ಕರೋನಾ ಎರಡನೇ ಅಲೆಯಿಂದ ದಿಕ್ಕೆಟ್ಟಿರುವ ರಾಜ್ಯದ ಜನರಿಗೆ ಇದೀಗ ಸೋಂಕು ಇಳಿಕೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ ರಾಜ್ಯ ಸರಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಸೋಂಕಿನ ಸಂಖ್ಯೆ ಇಳಿಕೆಯಾಗಿದ್ದರೂ, ಸೋಂಕು ಸಂಪೂರ್ಣವಾಗಿ ನಮ್ಮಿಂದ ಹೋಗಿಲ್ಲ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಅಂದ ಮಾತ್ರಕ್ಕೆ ಪರೀಕ್ಷೆಯನ್ನು ನಡೆಸದೇ ಇರಲು ಸಾಧ್ಯವಿಲ್ಲ.
ಆದ್ದರಿಂದ ಇದೀಗ ಜುಲೈ ೧೯ ಹಾಗೂ ೨೨ರಂದು ನಡೆಯಲಿರುವ ಎಸ್ ಎಸ್‌ಎಲ್‌ಸಿ ಪರೀಕ್ಷೆ, ಕರೋನಾ ಕಾಲಘಟ್ಟಕ್ಕೆ ಅನುಸಾರವಾಗಿ, ಹಲವು
ಮಾರ್ಪಾಡುಗಳೊಂದಿಗೆ ನಡೆಯುತ್ತಿದೆ. ಪರೀಕ್ಷೆಯ ಬಗ್ಗೆ ಇದ್ದ ಹಲವು ಗೊಂದಲಗಳ ನಡುವೆ ಪರೀಕ್ಷೆ ಬರೆಯಲು ಸಜ್ಜಾಗಿರುವ ವಿದ್ಯಾರ್ಥಿಗಳಿಗೆ ಈ ಬಾರಿ ಅಂಕ, ಪಾಸ್-ಫೇಲ್ ಎನ್ನುವ ಆತಂಕವಿಲ್ಲ. ಪರೀಕ್ಷೆಯಲ್ಲಿ ಭಾಗಿಯಾಗುವ ಎಲ್ಲರನ್ನು ಪಾಸ್ ಮಾಡುವುದಾಗಿ ಈಗಾಗಲೇ ಸರಕಾರ ಹೇಳಿದೆ. ಆದ್ದರಿಂದ ಈ ಬಾರಿ
ಮಾರ್ಕ್ಸ್‌ಗಳಿಸುವ ಆತುರವಿಲ್ಲ. ಆದರೆ ಕರೋನಾ ಕಾಣಿಸಿಕೊಂಡರೆ ಎನ್ನುವ ಆತಂಕವಿದೆ. ಈ ಆತಂಕದಲ್ಲಿ ಪರೀಕ್ಷೆಗೆ ಹಾಜರಾಗಲು ಸಜ್ಜಾಗಿರುವ
ಮಕ್ಕಳಿಗೆ, ಆತ್ಮವಿಶ್ವಾಸವನ್ನು ತುಂಬುವ ಕೆಲಸವಾಗಬೇಕಿದೆ.
ಇನ್ನು ಇತ್ತೀಚಿಗೆ ಪರೀಕ್ಷೆ ಬರೆಯುವುದಕ್ಕೆ ಸಜ್ಜಾಗಿರುವ ಮಕ್ಕಳಿಗಿಂತ ಹೆಚ್ಚಾಗಿ ಅವರ ಪೋಷಕರು ಪರೀಕ್ಷೆಯ ಬಗ್ಗೆ ಯೋಚಿಸುತ್ತಿದ್ದಾರೆ. ಇನ್ನು ಈ ಹಿಂದಿನ ಬಾರಿಗಿಂತ ಈ ಬಾರಿಯ ಪರೀಕ್ಷೆ ವಿಭಿನ್ನ ಸನ್ನಿವೇಶದಲ್ಲಿ ನಡೆಯುತ್ತಿರುವುದರಿಂದ ಪೋಷಕರು ಮಕ್ಕಳಿಗೆ ಒತ್ತಡ ಹೇರುವ ಬದಲು ಧೈರ್ಯ ತುಂಬುವ ಹಾಗೂ ಕರೋನಾ ಮಾರ್ಗಸೂಚಿಯನ್ನು ಪರೀಕ್ಷಾ ಸಮಯದಲ್ಲಿ ಯಾವ ರೀತಿ ಪಾಲಿಸಬೇಕು ಎನ್ನುವ ಬಗ್ಗೆ ಅರಿವು ಮೂಡಿಸಬೇಕು. ಇನ್ನು ಸರಕಾರವನ್ನು ಟೀಕಿಸುವ ವಿಷಯಕ್ಕೆ ಪರೀಕ್ಷೆಯನ್ನು ಬಳಸಿಕೊಳ್ಳುವ ಬದಲು, ಪರೀಕ್ಷೆ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಬೇಕಿದೆ.
ಈ ಎಲ್ಲದರ ನಡುವೆ ಕಳೆದ ಬಾರಿಯೂ ಕರೋನಾ ಆತಂಕದಲ್ಲಿಯೇ ಯಶಸ್ವಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿದ್ದ ಸರಕಾರ ಈ ಹಿಂದಿನ ಅನುಭವವನ್ನು ಬಳಸಿಕೊಂಡು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೇ ಹೊರತು, ಅತಿಯಾದ ಆತ್ಮವಿಶ್ವಾಸ ಬೇಡ.