Roopa Gururaj Column: ಭಗವಂತನ ಬಗೆಗಿನ ವಿಶ್ವಾಸ ಕಡಿಮೆಯಾಗದಿರಲಿ
ರಾಜ್ಯ ಸೋಲುವ ಸ್ಥಿತಿ ಉಂಟಾಯಿತು. ‘ಇಲ್ಲೇ ಇದ್ದರೆ ಇನ್ನು ನನಗೆ ಉಳಿಗಾಲವಿಲ್ಲ, ಪ್ರಾಣವೇ ಹೋದ ಮೇಲೆ ಇನ್ನು ಇವರ ವಿರುದ್ಧ ಹೋರಾಡುವುದಾದರೂ ಹೇಗೆ? ಈಗ ಮೊದಲು ಪ್ರಾಣ ಉಳಿಸಿಕೊಂಡರೆ ಮುಂದೆಯಾದರೂ ಜಯ ಸಾಧಿಸಬಹುದು’ ಎಂದುಕೊಂಡು ಸಣ್ಣ ರಾಜ್ಯದ ರಾಜ ಅಲ್ಲಿಂದ ಪಾರಾಗಲು ಓಡಿದ
Source : Vishwavani Daily News Paper
ಒಂದೊಳ್ಳೆ ಮಾತು
ರೂಪಾ ಗುರುರಾಜ್
ಬಹಳಷ್ಟು ವರ್ಷಗಳ ಹಿಂದೆ ಒಂದು ಪುಟ್ಟ ಸುಭಿಕ್ಷ ರಾಜ್ಯದ ಮೇಲೆ ದೊಡ್ಡ ರಾಜ್ಯದ ರಾಜ ದಂಡೆತ್ತಿ ಬಂದ. ಎರಡು ಕಡೆಯವರಿಗೂ ಭೀಕರ ಯುದ್ಧ ಆರಂಭವಾಯಿತು.
ಸಣ್ಣ ರಾಜ್ಯದ ಪ್ರಜೆಗಳಿಗೆ ತಮ್ಮ ರಾಜನ ಮೇಲೆ ಅತ್ಯಂತ ಪ್ರೀತಿ. ಆದರೆ ಆ ರಾಜ್ಯ
ಸೋಲುವ ಸ್ಥಿತಿ ಉಂಟಾಯಿತು. ‘ಇಲ್ಲೇ ಇದ್ದರೆ ಇನ್ನು ನನಗೆ ಉಳಿಗಾಲವಿಲ್ಲ, ಪ್ರಾಣವೇ ಹೋದ ಮೇಲೆ ಇನ್ನು ಇವರ ವಿರುದ್ಧ ಹೋರಾಡುವುದಾದರೂ ಹೇಗೆ? ಈಗ ಮೊದಲು ಪ್ರಾಣ ಉಳಿಸಿಕೊಂಡರೆ ಮುಂದೆಯಾದರೂ ಜಯ ಸಾಧಿಸಬಹುದು’ ಎಂದುಕೊಂಡು ಸಣ್ಣ ರಾಜ್ಯದ ರಾಜ ಅಲ್ಲಿಂದ ಪಾರಾಗಲು ಓಡಿದ.
ಶೌರ್ಯವಂತನಾದ ಅವನು ಮತ್ತೆ ಸೈನ್ಯವನ್ನು ಒಗ್ಗೂಡಿಸಿ ದೊಡ್ಡ ರಾಜನನ್ನು ಮಣಿಸಲೇಬೇಕು ಎಂದುಕೊಂಡು ಪರಾರಿಯಾಗುವ ನಿರ್ಧಾರಕ್ಕೆ ಬಂದಿದ್ದ. ಓಡುತ್ತಾ ಓಡುತ್ತಾ ಬೆಟ್ಟವೊಂದಕ್ಕೆ ಬಂದ ಅವನು, ಅಲ್ಲಿದ್ದ ಹಲವಾರು ಗುಹೆಗಳಲ್ಲಿ ಒಂದರ ಒಳ
ಹೊಕ್ಕು ಬಚ್ಚಿಟ್ಟುಕೊಂಡ. ಆದರೆ ಇದು ಸುರಕ್ಷಿತವಾದ ತಾಣವಲ್ಲ, ಇನ್ನು ಕೆಲವೇ ಹೊತ್ತಿನಲ್ಲಿ ಶತ್ರು ಪಾಳಯ ತನ್ನನ್ನು ಹುಡುಕಿಕೊಂಡು ಬಂದೇ ಬರುತ್ತದೆ ಎಂಬುದು ಅವನಿಗೆ ತಿಳಿದಿತ್ತು.
