Thursday, 19th September 2024

ಬೆಳಕಿನ ನಿರೀಕ್ಷೆಯಲ್ಲಿ ದೇಶವಾಸಿಗಳು

ಕರೋನಾ ಸೋಂಕಿತ ಪ್ರಕರಣಗಳು ಕ್ಷೀಣಿಸುತ್ತಿದ್ದರೂ ಅಪಾಯದ ಸ್ಥಿತಿ ಮುಕ್ತವಾಗಿಲ್ಲ. ಆದ್ದರಿಂದ ಮುಂಬರುವ ನವೆಂಬರ್‌ ವರೆಗೆ ಕೇಂದ್ರ ಸರಕಾರದಿಂದ ಪ್ರಯತ್ನಗಳು ಮುಂದುವರಿಯಲಿದೆ. ದೀಪಾವಳಿವರೆಗೆ ಉಚಿತ ಪಡಿತರ ವಿತರಣೆ ಮಾಡುವುದಾಗಿ ಕೇಂದ್ರ ಸರಕಾರ ತಿಳಿಸಿದೆ.

ಇದರಿಂದ ಪ್ರತಿಯೊಬ್ಬ ಭಾರತೀಯರ ಪಾಲಿಗೆ ಮುಂಬರುವ ದೀಪಾವಳಿಯು ದೇಶವನ್ನು ಆವರಿಸಿರುವ ಕತ್ತಲನ್ನು ಕಳೆಯಲಿದೆ ಎಂಬ ಭರವಸೆ ವ್ಯಕ್ತವಾಗುತ್ತಿದೆ. ಜಗತ್ತಿನಲ್ಲಿ ತಯಾರಾದ ಲಸಿಕೆಗಳಲ್ಲಿ ಹೆಚ್ಚು ಲಸಿಕೆಗಳನ್ನು ಪಡೆದಿರುವ ಮೂರು ದೇಶಗಳಲ್ಲಿ ಭಾರತವೂ ಒಂದು. ಆದರೂ ಲಸಿಕೆ ಅಲಭ್ಯತೆ ಉಂಟಾಗಿತ್ತು. ಈ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಜೂ.21ರಿಂದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ.

ಇದೀಗ ಕರೋನಾ ನಿರ್ಮೂಲನೆಗೆ ಇರುವ ಏಕೈಕ ದಾರಿ ಲಸಿಕೆ. ಆದ್ದರಿಂದ ಶೇ.100ರಷ್ಟು ಲಸಿಕೆ ಪೂರೈಕೆಗೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂಬುದು ಪ್ರಧಾನಿಯವರ ಭರವಸೆ. ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಲಿಚ್ಚಿಸುವವರು ಖಾಸಗಿ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ 150ರು ಪಾವತಿಸಿ ಪಡೆಯಬಹುದು ಎಂದು ನೀಡಿರುವ ಅನುಮತಿ, ಪ್ರಸ್ತುತ ಸಂದರ್ಭದ ಮಹತ್ವದ ಬೆಳವಣಿಗೆ. ಆದರೆ 3ನೆ ಅಲೆಯ ಬಗ್ಗೆ ಮೂಡಿರುವ ಆತಂಕದಿಂದಾಗಿ ಈಗಾಗಲೇ ಸುರಕ್ಷತೆ ಕ್ರಮಗಳಿಗಾಗಿ ಕ್ರಮಗಳನ್ನು ಆರಂಭಿಸಿರುವುದು ದೇಶದ ಪಾಲಿಗೆ ಒಳ್ಳೆಯ ಬೆಳವಣಿಗೆ.

ಮೂರನೆ ಅಲೆ ಮಕ್ಕಳಿಗೆ ಹೆಚ್ಚು ಅಪಾಯಕಾರಿ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ಲಸಿಕೆ
ಪ್ರಯೋಗಕ್ಕೆ ಈಗಾಗಲೇ ಮುಂದಾಗಿರುವುದು ಸುರಕ್ಷತೆ ದೃಷ್ಟಿಯಿಂದ ಮಹತ್ವದ ಕಾರ್ಯ. ಒಟ್ಟಾರೆ ನವೆಂಬರ್‌ವರೆಗೆ ಆತಂಕದ ಸ್ಥಿತಿ ಮುಂದುವರಿಯಲಿದ್ದು, ಮುಂಬರುವ ದೀಪಾವಳಿ ದೇಶದ ಪಾಲಿಗೆ ಬೆಳಕನ್ನುಂಟುಮಾಡಲಿ ಎಂಬುದು ಪ್ರತಿಯೊಬ್ಬರ ನಿರೀಕ್ಷೆ.

Leave a Reply

Your email address will not be published. Required fields are marked *