Saturday, 27th July 2024

ಕಠಿಣ ಸಂದೇಶ ರವಾನೆಯಾಗಲಿ

ಬೆಂಗಳೂರಿನ ವೈಟ್‌ಫೀಲ್ಡ್‌ನ ಕಾಡುಗೋಡಿನಲ್ಲಿ ರಸ್ತೆ ಬದಿ ಕಟ್ ಆಗಿ ಬಿದ್ದಿದ್ದ ಕರೆಂಟ್ ತಂತಿ ತುಳಿದು ತಾಯಿ ಮತ್ತು ೯ ತಿಂಗಳ ಮಗಳು ಮೃತಪಟ್ಟಿರು ವುದು ದುರದೃಷ್ಟಕರ. ಈ ಭಾಗದಲ್ಲಿ ಲೈನ್‌ಟ್ರಿಪ್ ಆಗಿದ್ದು ಬೆಸ್ಕಾಂ ಸಿಬ್ಬಂದಿಯ ಗಮನಕ್ಕೆ ಬಂದಿತ್ತಾದರೂ ಅವರು ನಿರ್ಲಕ್ಷ್ಯ ವಹಿಸಿದ್ದರು.

ಟ್ರಿಪ್ ಆಗಿದ್ದ ಲೈನ್ ಚಾರ್ಜ್ ಮಾಡುವ ವೇಳೆ ಮುಂಜಾಗ್ರತೆ ವಹಿಸದೇ ಇದ್ದುದೇ ದುರಂತಕ್ಕೆ ಕಾರಣವಾಗಿದೆ. ಈ ಹಿಂದೆಯೂ ಇಂತಹ ಹಲವು ಪ್ರಕರಣ ಗಳು ರಾಜ್ಯದಲ್ಲಿ ನಡೆದಿವೆ. ೨೦೧೮-೧೯ರಲ್ಲಿ ವಿದ್ಯುತ್ ತಂತಿ ತಗುಲಿ ೧೧ ಜನ ಮೃತಪಟ್ಟಿದ್ದರೆ, ೨೦೧೯-೨೦ರಲ್ಲಿ ೧೦, ೨೦೨೦-೨೧ರಲ್ಲಿ ೯, ೨೦೨೧-೨೨ ರಲ್ಲಿ ೧೩, ೨೦೨೨-೨೩ರಲ್ಲಿ ೧೯, ೨೦೨೩ರಲ್ಲಿ ೮ ಜನ ಮೃತಪಟ್ಟಿದ್ದಾರೆ. ಕಳೆದ ಐದು ವರ್ಷಗಳಲ್ಲಿ ೮೧ ಜನರಿಗೆ ವಿದ್ಯುತ್ ತಂತಿ ತಗುಲಿದ್ದು, ಇದರಲ್ಲಿ ೭೦ ಮಂದಿ ಮೃತಪಟ್ಟಿದ್ದಾರೆ.

ಇವುಗಳಲ್ಲಿ ಆಕಸ್ಮಿಕವಾಗಿ ನಡೆದುದಕ್ಕಿಂತ ಅಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷದಿಂದ ಆಗಿರುವುದೇ ಹೆಚ್ಚು. ಕಳೆದ ವರ್ಷ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸೋಟಗೊಂಡು ತಂದೆ ಮತ್ತು ಮದುವೆ ನಿಶ್ಚಯವಾಗಿದ್ದ ಮಗಳು ಜೀವ ಕಳೆದುಕೊಂಡಿದ್ದರು. ಆಗಲೂ ಟ್ರಾನ್ಸ್ ಫಾರ್ಮ್ ಸುಸ್ಥಿತಿಯಲ್ಲಿ ಇರದಿದ್ದ ಬಗ್ಗೆ ಮೊದಲೇ ಸಾರ್ವಜನಿಕರು ಬೆಸ್ಕಾಂಗೆ ದೂರು ನೀಡಿದ್ದರು. ಆದರೂ ಬೆಸ್ಕಾ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಭಾನುವಾರ ನಡೆದ ಘಟನೆಯೂ ಇಂತಹದ್ದೇ ನಿರ್ಲಕ್ಷ್ಯ ದಿಂದಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಎಂಜಿನಿಯರ್ ಚೇತನ್, ಕಿರಿಯ ಎಂಜಿನಿಯರ್ ರಾಜಣ್ಣ ಹಾಗೂ ಸ್ಟೇಷನ್ ಆಪರೇಟರ್ ಮಂಜುನಾಥ್ ಅವರನ್ನು ಬಂಧಿಸಲಾಗಿದೆ. ಆದರೆ ಸರಕಾರದ ಸಂಬಳ ಪಡೆದು ಈ ರೀತಿ ನಿರ್ಲಕ್ಷ್ಯತನದಿಂದ ಕೆಲಸ ಮಾಡುವ ಮೂಲಕ ಮತ್ತೊಬ್ಬರ ಪ್ರಾಣಕ್ಕೆ ಕುತ್ತಾಗುವ ಇಂತಹವರನ್ನು ಬರೀ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಪ್ರಯೋಜನವಾಗದು. ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಜೈಲು ಶಿಕ್ಷೆ ವಿಧಿಸಬೇಕು.

ಕಠಿಣ ಕ್ರಮಗಳನ್ನು ಕೈಗೊಂಡರೆ ಮಾತ್ರ ಬಡಪಾಯಿ ನಾಗರಿಕರು ಹೀಗೆ ಬಲಿಯಾಗುವುದು ತಪ್ಪುತ್ತದೆ. ಅಲ್ಲದೆ, ಬೇಜವಾಬ್ದಾರಿತನದಿಂದ ನೌಕರಿ
ಮಾಡಿದರೆ ತಕ್ಕ ಶಿಕ್ಷೆ ತಪ್ಪಿದ್ದಲ್ಲ ಎಂಬ ಸಂದೇಶವೂ ಇತರರಿಗೆ ರವಾನೆಯಾಗುತ್ತದೆ.

Leave a Reply

Your email address will not be published. Required fields are marked *

error: Content is protected !!