ಆದರೂ ಏನು ಮಾಡಲೂ ತೋಚದೆ ದೇವರನ್ನು ನಂಬಿ ಅಪಾರವಾದ ಭಕ್ತಿಯಿಂದ ಕಣ್ಣುಮುಚ್ಚಿ ಪ್ರಾರ್ಥನೆ ಮಾಡಲು ಶುರು ಮಾಡಿದ. ‘ದೇವರೇ ನನಗೆ ನನ್ನ ರಾಜ್ಯ ಬೇಕು. ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ. ನನ್ನನ್ನು ಮತ್ತು ಆ ಮೂಲಕ ನನ್ನ ಪ್ರಜೆಗಳನ್ನು ರಕ್ಷಿಸುವ ಹೊಣೆ ನಿನ್ನದು’ ಎಂದು ಮೊರೆಯಿಟ್ಟ.
ಅಷ್ಟರಲ್ಲಿ ಅಲ್ಲಿದ್ದ ಜೇಡವೊಂದು ಗುಹೆಯ ಬಾಗಿಲಲ್ಲಿ ಬಲೆ ಕಟ್ಟಲು ಶುರು ಮಾಡಿತು. ಅದನ್ನು ಕಂಡ ರಾಜ, ‘ಅಯ್ಯೋ ದೇವರೇ ಇಂದು ಕಲ್ಲಿನದೋ ಪೊದೆಯದೋ ಗೋಡೆ ಕಟ್ಟಿ ನನ್ನನ್ನು ಕಾಪಾಡುವೆ ಎಂದುಕೊಂಡರೆ, ಕೇವಲ ಕೈಯಲ್ಲಿ ಸರಿಸಿ ಒಳನುಗ್ಗ ಬಹುದಾದ ಬಲೆ ಸೃಷ್ಟಿಸುತ್ತಿರುವೆಯಲ್ಲ’ ಎಂದು ಪೇಚಾಡಿಕೊಂಡ. ಅಷ್ಟರಲ್ಲಾಗಲೇ ಶತ್ರುಪಡೆಯ ಹೆಜ್ಜೆ ಸಪ್ಪಳ ಕೇಳಿಸಿತು. ಅವರು ಎಲ್ಲ ಗುಹೆಗಳನ್ನೂ ಹುಡುಕತೊಡಗಿದರು.
ಈ ಗುಹೆಯ ಬಳಿಗೂ ಬಂದರು. ಇನ್ನು ತನ್ನ ಗತಿ ಮುಗಿದೇಹೋಯಿತು ಎಂದು ಚಿಂತಾ ಕ್ರಾಂತನಾದ ರಾಜ ಉಸಿರು ಬಿಗಿಹಿಡಿದು ಕುಳಿತ. ಹೊರಗಿದ್ದವರು ಈ ಗುಹೆಯ ಒಳ ಹೋಗಲು ಅಡಿ ಇಡುತ್ತಿದ್ದಂತೆಯೇ ಅವರನ್ನು ತಡೆದ ಮುಖ್ಯಸ್ಥ ‘ಏಯ್ ಈ ಗುಹೆಯ ಒಳಗೆ ಹೋಗಿ ಸುಮ್ಮನೆ ಕಾಲಹರಣ ಮಾಡಬೇಡಿ. ಇಲ್ಲಿ ಬಾಗಿಲ ಜೇಡರ ಬಲೆ ಇದೆ ನೋಡಿ. ಯಾರಾದರೂ ಒಳಗೆ ಹೋಗಿದ್ದರೆ ಬಲೆಯನ್ನು ಸರಿಸಿ ಹೋಗುತ್ತಿದ್ದರು.
