Sunday, 29th September 2024

Vishweshwar Bhat Column: ಬುಖಾರಾದಲ್ಲಿ ಮುಲ್ಲಾ ನಸ್ರುದ್ದೀನ್‌

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಇತ್ತೀಚಿನ ದಿನಗಳಲ್ಲಿ ಉಜ್ಬೆಕಿಸ್ತಾನಕ್ಕೆ ಹಲವರು ಹೋಗುತ್ತಾರೆ. ಅವರಲ್ಲಿ ಅನೇಕರು ತಾಷ್ಕೆಂಟ್ ನಗರವನ್ನು ನೋಡಿ ಬರುತ್ತಾರೆ. ಆದರೆ, ಅಲ್ಲಿನ ಐತಿಹಾಸಿಕ ಮತ್ತು ಪುರಾತನ ನಗರವಾದ ‘ಬುಖಾರ’ಕ್ಕೆ ಹೋಗುವುದೇ ಇಲ್ಲ. ನಾನು ಉಜ್ಬೆಕಿಸ್ತಾನಕ್ಕೆ ಹೋದಾಗ, ಬುಖಾರಾ ನಗರಕ್ಕೆ ಹೋಗಲೇಬೇಕೆಂದು ನಿರ್ಧರಿಸಿದ್ದೆ. ಮಧ್ಯ ಏಷ್ಯಾದಲ್ಲಿ ಪುರಾತನ ನಾಗರಿಕತೆ ಹೊಂದಿದ ಅಪರೂಪದ ನಗರಗಳಲ್ಲಿ ಅದೂ ಒಂದು. ತಾಷ್ಕೆಂಟ್ ಮತ್ತು ಸಮರಕಂಡದ ಬಳಿಕ ಬುಖಾರಾ ಪ್ರಮುಖ ನಗರವಾಗಿದೆ. 2000 ವರ್ಷಗಳ ಹಿಂದೆ ಆ ನಗರ ತಲೆ ಎತ್ತಿರಬಹುದು ಎಂದು ಅಂದಾಜಿಸ ಲಾಗಿದೆ. ಆ ನಗರ ವಾಣಿಜ್ಯ, ಶಿಕ್ಷಣ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿತ್ತು. ಆ ನಗರಕ್ಕೆ ವರ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಸೂಫಿ ಸಂತರು ಸಹ ಬುಖಾರದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ನೆಲೆಸಿದ್ದರು.

ಬುಖಾರಾದಲ್ಲಿ ಎಲ್ಲಿಯೇ ನಡೆದಾಡಿದರೂ ಇತಿಹಾಸದ ಮೇಲೆ ನಡೆದಾಡಿದಂತೆ ಎಂಬ ಮಾತಿದೆ. ಅದಕ್ಕೆ ಕಾರಣ ಆ ನಗರದಲ್ಲಿ ಸಾವಿರಕ್ಕೂ ಹೆಚ್ಚು ಐತಿಹಾಸಿಕ ತಾಣಗಳಿವೆ. 140ಕ್ಕೂ ಹೆಚ್ಚು ಮಿನಾರುಗಳು, ಮಸೀದಿಗಳು, ಪುರಾತನ ಮಹಲುಗಳಿವೆ. ಇವೆಲ್ಲವುಗಳನ್ನೂ ಜಾಗತಿಕ ಪಾರಂಪರಿಕ ತಾಣಗಳೆಂದು ಯುನೆಸ್ಕೋ ಘೋಷಿಸಿದೆ. ಒಂದು ದಿನದಲ್ಲಿ ಆ ನಗರವನ್ನು ನೋಡಲು ಸಾಧ್ಯವೇ ಇಲ್ಲ.

