗೆ
ಅರಿವು ಮತ್ತು ಜಾಗೃತಿ ಹೊಂದುವುದು ಅತ್ಯವಶ್ಯಕ. ಈ ಬಗ್ಗೆ ಅಗಾಧವಾದ ಜ್ಞಾನವನ್ನು ಹೊಂದಿರುವ ಡಾ.ಅನಂತ ಪ್ರಭು ಅವರನ್ನು ವಿಶ್ವವಾಣಿ ಕ್ಲಬ್‌ಹೌಸ್‌ಗೆ ಆಹ್ವಾನಿಸಿ ಅರಿವು ಮೂಡಿಸುತ್ತಿರುವುದು ಸೂಕ್ತವಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿದೇರ್ಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

***

ನಿಮ್ಮ ಖಾತೆಯಿಂದ ಹಣ ದೋಚಿರುವ ಬಗ್ಗೆ ಮಾಹಿತಿ ದೊರೆತ ಕೂಡಲೇ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿ. ಪೊಲೀಸರು ಸಂಬಂಧಪಟ್ಟ ಬ್ಯಾಂಕ್‌ಗೆ ಕರೆ ಮಾಡಿ ಹಣ ವರ್ಗಾವಣೆ ಆಗಿರುವ ಖಾತೆಯನ್ನು ಜಪ್ತಿ ಮಾಡಲಾಗುವುದು. ಇದರಿಂದ ಸೈಬರ್ ಖದೀಮರಿಗೆ ಹಣ ವರ್ಗಾವಣೆ ಆಗುವುದನ್ನು ತಡೆಯಬಹುದು.
– ಪ್ರವೀಣ್ ಸೂದ್ ರಾಜ್ಯ ಪೊಲೀಸ್ ನಿರ್ದೇಶಕ

ಇತ್ತೀಚೆಗೆ ಆಂಗ್ಲ ಪತ್ರಿಕೆಯೊಂದು ವಿಶೇಷ ವರದಿಯನ್ನು ಪ್ರಕಟಿಸಿತ್ತು. ಅದರಲ್ಲಿ ಬಂದ ಅಂಕಿ ಅಂಶಗಳ ಪ್ರಕಾರ ದೆಹಲಿಯಲ್ಲಿ ಪ್ರತಿನಿತ್ಯ 8 ಸಾವಿರಕ್ಕೂ ಹೆಚ್ಚು ಜನರು ಸೈಬರ್ ಕ್ರೈಂ ವಂಚನೆಗೊಳಗಾಗುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಸೈಬರ್ ಅಪರಾಧದ ಬಗ್ಗೆ ಜನರಿಗೆ ಅರಿವು ಮತ್ತು ಜಾಗೃತಿ ಇಲ್ಲದಿರುವುದು. ಸುರಕ್ಷಿತರೇ ಹೆಚ್ಚು ವಂಚನೆಗೊಳಗಾಗುತ್ತಿದ್ದಾರೆ. ಇದರ ಬಗ್ಗೆ ಅರಿವು ಮತ್ತು ಜಾಗೃತಿ ಬೇಕಾಗಿದೆ. ಹೀಗಾಗಿ ಸೈಬರ್ ಕಾನೂನು ಸುರಕ್ಷಾ ಪರಿಣತರಾದ ಡಾ.ಅನಂತ ಪ್ರಭು ಅವರನ್ನು ಕೇಳುಗರ ಒತ್ತಾಯದ ಮೇರೆಗೆ ಎರಡನೇ ಬಾರಿ ವಿಶ್ವವಾಣಿ ಕ್ಲಬ್‌ಗೆ ಆಹ್ವಾನಿಸಿ ಜಾಗೃತಿ ಉಪನ್ಯಾಸ ನಡೆಸಲಾಗಿದೆ.
– ವಿಶ್ವೇಶ್ವರ ಭಟ್, ವಿಶ್ವವಾಣಿ ಪ್ರಧಾನ ಸಂಪಾದಕರು