Saturday, 30th November 2024

Vishweshwar Bhat Column: ಸಂಪಾದಕರು ತಲೆತಗ್ಗಿಸೋದು ಯಾವಾಗ ?

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಪತ್ರಿಕೆಗಳಲ್ಲಿ ಪ್ರಮಾದವಾಗುವುದು ಸಹಜ. ಪ್ರತಿದಿನವೂ ಎಲ್ಲ ಪತ್ರಿಕೆಗಳಲ್ಲೂ ಒಂದಿಲ್ಲೊಂದು ಪ್ರಮಾದವಾಗುತ್ತಲೇ ಇರುತ್ತದೆ.‌ ಅದರಲ್ಲೂ ಕರಡು ದೋಷಗಳು (Proof mistakes) ಇಣುಕುವುದು ಸಾಮಾನ್ಯ. ಇಂಥ ದೋಷಗಳನ್ನು ಓದುಗರು ತೀರಾ ಗಂಭೀರವಾಗಿ ಪರಿಗಣಿಸುವು ದಿಲ್ಲ. ಗಂಭೀರ ಓದುಗರು ಅಥವಾ ಭಾಷಾತಜ್ಞರು ಇಂಥ ಪ್ರಮಾದಗಳನ್ನು ಸಹಿಸುವುದಿಲ್ಲ ಎಂಬುದು ಬೇರೆ ಮಾತು.

‘ಪ್ರತಿದಿನ ನಾನು ನನ್ನ ಪತ್ರಿಕೆಯನ್ನು ತಡವಾಗಿ ಓದುತ್ತೇನೆ, ಮೊದಲು ನನ್ನ ಪತ್ರಿಕೆಯನ್ನು ಎತ್ತಿಕೊಳ್ಳಲು ಧೈರ್ಯ ಸಾಕಾಗುವುದಿಲ್ಲ.
ಏನಾದರೂ ಪ್ರಮಾದವಾದರೆ ಎಂಬ ಆತಂಕ ಸದಾ ಒಳಮನಸ್ಸಿನಲ್ಲಿ ನೆಲೆಸಿರುತ್ತದೆ’ ಎಂದು ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ಸಂಪಾದಕ ರಾಗಿದ್ದ ಬೆಂಜಮಿನ್ ಬ್ರಾಡ್ಲಿ ಹೇಳಿದ್ದು ಎಲ್ಲ ಸಂಪಾದಕರ ಅನಿಸಿಕೆಯೂ ಇದ್ದೀತು. ಪ್ರಸಿದ್ಧ ಸಿತಾರ್ ವಾದಕ ಪಂಡಿತ್ ರವಿಶಂಕರ್ ೨೦೧೨ರಲ್ಲಿ ನಿಧನರಾದಾಗ, ಪ್ರತಿಷ್ಠಿತ ಎಂಟಿವಿ ವೆಬ್‌ಸೈಟ್ Ravishankar, Beatles Influence, Dead At 92 ಎಂಬ ಶೀರ್ಷಿಕೆಯಡಿಯಲ್ಲಿ ಶ್ರೀ ಶ್ರೀ ರವಿಶಂಕರ್ ಅವರ ಫೋಟೋವನ್ನು ಪ್ರಕಟಿಸಿ ದೊಡ್ಡ ಪ್ರಮಾದ ಮಾಡಿತ್ತು.

ಇದು ಪಂಡಿತ್ ರವಿಶಂಕರ್ ಮತ್ತು ಶ್ರೀ ಶ್ರೀ ರವಿಶಂಕರ್ ಇಬ್ಬರಿಗೂ ಮಾಡಿದ ಅವಮಾನವೇ. ಸಾಮಾನ್ಯ ಜ್ಞಾನ ಇಲ್ಲದ ಉಪಸಂಪಾದಕ ನೊಬ್ಬ ಸಂಪಾದಕನ ಮರ್ಯಾದೆ ಕಳೆದಿದ್ದ. ಇಂಥ ಪ್ರಮಾದಗಳಾದಾಗ ತಲೆತಗ್ಗಿಸಿ ‘ತಪ್ಪಾಯ್ತು, ಕ್ಷಮಿಸಿ’ ಎಂದು ಹೇಳುವುದರ ಹೊರತಾಗಿ ಸಂಪಾದಕನಿಗೆ ಬೇರೆ ಯಾವ ಮಾರ್ಗವೂ ಇರುವುದಿಲ್ಲ. ಟೈಟಾನಿಕ್ ಹಡಗು ಮುಳುಗಿದಾಗ, ಅಮೆರಿಕದ ‘ಸಿರಾಕ್ಯೂಸ್ ಹೆರಾಲ್ಡ್’ ಪತ್ರಿಕೆ,
World’s Biggest Ship Crashes Into Iceberg At Night ಎಂದು ಪ್ರಿಂಟ್ ಮಾಡಿ ಯಡವಟ್ಟು ಮಾಡಿತ್ತು. ಈ ಪ್ರಮಾದ ಮಾಡಿದ್ದು ಅದೊಂದೇ ಅಲ್ಲ, ‘ಒಸ್ವೇಗೋ ಡೇಲಿ ಟೈಮ್ಸ್’ ಪತ್ರಿಕೆಯೂ ‘”All Passengers Safely Transferred to Other Vessels” ಎಂಬ ಶೀರ್ಷಿಕೆ ಹಾಕಿ ಮುಜುಗರಕ್ಕೀಡಾಗಿತ್ತು.

