Saturday, 7th September 2024

ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ನಾಶ

೨೦೧೮ರ ಆಗನಲ್ಲಿ ಕೊಡಗು ಮತ್ತು ಚಿಕ್ಕಮಗಳೂರಿನ ಗುಡ್ಡಬೆಟ್ಟಗಳ ಕುಸಿತದಿಂದಾಗಿ ಹಲವಾರು ಮಂದಿ ಜೀವ ಕಳೆದುಕೊಂಡು, ಅನೇಕ ಹಳ್ಳಿಗಳು ನಾಪತ್ತೆಯಾಗಿದ್ದವು. ೨೦೧೯ರ ಆಗನಲ್ಲಿ ಸಕಲೇಶಪುರ-ಸುಬ್ರಹ್ಮಣ್ಯದಲ್ಲಿ ರೈಲ್ವೆ ಹಳಿಗುಂಟ ೩೫ಕ್ಕೂ ಹೆಚ್ಚು ಸ್ಥಳಗಳಲ್ಲಿ ಸರಣಿ ಭೂಕುಸಿತ ಸಂಭವಿ ಸಿತ್ತು. ಈ ವರ್ಷ ಆಗಸ್ಟ್‌ಗೆ ಮೊದಲೇ ಭಾರಿ ಅಬ್ಬರದ ಮಳೆ ಬಿದ್ದಿದ್ದು, ಕರಾವಳಿ ಭಾಗದ ಅನೇಕ ಕಡೆಗಳಲ್ಲಿ ಗುಡ್ಡ ಕುಸಿತ, ನೆರೆಹಾವಳಿ, ಭತ್ತದ ಗದ್ದೆಗಳ ನಾಶ, ಭೂಕುಸಿತ, ಮನೆಯೊಳಗೆ ನೀರು ಬರುವುದು, ಸೇತುವೆ ಧ್ವಂಸದಂತಹ ಹತ್ತು ಹಲವು ದುರಂತಗಳು ನಿತ್ಯ ವರದಿಯಾಗುತ್ತಿದ್ದು, ಜನ-ಜಾನು ವಾರುಗಳು ಬಲಿಯಾಗಿವೆ.

ಇದಕ್ಕೆಲ್ಲಾ ಸುರಿಯುತ್ತಿರುವ ಮಳೆಯೇ ಕಾರಣ ಎನ್ನಲಾಗಿದೆಯಾದರೂ ಹಿಂದಿನ ದಶಕಕ್ಕೆ ಹೋಲಿಸಿದರೆ ಈಗ ಕರಾವಳಿಯಲ್ಲಿ ಮೊದಲಿನಷ್ಟು ಮಳೆಯಿಲ್ಲ. ಆದರೆ ಮೊದಲಿಗಿಂತಲೂ ಹೆಚ್ಚು ಅನಾಹುತಗಳು ಸಂಭವಿಸುತ್ತಿವೆ. ಹಾಗಾದರೆ ಇದಕ್ಕೆ ವಾಸ್ತವ ಕಾರಣ ಏನು ಎಂಬುದನ್ನು ಯೋಚಿಸ ಬೇಕಾದ ಅಗತ್ಯವಿದೆ. ಹೆಚ್ಚುತ್ತಿರುವ ಜನಸಾಂದ್ರತೆ ಮತ್ತು ವ್ಯಾಪಾರ-ವಹಿವಾಟುಗಳಿಗೆ ತಕ್ಕಂತೆ ಕಳೆದ ಎರಡು ದಶಕಗಳಿಂದ ಈ ಘಟ್ಟಸಾಲಿನ ಉದ್ದಕ್ಕೂ ಅಭಿವೃದ್ಧಿಯ ಮಹಾ ಅಭಿಯಾನ ನಡೆದಿದೆ. ಸಮುದ್ರತೀರಕ್ಕೆ ಸಮಾನಾಂತರವಾಗಿ ಹೆದ್ದಾರಿ, ರೈಲು ಮಾರ್ಗ, ಸುರಂಗ, ಸೇತುವೆಗಳ ನಿರ್ಮಾಣ ನಿರಂತರ ನಡೆಯುತ್ತಲೇ ಇದೆ.

ಹಿಂದೆಂದೂ ಕಂಡಿರದಷ್ಟು ದೊಡ್ಡ ಪ್ರಮಾಣದಲ್ಲಿ ಎಂದರಲ್ಲಿ ಬೃಹತ್ ಯಂತ್ರೋಪಕರಣಗಳು ಭೂಸ್ವರೂಪವನ್ನುಬದಲಿಸುವಲ್ಲಿ ತೊಡಗಿವೆ. ನಗರ
ನಿರ್ಮಾಣ, ಪ್ರವಾಸಿಧಾಮ ಮತ್ತು ವಿರಾಮಧಾಮಗಳ ನಿರ್ಮಾಣ, ಗಣಿಗಾರಿಕೆ, ವಿದ್ಯುತ್ ಮಾರ್ಗ, ನೀರಾವರಿ ಕಾಲುವೆ, ಅತಿಕ್ರಮ ಸಾಗುವಳಿಯಂತಹ ಚಟುವಟಿಕೆಗಳು ಎಗ್ಗಿಲ್ಲದೆ ಸಾಗಿವೆ. ಇವೆಲ್ಲವುಗಳ ಒಟ್ಟಾರೆ ಪರಿಣಾಮವಾಗಿ ನಮಗೆ ಹವಾಮಾನ ವೈಪರೀತ್ಯದ ರೂಪದಲ್ಲಿ ಮತ್ತೆ ಮತ್ತೆ ಕಾಣುತ್ತಿದೆ. ಇಂಥ ಸೂಕ್ಷ್ಮ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳುವಾಗ ಏನೆಲ್ಲ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಎಲ್ಲಿ ಮನುಷ್ಯರ ಹಸ್ತಕ್ಷೇಪ ಇರಲೇ ಬಾರದು ಎಂಬ ಬಗ್ಗೆ ಬಹಳಷ್ಟು ಮಾರ್ಗಸೂಚಿಗಳಂತೂ ಲಭ್ಯ ಇವೆ. ಆದರೆ ಅವ್ಯಾವವೂ ಪಾಲನೆಯಾಗುತ್ತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿ ನಾಶ ಮಾಡುವುದನ್ನು ಇನ್ನಾದರೂ ಬಿಡದಿದ್ದರೆ, ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ.

Leave a Reply

Your email address will not be published. Required fields are marked *

error: Content is protected !!