Saturday, 7th September 2024

ಕೆರೆ ತುಂಬುವ ಕೆಲಸಕ್ಕೆ ಆದ್ಯತೆ ಸಿಗಲಿ

ಮೇ ತಿಂಗಳ ಮೂರನೇ ವಾರದಲ್ಲಿ ರಾಜ್ಯವು ತೀವ್ರ ಬರದ ದವಡೆಯಲ್ಲಿ ಸಿಲುಕಿದ್ದಾಗ, ೨೦೨೪ರ ಮುಂಗಾರು ಕೂಡ ರಾಜ್ಯದ ಪಾಲಿಗೆ ಆಶಾದಾಯಕ ವಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಅದೃಷ್ಟವಶಾತ್ ಮೇ ತಿಂಗಳ ಕೊನೆ ವಾರದಿಂದ ಆರಂಭವಾಗಿ ನಿರಂತರವಾಗಿ ಸುರಿದ ಮಳೆ ಜುಲೈ ವರೆಗೂ ಮುಂದುವರಿದಿದೆ. ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದ ಪ್ರಮುಖ ೧೦ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

ವಿದ್ಯುಚ್ಛಕ್ತಿಗೆ ಪೂರಕವಾದ ಮಲೆನಾಡಿನ ಜಲಾಶಯಗಳು ಅರ್ಧದಷ್ಟು ಭರ್ತಿಯಾಗಿವೆ. ಕೃಷ್ಣರಾಜಸಾಗರ ಸೇರಿದಂತೆ ಕಾವೇರಿ ಕಣಿವೆಯ ಜಲಾಶಯ ಗಳು ತುಂಬಿರುವುದು ಮುಂದಿನ ಬೇಸಿಗೆಯಲ್ಲಿ ಬೆಂಗಳೂರು ಸೇರಿದಂತೆ ಎರಡು ಕೋಟಿ ಜನತೆಯ ಕುಡಿಯುವ ನೀರಿನ ಆತಂಕವನ್ನು ಕಡಿಮೆ ಮಾಡಿದೆ. ಮುಖ್ಯವಾಗಿ ತಮಿಳುನಾಡಿನ ಕಾವೇರಿ ನದಿ ನೀರಿನ ಪಾಲು ನಿಗದಿಗಿಂತ ಹೆಚ್ಚಾಗಿಯೇ ಹರಿದು ಹೋಗಿದೆ. ಮತ್ತೊಮ್ಮೆ ಸುಪ್ರೀಂಕೋರ್ಟ್ ಕಟೆಕಟೆ ಏರುವ ಅನಿವಾರ‍್ಯತೆ ತಪ್ಪಿದೆ. ಕರ್ನಾಟಕ ರಾಜ್ಯ ವಿಪತ್ತು ನಿಗಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ವರದಿಯಂತೆ, ಜುಲೈ ೨೪ ರ ವೇಳೆ ರಾಜ್ಯದ ಪ್ರಮುಖ ೧೪ ಜಲಾಶಯಗಳಲ್ಲಿ ೬೫೫ ಟಿಎಂಸಿ ನೀರಿದೆ.

ಕಳೆದ ವರ್ಷ ಇದೇ ದಿನ ೩೭೦ ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ವರ್ಷ ದುಪ್ಪಟ್ಟು ನೀರು ಜಲಾಶಯಗಳಿಗೆ ಹರಿದುಬಂದಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಇನ್ನುಳಿದ ಜಲಾಶಯಗಳೂ ಶೀಘ್ರ ತುಂಬುವ ನಿರೀಕ್ಷೆ ಇದೆ. ಕಾವೇರಿ, ಕೆಆರ್‌ಎಸ್, ಕಬಿನಿ ಮತ್ತು ಹಾರಂಗಿಯಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದೇ ರೀತಿ ಆಲಮಟ್ಟಿ ಜಲಾಶಯದಿಂದ ೧.೫೦ ಲಕ್ಷ ಕ್ಯುಸೆಕ್‌ನಷ್ಟು ಭಾರೀ ಪ್ರಮಾಣದ ನೀರು ಹರಿಯ ಬಿಡಲಾಗಿದೆ. ಇದೀಗ ತುರ್ತಾಗಿ ನೀರಾವರಿ ಕಾಲುವೆಗಳಿಗೆ ನೀರು ಹರಿಸಬೇಕಾಗಿದೆ. ಕೆರೆ ಕಟ್ಟೆಗಳನ್ನು ತುಂಬಿಕೊಳ್ಳಬೇಕಿದೆ.

ಕಳೆದ ವರ್ಷ ಕೆರೆ ಕಟ್ಟೆಗಳನ್ನು ತುಂಬಲು ಸಾಧ್ಯವಾಗದ ಕಾರಣ ಕಾವೇರಿ ಕೊಳ್ಳದ ರೈತರು ಹಿಂಗಾರು ಬೆಳೆಗೆ ನೀರಿನ ಕೊರತೆ ಎದುರಿಸಿದ್ದರು. ತಮಿಳು ನಾಡಿನ ಕ್ಯಾತೆಯಿಂದ ನಾಲೆಗಳಿಗೂ ನಿಯಮಿತವಾಗಿ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮುಂಚಿತವಾಗಿಯೇ ನಾಲೆಗಳಿಗೆ ನೀರು ಹರಿಸುವ ಮೂಲಕ ನಮ್ಮ ರೈತರು ಮೂರು ಬೆಳೆ ಬೆಳೆಯಲು ಉತ್ತೇಜನ ನೀಡಬೇಕು. ಜಲಾಶಯಗಳು ತುಂಬಿದ ನಂತರವೂ ನೀರು ಬಿಡಲು ವಿಳಂಬ ಮಾಡುವುದು ಸರಿಯಲ್ಲ. ಮಳೆ ಎಷ್ಟೇ ಸುರಿದರೂ, ಬಿದ್ದ ಮಳೆಯನ್ನು ಹಿಡಿದಿಟ್ಟುಕೊಳ್ಳದೇ ಹೋದರೆ ಮುಂದಿನ ಬೇಸಿಗೆಯಲ್ಲಿ ಮತ್ತೆ ಜಲಕ್ಷಾಮ ಎದುರಿಸ ಬೇಕಾಗುತ್ತದೆ.

Leave a Reply

Your email address will not be published. Required fields are marked *

error: Content is protected !!