ಲಂಡನ್ನಿನ ‘ದಿ ಗಾರ್ಡಿಯನ್’ ಪತ್ರಿಕೆಯ ಸುದ್ದಿಮನೆಯಲ್ಲಿ, 1948ರ ನವೆಂಬರ್ 3ನೇ ತಾರೀಖಿನ ಅಮೆರಿಕದ ‘ಚಿಕಾಗೋ ಡೇಲಿ ಟ್ರಿಬ್ಯೂನ್’ ಪತ್ರಿಕೆಯ ಮುಖಪುಟಕ್ಕೆ ಫ್ರೇಮ್ ಕಟ್ಟಿಸಿ ಎಲ್ಲರಿಗೂ ಕಾಣುವಂತೆ ತೂಗುಹಾಕಿದ್ದಾರೆ. ಅಂದಿನ ಪತ್ರಿಕೆಯ ಲೀಡ್ ಹೆಡ್‌ಲೈನ್- DEWEY DEFEATS TRUMAN. 1948ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹ್ಯಾರಿ ಟ್ರೂಮನ್ ಮತ್ತು ಥಾಮಸ್ ಡೇವೆಯ್
ಸ್ಪರ್ಧಿಸಿದ್ದರು. ‘ಚಿಕಾಗೋ ಡೇಲಿ ಟ್ರಿಬ್ಯೂನ್’ ರಿಪಬ್ಲಿಕನ್ ಪಕ್ಷದ ಕಡೆ ಒಲವುಳ್ಳ ಪತ್ರಿಕೆಯೆಂದೇ ಪರಿಗಣಿತವಾಗಿತ್ತು. ಆ ಪತ್ರಿಕೆ ಒಮ್ಮೆ
ಡೆಮಾಕ್ರಟಿಕ್ ಪಕ್ಷದ ಟ್ರೂಮನ್ ಅವರನ್ನು ಬೆಪ್ಪುತಕ್ಕಡಿ ಅಥವಾ ಕ್ಷುಲ್ಲಕ ವ್ಯಕ್ತಿ (nincompoops) ಎಂದು ಮೂದಲಿಸಿತ್ತು. ಪತ್ರಿಕೆಯ
ಮೊದಲ ಆವೃತ್ತಿ ಮುದ್ರಣಕ್ಕೆ ಹೋಗುವ ಹೊತ್ತಿಗೆ, ಮತಗಳ ಎಣಿಕೆ ಅರ್ಧ ಮುಗಿದಿತ್ತು. ಇಬ್ಬರ ನಡುವೆ ಸಮಬಲದ ಪೈಪೋಟಿ ಏರ್ಪಟ್ಟಿತ್ತು. ಆ ದಿನಗಳಲ್ಲಿ ‘ಚಿಕಾಗೋ ಡೇಲಿ ಟ್ರಿಬ್ಯೂನ್’ ಪತ್ರಿಕೆಯ ಆರ್ಥರ್ ಸೇಯಾರ್ಸ್ ಹೆನ್ನಿಂಗ್ ಬರೆಯುವ ರಾಜಕೀಯ ವರದಿ ಪ್ರಸಿದ್ಧವಾಗಿತ್ತು. ಆತ 5 ಅಧ್ಯಕ್ಷೀಯ ಚುನಾವಣೆಗಳನ್ನು ಕರಾರುವಾಕ್ಕಾಗಿ ವರದಿ ಮಾಡಿದ್ದ.

ಅಂದು ಪೂರ್ಣ ಫಲಿತಾಂಶ ಪ್ರಕಟವಾಗಿರಲಿಲ್ಲ, ಹಾಗೆಂದು ಮೊದಲ ಆವೃತ್ತಿಗೆ ಸುದ್ದಿಯನ್ನು ನೀಡಬೇಕಾದ ಧಾವಂತ. ತನ್ನ ರಾಜಕೀಯ ಲೆಕ್ಕಾಚಾರ ಮತ್ತು ಅನುಭವವನ್ನು ಬಳಸಿ, ಥಾಮಸ್ ಡೇವೆಯ್, ಟ್ರೂಮನ್ ಅವರನ್ನು ಸೋಲಿಸಿದರು ಎಂದು ಬರೆದುಬಿಟ್ಟ. ಆದರೆ ಬೆಳಗಿನ ಹೊತ್ತಿಗೆ ಅಂತಿಮ ಫಲಿತಾಂಶ ಪ್ರಕಟವಾದಾಗ, ಟ್ರೂಮನ್ ಗೆದ್ದಿದ್ದರು! ಆದರೆ ಮೊದಲ ಆವೃತ್ತಿಯಲ್ಲಿ ‘ಟ್ರೂಮನ್‌ಗೆ ಸೋಲು’ ಎಂದು ಪ್ರಕಟವಾಗಿಬಿಟ್ಟಿತ್ತು. ಆ ಪತ್ರಿಕೆಯನ್ನು ಸ್ವತಃ ಟ್ರೂಮನ್ ಎತ್ತಿ ಹಿಡಿದು ತೋರಿಸಿದ್ದರು.

ಇದನ್ನೂ ಓದಿ: @vishweshwarbhat