ಹೀಗಾಗಿ ರಾಜನಿಗಾಗಿ ಬೇರೆ ಗುಹೆಗಳಲ್ಲಿ ಹುಡುಕಿ’ ಎಂದು ಆದೇಶಿಸಿದ. ಹೀಗೆ ರಾಜನ ಪ್ರಾಣ ಉಳಿದಿತ್ತು. ಆ ದೇವರು ನಾವು ಅಂದುಕೊಳ್ಳುವ ದಾರಿಯಲ್ಲಿ ನಮ್ಮನ್ನು ಕರೆದೊಯ್ಯದೇ ಇರಬಹುದು. ನಮಗೆ ಜೀವನಪಾಠ ಕಲಿಸುವ ಅಪೇಕ್ಷೆ ಇರಬಹುದು ಆತನಿಗೆ. ನಮ್ಮ ನಂಬಿಕೆ ಅಚಲವೂ, ದೃಢವಾದದ್ದೂ, ಗಾಢವಾದದ್ದೂ ಆಗಿದ್ದರೆ, ಕಾಯುವ ತಾಳ್ಮೆ ನಮಗಿ ದ್ದರೆ ನಮ್ಮ ನಂಬಿಕೆಯ ಮೇಲಿನ ನಂಬಿಕೆ ಹುಸಿಯಾಗಲಾರದು.
ಕೆಲವೊಮ್ಮೆ ನಾವು ಅಂದುಕೊಂಡಂತೆ ಎಲ್ಲವೂ ಆಗುವುದಿಲ್ಲ, ಆಗ ನಮಗೆ ನಮ್ಮ ಪ್ರಯತ್ನಗಳ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಾ ಹೋಗುತ್ತದೆ. ದೇವರು ನಿಜವಾಗಿ ನಮಗೆ ಸಹಾಯ ಮಾಡುತ್ತಾನೋ? ಎಂಬ ಹಲವಾರು ಗೊಂದಲಗಳು ಕೂಡ ಮನಸ್ಸಿನಲ್ಲಿ
ಮೂಡುತ್ತವೆ. ಆದರೆ ಇಂತಹ ಗೊಂದಲಗಳ ಬೆನ್ನ ಬೆಳಕು ಕಾಣುತ್ತಾ ಹೋಗುತ್ತದೆ. ಕಾಯುವ ತಾಳ್ಮೆ ನಮಗಿರಬೇಕು ಅಷ್ಟೇ. ಎಷ್ಟು ಬಾರಿ ಇನ್ನೇನು ಆ ಕೆಲಸ ಆಗಿಬಿಡುತ್ತದೆ ಎನ್ನುವ ಹಂತದಲ್ಲಿ ನಾವು ಅದನ್ನು ಬಿಟ್ಟು ಹೊರಟುಬಿಡುತ್ತೇವೆ.
ಅಷ್ಟು ದಿನದ ನಮ್ಮ ಶ್ರಮ, ಕಾಯುವಿಕೆ ಗೆಲ್ಲವೂ ಒಂದು ಕ್ಷಣದ ನಿರಾಸೆಯಿಂದ ಕೈತಪ್ಪಿ ಹೋಗಿಬಿಡುತ್ತದೆ. ಆದ್ದರಿಂದಲೇ ಭಗವಂತನಲ್ಲಿ ಅಪರಿಮಿತ ವಿಶ್ವಾಸ, ನಮ್ಮ ಪ್ರಯತ್ನ ದಲ್ಲಿ ನಂಬಿಕೆ ಇದ್ದಾಗ, ತಾಳ್ಮೆಯನ್ನೂ ಮೈಗೂಡಿಸಿಕೊಂಡು ಮುಂದುವರೆದರೆ ಖಂಡಿತ ಕಾರ್ಯಸಿದ್ಧಿ ನಮ್ಮದು.
ಇದನ್ನೂ ಓದಿ: Ramesh Jarakiholi: ಮಹಾರಾಷ್ಟ್ರ ನೂತನ ಸಿಎಂಗೆ ರಮೇಶ್ ಜಾರಕಿಹೊಳಿ ಅಭಿನಂದನೆ