Saturday, 7th September 2024

ಹೆಸರು ಬದಲಾದರೆ ಸ್ಥಿತಿಗತಿ ಬದಲಾಗುವುದೇ?

ರಾಜ್ಯದಲ್ಲಿ ಸಿಎಂ ಬದಲಾವಣೆ, ಹೊಸ ಡಿಸಿಎಂ ಹುದ್ದೆಯ ಸೃಷ್ಟಿ ಕುರಿತ ಕೂಗು ತಣ್ಣಗಾದ ಬೆನ್ನಿಗೇ ಗ್ರೇಟರ್ ಬೆಂಗಳೂರು ಬ್ರ್ಯಾಂಡ್ ನೇಮ್ ಗೆ ಪೈಪೋಟಿ ಆರಂಭವಾಗಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಸಿಎಂ ಮತ್ತು ಡಿಸಿಎಂ ಮನಸ್ಸು ಮಾಡಿದ ಮೇಲೆ ಈ ಪ್ರಸ್ತಾವನೆಗೆ ಅಂಗೀಕಾರ ದೊರೆಯುವುದು ಕಷ್ಟವೇನಲ್ಲ. ಇದೀಗ ಗೃಹಸಚಿವ ಪರಮೇಶ್ವರ್ ಅವರು ಕೂಡ ತಮ್ಮ ತವರು ಜಿಲ್ಲೆ ತುಮಕೂರು ಗ್ರೇಟರ್ ಬೆಂಗಳೂರಿಗೆ ಸೇರಬೇಕೆಂದು ಪ್ರತಿಪಾದಿಸಿದ್ದಾರೆ. ಡಿಕೆಶಿ ಪ್ರಸ್ತಾವನೆಗೆ ಆಕ್ರೋಶ ವ್ಯಕ್ತಪಡಿ ಸಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯದಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ. ಒಂದು ವೇಳೆ ಹೆಸರು ಬದಲಿಸಿದರೆ ರಾಮನಗರ ಜಿಲ್ಲೆ ಎಂದು ಮರು ನಾಮಕರಣ ಮಾಡುವುದಾಗಿ ಗುಡುಗಿದ್ದಾರೆ.

ಇಷ್ಟಕ್ಕೂ ಈ ಹೆಸರು ಬದಲಾವಣೆಯ ಉದ್ದೇಶ ಏನೆನ್ನುವುದು ಆಯಾ ನಾಯಕರಿಗಷ್ಟೇ ತಿಳಿದ ವಿಚಾರ. ನಾಯಕರು ಹೇಳುವ ಪ್ರಕಾರ, ಬೆಂಗಳೂರು ಎಂಬ ಬ್ರ್ಯಾಂಡ್ ನೇಮ್‌ಗೆ ಅಂತಾರಾಷ್ಟ್ರೀಯ ಮನ್ನಣೆ ಇದೆ. ಹೆಸರು ಬದಲಾವಣೆಯಿಂದ ಈ ಭಾಗಕ್ಕೆ ಇನ್ನಷ್ಟು ಕೈಗಾರಿಕೆಗಳು ಬರಲಿವೆ. ಸ್ಥಳೀಯರಿಗೆ ಉದ್ಯೋಗ ದೊರಕಲಿವೆ. ಹಾಗಿದ್ದರೆ ರಾಮನಗರ, ತುಮಕೂರು ಜಿಲ್ಲೆಗಳನ್ನೇ ಬ್ರ್ಯಾಂಡ್ ನೇಮ್ ಆಗುವ ಮಟ್ಟಿಗೆ ಬೆಳೆಸಲು ಏಕೆ ಸಾಧ್ಯವಿಲ್ಲ ಎಂದು ಈ ನಾಯಕರು ತಿಳಿಸಬೇಕಾಗಿದೆ. ಮಣಿಪಾಲ ಎಂಬ ಪುಟ್ಟ ಗ್ರಾಮ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಮತ್ತು ಆರೋಗ್ಯದ ಬ್ರ್ಯಾಂಡ್ ನೇಮ್ ಆಗಿ
ಬೆಳೆದಿರುವುದರ ಹಿಂದೆ ಟಿಎಂಎ ಪೈ ಎಂಬ ವ್ಯಕ್ತಿಯ ಸಾಹಸಗಾಥೆಯನ್ನು ಈ ನಾಯಕರು ನೆನಪಿಸಿಕೊಳ್ಳಬೇಕಾಗಿದೆ. ಹೆಸರು ಬದಲಾವಣೆ ಮಾಡಿದ
ಕಾರಣಕ್ಕೆ ಜಿಲ್ಲೆಯ ಅಭಿವೃದ್ಧಿ ಆಗಲಿದೆ ಎನ್ನುವುದು ರಾಜಕೀಯ ಅನುಕೂಲದ ಹೇಳಿಕೆಯಾಗಬಹುದಷ್ಟೇ.

ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್ .ಪಾಟೀಲ್ ಅಧ್ಯಕ್ಷತೆಯ ಬಿಬಿಎಂಪಿ ಸುಧಾರಣಾ ಸಮಿತಿಯು ೪೦೦ ವಾರ್ಡ್ ಗಳ ‘ಗ್ರೇಟರ್ ಬೆಂಗಳೂರು ಆಡಳಿತದ ಕರಡು ವಿಧೇಯಕ’ ವನ್ನು ಸಲ್ಲಿಸಿದೆ. ಇದರ ಹಿಂದಿನ ರಾಜಕೀಯ ಹಿತಾಸಕ್ತಿ ಏನೇ ಇರಲಿ ಇಲ್ಲಿನ ಜನತೆ ಮತ್ತು ಪರಿಸರಕ್ಕೆ ಈ ನಿರ್ಧಾರ ಬಾಧಕವಾಗಬಾರದು. ರಿಯಲ್ ಎಸ್ಟೇಟ್ ಆಸೆಯಿಂದ ಕೃಷಿ ಭೂಮಿ ಪಾಳು ಭೂಮಿಯಾಗಬಾರದು.

Leave a Reply

Your email address will not be published. Required fields are marked *

error: Content is protected !!