ಕಾರಣ ಪ್ರತಿ ಕಟ್ಟಡವೂ ಕಥೆಯನ್ನು ಹೇಳುತ್ತದೆ. ಬುಖಾರಾಕ್ಕೆ ಹೋದಾಗ ನನಗೊಂದು ಅಚ್ಚರಿ ಕಾದಿತ್ತು. ನಮ್ಮೊಂದಿಗಿದ್ದ ಗೈಡ್, ‘ನೀವು ಮು ನಸ್ರುದ್ದೀನ್ ಹೆಸರನ್ನು ಕೇಳಿರಬಹುದು. ಇಲ್ಲಿ ಅವನ ಪ್ರತಿಮೆಯಿದೆ’ ಎಂದು ಹೇಳಿದ. ನಾನು ಓಶೋ ಪುಸ್ತಕಗಳಲ್ಲಿ ಮು ನಸ್ರುದ್ದೀನನ ಹಾಸ್ಯ ಪ್ರಸಂಗಗಳನ್ನು ಓದಿದವನು. ಮು ಕಥೆಗಳನ್ನು ಓಶೋನಷ್ಟು ಪರಿಣಾಮಕಾರಿಯಾಗಿ ಬೇರಾರೂ ಕಟ್ಟಿಕೊಟ್ಟಿಲ್ಲ.

ನಾನು ಅನೇಕ ಸಂದರ್ಭಗಳಲ್ಲಿ ಮು ನಸ್ರುದ್ದೀನನ ಜೋಕುಗಳನ್ನು ನನ್ನ ಬರಹಗಳಲ್ಲಿ ಬಳಸಿದ್ದಿದೆ. ಅಸಲಿಗೆ ಮು ನಸ್ರುದ್ದೀನ್ ಎಂಬ ವ್ಯಕ್ತಿಯೇ ಇಲ್ಲ. ಅದೊಂದು ಕಾಲ್ಪನಿಕ ಪಾತ್ರ. ಈ ಪಾತ್ರ ಇಸ್ಲಾಮಿಕ್ ದೇಶಗಳಲ್ಲಿ ಮಾತ್ರ ಅಲ್ಲ, ಜಗತ್ತಿನಲ್ಲಿಯೇ ಸುಪರಿಚಿತ. ಮುನ ಜೋಕುಗಳು ಟರ್ಕಿ, ಇರಾನ್, ಇರಾಕ್, ಮಧ್ಯ ಏಷ್ಯಾ ಮುಂತಾದ ದೇಶಗಳಲ್ಲಿ ಬಹು ಜನಪ್ರಿಯ. ಅನೇಕರಿಗೆ ಅದೊಂದು ಕಾಲ್ಪನಿಕ ಪಾತ್ರ ಎಂಬುದೂ ಗೊತ್ತಿಲ್ಲ. ಆ ಹೆಸರಿನ ವ್ಯಕ್ತಿ ಬದುಕಿದ್ದ ಎಂದೇ ಅನೇಕರು ಭಾವಿಸಿದ್ದಾರೆ.

ಸುಮಾರು 30 ವರ್ಷಗಳ ಹಿಂದೆ, ದೂರದರ್ಶನದಲ್ಲಿ ಆತನ ಹಾಸ್ಯ ಪ್ರಸಂಗಗಳ ಧಾರಾವಾಹಿ ಕೂಡ ಪ್ರಸಾರ ವಾಗಿತ್ತು. 1943ರಲ್ಲಿಯೇ ‘ಬುಖಾರಾದಲ್ಲಿ ನಸ್ರುದ್ದೀನ್’ (Nasruddin in Bukhara) ಎಂಬ ಹಾಸ್ಯ ಸಿನಿಮಾ ಕೂಡ ತೆರೆ ಕಂಡಿದ್ದನ್ನು ಕೇಳಿದ್ದೆ. ಯಾವಾಗ ಗೈಡ್ ಮು ನಸ್ರುದ್ದೀನನ ಪ್ರತಿಮೆ ಬಗ್ಗೆ ಹೇಳಿದನೋ, ಅದನ್ನು ನೋಡಲೇಬೇಕು ಎಂಬ ಆಸೆಯಾಯಿತು.

