ಬಿಜೆಪಿ ರಾಜ್ಯ ಘಟಕದಲ್ಲಿನ ಒಳಬೇಗುದಿ ತಣಿಸಿದಷ್ಟೂ ಹೆಚ್ಚುತ್ತಿರುವುದು ಇತ್ತೀಚಿನ ಬೆಳವಣಿಗೆ. ಇದುವರೆಗೂ ಬೇರೆ ಬೇರೆ ಕಾರಣಗಳಿಗಾಗಿ ಹೊತ್ತಿಕೊಂಡಿದ್ದ ಅಸಮಾಧಾನದ ಬೆಂಕಿಯು, ಈಗ ನಿರ್ದಿಷ್ಟವಾಗಿ ಬಿಜೆಪಿ ರಾಜ್ಯಾಧ್ಯಕ್ಷರ ಮತ್ತು ವಿಪಕ್ಷ ನಾಯಕರ ನೇಮಕವಾಗುತ್ತಿದ್ದಂತೆ ಜ್ವಾಲಾಮುಖಿಯ ಸ್ವರೂಪವನ್ನು ತಳೆದಿದೆ ಎನ್ನುತ್ತಾರೆ ಬಲ್ಲವರು.
ಈಗಷ್ಟೇ ಪಕ್ಷದ ರಾಜ್ಯಾಧ್ಯಕ್ಷ ಗದ್ದುಗೆ ಅಪ್ಪಿರುವ ಬಿ.ವೈ.ವಿಜಯೇಂದ್ರ ಅವರಿಗೆ ಶುರುವಿನಲ್ಲೇ ಭಿನ್ನಮತವನ್ನು ಶಮನಗೊಳಿ ಸುವ ಸವಾಲು ಎದುರಾಗಿದ್ದು, ಅದನ್ನು ಅವರು ಹೇಗೆ ನಿರ್ವಹಿಸುವರು ಎಂಬುದನ್ನು ಕಾದುನೋಡುವಂತಾಗಿದೆ, ಇರಲಿ. ರಾಜಕೀಯ ಪಕ್ಷವೆಂಬುದು ಒಂದು ಕುಟುಂಬವಿದ್ದಂತೆ. ಯಾವುದೇ ಕುಟುಂಬದಲ್ಲಿ ವಿಭಿನ್ನ ವಯೋಮಾನದ ಮತ್ತು ಮನೋ ಧರ್ಮದ ಹಲವು ಸದಸ್ಯರಿರುವಂತೆಯೇ, ವಿಭಿನ್ನ ವಯಸ್ಸು, ಪ್ರಾಂತ್ಯ, ಜಾತಿ-ಸಮುದಾಯದ ಗಣನೀಯ ಸಂಖ್ಯೆಯ ಸದಸ್ಯರು ಪಕ್ಷದ ಛತ್ರಛಾಯೆಯಡಿ ಇರುವುದು ಸಹಜ.
ಕುಟುಂಬದ ಸದಸ್ಯರೆಲ್ಲರ ಬೇಕು- ಬೇಡಗಳನ್ನು ಸರಿದೂಗಿಸಿಕೊಂಡು ಸಂಸಾರ-ರಥವನ್ನು ಸರಿಯಾದ ಪಥದಲ್ಲಿ ಕರೆದೊ ಯ್ಯುವ ಹೊಣೆಗಾರಿಕೆ ಮನೆಯ ಯಜಮಾನನಿಗೆ ಇರುವಂತೆಯೇ, ಪಕ್ಷದ ಒಳಾವರಣದಲ್ಲಿರುವ ವೈವಿಧ್ಯಮಯ ಸದಸ್ಯರನ್ನು ಜತೆಜತೆಗೇ ಕರೆದುಕೊಂಡು ಪಕ್ಷವನ್ನೂ ಔನ್ನತ್ಯದೆಡೆಗೆ ಒಯ್ಯುವ ಹೊಣೆಯ ನೊಗ ಆಯಾ ಪಕ್ಷದ ಅಧ್ಯಕ್ಷರ ಹೆಗಲೇರಿರುತ್ತದೆ ಎಂಬುದೂ ನಿಜವೇ. ಆದರೆ ಕಾರ್ಯಾವಧಿಯ ಬಹುಭಾಗವು ಇಂಥ ಆಂತರಿಕ ಜಗಳವನ್ನೋ ಭಿನ್ನಮತವನ್ನೋ ತಣಿಸುವು ದರಲ್ಲೇ ವ್ಯರ್ಥವಾದರೆ, ಜನರ ಕುಂದುಕೊರತೆ ಗಳು ಮತ್ತು ಸಮಸ್ಯೆಗಳಿಗೆ ಕಿವಿಯಾಗುವುದು ಯಾವಾಗ? ಭಿನ್ನಮತದಂಥ ಅನಪೇಕ್ಷಿತ ಬೆಳವಣಿಗೆಯು ಪಕ್ಷದೊಳಗಿನ ಬಾಂಧವ್ಯ-ತಂತುಗಳನ್ನು ದುರ್ಬಲಗೊಳಿಸುವುದರ ಜತೆಗೆ, ಪಕ್ಷದ ತಳಹದಿಯನ್ನೂ ಸಡಿಲಗೊಳಿಸುತ್ತದೆ ಎಂಬುದು ಸುಳ್ಳಲ್ಲ.
ಹೀಗಾಗಬಾರದು. ಏಕೆಂದರೆ, ಅಧಿಕಾರದಲ್ಲಿರುವ ಪಕ್ಷವೊಂದರ ಸರಕಾರಕ್ಕೆ ಸಮಸಮನಾಗಿ ಪ್ರಬಲ ವಿಪಕ್ಷವೂ ಇರಬೇಕಾದ್ದು
ಸಹಜ ನಿರೀಕ್ಷೆ. ಅದು ಪ್ರಜಾಪ್ರಭುತ್ವದ ಸೊಬಗೂ ಹೌದು. ಸರಕಾರವೊಂದು ಜನರ ನಿರೀಕ್ಷೆಗಳಿಗೆ ತಕ್ಕಂತೆ ನಡೆಯದೆ ತಪ್ಪು ಹೆಜ್ಜೆ ಇಡಲು ಮುಂದಾದಾಗಲೆಲ್ಲ ಯಥೋಚಿತವಾಗಿ ಕಿವಿಹಿಂಡಿ ಅದನ್ನು ಹಳಿಗೆ ತರುವ ಮಹತ್ವದ ಹೊಣೆಗಾರಿಕೆ ವಿಪಕ್ಷ ದ್ದಾಗಿರು ತ್ತದೆ. ಆದರೆ ಅಂಥ ವಿಪಕ್ಷವೇ ಸ್ವತಃ ಅಯೋಮಯ ಸ್ಥಿತಿಯಲ್ಲಿದ್ದರೆ ಅದು ಒಪ್ಪುವಂಥ ವಿಷಯವೇ? ಬಿಜೆಪಿಯವರು ಈ ಸೂಕ್ಷ್ಮ ವನ್ನು ಆದಷ್ಟು ಬೇಗ ಅರಿತುಕೊಳ್ಳಲಿ.