Saturday, 27th July 2024

ಎಲ್ಲರೊಳಗೊಂದಾಗು ಮತದಾರ

ಡಿ.ವಿ.ಗುಂಡಪ್ಪನವರು ತಮ್ಮ ಚುಟುಕವೊಂದರ ಕೊನೆಯಲ್ಲಿ ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೇ ಕೊಂಚ ಮಾರ್ಪಡಿಸಿ, ‘ಎಲ್ಲರೊಳಗೊಂದಾಗು ಮತದಾರ’ ಎಂದು ಕೇಳಿಕೊಳ್ಳಬೇಕಾದ ಕಾಲ ಬಂದಿದೆ. ಕಾರಣ, ಮಿಕ್ಕೆಲ್ಲ ಕೆಲಸಗಳಿಗೆ ನಮ್ಮ ಜನರಿಗೆ ಉಚಿತವಾಗಿ, ಯಥೋಚಿತವಾಗಿ ಸಿಗುವ ಸಮಯವು, ಮತದಾನದಂಥ ನಿರ್ಣಾಯಕ ಹೊಣೆಗಾರಿಕೆಯ ನಿಭಾವಣೆಯ ವೇಳೆ ಅದ್ಯಾಕೋ ದುಬಾರಿ ಯಾಗಿಬಿಡುತ್ತದೆ!

ಇದು ಸಲ್ಲ. ಲೋಕಸಭಾ ಚುನಾವಣೆಗೆ ಸಂಬಂಧಿಸಿ ರಾಜ್ಯದಲ್ಲಿ ನಾಳೆ (ಏ.೨೬) ನಡೆಯಲಿರುವ ಮೊದಲ ಹಂತದ ಮತದಾನದಲ್ಲಿ ಪ್ರತಿಯೊಬ್ಬ ಅರ್ಹ ಮತದಾರನೂ ತನ್ನ ಹಕ್ಕು ಚಲಾಯಿಸುವಂತಾಗಬೇಕು. ಈ ಕರ್ತವ್ಯವನ್ನು ನಿಭಾಯಿಸಿದಾಗ ಮಾತ್ರವೇ, ನಾವು ಚುನಾಯಿಸಿದ ವ್ಯಕ್ತಿ ಮತ್ತು ಗದ್ದುಗೆ ಯೇರುವ ಸರಕಾರದ ಸಹಭಾಗಿಗಳು ತಪ್ಪುಹೆಜ್ಜೆ ಇಟ್ಟಾಗ ಅವರನ್ನು ಪ್ರಶ್ನಿಸುವ ಅಧಿಕಾರವೂ ನಮಗೆ ಪ್ರಾಪ್ತ ವಾಗುತ್ತದೆ ಎಂಬುದನ್ನು ಮರೆಯ ದಿರೋಣ.

‘ನಾನೊಬ್ಬ ಮತ ಚಲಾಯಿಸದಿದ್ದರೆ ಆಕಾಶ ಕಳಚಿ ಬೀಳುವುದೇ? ಸಾಮ್ರಾಜ್ಯ ಮುಳುಗಿಹೋಗುವುದೇ?’ ಎಂಬ ಉದಾಸೀನದ ಮಾತಿಗಾಗಲೀ,  ಮತದಾ ನಕ್ಕೆ ಸಮಯವೇ ಸಿಗಲಿಲ್ಲ’ ಎಂಬ ಕುಂಟುನೆಪಕ್ಕಾಗಲೀ ಆಸ್ಪದ ನೀಡದಿರೋಣ. ‘ಹನಿ ಹನಿಗೂಡಿದರೆ ಹಳ್ಳ, ತೆನೆ ತೆನೆಗೂಡಿದರೆ ಬಳ್ಳ’ ಎಂಬ ಮಾತಿ ನಂತೆ, ವಿದ್ಯುನ್ಮಾನ ಮತಯಂತ್ರ ದಲ್ಲಿ ದಾಖಲಾಗುವ ಒಬ್ಬೊಬ್ಬ ಪ್ರಜ್ಞಾವಂತ ನಾಗರಿಕನ ಮತವೂ ಕೇವಲ ಮತವಾಗಿರುವುದಿಲ್ಲ, ಅದೊಂದು ನಿಜದನಿಯಾಗಿರುತ್ತದೆ. ಇಂಥ ಗಣ ನೀಯ ದನಿಗಳು ಒಗ್ಗೂಡಿದಾಗಲೇ ಅದು ನಿಜಾರ್ಥದ ‘ಜನದನಿ’ ಆಗುತ್ತದೆ ಎಂಬುದನ್ನು ಮರೆಯದಿರೋಣ.

ಇಷ್ಟೂ ವರ್ಷಗಳವರೆಗಿನ ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆ ಮತದಾನದ ಪ್ರಮಾಣವು ಶೇ.೭೦ರ ಮಟ್ಟವನ್ನು ಮೀರಿಲ್ಲ ಎಂಬುದು ನಿಜಕ್ಕೂ ತಲೆತಗ್ಗಿಸುವ ಸಂಗತಿ. ಇಂಥ ನಡೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೂ ಶೋಭೆ ತರುವುದಿಲ್ಲ. ದೇಶದ ಆಳುಗ ವ್ಯವಸ್ಥೆಯ ಕಟ್ಟೋಣದಲ್ಲಿ ಶೇ.೩೦ರಷ್ಟು ಮಂದಿ ಸಹಭಾಗಿಗಳಾಗಿಲ್ಲ ಎಂದರೆ, ಅದು ಹೊಣೆಗಾರಿಕೆಯಿಂದ ವಿಮುಖರಾಗಿರುವುದರ ದ್ಯೋತಕವೇ ಅಲ್ಲವೇ? ಹೀಗಾಗಿ, ಎಲ್ಲರಂತೆ, ಎಲ್ಲರೊಳ ಗೊಂದಾಗಿ ಮತದಾನ ಮಾಡುವ ಪ್ರಜ್ಞೆ ಎಲ್ಲರಲ್ಲೂ ಗಟ್ಟಿಗೊಳ್ಳಲಿ.

Leave a Reply

Your email address will not be published. Required fields are marked *

error: Content is protected !!