ಬುಖಾರಾ ನಗರಕ್ಕೆ ನೀರನ್ನು ಪೂರೈಸುವ ಲಿಯಾಬಿ ಹೌಜ್ ಎನ್ನುವ ಕೊಳದ ಪಕ್ಕದಲ್ಲಿಯೇ ಮುನ ಕಂಚಿನ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಮುಕತ್ತೆಯ ಮೂಲಕ ಊರಿಂದ ಊರಿಗೆ ಪ್ರಯಾಣ ಮಾಡುತ್ತಿದ್ದುದರಿಂದ,
ಕತ್ತೆಯ ಮೇಲೆ ಕುಳಿತ ಮುನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಟರ್ಕಿಯಲ್ಲಿ ಮುಲ್ಲಾ ನಸ್ರುದ್ದೀನ್ ಬಹಳ ಪ್ರಸಿದ್ಧ. ಅಲ್ಲಿನ ಸಾಹಿತ್ಯದಲ್ಲೂ ಆತನ ಪ್ರಸ್ತಾಪ ದಟ್ಟವಾಗಿದೆ. ಆದರೆ ಟರ್ಕಿಯಲ್ಲಿ ಆತನ ನೆನಪಿಗಾಗಿ ಒಂದು ಸ್ಮಾರಕವಿಲ್ಲ ಅಥವಾ ಪ್ರತಿಮೆಯೂ ಇಲ್ಲ. ಆದರೆ ಬುಖಾರಾ ನಗರದಲ್ಲಿ ಆತನನ್ನು ನೆನಪಿಸಿಕೊಂಡಿರುವುದು ಗಮನಾರ್ಹ.

ತಲೆ ಮೇಲೆ ಸದಾ ಬಟ್ಟೆಯ ಗಂಟು ಹೊತ್ತ ಮುನ ಚಿತ್ರ ಸಾಮಾನ್ಯ. ಆದರೆ ಕಂಚಿನ ಪ್ರತಿಮೆಯಲ್ಲಿ ತಲೆ ಮೇಲೆ ಗಂಟನ್ನು ಇಟ್ಟಿಲ್ಲ. ಕತ್ತೆಯ ಮೇಲೆ ಕುಳಿತ ಮುನ ಒಂದು ಕಾಲಿನ ಚಪ್ಪಲಿ ನೆಲಕ್ಕೆ ತಾಕುತ್ತಿದೆ. ಮತ್ತೊಂದು ಕಾಲು ಗಾಳಿಯಲ್ಲಿದೆ. ಒಂದು ಕೈಯನ್ನು ಮು ಎದೆಯ ಮೇಲೆ ಇಟ್ಟುಕೊಂಡಿದ್ದಾನೆ, ಮತ್ತೊಂದು ಕೈ ‘ಎಲ್ಲವೂ ಚೆನ್ನಾಗಿದೆ, ಸುಂದರವಾಗಿದೆ’ ಎಂಬ ಸೂಚನೆ ನೀಡುತ್ತಿರುವಂತಿದೆ. ಒಂದು ವೇಳೆ ಬುಖಾರಾಕ್ಕೆ ಹೋಗಿಯೂ ಮುಲ್ಲಾ ನಸ್ರುದ್ದೀನ್‌ನ ಪ್ರತಿಮೆಯನ್ನು ನೋಡಿರದಿದ್ದರೆ ನನಗೆ ಅತೀವ ಬೇಸರವಾಗುತ್ತಿತ್ತು. ಈಗಲೂ ಬುಖಾರಾ ಅಂದ್ರೆ ಸಾಕು ಮು ನಸ್ರುದ್ದೀನನೇ ಕಣ್ಮುಂದೆ ಬರುತ್ತಾನೆ.

ಇದನ್ನೂ ಓದಿ: Vishweshwar Bhat Column: ಪುತ್ತೂರಾಯರ ʼಪದ ಪಂಚಾಮೃತʼ