Friday, 13th December 2024

ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ

ರಾಜ್ಯದಲ್ಲಿ ಈ ವರ್ಷದ ಜನವರಿಯಿಂದ ಏಪ್ರಿಲ್ ೩೦ರವರೆಗೆ ಸುಮಾರು ೪೩೦ ಕೊಲೆಗಳು ಹಾಗೂ ೧೯೮ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಹುಬ್ಬಳ್ಳಿಯ ವಿದ್ಯಾರ್ಥಿನಿಯರಾದ ನೇಹಾ ಹಿರೇಮಠ, ಅಂಜಲಿ ಅಂಬಿಗೇರ, ಸೋಮವಾರಪೇಟೆ ತಾಲೂಕಿನ ಬಾಲಕಿ ಮೀನಾ ಸೇರಿದಂತೆ ಹಲವು ಕೊಲೆ ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ.

ಡ್ರಗ್ಸ್ ಸಾಗಣೆ ಹಾಗೂ ಮಾರಾಟ ಪ್ರಕರಣಗಳೂ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಆದರೂ ‘ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಎಲ್ಲವನ್ನೂ ನಿಯಂತ್ರಣದ ಇಟ್ಟಿದ್ದೇವೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದ್ದು, ಚರ್ಚೆಗೆ ಗ್ರಾಸವಾಗಿದೆ. ಅಂಕಿಅಂಶ ಗಳ ಸಮೇತ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ‘ಬಿಜೆಪಿಯವರ ಆಡಳಿತದಲ್ಲಿ ಎಷ್ಟು ಕೊಲೆಗಳು ನಡೆದಿದ್ದವು. ನಮ್ಮ ಸರಕಾರದ ಅವಧಿಯಲ್ಲಿ ಎಷ್ಟು ನಡೆದಿವೆ ಎಂಬ ಅಂಕಿ ಸಂಖ್ಯೆ ಬಿಡುಗಡೆ ಮಾಡಲಾಗುವುದು.

ಆಗ ಯಾರ ಅವಧಿಯಲ್ಲಿ ಹೆಚ್ಚು ಕೊಲೆಗಳು ನಡೆದಿದ್ದವು ಎಂಬುದು ಜನರಿಗೆ ಗೊತ್ತಾಗುತ್ತದೆ’ ಎಂದು ಹೇಳುವ ಮೂಲಕ ಗೃಹ ಸಚಿವರು ಅಸಮಂಜಸ ಹೇಳಿಕೆ ಕೊಟ್ಟಿದ್ದಾರೆ. ಗೃಹ ಸಚಿವರ ಪ್ರಕಾರ, ಬಿಜೆಪಿ ಅವಽಯಲ್ಲಿ ಹೆಚ್ಚು ಕೊಲೆ, ಅತ್ಯಾಚಾರಗಳು ಆಗಿದ್ದರೆ ಕಾಂಗ್ರೆಸ್ ಅವಧಿಯಲ್ಲಿಯೂ ಆಗಬಹುದು
ಎಂದು ಅರ್ಥವೇ? ಪರಮೇಶ್ವರ್ ಅವರು ಈ ರೀತಿಯ ಬೇಜವಾಬ್ದಾರಿ ಮಾತುಗಳನ್ನು ಆಡುವ ಬದಲು ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಬೇಕಿದೆ. ಠಾಣೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ, ಸಿಬ್ಬಂದಿ ಮೈ ಮೇಲೆ
ಬಾಡಿವೋರ್ನ್ ಕ್ಯಾಮೆರಾ ಹಾಗೂ ಆರೋಪಿಗಳಿಗೆ ಹೊಡೆದರೆ ತನಿಖೆಗಳ ಮೇಲೆ ತನಿಖೆಗಳ ನಡೆಯುವ ಪರಿಸ್ಥಿತಿ ಇರುವುದರಿಂದ ಪೊಲೀಸರು ತಮ್ಮತನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ದಂಡ ಪ್ರಯೋಗವನ್ನೇ ಕೈಬಿಟ್ಟಿದ್ದಾರೆ. ಇದರಿಂದಲೇ ಅಪರಾಧ ಲೋಕ ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರಿದರೆ ಕಾನೂನು ಸುವ್ಯವಸ್ಥೆ ಅಧೋಗತಿಗೆ ಹೋಗಲಿದೆ. ಆದ್ದರಿಂದ ಪೊಲೀಸರಿಗೆ ಸಂಪೂರ್ಣ ಅಧಿಕಾರ ಕೊಟ್ಟು ಅಪರಾಧ ಪ್ರಕರಣಗಳನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸ ಬೇಕು. ಈ ವಿಚಾರದಲ್ಲಿ ಕೇವಲ ರಾಜಕಾರಣಕ್ಕಾಗಿ ಹೇಳಿಕೆ ಕೊಟ್ಟು ಸುಮ್ಮನಾಗುವುದು ಸರಿಯಲ್ಲ