Saturday, 7th September 2024

ನಂಬಿಕೆಗಳೂ ಕುಸಿಯುತ್ತಿವೆ

ಬಿಹಾರದಲ್ಲಿ ಕಳೆದ ೧೫ ದಿನಗಳಿಂದ ಒಂದರ ಮೇಲೊಂದರಂತೆ ಸೇತುವೆಗಳು ಕುಸಿದು ಬೀಳುತ್ತಿವೆ. ಮಂಗಳವಾರ ಸಿವಾನ್ ಜಿಲ್ಲೆಯ ಗಂಡಕಿ ನದಿಯ ಮೇಲಿನ ಸೇತುವೆಯ ಒಂದು ಭಾಗ ಕುಸಿದಿದೆ. ಇದು ಕಳೆದ ೧೫ ದಿನಗಳಲ್ಲಿ ನಡೆದ ಏಳನೇ ಘಟನೆಯಾಗಿದೆ. ಇಲ್ಲಿ ಸೇತುವೆ ಮಾತ್ರ ಕುಸಿಯುತ್ತಿಲ್ಲ.

ಸಾರ್ವಜನಿಕ ವ್ಯವಸ್ಥೆ ಬಗ್ಗೆ ಜನರ ನಂಬಿಕೆಯೂ ಇದೇ ತೆರದಲ್ಲಿ ಕುಸಿಯುತ್ತಿದೆ. ಕೆಲವು ಸೇತುವೆಗಳು ಮಳೆಯ ಭಾರೀ ಮಳೆಯ ಕಾರಣಕ್ಕೆ ಕುಸಿದಿವೆ ಎಂದು ಹೇಳಲಾಗಿದೆ. ಇನ್ನು ಕೆಲವು ಸೇತುವೆಗಳು ಬಿರು ಬಿಸಿಲಿನಲ್ಲಿಯೇ ಕುಸಿದು ಬಿದ್ದಿವೆ. ಒಂದೆರಡು ಸೇತುವೆಗಳು ನಿರ್ಮಾಣ ಹಂತದಲ್ಲಿಯೇ ಕುಸಿದಿವೆ. ಕುಸಿದು ಬಿದ್ದ ಸೇತುವೆಗಳಲ್ಲಿ ಹೆಚ್ಚಿನವು ಒಂದೆರಡು ದಶಕಗಳ ಒಳಗೆ ನಿರ್ಮಾಣಗೊಂಡಿವೆ. ಸಿವಾನ್ ಜಿಲ್ಲೆಯಲ್ಲಿ ಎರಡು ಸೇತುವೆಗಳು ಕುಸಿದರೆ, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್‌ನಂತಹ ಜಿಲ್ಲೆಗಳಲ್ಲಿ ಇದೇ ರೀತಿಯ ಘಟನೆಗಳು ವರದಿ ಯಾಗಿವೆ. ಈ ಘಟನೆಗಳ ತನಿಖೆಗಾಗಿ ಬಿಹಾರ ಸರಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ. ಅದೃಷ್ಟವಶಾತ್ ಸೇತುವೆ ಕುಸಿತ ಪ್ರಕರಣದಲ್ಲಿ ಸಾವು, ನೋವು ಸಂಭವಿ ಸಿಲ್ಲ.

ಬ್ರಿಟಿಷರ ಕಾಲದಲ್ಲಿ ಈ ದೇಶದಲ್ಲಿ ಕಟ್ಟಿದ ಸೇತುವೆಗಳು ಇನ್ನೂ ಗಟ್ಟಿ ಮಟ್ಟಾಗಿ ಉಳಿದಿವೆ. ಕೆಲವೊಂದು ಸೇತುವೆಗಳಲ್ಲಿ ಸಂಚಾರ ಸ್ಥಗಿತಗೊಳಿಸಿದ್ದರೂ. ಈ ಸೇತುವೆಯನ್ನು ಕೆಡವಲು ಸಾಧ್ಯವಾಗಿಲ್ಲ. ತಂತ್ರಜ್ಞಾನ ಇನ್ನೂ ಮುಂದುವರಿಯದ ಆ ಕಾಲದಲ್ಲಿ ಕಟ್ಟಿದ ಸೇತುವೆಗಳು ಎರಡು ಶತಮಾನಗಳ ಬಳಿಕವೂ ಸುಭದ್ರವಾಗಿ ಉಳಿದಿವೆ. ಆದರೆ ಕಳೆದ ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಕಟ್ಟಿದ, ಅದರಲ್ಲೂ ಇತ್ತೀಚಿಗೆ ಕಟ್ಟಿದ ಸೇತುವೆಗಳು ಬೆಂಕಿಪೊಟ್ಟಣ ಗಳಂತೆ ಕುಸಿದು ಬೀಳುತ್ತಿವೆ. ಇದಕ್ಕೆ ಕಾರಣ ತಿಳಿಯಲು ತನಿಖೆಯೇ ಬೇಕಾಗಿಲ್ಲ.

ಕಳಪೆ ಕಾಮಗಾರಿಯ ಕಾರಣದಿಂದಲೇ ಇವೆಲ್ಲವೂ ಕುಸಿದು ಬಿದ್ದಿರುವುದು ಸುಸ್ಪಷ್ಟ. ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರು, ಇದರ ಮೇಲ್ವಿಚಾರಣೆ ನಡೆಸಬೇಕಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದರೆ ಈ ಸೇತುವೆಗಳೂ ಶತಮಾನಗಳ ಕಾಲ ಭದ್ರವಾಗಿರುತ್ತಿತ್ತು. ಆದರೆ ದುಡ್ಡು ಹೊಡೆಯುವ ಕಾರಣದಿಂದಲೇ ಸಾರ್ವಜನಿಕ ಕಾಮಗಾರಿ ಕೈಗೆತ್ತಿಕೊಳ್ಳುವ ಈ ದಿನಗಳಲ್ಲಿ ರಾಮಮಂದಿರದ ನಿರ್ಮಾಣವೂ ಸೇರಿದಂತೆ ಯಾವ ಕೆಲಸವೂ ಸಮರ್ಪಕವಾಗಿ ನಡೆಯಲು ಸಾಧ್ಯವಿಲ್ಲ. ಜನರ ಕೆಲಸ, ದೇವರ ಕೆಲಸ ಎಂಬ ಮಾತಿದೆ. ಈಗ ನಡೆಯು ತ್ತಿರುವುದು ದೇವರು ಮೆಚ್ಚದ ಕೆಲಸ. ಇದಕ್ಕೆ ಕಾರಣರಾದವರನ್ನು ಶಿಕ್ಷಿಸುವ ಜತೆಗೆ ಮುಂದೆ, ಉಳಿದಿರುವ ಸೇತುವೆಗಳ ಸುರಕ್ಷತೆಯನ್ನೂ ಖಾತರಿಪಡಿಸಿ ಕೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!