Saturday, 7th September 2024

ಬಾಲ ಗರ್ಭಿಣಿಯರ ಹೆಚ್ಚಳ; ಸಾಮಾಜಿಕ ಪಿಡುಗು

ರಾಜ್ಯದಲ್ಲಿ ಅಪ್ರಾಪ್ತ ವಯಸ್ಸಿನ ಗರ್ಭ ಧರಿಸುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕಳೆದ ಮೂರು ವರ್ಷದಲ್ಲಿ ೧,೩೩,೯೬೨ ಲಕ್ಷ ಬಾಲ ಗರ್ಭಿಣಿ ಯರು ಪತ್ತೆಯಾಗಿವೆ ಎಂಬ ವರದಿ ಆತಂಕ ಮೂಡಿಸಿದೆ. ಬಾಲ್ಯದ ಗರ್ಭ ಧರಿಸಿದರೆ ಬಾಲಕಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ಬಾಲಕಿಯರು ಗರ್ಭ ಧರಿಸಿದ ವೇಳೆ ಗರ್ಭಪಾತ, ಅವಧಿ ಪೂರ್ವ ಪ್ರಸವ, ದೈಹಿಕ ನ್ಯೂನತೆ ಹೊಂದಿರುವ ಶಿಶು ಜನನ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಬಾಲ ಗರ್ಭಿಣಿಯರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಮಗು ಜನನದ ಬಳಿಕ ಬಾಲ ಬಾಣಂತಿಯರು ರಕ್ತ ಹೀನತೆ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಭೀತಿ ಇದೆ. ಬಾಲ ಗರ್ಭಿಣಿಯರಿಗೆ ಜನಿಸುವ ಶಿಶುಗಳು ಅತಿ ಕಡಿಮೆ ತೂಕ ಹೊಂದಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜತೆಯ ಶಿಶುಗಳಿಗೆ ಜನನದ ಹಲವು ಆರೋಗ್ಯ ಸಮಸ್ಯೆಗಳು ಇರುತ್ತವೆ. ಬಾಲ ಗರ್ಭಿಣಿಯರಿಗೆ ಸೂಕ್ತ ಸಮಯಕ್ಕೆ ವೈದ್ಯಕೀಯ ನೆರವು ಕೂಡ ಸಿಗುತ್ತಿಲ್ಲ. ಅವರಿಗೆ ಸೂಕ್ತ ರೀತಿಯಲ್ಲಿ ಆರೈಕೆಯನ್ನೂ ಮಾಡಲಾಗುತ್ತಿಲ್ಲ. ಮಗು ಜನಿಸಿದ ಬಳಿಕ ತಾಯಿ, ಮಗು ಎರಡಕ್ಕೂ ಸೂಕ್ತ ಸೌಲಭ್ಯ ಸಿಗುತ್ತಿಲ್ಲ.

ಇನ್ನು  ಬಹುತೇಕ ಸಂದರ್ಭಗಳಲ್ಲಿ ಗರ್ಭಪಾತ ಆಗುತ್ತಿದೆ. ಈ ವೇಳೆ ಕೂಡಾ ಬಾಲ ಬಾಣಂತಿಯರು ಮಾನಸಿಕ ಹಾಗೂ ದೈಹಿಕ ಆಘಾತಕ್ಕೆ  ತ್ತಾಗುತ್ತಾರೆ.
ಬಾಲ್ಯದ ಗರ್ಭ ಧರಿಸುವ ಬಾಲಕಿಯರು ಸಹಜವಾಗಿಯೇ ತಮ್ಮ ಶಿಕ್ಷಣ ಪೂರ್ಣಗೊಳಿಸುವುದಕ್ಕೆ ಸಾಧ್ಯ ಆಗಿರುವುದಿಲ್ಲ. ಹೀಗಾಗಿ, ಅವರು ವಯಸ್ಕರಾದ ಬಳಿಕ ಒಳ್ಳೆಯ ಉದ್ಯೋಗಕ್ಕೆ ಸೇರುವುದಕ್ಕೂ ಸಾಧ್ಯವಾಗುವುದಿಲ್ಲ. ಹೀಗಾಗಿ, ಜೀವನ ಪರ್ಯಂತ ಆರ್ಥಿಕವಾಗಿಯೂ ಹಿಂದುಳಿಯುವ ಸಾಧ್ಯತೆ ಇರುತ್ತದೆ. ಬಾಲಕಿಯರು ಅಪ್ರಾಪ್ತ ವಯಸ್ಸಿನ ಗರ್ಭ ಧರಿಸುವ ಪ್ರಕರಣಗಳು ಸಾಮಾಜಿಕ ಪಿಡುಗಾಗಿ ಪರಿವರ್ತನೆಯಾಗಿದ್ದು, ಸಮಾಜಿಕ ವ್ಯವಸ್ಥೆ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕುವಲ್ಲಿ ಸಮಾಜದ ಪ್ರತಿಯೊಬ್ಬರೂ ಶ್ರಮಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!